ಫಿಫಾ ವಿಶ್ವಕಪ್, ನಾಸಾ ಮೂನ್​ ಮಿಷನ್​... 2026ರಲ್ಲಿ ಭಾರೀ ಬದಲಾವಣೆಗಳು! ಇಲ್ಲಿದೆ ನೋಡಿ ವಿವರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 2026ರಲ್ಲಿ ಸಂಭವಿಸುವ ಅದ್ಭುತಗಳಿವು
  • ಫಿಫಾ ವಿಶ್ವಕಪ್, ನಾಸಾ ಮೂನ್​ ಮಿಷನ್ ಸೇರಿ ಹಲವು ಪ್ರಮುಖ ಘಟನೆಗಳು
ನವದೆಹಲಿ: 2025ರ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ಹೊಸ ವರ್ಷವನ್ನು ಸ್ವಾಗತಿಸಲು ಜನರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. 2025ರಲ್ಲಿ ಬಾಹ್ಯಾಕಾಶ, ಕ್ರೀಡೆ ಮತ್ತು ಟೆಕ್ನಾಲಜಿ ಕ್ಷೇತ್ರಗಳಲ್ಲಿ ನಾವು ಅನೇಕ ಸಾಧನೆ, ಆವಿಷ್ಕಾರಗಳನ್ನು ನೋಡಿದ್ದೇವೆ. 2026ರಲ್ಲಿ ಈ ಕ್ಷೇತ್ರಗಳಿಂದ ಇನ್ನಷ್ಟು ಹೆಚ್ಚಿನ ಹೊಸ ವಿಷಯಗಳು, ಪ್ರಮುಖ ಘಟನೆಗಳು ಸಂಭವಿಸಲಿವೆ.
ನಾಸಾದ ಮೂನ್​ ಮಿಷನ್ ಆರ್ಟೆಮಿಸ್ II, ಹೊಸ ಬಾಹ್ಯಾಕಾಶ ಕಾರ್ಯಾಚರಣೆಗಳು, ಫಿಫಾ ವಿಶ್ವಕಪ್ ಮತ್ತು ಹಲವಾರು ಜಾಗತಿಕ ವಿಜ್ಞಾನ ಸಮ್ಮೇಳನಗಳು ನಡೆಯಲಿವೆ. ಅಷ್ಟಕ್ಕೂ ಏನೆಲ್ಲ ಸಂಭವಿಸಲಿವೆ? ಯಾವ ಕ್ಷೇತ್ರಗಳಿಂದ ಯಾವೆಲ್ಲ ಕೊಡುಗೆಗಳು ಈ ಲೋಕಕ್ಕೆ ಬರಲಿವೆ ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.      

ಬಾಹ್ಯಾಕಾಶ

ನಾಸಾದ ಮೂನ್​ ಮಿಷನ್ ಆರ್ಟೆಮಿಸ್ II 2026ರ ಏಪ್ರಿಲ್​ನಲ್ಲಿ ಪ್ರಾರಂಭಿಸಲಾಗುವುದು. ಈ ಕಾರ್ಯಾಚರಣೆಯಲ್ಲಿ, ಗಗನಯಾತ್ರಿಗಳು ಚಂದ್ರನ ಸುತ್ತ ಪ್ರಯಾಣಿಸಲಿದ್ದಾರೆ. ಆದರೆ, ಅವರು ಚಂದ್ರನ ಮೇಲ್ಮೈಯಲ್ಲಿ ಇಳಿಯುವುದಿಲ್ಲ ಎಂಬುದು ಗಮನಾರ್ಹ. ಇದು ನಾಸಾದ ಆರ್ಟೆಮಿಸ್ ಕಾರ್ಯಕ್ರಮದಲ್ಲಿ ಎರಡನೇ ಕಾರ್ಯಾಚರಣೆಯಾಗಿದೆ. 4 ಗಗನಯಾತ್ರಿಗಳು 10 ದಿನಗಳ ಕಾಲ ಚಂದ್ರನ ಸುತ್ತ ಸುತ್ತಲಿದ್ದಾರೆ. 
ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಚೀನಾ ಚಾಂಗ್'ಇ 7 ಮಿಷನ್ (2026ರ ಕೊನೆಯಲ್ಲಿ) ಪ್ರಾರಂಭಿಸಲಿದೆ. ಇದು ಆರ್ಬಿಟರ್, ಲ್ಯಾಂಡರ್, ರೋವರ್ ಮತ್ತು ಮಿನಿ ಫ್ಲೈಯಿಂಗ್ ಪ್ರೋಬ್ ಅನ್ನು ಕಳುಹಿಸಲಿದೆ. ಖಗೋಳ ವೀಕ್ಷಣೆಗಾಗಿ ಡಿಸೈನ್​ ಮಾಡಲಾದ ಚೀನಾದ ಕ್ಸುಂಟಿಯನ್ ಬಾಹ್ಯಾಕಾಶ ದೂರದರ್ಶಕವನ್ನು 2026ರಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದೆ.
ಆಗಸದಲ್ಲಿರುವ ನಕ್ಷತ್ರ, ಗ್ಯಾಲಕ್ಸಿಗಳು, ಡಾರ್ಕ್ ಮ್ಯಾಟರ್, ನಕ್ಷತ್ರ ರಚನೆ ಪ್ರಕ್ರಿಯೆ ಇತ್ಯಾದಿಗಳನ್ನು ಗಮನಿಸುವುದು ಇದರ ಗುರಿಯಾಗಿದೆ. ಈ ಬಾಹ್ಯಾಕಾಶ ದೂರದರ್ಶಕವು ಟಿಯಾಂಗಾಂಗ್ ಬಾಹ್ಯಾಕಾಶ ಸ್ಟೇಷನ್​ನೊಂದಿಗೆ ಸಹ-ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಇದು ನಿಲ್ದಾಣವನ್ನು ಸುತ್ತುವರೆದು ಡೇಟಾವನ್ನು ಸಂಗ್ರಹಿಸಲಿದೆ. 

ಕ್ರೀಡೆ: ಫಿಫಾ ವಿಶ್ವಕಪ್

ಫಿಫಾ ವಿಶ್ವಕಪ್ 2026ರ​ ಜೂನ್ 11-19ರ ನಡುವೆ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊದಲ್ಲಿ ನಡೆಯಲಿದೆ. 48 ತಂಡಗಳು 16 ನಗರಗಳ ಸ್ಟೇಡಿಯಂಗಳಲ್ಲಿ 104 ಪಂದ್ಯಗಳನ್ನಾಡಲಿವೆ. ಉದ್ಘಾಟನಾ ಪಂದ್ಯವು ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೆಕ್ಸಿಕೊ ನಗರದ ಎಸ್ಟಾಡಿಯೊ ಅಜ್ಟೆಕಾದಲ್ಲಿ ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ 2026ರಲ್ಲಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲಿವೆ. ಪಂದ್ಯಗಳು ಫೆಬ್ರವರಿ 7ರಿಂದ ಮಾರ್ಚ್ 8 ರವರೆಗೆ ನಡೆಯಲಿದ್ದು, 20 ತಂಡಗಳು ಭಾಗವಹಿಸಲಿವೆ.

ಸೈನ್ಸ್​ ವಿಭಾಗ

  • ಜೈವಿಕ ತಂತ್ರಜ್ಞಾನದಲ್ಲಿ ಹೊಸ ಔಷಧಗಳು ಮತ್ತು ಜೀನ್ ಎಡಿಟಿಂಗ್​ ಟೆಕ್ನಾಲಜಿಸ್​
  •  ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿ ಮತ್ತು ಹೈಡ್ರೋಜನ್ ಗಮನಾರ್ಹ ಬೆಳವಣಿಗೆ
  • ಸ್ಮಾರ್ಟ್ ಕೃಷಿ, ಕೃತಕ ಬುದ್ಧಿಮತ್ತೆ ಆಧಾರಿತ ಬೆಳೆ ಮೇಲ್ವಿಚಾರಣೆ
  • ನ್ಯಾನೊ ಟೆಕ್ನಾಲಜಿಗೆ ಪುಷ್ಠಿ
ಜಾಗತಿಕ ಸಮ್ಮೇಳನ
  • 2026 ಮೇ. 14-15ರಿಂದ ಕೌಲಾಲಂಪುರದಲ್ಲಿ ನಡೆಯಲಿದೆ ನ್ಯೂರೋಸೈನ್ಸ್ ಕಾಂಗ್ರೆಸ್ ಸಮ್ಮೇಳನ
  • ಗೇಮ್‌ಫಿನ್ 2026 (ಗ್ಯಾಮಿಫಿಕೇಶನ್ ಸಮ್ಮೇಳನ) 2026ರಲ್ಲಿ ನಡೆಯಲಿದ್ದು, ಮಾರ್ಚ್ 23ರಿಂದ 27ರ ನಡುವೆ ಫಿನ್‌ಲ್ಯಾಂಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net