ಕೆಂಪುಕೋಟೆಯ ಐತಿಹಾಸಿಕ ಕ್ಷಣಗಳಿವು...

ಕೆಂಪುಕೋಟೆಯ ಐತಿಹಾಸಿಕ ಕ್ಷಣಗಳಿವು...
ಕೆಂಪುಕೋಟೆಯ ಐತಿಹಾಸಿಕ ಕ್ಷಣಗಳಿವು...
Published on
ನವದೆಹಲಿ: ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ದೆಹಲಿಯ ಕೆಂಪುಕೋಟೆಯು ದೇಶದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಹೆಮ್ಮೆಯ ಮುಖ್ಯ ಸಂಕೇತವಾಗಿ ಹೊರಹೊಮ್ಮಿತು. ಕೆಂಪುಕೋಟೆ ಭಾರತದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ತಾಣ. 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ವಂದೇ ಮಾತರಂ ಅನುರಣನಗೊಳ್ಳಲಿದ್ದು, ದೇಶಭಕ್ತಿಯ ಸ್ಪೂರ್ತಿ ಪುಟಿದೇಳಲಿದೆ. ಸ್ವಾತಂತ್ರಾ್ಯನಂತರ ಇಲ್ಲಿ ನಡೆದ ‘ಮೊದಲುಗಳು’ ಹಲವು. ಈ ಕುರಿತಾದ ವಿವರ ಇಲ್ಲಿದೆ.
ಕೆಂಪುಕೋಟೆಯು ಕೇವಲ ಒಂದು ರಾಜಮನೆತನದ ಅರಮನೆಯಾಗಿರದೆ, 1945ರಲ್ಲಿ ಗುಲಾಮಗಿರಿಯ ವಿರುದ್ಧ ಇಡೀ ದೇಶ ಒಂದಾದ ಪ್ರೇರಣಾಸ್ಥಳವಾಯಿತು. ಹೀಗಾಗಿಯೇ 1947ರಲ್ಲಿ ದೇಶ ಸ್ವತಂತ್ರವಾದಾಗ ಅದೇ ಕೆಂಪುಕೋಟೆಯ ಮೇಲೆ ಮೊದಲ ತ್ರಿವರ್ಣ ಧ್ವಜ ಹಾರಿಸಿದ್ದು ಬ್ರಿಟಿಷ್ ಆಳ್ವಿಕೆಯ ಶಾಶ್ವತ ಅಂತ್ಯ ಮತ್ತು ನೇತಾಜಿಯವರ ಕನಸಿನ ಸಾಕಾರದ ಸಂಕೇತವಾಯಿತು. 2022ರಲ್ಲಿ ಅದೇ ಕೋಟೆಯ ಮೇಲೆ ಸ್ವದೇಶಿ ಎಟಿಎಜಿಎಸ್ (ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟೆಮ್ ತೋಪು ಮೊಳಗಿದ್ದು, ದೇಶವು ಸೇನಾ-ತಂತ್ರಜ್ಞಾನದಲ್ಲೂ ಸಂಪೂರ್ಣ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿರುವುದನ್ನು ಸಾಬೀತುಪಡಿಸಿತು.

ರಾರಾಜಿಸಿದ ರಾಷ್ಟ್ರಧ್ವಜ

ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ, ದೆಹಲಿಯ ಕೆಂಪುಕೋಟೆಯ ಮೇಲೆ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ್ದು 1947ರ ಆಗಸ್ಟ್ 16ರಂದು. ಆಗಸ್ಟ್ 15ರಂದು ದಿನವಿಡೀ ಸಾಂವಿಧಾನಿಕ ಹಾಗೂ ಅಧಿಕೃತ ಕಾರ್ಯಕ್ರಮಗಳ ಒತ್ತಡವಿದ್ದ ಕಾರಣ ಕೆಂಪುಕೋಟೆಯ ಧ್ವಜಾರೋಹಣವನ್ನು ಮರುದಿನಕ್ಕೆ ನಿಗದಿಪಡಿಸಲಾಗಿತ್ತು. ಆಗಸ್ಟ್ 14-15ರ ಮಧ್ಯರಾತ್ರಿಯಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರು ತಮ್ಮ ಪ್ರಸಿದ್ಧ ಟ್ರಿಸ್ಟ್ ವಿತ್ ಡೆಸ್ಟಿನಿ ಭಾಷಣ ಮಾಡಿದರು. ಆ.15ರ ಬೆಳಗ್ಗೆ ಲಾರ್ಡ್ ಮೌಂಟ್​ಬ್ಯಾಟನ್ ಗವರ್ನರ್ ಜನರಲ್ ಆಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ನೆಹರು ನೇತೃತ್ವದ ನೂತನ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿತು. 
15ರ ಸಂಜೆ ದೆಹಲಿಯ ಇಂಡಿಯಾ ಗೇಟ್ ಸಮೀಪವಿರುವ ಪ್ರಿನ್ಸಸ್ ಪಾರ್ಕ್​ನಲ್ಲಿ ಮೊದಲ ಅಧಿಕೃತ ಸಾರ್ವಜನಿಕ ಧ್ವಜಾರೋಹಣ ನಡೆಯಿತು. ಅಲ್ಲಿ ಸೇರಿದ ಅಪಾರ ಜನಸ್ತೋಮದಿಂದಾಗಿ ಅಂದು ಯಾವುದೇ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿಯವರು ಸಾರ್ವಜನಿಕವಾಗಿ ಮಾತನಾಡುವ ಮತ್ತು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಬೃಹತ್ ಸಮಾರಂಭವನ್ನು ಆಗಸ್ಟ್ 16ರ ಬೆಳಗ್ಗೆ ಆಯೋಜಿಸಲಾಯಿತು. ಆಗಸ್ಟ್ 16ರ ಬೆಳಗ್ಗೆ 8.30ಕ್ಕೆ ಕೆಂಪುಕೋಟೆಯ ಮುಖ್ಯದ್ವಾರವಾದ ಲಾಹೋರಿ ಗೇಟ್​ನ ಕೊತ್ತಲದ (ಚಞಟಚ್ಟಠಿಠ) ಮೇಲೆ ಈ ಸಮಾರಂಭ ನಡೆಯಿತು. ಪ್ರಧಾನಿ ಜವಾಹರಲಾಲ್ ನೆಹರು ಅವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು ಹಾಗೂ 31 ತೋಪುಗಳ ಗೌರವ ಸಲ್ಯೂಟ್ ನೀಡಲಾಯಿತು.
ಅಪಾರ ಜನಸ್ತೋಮ: ಅಂದು ಕೆಂಪುಕೋಟೆಯ ಮುಂಭಾಗ ಮತ್ತು ಚಾಂದಿನಿ ಚೌಕ್ ರಸ್ತೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ನೆರೆದಿದ್ದರು. ಜನರು ಮರಗಳು, ಮನೆಗಳ ಮೇಲ್ಛಾವಣಿ ಹಾಗೂ ಗೋಡೆಗಳನ್ನೇರಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. 
ನೆಹರು ಮೊದಲ ಭಾಷಣದ ಪ್ರಮುಖಾಂಶಗಳು: ಧ್ವಜಾರೋಹಣದ ನಂತರ ನೆಹರು ಅವರು ಹಿಂದಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಥಮ ಭಾಷಣ ಮಾಡಿದರು.
ಪ್ರಜಾಪ್ರಭುತ್ವದ ಆರಂಭ: ನಾವು ಇಂದು ಸ್ವತಂತ್ರ ಭಾರತದ ಪ್ರಜೆಗಳಾಗಿ ಇಲ್ಲಿ ನಿಂತಿದ್ದೇವೆ. ಇದು ಕೇವಲ ಅಧಿಕಾರ ಹಸ್ತಾಂತರವಲ್ಲ, ನೂರಾರು ವರ್ಷಗಳ ಗುಲಾಮಗಿರಿಯ ಅಂತ್ಯ ಎಂದು ಘೊಷಿಸಿದರು. ಅಲ್ಲದೆ, ‘ಈ ಸ್ವಾತಂತ್ರ್ಯದ ರೂವಾರಿ ಮಹಾತ್ಮ ಗಾಂಧಿ’ ಎಂದು ನೆಹರು ಸ್ಮರಿಸಿದರು (ಗಾಂಧೀಜಿ ಅಂದು ದೆಹಲಿಯಲ್ಲಿರದೆ, ಕೋಲ್ಕತ್ತದಲ್ಲಿ ಗಲಭೆಗಳನ್ನು ಶಮನಗೊಳಿಸುವ ಉಪವಾಸ ಸತ್ಯಾಗ್ರಹ ದಲ್ಲಿದ್ದರು).

ಈ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?

ಕೆಂಪುಕೋಟೆಯು ಶತಮಾನಗಳ ಕಾಲ ಭಾರತದ ಆಡಳಿತ ಶಕ್ತಿಯ ಕೇಂದ್ರವಾಗಿತ್ತು. ಬ್ರಿಟಿಷರು ಮೊಘಲರನ್ನು ಸೋಲಿಸಿ ಇದರ ಮೇಲೆ ಯೂನಿಯನ್ ಜ್ಯಾಕ್ (ಬ್ರಿಟಿಷ್ ಧ್ವಜ) ಹಾರಿಸಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಮ್ಮ ಆಜಾದ್ ಹಿಂದ್ ಫೌಜ್ ಸೈನ್ಯಕ್ಕೆ ನೀಡಿದ ಪ್ರಸಿದ್ಧ ಕರೆ ‘ದೆಹಲಿ ಚಲೋ’ ಮತ್ತು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು ಎಂಬುದಾಗಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿ ಅಂತ್ಯಗೊಂಡಿದೆ ಮತ್ತು ದೇಶದ ಸಾರ್ವಭೌಮತ್ವ ಭಾರತೀಯರ ಕೈಗೆ ಬಂದಿದೆ ಎಂದು ಜಗತ್ತಿಗೆ ಸಾರಲು ಕೆಂಪುಕೋಟೆಗಿಂತ ಸೂಕ್ತ ಸ್ಥಳ ಮತ್ತೊಂದಿರಲಿಲ್ಲ.
ನಿರಂತರ ಪರಂಪರೆ: 1947ರ ಆಗಸ್ಟ್ 16ರಂದು ಆರಂಭವಾದ ಈ ಐತಿಹಾಸಿಕ ಧ್ವಜಾರೋಹಣ ಹಾಗೂ ಭಾಷಣ, ಮುಂದಿನ ವರ್ಷದಿಂದ (1948) ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಬೆಳಗ್ಗೆ ನಡೆಯುವಂತೆ ಸಂಪ್ರದಾಯವಾಗಿ ಮುಂದುವರಿಯಿತು. ಅಂದಿನಿಂದ ಇಂದಿನವರೆಗೂ ಭಾರತದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಲಾಹೋರಿ ಗೇಟ್​ನಿಂದಲೇ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಸಂದೇಶ ನೀಡುತ್ತಿದ್ದಾರೆ.

ಐತಿಹಾಸಿಕ ಧ್ವಜಾರೋಹಣ

ಭಾರತದ ರಾಜಕೀಯ ಇತಿಹಾಸದಲ್ಲಿ 1966ರ ಆಗಸ್ಟ್ 15ರಂದು ಒಂದು ಹೊಸ ಮೈಲಿಗಲ್ಲು ಸ್ಥಾಪನೆಯಾಯಿತು. ಭಾರತದ ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿಯವರು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸ್ವಾತಂತ್ರ್ಯ ದೊರೆತ 19 ವರ್ಷಗಳ ನಂತರ, ಮೊದಲ ಬಾರಿಗೆ ಒಬ್ಬ ಮಹಿಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. 1966ರ ಈ ಘಟನೆಯು ಕೇವಲ ಒಬ್ಬ ನಾಯಕಿಯ ರಾಜಕೀಯ ಮೈಲಿಗಲ್ಲಾಗಿರದೆ, ಸ್ವತಂತ್ರ ಭಾರತದಲ್ಲಿ ಮಹಿಳಾ ಸಬಲೀಕರಣ, ನಾಯಕತ್ವ ಮತ್ತು ಸಾಂವಿಧಾನಿಕ ಸಮಾನತೆಯ ಅತ್ಯುನ್ನತ ಸಂಕೇತವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ಈ ಹಿಂದೆ ಅವರ ತಂದೆ ಪಂಡಿತ್ ಜವಾಹರಲಾಲ್ ನೆಹರು ಸತತ 17 ವರ್ಷಗಳ ಕಾಲ ಧ್ವಜ ಹಾರಿಸಿದ ಅದೇ ಸ್ಥಳದಲ್ಲಿ ಇಂದಿರಾ ಗಾಂಧಿಯವರು ನಿಂತು ಧ್ವಜಾರೋಹಣ ನೆರವೇರಿಸಿದ್ದು ದೇಶದ ಜನರಿಗೆ ಭಾವನಾತ್ಮಕ ಕ್ಷಣವಾಗಿತ್ತು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಒಬ್ಬ ಮಹಿಳೆ ಮುನ್ನಡೆಸಿದ್ದು ಮತ್ತು ಕೆಂಪುಕೋಟೆಯಿಂದ ಇಡೀ ದೇಶವನ್ನು ಉದ್ದೇಶಿಸಿ ಸಂದೇಶ ನೀಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಅಂದಿನ ಭಾಷಣದಲ್ಲಿ ಇಂದಿರಾ ಗಾಂಧಿಯವರು ದೇಶದ ಸಂಕಷ್ಟಗಳನ್ನು ಎದುರಿಸಲು ಜನರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡಿದರು. ‘ನಾವು ಆಹಾರಕ್ಕಾಗಿ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಮತ್ತು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಬೇಕು’ ಎಂದು ಕರೆ ನೀಡಿದರು. ಇದು ನಂತರ ಹಸಿರು ಕ್ರಾಂತಿಗೆ ನಾಂದಿಯಾಯಿತು.
ಇಂದಿರಾ ದಾಖಲೆ: ಇಂದಿರಾ ಗಾಂಧಿಯವರು ತಮ್ಮ ಎರಡು ಪ್ರತ್ಯೇಕ ಆಡಳಿತಾವಧಿಗಳಲ್ಲಿ ಒಟ್ಟು 16 ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
  • ಮೊದಲ ಅವಧಿ (1966-1976): ಸತತ 11 ಬಾರಿ 
  • ಎರಡನೇ ಅವಧಿ (1980- 1984): ಸತತ 5 ಬಾರಿ
ಭಾರತದ ಇತಿಹಾಸದಲ್ಲಿ ಪಂಡಿತ್ ಜವಾಹರಲಾಲ್ ನೆಹರು (17 ಬಾರಿ) ನಂತರ ಕೆಂಪುಕೋಟೆಯಲ್ಲಿ ಅತಿ ಹೆಚ್ಚು ಬಾರಿ ಧ್ವಜಾರೋಹಣ ನೆರವೇರಿಸಿದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆ ಇಂದಿರಾ ಗಾಂಧಿಯವರದ್ದಾಗಿದೆ.

ಸ್ವಾವಲಂಬನೆಯ ಹಾದಿ

ಭಾರತದ ಸ್ವಾತಂತ್ರ್ಯ 75ನೇ ವರ್ಷಾಚರಣೆ (ಆಜಾದಿ ಕಾ ಅಮೃತ್ ಮಹೋತ್ಸವ-2022) ಸಂದರ್ಭದಲ್ಲಿ, ಕೆಂಪುಕೋಟೆಯಲ್ಲಿ ಶತಮಾನಗಳ ಕಾಲದ ವಿದೇಶಿ ಅವಲಂಬನೆ ಕೊನೆಗೊಂಡು ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ‘ಆತ್ಮನಿರ್ಭರ ಭಾರತ’ದ ಹೊಸ ಅಧ್ಯಾಯ ಆರಂಭವಾಯಿತು. 1947ರಿಂದ 2021ರವರೆಗೆ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವಗಳಲ್ಲಿ ಸಾಂಪ್ರದಾಯಿಕ 21 ಗನ್ ಸಲ್ಯೂಟ್ ನೀಡಲು ಬ್ರಿಟಿಷ್ ಕಾಲದ 25-ಪೌಂಡರ್ ಫೀಲ್ಡ್ ಗನ್​ಗಳನ್ನು ಬಳಸಲಾಗುತ್ತಿತ್ತು. ಈ ತೋಪುಗಳನ್ನು ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷರು ವಿನ್ಯಾಸಗೊಳಿಸಿದ್ದರು. ಭಾರತೀಯ ಸೇನೆಯು ಇವುಗಳನ್ನು ಗೌರವ ವಂದನೆಗಾಗಿ ದಶಕಗಳಿಂದ ಉಳಿಸಿಕೊಂಡು ಬಂದಿತ್ತು.

ರೆಡ್​ಫೋರ್ಟ್ ಇತಿಹಾಸ

1857ರ ಸಿಪಾಯಿ ದಂಗೆಯಿಂದ ಹಿಡಿದು 2003ರಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಗೆ (ಎಎಸ್​ಐ) ಹಸ್ತಾಂತರವಾಗುವವರೆಗೂ ಕೆಂಪುಕೋಟೆಯು ಕೇವಲ ಒಂದು ಸ್ಮಾರಕವಾಗಿರದೆ, ಪ್ರಮುಖ ಸೇನಾ ನೆಲೆಯಾಗಿತ್ತು. ಬ್ರಿಟಿಷ್ ಮಿಲಿಟರಿ ವಶಕ್ಕೆ ಕೆಂಪುಕೋಟೆ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ಕೊನೆಯ ಮೊಘಲ್ ಚಕ್ರವರ್ತಿ 2ನೇ ಬಹದ್ದೂರ್ ಷಾ ಜಾಫರ್​ನನ್ನು ಕೆಂಪುಕೋಟೆಯಿಂದ ಬಂಧಿಸಿ ರಂಗೂನ್​ಗೆ (ಮ್ಯಾನ್ಮಾರ್) ಗಡೀಪಾರು ಮಾಡಿದರು. ಬ್ರಿಟಿಷರು ಕೆಂಪುಕೋಟೆಯೊಳಗಿದ್ದ ಬಹುತೇಕ ಸುಂದರ ಮೊಘಲ್ ಉದ್ಯಾನಗಳು ಹಾಗೂ ರಾಜಮನೆತನದ ನಿವಾಸಗಳನ್ನು ಧ್ವಂಸಗೊಳಿಸಿದರು. ತಮ್ಮ ಸೇನೆಗಾಗಿ ಕೋಟೆಯೊಳಗೆ ಬೃಹತ್ ಕೆಂಪು ಇಟ್ಟಿಗೆಯ ಮಿಲಿಟರಿ ಬ್ಯಾರಾಕ್​ಗಳು, ಶಸ್ತ್ರಾಸ್ತ್ರ ಗೋದಾಮುಗಳು, ಕಾರಾಗೃಹಗಳು ಹಾಗೂ ಆಸ್ಪತ್ರೆಗಳನ್ನು ನಿರ್ವಿುಸಿ, ಕೆಂಪುಕೋಟೆಯನ್ನು ಸಂಪೂರ್ಣ ಬ್ರಿಟಿಷ್ ಸೇನಾ ಕಂಟೋನ್ಮೆಂಟ್ ಆಗಿ ಪರಿವರ್ತಿಸಿದರು.
ಭಾರತೀಯ ಸೇನೆಗೆ ಹಸ್ತಾಂತರ: ಬ್ರಿಟಿಷರು 1947ರ ಆಗಸ್ಟ್​ನಲ್ಲಿ ಭಾರತವನ್ನು ತೊರೆದಾಗ, ಕೆಂಪುಕೋಟೆಯ ಅಧಿಕಾರ ಸಹಜವಾಗಿಯೇ ನೂತನ ಸ್ವತಂತ್ರ ಭಾರತೀಯ ಸೇನೆಯ ವಶಕ್ಕೆ ಬಂದಿತು. ಬ್ರಿಟಿಷರು ಬಿಟ್ಟುಹೋದ ಬೃಹತ್ ಸೈನಿಕ ಮೂಲಸೌಕರ್ಯ ಸಿದ್ಧವಾಗಿದ್ದರಿಂದ, ಭಾರತೀಯ ಸೇನೆಯು ಕೆಂಪುಕೋಟೆಯನ್ನು ತನ್ನ ಉತ್ತರ ಭಾಗದ ಪ್ರಮುಖ ಕಾರ್ಯತಂತ್ರ ಮತ್ತು ಸೈನಿಕ ವಸತಿ ಕೇಂದ್ರವನ್ನಾಗಿ ಬಳಸಲಾರಂಭಿಸಿತು. ಆರಂಭದಲ್ಲಿ ಕೆಂಪುಕೋಟೆಯಲ್ಲಿ ಭಾರತೀಯ ಸೇನೆಯ ಗಾರ್ಡ್ಸ್ ರೆಜಿಮೆಂಟ್ ಹಾಗೂ ನಂತರದ ದಿನಗಳಲ್ಲಿ ರಜ್​ಪುತ್ ರೈಫಲ್ಸ್ನಂತಹ ಪ್ರತಿಷ್ಠಿತ ತುಕಡಿಗಳನ್ನು ನಿಯೋಜಿಸಲಾಯಿತು. ಕೋಟೆಯ ಬೃಹತ್ ಗೋಡೆಗಳು ಹಾಗೂ ಸುರಕ್ಷಿತ ಆವರಣವು ಸೇನಾ ಕಚೇರಿಗಳು, ತರಬೇತಿ ಹಾಗೂ ದೆಹಲಿಯ ರಕ್ಷಣಾ ವ್ಯವಸ್ಥೆಗೆ ಬಹಳ ಉಪಯುಕ್ತವಾಗಿತ್ತು. ಕೋಟೆಯ 80% ಭಾಗ ಸಂಪೂರ್ಣವಾಗಿ ಸೇನೆಯ ನಿಯಂತ್ರಣದಲ್ಲೇ ಇತ್ತು. ಸಾರ್ವಜನಿಕರಿಗೆ ಕೇವಲ ದಿವಾನ-ಎ-ಆಮ್ ಮತ್ತು ದಿವಾನ-ಎ-ಖಾಸ್​ನಂತಹ ಕೆಲವೇ ಭಾಗಗಳಿಗೆ ಪ್ರವೇಶವಿತ್ತು.
ಸೇನೆಯಿಂದ ನಾಗರಿಕ ಇಲಾಖೆಗೆ ಹಸ್ತಾಂತರ: ದಶಕಗಳು ಕಳೆದಂತೆ, ಕೆಂಪುಕೋಟೆಯಂತಹ ಐತಿಹಾಸಿಕ ವಿಶ್ವ ಪರಂಪರೆಯ ತಾಣವನ್ನು ಸೈನ್ಯದ ಬ್ಯಾರಾಕ್ ಆಗಿ ಬಳಸುವುದು ಸೂಕ್ತವಲ್ಲ ಎಂಬ ಚರ್ಚೆ ಶುರುವಾಯಿತು. ಸೈನಿಕ ವಾಹನಗಳ ಓಡಾಟ, ಸೈನಿಕರ ದೈನಂದಿನ ಚಟುವಟಿಕೆಗಳು ಹಾಗೂ ಸೇನಾ ನಿರ್ವಣಗಳಿಂದಾಗಿ 17ನೇ ಶತಮಾನದ ಈ ಅದ್ಭುತ ವಾಸ್ತುಶಿಲ್ಪಕ್ಕೆ ಹಾನಿಯಾಗುತ್ತಿದೆ ಎಂದು ಇತಿಹಾಸಕಾರರು ಮತ್ತು ಸಂರಕ್ಷಣಾ ತಜ್ಞರು ಕಳವಳ ವ್ಯಕ್ತಪಡಿಸಿದರು. ಕೆಂಪುಕೋಟೆಯನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ ಪಟ್ಟಿಗೆ ಸೇರಿಸಲು, ಅದು ಸಂಪೂರ್ಣವಾಗಿ ಪುರಾತತ್ವ ಇಲಾಖೆಯ ಸುಪರ್ದಿಗೆ ಬರುವುದು ಅನಿವಾರ್ಯವಾಗಿತ್ತು. 146 ವರ್ಷಗಳ ನಿರಂತರ ಸೇನಾ ಉಪಸ್ಥಿತಿಯ ನಂತರ, ಕೆಂಪುಕೋಟೆಯನ್ನು ಸಂಪೂರ್ಣವಾಗಿ ನಾಗರಿಕ ಆಡಳಿತಕ್ಕೆ ಒಪ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು. 2003ರ ಡಿಸೆಂಬರ್ 22ರಂದು ಈ ಐತಿಹಾಸಿಕ ಹಸ್ತಾಂತರ ನಡೆಯಿತು. ಅಂದಿನ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಕೆಂಪುಕೋಟೆಯ ಸಾಂಕೇತಿಕ ಕೀಲಿಕೈಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಗಮೋಹನ್ ಅವರಿಗೆ ಹಸ್ತಾಂತರಿಸಿದರು.
ಹಸ್ತಾಂತರದ ನಂತರದ ಬದಲಾವಣೆಗಳು: ಎಎಸ್​ಐ ಸಂಪೂರ್ಣ ಕೋಟೆಯನ್ನು ತನ್ನ ವಶಕ್ಕೆ ಪಡೆದು, ಮೊಘಲ್ ಕಾಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬೃಹತ್ ಮರುಸ್ಥಾಪನೆ ಕಾರ್ಯಗಳನ್ನು ಕೈಗೊಂಡಿತು. ಸೇನೆ ತೆರವುಗೊಂಡ ಕೆಲವೇ ವರ್ಷಗಳಲ್ಲಿ, ಅಂದರೆ 2007ರಲ್ಲಿ ಕೆಂಪುಕೋಟೆಗೆ ಯುನೆಸ್ಕೊದ ವಿಶ್ವ ಪರಂಪರೆಯ ತಾಣ ಎಂಬ ಅಧಿಕೃತ ಮಾನ್ಯತೆ ಲಭಿಸಿತು. ಬ್ರಿಟಿಷರು ನಿರ್ವಿುಸಿದ್ದ ಹಳೆಯ ಸೇನಾ ಬ್ಯಾರಕ್​ಗಳನ್ನು ನಂತರದ ದಿನಗಳಲ್ಲಿ ‘ಕ್ರಾಂತಿರಂಗ’, ‘ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ’, ‘ಜಲಿಯನ್​ವಾಲಾ ಬಾಗ್ ಮ್ಯೂಸಿಯಂ’ ಮತ್ತು ‘1857ರ ಸಂಗ್ರಾಮ ಮ್ಯೂಸಿಯಂ’ಗಳನ್ನಾಗಿ (ಆಜಾದಿ ಕೆ ದೀವಾನೆ) ಪರಿವರ್ತಿಸಲಾಯಿತು.

1945ರ ಐತಿಹಾಸಿಕ ವಿಚಾರಣೆ

ಸ್ವಾತಂತ್ರ್ಯಕ್ಕೂ ಮುನ್ನವೇ ಕೆಂಪುಕೋಟೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಕೇಂದ್ರಬಿಂದುವಾಗಲು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಸೈನಿಕರ ವಿಚಾರಣೆಯೇ ಪ್ರಮುಖ ಕಾರಣ. ನೇತಾಜಿ ಅವರು ತಮ್ಮ ಐಎನ್​ಎ ಸೈನ್ಯಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಿದ್ದರು. ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾದ ನಂತರ ಬ್ರಿಟಿಷ್ ಪಡೆಗಳು ಸಾವಿರಾರು ಐಎನ್​ಎ ಸೈನಿಕರನ್ನು ಬಂಧಿಸಿದವು. ಬ್ರಿಟಿಷ್ ಸರ್ಕಾರವು ಭಾರತೀಯರಲ್ಲಿ ಭಯ ಹುಟ್ಟಿಸಲು ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಬಂಡಾಯವೆದ್ದ ದೇಶದ್ರೋಹಿಗಳು ಎಂದು ಬಿಂಬಿಸಲು ಕೆಂಪುಕೋಟೆಯನ್ನೇ ಮಿಲಿಟರಿ ಕೋರ್ಟ್ ಆಗಿ ಆಯ್ಕೆ ಮಾಡಿಕೊಂಡು, 1945ರ ನವೆಂಬರ್ ಹಾಗೂ 1946ರ ಮೇ ತಿಂಗಳಲ್ಲಿ ವಿಚಾರಣೆ ನಡೆಸಿತು.
ಹಿಂದೂ, ಮುಸ್ಲಿಂ, ಸಿಖ್ ಮೂರೂ ಧರ್ಮಗಳ ಯೋಧರನ್ನು ಒಟ್ಟಿಗೆ ನಿಲ್ಲಿಸಿದ್ದು ಇಡೀ ದೇಶದಲ್ಲಿ ಬೃಹತ್ ಭಾವನಾತ್ಮಕ ಒಗ್ಗಟ್ಟನ್ನು ಉಂಟುಮಾಡಿತು. ದೇಶಾದ್ಯಂತ ‘ಲಾಲ್ ಕಿಲೇ ಸೆ ಆಯಿ ಆವಾಜ್: ಸೆಹಗಲ್, ಧಿಲ್ಲೋನ್, ಶಾನವಾಜ್!’ ಎಂಬ ಘೊಷಣೆ ಮೊಳಗಿತು. ಇವರ ಪರವಾಗಿ ವಾದಿಸಲು ದೇಶದ ಅತ್ಯಂತ ಶ್ರೇಷ್ಠ ವಕೀಲರು ಮುಂದಾದರು. ಸರ್ ತೇಜ್ ಬಹದ್ದೂರ್ ಸಪ್ರು, ಭೂಲಾಭಾಯ್ ದೇಸಾಯಿ, ಕೈಲಾಶ್ ನಾಥ್ ಕಾಟ್ಜು ಮತ್ತು 25 ವರ್ಷಗಳ ಕಾಲ ಕೋರ್ಟ್ ಅಭ್ಯಾಸವನ್ನೇ ಬಿಟ್ಟಿದ್ದ ಜವಾಹರಲಾಲ್ ನೆಹರು ಅವರು ಕಪ್ಪು ಕೋಟು ಧರಿಸಿ ವಾದ ಮಂಡಿಸಿದರು. ಈ ವಿಚಾರಣೆಯು ಭಾರತೀಯ ಸೈನಿಕರಲ್ಲಿ ದೇಶಪ್ರೇಮದ ಕಿಡಿಯನ್ನು ಹೊತ್ತಿಸಿತು. ಇದರ ನೇರ ಪರಿಣಾಮವಾಗಿ 1946ರಲ್ಲಿ ರಾಯಲ್ ಇಂಡಿಯನ್ ನೇವಿ (ನೌಕಾಪಡೆ) ದಂಗೆ ನಡೆಯಿತು. ಭಾರತೀಯ ಸೈನಿಕರ ಮೇಲೆ ತಮಗೆ ಇನ್ನು ನಿಯಂತ್ರಣವಿಲ್ಲ ಎಂದು ಅರಿತ ಬ್ರಿಟಿಷರು ದೇಶ ಬಿಡಲು ತೀರ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net