ಮೂರನೇ ಅತ್ಯಾ*ಚಾರ ಪ್ರಕರಣ: ಮಾಜಿ ಕೈ ಶಾಸಕ ರಾಹುಲ್‌ ಮಮ್ಕೂಟತ್ತಿಲ್‌ ಜಾಮೀನು ಅರ್ಜಿ ವಜಾ

ಉಚ್ಛಾಟಿತ ಕಾಂಗ್ರೆಸ್​ ಶಾಸಕ  ರಾಹುಲ್ ಮಮ್ಕೂಟತ್ತಿಲ್
ಉಚ್ಛಾಟಿತ ಕಾಂಗ್ರೆಸ್​ ಶಾಸಕ ರಾಹುಲ್ ಮಮ್ಕೂಟತ್ತಿಲ್
Published on

ಪ್ರಮುಖ ಮುಖ್ಯಾಂಶಗಳು

  • ಉಚ್ಛಾಟಿತ ಕಾಂಗ್ರೆಸ್​ ಶಾಸಕ ರಾಹುಲ್ ಮಮ್ಕೂಟತ್ತಿಲ್
  • ರಾಹುಲ್​ ಮೇಲಿನ ಮೂರನೇ ಅತ್ಯಾಚಾರ ಪ್ರಕರಣದ ಜಾಮೀನು ಅರ್ಜಿ ವಜಾ
  • ತಿರುವಲ್ಲಾ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಆದೇಶ
ಕೇರಳ: ತಮ್ಮ ವಿರುದ್ಧದ ಮೂರನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತ್ತಿಲ್ (Rahul Mamkootathil) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ನ್ಯಾಯಾಲಯ ಶನಿವಾರ(ಜ.17) ವಜಾಗೊಳಿಸಿದೆ.
ತಿರುವಲ್ಲಾ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ಅರುಂಧತಿ ದಿಲೀಪ್ ಇಂದು ಈ ಕುರಿತಾದ ಆದೇಶ ಪ್ರಕಟಿಸಿದ್ದಾರೆ. ತಿರುವಲ್ಲಾ ಮೂಲದ ಮಹಿಳೆಯೊಬ್ಬರು ತನ್ನ ಮೇಲೆ ಮಮ್ಕೂಟತ್ತಿಲ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2024 ರಲ್ಲಿ ನೀಡಿದ ದೂರಿನ ಮೇರೆಗೆ ಮಮ್ಕೂಟತ್ತಿಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. 
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮ್ಕೂಟತ್ತಿಲ್‌ ಅವರನ್ನು ಭಾನುವಾರ (ಜ.11)  ಪಾಲಕ್ಕಾಡ್‌ನ ಹೋಟೆಲೊಂದರಲ್ಲಿ ಪೊಲೀಸರು ಬಂಧಿಸಿದ್ದರು. ದೂರುದಾರರೊಂದಿಗಿನ ತಮ್ಮ ಸಂಬಂಧವು ಸಮ್ಮತಿಯಿಂದ ಕೂಡಿತ್ತು. ಮಹಿಳೆ ವಿವಾಹಿತರಾಗಿದ್ದಾರೆಂದು ತಮಗೆ ತಿಳಿದಿರಲಿಲ್ಲ ಎಂದು ಶಾಸಕ ಮಮ್ಕೂಟತ್ತಿಲ್‌ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. 
ದೂರುದಾರೆಯ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿದ ನಂತರ ತಾನು ತಕ್ಷಣವೇ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದಾಗಿ ಅವರು ಹೇಳಿದ್ದಾರೆ. ಈ ಪ್ರಕರಣವು ತಮ್ಮ ಸಾರ್ವಜನಿಕ ಪ್ರತಿಷ್ಠೆಯನ್ನು ಹಾಳು ಮಾಡುವ ಉದ್ದೇಶವನ್ನು ಹೊಂದಿದೆ ಎನ್ನುವುದು ಮಮ್ಕೂಟತ್ತಿಲ್‌ ಅವರ ವಾದವಾಗಿದೆ.
ವಾರಾಂತ್ಯದಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಅವರನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆಗೊಳಪಡಿಸಲು ರಾಹುಲ್ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿದ್ದರು. ಮೂರು ದಿನಗಳ ಕಸ್ಟಡಿ ಅವಧಿಯು ಜ.15ಕ್ಕೆ ಮುಗಿದಿತ್ತು. ಇದರ ಬೆನ್ನಿಗೇ ವಿಚಾರಣಾ ನ್ಯಾಯಾಲಯವು ಶುಕ್ರವಾರ (ಜ.16) ರಾಹುಲ್​ ಮಮ್ಕೂಟತ್ತಿಲ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಅಂತಿಮವಾಗಿ ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ಪ್ರಸಕ್ತ ಪ್ರಕರಣವೂ ಸೇರಿದಂತೆ ಮಮ್ಕೂಟತ್ತಿಲ್‌ ಒಟ್ಟು ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದು ಅತ್ಯಾಚಾರ ಪ್ರಕರಣದಲ್ಲಿ, ತಿರುವನಂತಪುರಂನ ಸೆಷನ್ಸ್ ನ್ಯಾಯಾಲಯವು ಈ ಹಿಂದೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಂಗೀಕರಿಸಿತ್ತು. ನಂತರ, ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಅವರ ಬಂಧನವನ್ನು ಕೇರಳ ಹೈಕೋರ್ಟ್ ಜನವರಿ 21 ರ ವರೆಗೆ ತಡೆಹಿಡಿದಿತ್ತು.
ಲೈಂಗಿಕ ದುರ್ವರ್ತನೆಯ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ವರ್ಷ ಆಗಸ್ಟ್‌ನಲ್ಲಿ ಮಮ್ಕೂಟತ್ತಿಲ್‌ ಸದಸ್ಯತ್ವವನ್ನು ಅಮಾನತುಗೊಳಿಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಮ್ಕೂಟತ್ತಿಲ್‌ ಯುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ, ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಯಿತು. ಪ್ರಸಕ್ತ ಅವರು ಪಾಲಕ್ಕಾಡ್ ಕ್ಷೇತ್ರದ ಜನಪ್ರತಿನಿಧಿಯಾಗಿ ಮುಂದುವರೆದಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net