ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ವಿಷಯ: ಮಧ್ಯ ಬರಲು ನೀವ್ಯಾರೂ? ಬಾರ್ ಕೌನ್ಸಿಲ್​ಗೆ ಬೆಂಡೆತ್ತಿದ ಸಿಜೆಐ ಸೂರ್ಯಕಾಂತ್ | CJI Surya Kant

ಸಿಜೆಐ ಸೂರ್ಯಕಾಂತ್
ಸಿಜೆಐ ಸೂರ್ಯಕಾಂತ್
Published on
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಘಟಿಕೋತ್ಸವಕ್ಕೆ ಅತಿಥಿಯಾಗಿ ಆಹ್ವಾನ ನೀಡುವುದಕ್ಕೆ ವಿರೋಧಿಸಿದ್ದ ಹೈದರಾಬಾದ್‌ನ ನಲ್ಸಾರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳನ್ನು ನೋಂದಾಯಿಸದಂತೆ ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ನಿರ್ದೇಶನ ನೀಡಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಸಿಜೆಐ ಸೂರ್ಯಕಾಂತ್(CJI Surya Kant), ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ವಿಷಯ. ಮಧ್ಯ ಬರಲು ನೀವ್ಯಾರೂ? ಎಂದು ಬೆಂಡೆತ್ತಿದ್ದಾರೆ.
ಶುಕ್ರವಾರ(ಆ. 14) ಅರ್ಜಿ ವಿಚಾರಣೆ ವೇಳೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸಂಪೂರ್ಣವಾಗಿ ಅನಗತ್ಯವಾದ ಕ್ರಮ. ನಾನೂ ಕೂಡ ವಿದ್ಯಾರ್ಥಿಯಾಗಿದ್ದಾಗ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಇದು ನನಗೂ ವಿದ್ಯಾರ್ಥಿಗಳಿಗೂ ನಡುವಿನ ಸಂವಾದ, ಇದರಲ್ಲಿ ಹಸ್ತಕ್ಷೇಪ ಮಾಡಲು ಅವರು ಯಾರು? ಎಂದು ಮುಖ್ಯ ನ್ಯಾಯಮೂರ್ತಿಗಳು ಕಿಡಿಕಾರಿದ್ದಾರೆ.
ಇದೇ ವೇಳೆ ನಲ್ಸಾರ್ ವಿದ್ಯಾರ್ಥಿಗಳು ಅಥವಾ ಬೋಧಕ ಸಿಬ್ಬಂದಿಯ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಹೇಳಿರುವ ಸಿಜೆಐ, ತನ್ನ ಸುತ್ತೋಲೆಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಸೂಚನೆ ನೀಡಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದ್ದೇನು?

ಸಿಜೆಐ ಸೂರ್ಯಕಾಂತ್ ಅವರನ್ನು ವಿವಿಯ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ ನಲ್ಸಾರ್​ ಯೂನಿವರ್ಸಿಟಿಯ ವಿದ್ಯಾರ್ಥಿಗಳ ನಡೆಯನ್ನು ಟೀಕಿಸಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಈ ವಿವಿಯಿಂದ ಪದವಿ ಪಡೆದ ಯಾವುದೇ ವಿದ್ಯಾರ್ಥಿಗೂ ಮುಂದಿನ ಆದೇಶದವರೆಗೆ ವಕೀಲರಾಗಿ ನೋಂದಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ನೋಟಿಸ್ ಬಿಡುಗಡೆ ಮಾಡಿತ್ತು. ಬಳಿಕ ವಿವಾದವಾಗುತ್ತಿದ್ದಂತೆ ರಾತ್ರಿಯೇ ವಾಪಸ್ ಪಡೆದಿತ್ತು.

ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವೇನು?

2026ರ ನಲ್ಸಾರ್ ವಿವಿಯ ಅಂತಿಮ ಬ್ಯಾಚ್‌ನ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿ, ರಿಜಿಸ್ಟ್ರಾರ್, ಪ್ರಾಧ್ಯಾಪಕರು ಮತ್ತು ಇತರ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿ, ಘಟಿಕೋತ್ಸವಕ್ಕೆ ಸಿಜೆಐ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ನಿರ್ಧಾರವನ್ನು ಕೈಬಿಡಿ. ಇಲ್ಲವೇ ಅವರ ಬದಲಿಗೆ ಬೇರೆ ಅವರನ್ನು ಕರೆಸುವ ಬಗ್ಗೆ ಮರುಪರಿಶೀಲಿಸಿ ಎಂದು ಒತ್ತಾಯಿಸಿದರು.

ಮುಖ್ಯವಾಗಿ, ಜಂತರ್ ಮಂತರ್ ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಕ್ರಮವನ್ನು ಗಮನಿಸಲು ಅವರಿಗೆ ಸಮಯವಿರಲಿಲ್ಲ ಮತ್ತು ಯುವಜನತೆಯನ್ನು ಜಿರಳೆಗಳಿಗೆ ಹೋಲಿಸಿದರು ಎಂಬ ಕಾರಣಗಳನ್ನು ಮುಂದಿಟ್ಟು ಅತಿಥಿಯಾಗಿ ಸಿಜೆಐ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net