ಬಡ ಕುಟುಂಬಕ್ಕೆ ಆಸರೆಯಾಗಲು ಕೆಲಸಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದ ಇಬ್ಬರು ಕಾರ್ಮಿಕರು ಉಗ್ರರ ಗುಂಡೇಟಿಗೆ ಬಲಿ! Terrorists Attack

ಬಡ ಕುಟುಂಬಕ್ಕೆ ಆಸರೆಯಾಗಲು ಕೆಲಸಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದ ಇಬ್ಬರು ಕಾರ್ಮಿಕರು ಉಗ್ರರ ಗುಂಡೇಟಿಗೆ ಬಲಿ! Terrorists Attack
ಬಡ ಕುಟುಂಬಕ್ಕೆ ಆಸರೆಯಾಗಲು ಕೆಲಸಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದ ಇಬ್ಬರು ಕಾರ್ಮಿಕರು ಉಗ್ರರ ಗುಂಡೇಟಿಗೆ ಬಲಿ! Terrorists Attack
Published on

ಪ್ರಮುಖ ಮುಖ್ಯಾಂಶಗಳು

  • ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರ ಗುಂಡಿನ ದಾಳಿಗೆ ಛತ್ತೀಸ್‌ಗಢದ ಇಬ್ಬರು ಯುವ ಕಾರ್ಮಿಕರು ಬಲಿ
  • ಕುಟುಂಬ ನಿರ್ವಹಣೆಗೆ ತೆರಳಿದ್ದ ದೀಪಕ್ ರಾತ್ರೆ ಹಾಗೂ ಭೂಪೇಂದ್ರ ಭೈನಾ ಹತ್ಯೆಯಿಂದ ಶೋಕಸಾಗರದಲ್ಲಿ ಮುಳುಗಿದ ಕುಟುಂಬ
  • ಶಕ್ತಿ ಮತ್ತು ಸರಂಗಢ ಬಿಲೈಗಢ ಜಿಲ್ಲೆಯ ಬಡ ಕಾರ್ಮಿಕರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ವಿಷ್ಣು ದಿಯೋ ಸಾಯಿ
  • ಮೃತದೇಹಗಳನ್ನು ತವರೂರಿಗೆ ತರಲು ಜಮ್ಮು ಕಾಶ್ಮೀರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸ್ಥಳೀಯ ಆಡಳಿತ
  • ಉಗ್ರರ ಹೇಡಿತನದ ದಾಳಿಯಿಂದಾಗಿ ನುಚ್ಚುನೂರಾದ ಬದುಕು ಕಟ್ಟಿಕೊಳ್ಳುವ ಕನಸುಗಳು ಮತ್ತು ಅಸುನೀಗಿದ ಯುವಕರು
ರಾಯ್​ಪುರ್: ಕುಟುಂಬ ನಿರ್ವಹಣೆಗೆ ಸಾವಿರಾರು ಕಿಲೋಮೀಟರ್ ದೂರದ ಜಮ್ಮು-ಕಾಶ್ಮೀರಕ್ಕೆ ಕೆಲಸಕ್ಕೆಂದು ತೆರಳಿದ್ದ ಛತ್ತೀಸ್‌ಗಢದ ಇಬ್ಬರು ಯುವ ಕಾರ್ಮಿಕರು ಉಗ್ರರ ಗುಂಡಿಗೆ ( Terrorists Attack ) ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕೆಲಮ್ ಪ್ರದೇಶದಲ್ಲಿರುವ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಶುಕ್ರವಾರ ತಡರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿ ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಶಕ್ತಿ ಜಿಲ್ಲೆಯ ಬುಂದೇಲಿ ಗ್ರಾಮದ ದೀಪಕ್ ರಾತ್ರೆ (24) ಹಾಗೂ ಸರಂಗಢ-ಬಿಲೈಗಢ ಜಿಲ್ಲೆಯ ಭೂಪೇಂದ್ರ ಭೈನಾ (28) ಎಂಬ ಇಬ್ಬರು ಯುವಕರು ಬಲಿಯಾಗಿದ್ದಾರೆ. ದೀಪಕ್ ಅವರು ತಮ್ಮ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದರು. ಅವರ ತಂದೆ ಈಗಾಗಲೇ ನಿಧನರಾಗಿದ್ದು, ಮನೆಯಲ್ಲಿ ವೃದ್ಧ ತಾಯಿ, ಅಂಗವಿಕಲ ಸಹೋದರ, ಪತ್ನಿ ಹಾಗೂ ನಾಲ್ಕು ತಿಂಗಳ ಮಗ ಇದ್ದಾರೆ. ಸುಮಾರು ಏಳೆಂಟು ತಿಂಗಳ ಹಿಂದೆ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಪತ್ನಿಯೊಂದಿಗೆ ಕಾಶ್ಮೀರಕ್ಕೆ ತೆರಳಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದರು.
ದೀಪಕ್ ಅವರ ಚಿಕ್ಕಪ್ಪ ಹಲ್ಧರ್ ರಾತ್ರೆ ಮಾತನಾಡಿ, ದೀಪಕ್​ ಹೋದ ನಂತರ ಕುಟುಂಬದ ಜೀವನ ನಡೆಸಲು ಯಾರೊಬ್ಬರು ಆಧಾರವಾಗಿ ಉಳಿದಿಲ್ಲ. ಮೃತದೇಹವನ್ನು ಊರಿಗೆ ತರಲು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. 
ಇನ್ನೊಂದೆಡೆ, ಭೂಪೇಂದ್ರ ಭೈನಾ ಸುಮಾರು ಮೂರು ತಿಂಗಳ ಹಿಂದೆ ಪತ್ನಿಯೊಂದಿಗೆ ಕಾಶ್ಮೀರಕ್ಕೆ ಕೆಲಸಕ್ಕೆ ತೆರಳಿದ್ದರು. ತಮ್ಮ ನಾಲ್ಕು ವರ್ಷದ ಮಗನನ್ನು ಅಜ್ಜಿ ಮತ್ತು ತಂಗಿಯ ಆರೈಕೆಯಲ್ಲಿ ಬಿಟ್ಟು ಹೋಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಉದ್ಯೋಗ ಅರಸಿ ಕಾಶ್ಮೀರಕ್ಕೆ ತೆರಳಿದ್ದರಂತೆ. 
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳೀಯ ಆಡಳಿತ ಹಾಗೂ ಪೊಲೀಸರು ಮೃತದೇಹಗಳನ್ನು ತವರೂರಿಗೆ ತರಲು ಜಮ್ಮು-ಕಾಶ್ಮೀರ ಸರ್ಕಾರದೊಂದ ನೆರವು ಕೋರಿದೆ. ಈ ಘಟನೆಗೆ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದಿಯೋ ಸಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಹೇಡಿತನದ ಉಗ್ರರ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿರುವುದು ಅತ್ಯಂತ ದುಃಖದ ಸಂಗತಿ. ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಎಲ್ಲರಂತೆ ಒಳ್ಳೆಯ ಲೈಫ್​ ಲೀಡ್​ ಮಾಡಬೇಕು ಎಂಬ ಕನಸಿನೊಂದಿಗೆ ಮನೆ ಬಿಟ್ಟು ದೂರದ ರಾಜ್ಯಕ್ಕೆ ಗುಳೆ ಹೋದ ಇಬ್ಬರು ಯುವಕರ ಬದುಕು ಉಗ್ರರ ಗುಂಡಿಗೆ ಬಲಿಯಾಗಿದೆ. ಅವರ ಕುಟುಂಬಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ,(ಏಜೇನ್ಸಿಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net