ವಿಪ್ ಇತ್ತು, ಆದರೆ... ಬಿಹಾರದಿಂದ ಹರಿಯಾಣದವರೆಗೆ ಕಾಂಗ್ರೆಸ್ 'ಕೈ' ತಪ್ಪಿದ ಆ ಮತಗಳ ರಹಸ್ಯವೇನು ಗೊತ್ತಾ..? | Congress Crisis

Congress Crisis | ಕೈ ತಪ್ಪುತ್ತಿದೆಯೇ ಹೈಕಮಾಂಡ್ ಹಿಡಿತ..?
Congress Crisis | ಕೈ ತಪ್ಪುತ್ತಿದೆಯೇ ಹೈಕಮಾಂಡ್ ಹಿಡಿತ..?
Published on
ನವದೆಹಲಿ: ಇತ್ತೀಚಿನ ರಾಜ್ಯಸಭಾ ಚುನಾವಣೆಗಳು ಕಾಂಗ್ರೆಸ್‌ ಪಕ್ಷಕ್ಕೆ ಕೇವಲ ಸೋಲಲ್ಲ, ಬದಲಾಗಿ ಪಕ್ಷದ ಆಂತರಿಕ ಶಿಸ್ತಿನ ಬುಡವನ್ನೇ ಅಲುಗಾಡಿಸಿದ (Congress Crisis) ಭಾರಿ ಮುಜುಗುರಕ್ಕೆ ಕಾರಣವಾಗಿವೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ಕೈ ಶಾಸಕರು ಪಕ್ಷದ ವಿಪ್ ಧಿಕ್ಕರಿಸಿ, ಪ್ರತಿಸ್ಪರ್ಧಿ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಕೇಂದ್ರ ನಾಯಕತ್ವಕ್ಕೆ ದೊಡ್ಡ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಗಳು ಪಕ್ಷದಲ್ಲಿ ತಲ್ಲಣವನ್ನೇ ಸೃಷ್ಟಿಸಿವೆ.

ಸಮನ್ವಯದ ಕೊರತೆ

ಬಿಹಾರದಲ್ಲಿ ಕಾಂಗ್ರೆಸ್ ಅನುಭವಿಸಿದ ಹಿನ್ನಡೆ ಪಕ್ಷದ ಸಾಂಸ್ಥಿಕ ದೌರ್ಬಲ್ಯವನ್ನು ಎತ್ತಿ ತೋರಿಸಿದ್ದು, ರಾಜ್ಯ ಉಸ್ತುವಾರಿ ಕೃಷ್ಣ ಅಲ್ಲಾವರು ಮತದಾನದ ಸಂದರ್ಭದಲ್ಲಿ ಪಟನಾದಲ್ಲಿ ಇರಲೇ ಇಲ್ಲ ಎನ್ನುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಎಐಎಂಐಎಂನ ಐದು ಶಾಸಕರು ಮಹಾಘಟಬಂಧನ್ ಅಭ್ಯರ್ಥಿ ಎ.ಡಿ. ಸಿಂಗ್​​ರನ್ನು ಬೆಂಬಲಿಸಿದರೂ, ಆರು ಕಾಂಗ್ರೆಸ್ ಶಾಸಕರಲ್ಲಿ ಮೂವರು ಮತದಾನಕ್ಕೇ ಬರಲಿಲ್ಲ!
ಕಾಂಗ್ರೆಸ್ ಶಾಸಕರ ಈ ಗೈರಿನಿಂದ ಎನ್‌ಡಿಎ ಮೈತ್ರಿಕೂಟ ಸುಲಭವಾಗಿ ಐದನೇ ರಾಜ್ಯಸಭಾ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಈ ಬೆಳವಣಿಗೆಯನ್ನು ಆರ್‌ಜೆಡಿ ನಾಯಕರು ಕಾಂಗ್ರೆಸ್ ಮಾಡಿದ ದ್ರೋಹ ಎಂದು ಕಿಡಿಕಾರಿದ್ದು, ಇಂಡಿಯಾ ಒಕ್ಕೂಟದ ಒಳಗಿನ ಬಿರುಕು ಜಗಜ್ಜಾಹೀರಾಗಿದೆ.

ಒಡಿಶಾ: ಬಂಡಾಯದ ಬಾವುಟ

ಒಡಿಶಾದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬಿಜೆಡಿ ಬೆಂಬಲಿತ ಅಭ್ಯರ್ಥಿ ಹೋಟಾ ಆಯ್ಕೆಗೆ ಮೊದಲೇ ಕಟಕ್ ಶಾಸಕಿ ಸೋಫಿಯಾ ಫಿರ್ದೌಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದನ್ನು ಸರಿಪಡಿಸುವಲ್ಲಿ ಹೈಕಮಾಂಡ್ ವಿಫಲವಾಯಿತು ಎನ್ನಲಾಗಿದೆ. ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಪಕ್ಷಕ್ಕೆ ಆಘಾತ ನೀಡಿದರು. ಈ ಅಡ್ಡ ಮತದಾನವು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ನೆರವಾಯಿತು.

ಹರಿಯಾಣ: ಗೆದ್ದರೂ ಸಮಾಧಾನವಿಲ್ಲವೇಕೆ..?

ಹರಿಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರಮ್‌ವೀರ್ ಸಿಂಗ್ ಬೌಧ್ ಗೆದ್ದರಾದರೂ, ಆ ಗೆಲುವು ಸೋಲಿಗಿಂತ ಕೆಟ್ಟದಾಗಿತ್ತು. ಗೆಲ್ಲಲು 31 ಮತಗಳ ಅಗತ್ಯವಿತ್ತು, ಪಕ್ಷದ ಬಳಿ 37 ಶಾಸಕರಿದ್ದರು. ಆದರೆ ಬಂದದ್ದು ಕೇವಲ 28 ಮತಗಳು!. ಕಾಂಗ್ರೆಸ್​ನ ಐದು ಮತಗಳು ಅಸಿಂಧುಗೊಂಡರೆ, ನಾಲ್ವರು ಶಾಸಕರು ಬಿಜೆಪಿ ಪರ ಮತ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೇವಲ ಒಂದು ಮತದ ಅಂತರದಿಂದ ಗೆದ್ದ ಬೌಧ್ ಫಲಿತಾಂಶವು ಹರಿಯಾಣ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆಯನ್ನು ಬಯಲಿಗೆಳೆದಿದೆ.

ಕೈ ತಪ್ಪುತ್ತಿದೆಯೇ ಹೈಕಮಾಂಡ್ ಹಿಡಿತ..?

ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಅಡ್ಡ ಮತದಾನವನ್ನು ಯಶಸ್ವಿಯಾಗಿ ತಡೆದಿದ್ದ ಕಾಂಗ್ರೆಸ್, ಅಧಿಕಾರವಿಲ್ಲದ ರಾಜ್ಯಗಳಲ್ಲಿ ಸೋಲುತ್ತಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ. ರಾಜ್ಯ ಘಟಕಗಳ ಮೇಲೆ ದೆಹಲಿ ನಾಯಕತ್ವದ ಹಿಡಿತ ಸಡಿಲವಾಗುತ್ತಿದೆಯೇ? ಶಾಸಕರು ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗುತ್ತಿದ್ದಾರೆಯೇ ಅಥವಾ ಪಕ್ಷದ ಒಳಗಿನ ಅಸಮಾಧಾನ ಸ್ಫೋಟಗೊಳ್ಳುತ್ತಿದೆಯೇ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಮುಂಬರುವ ಚುನಾವಣೆಗಳಿಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್‌ಗೆ ಈ ರಾಜ್ಯಸಭಾ ಚುನಾವಣೆಗಳು ಎಚ್ಚರಿಕೆಯ ಗಂಟೆಯಾಗಿದ್ದು, ಆಂತರಿಕ ಶಿಸ್ತು ಕಾಪಾಡಿಕೊಳ್ಳದಿದ್ದರೆ, ಇನ್ನೂ ಅನೇಕರು ಕೈ ಬಿಡುವುದರಲ್ಲಿ ಅಚ್ಚರಿ ಇಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net