ಸಿಗರೇಟ್ ತೆವಲಿಗೆ ಪೆಟ್ರೋಲ್​ ಬಂಕ್‌ಗೇ ಬೆಂಕಿ ಇಟ್ಟ ಕಿರಾತಕರು! ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು | Cigarette

ಪೆಟ್ರೋಲ್ ಬಂಕ್​ಗೆ ಬೆಂಕಿಯಿಟ್ಟ ಕಿರಾತಕರು, ಬಂಧಿತ ಆರೋಪಿಗಳು
ಪೆಟ್ರೋಲ್ ಬಂಕ್​ಗೆ ಬೆಂಕಿಯಿಟ್ಟ ಕಿರಾತಕರು, ಬಂಧಿತ ಆರೋಪಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್ ಹಾಕಿಸಲು ಬಂದು ಬಂಕ್​ಗೆ ಬೆಂಕಿ ಇಟ್ಟ ಕಿರಾತಕರು
  • ಸಿಗರೇಟ್ ಹಚ್ಚಲು ಹೋಗಿ ನಡೆದ ದುರ್ಘಟನೆ
  • ಛತ್ತೀಸಗಢದ ರಾಯ್​ಪುರದಲ್ಲಿ ನಡೆದಿರುವ ಘಟನೆ
  • ಇಬ್ಬರು ಆರೋಪಿಗಳನ್ನು ಬಂದಿಸಿರುವ ಪೊಲೀಸರು
ರಾಯ್‌ಪುರ: ಮನುಷ್ಯ ಎಂದರೆ ತಪ್ಪು ಮಾಡುವುದು ಸಹಜ, ಆದರೆ ಕೆಲವೊಂದು ತಪ್ಪುಗಳು ಕ್ಷಮೆಗೆ ಅರ್ಹವಾಗಿರುವುದಿಲ್ಲ. ಕಾರಣ ಅವು ಪ್ರಾಣವನ್ನೇ ತೆಗೆಯುವಂತಹ ತಪ್ಪುಗಳಾಗಿರುತ್ತವೆ.
ಇಂತಹದ್ದೇ ಒಂದು ಮೈ ಜುಂ ಎನ್ನಿಸುವ ಘಟನೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದಿದ್ದು, ಪೆಟ್ರೋಲ್ ಹಾಕಿಸುವಾಗ ಸಿಗರೇಟ್ (Cigarette) ಹಚ್ಚಲು ಹೋದ ವ್ಯಕ್ತಿಯೊಬ್ಬ ಇಡೀ ಪೆಟ್ರೋಲ್ ಬಂಕ್‌ಗೆ ಬೆಂಕಿ ಇಟ್ಟಿರುವ ಆಘಾತಕಾರಿ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಡೆದಿದ್ದೇನು?

ರಾಯ್‌ಪುರದ ಉರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ವೊಂದಕ್ಕೆ ಗುರುವಾರ (ಫೆ.19) ಸಂಜೆ ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂಬ ಇಬ್ಬರು ವ್ಯಕ್ತಿಗಳು ಬೈಕ್​ಗೆ ಪೆಟ್ರೋಲ್ ತುಂಬಿಸಲು ಬಂದಿದ್ದರು. ಪೆಟ್ರೋಲ್ ಹಾಕುವ ಸಿಬ್ಬಂದಿ ಬೈಕ್ ಟ್ಯಾಂಕ್ ತೆರೆದಿದ್ದಾಗಲೇ, ಹಿಂದೆ ಕುಳಿತಿದ್ದ ಭೂಪನಿಗೆ ಸಿಗರೇಟ್ ಸೇದುವ ತೆವಲಾಗಿದೆ. ಕೂಡಲೇ ಆತ ಜೇಬಿನಿಂದ ಲೈಟರ್ ತೆಗೆದು ಬೆಂಕಿ ಹಚ್ಚಿದ್ದಾನೆ. ಅಷ್ಟೇ... ಪೆಟ್ರೋಲ್ ಆವಿಯ ಸಂಪರ್ಕಕ್ಕೆ ಬಂದ ಬೆಂಕಿ ಕ್ಷಣಾರ್ಧದಲ್ಲಿ ಬೃಹತ್ ಜ್ವಾಲೆಯಾಗಿ ಬದಲಾಗಿದೆ.
ಜೀವ ಕೈಯಲ್ಲಿ ಹಿಡಿದು ಓಡಿದ ಜನ!
ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಬೆಂಕಿ ಹೊತ್ತಿಕೊಂಡ ತಕ್ಷಣ ಬೈಕ್ ಮೇಲಿದ್ದವರು ಮತ್ತು ಅಲ್ಲಿದ್ದ ಸಿಬ್ಬಂದಿ ಗಾಬರಿಯಿಂದ ಓಡುತ್ತಿರುವುದು ನೋಡಬಹುದಾಗಿದೆ. ಅದೃಷ್ಟವಶಾತ್, ಪೆಟ್ರೋಲ್ ಬಂಕ್ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ಉಪಕರಣ ಬಳಸಿ ಬೆಂಕಿಯನ್ನು ನಂದಿಸಿದ್ದಾರೆ. ಇಲ್ಲವಾದರೆ ಇಡೀ ಪೆಟ್ರೋಲ್ ಪಂಪ್ ಸ್ಫೋಟಗೊಂಡು ಭೀಕರ ದುರಂತ ಸಂಭವಿಸುವುದು ನಿಶ್ಚಿತವಾಗಿತ್ತು.
ನೆಟ್ಟಿಗರ ಆಕ್ರೋಶ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ಎಡಭಾಗದಲ್ಲಿ ಧೂಮಪಾನ ನಿಷೇಧ ಎಂಬ ಬೋರ್ಡ್ ಇದ್ದರೂ ಇಂತಹ ಹುಚ್ಚುತನದ ಕೆಲಸ ಮಾಡುತ್ತಾರೆ ಎಂದರೆ ಇವರಿಗೆ ಶಿಕ್ಷೆ ಆಗಲೇಬೇಕು, ಎಂದು ಬರೆದಿದ್ದಾರೆ. ಮತ್ತೊಬ್ಬರು, ತನ್ನ ಸ್ನೇಹಿತ ಮತ್ತು ಅಲ್ಲಿದ್ದ ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳಿದ ಈ ವ್ಯಕ್ತಿಗೆ ನಾಚಿಕೆ ಎಂಬುದೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಪೊಲೀಸರ ಕ್ರಮ

ಈಗಾಗಲೇ ಈ ವ್ಯಕ್ತಿಗಳನ್ನು ಪೊಲೀಸರು ಗುರುತಿಸಿ ಬಂಧಿಸಲಾಗಿದ್ದು, ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಯ್‌ಪುರ ಪೊಲೀಸರು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net