_1774202793106.webp?w=480&auto=format%2Ccompress&fit=max)
_1774202793106.webp?w=480&auto=format%2Ccompress&fit=max)
ಫೆಬ್ರವರಿ 28ರಂದು ಯುದ್ಧ ಆರಂಭಗೊಳ್ಳುತ್ತಿದ್ದಂತೆ ಇರಾನ್ ಹೊಮುಜ್ ಜಲಸಂಧಿಯನ್ನು ಮುಚ್ಚಿದ್ದು, ಜಾಗತಿಕ ಕಚ್ಚಾ ತೈಲ ಪೂರೈಕೆ ಜಾಲದಲ್ಲಿ ವ್ಯತ್ಯಯವುಂಟಾಗಿದೆ. ಇರಾನ್ನಿಂದ ಈ ಕ್ರಮ ನಿರೀಕ್ಷೆ ಮಾಡದ ಅಮೆರಿಕ ಬೆಚ್ಚಿಬಿದ್ದಿದೆ. ಭಾರತದೊಂದಿಗೆ ಸ್ನೇಹ ಇರುವುದರಿಂದ ಎಲ್ಪಿಜಿ ಹಾಗೂ ಕಚ್ಚಾ ತೈಲ ಹೊತ್ತ ಹಡಗುಗಳ ಸಾಗಣೆಗೆ ಇರಾನ್ ಅನುವು ಮಾಡಿಕೊಟ್ಟಿದೆ. ಆದರೆ, ಈಗ ಯುದ್ಧದ ಕೇಂದ್ರಬಿಂದುವೇ ಹೊಮುಜ್ ಜಲಸಂಧಿಯಾಗಿದೆ. ಮುಚ್ಚಿರುವ ಈ ಮಾರ್ಗವನ್ನು ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ 48 ಗಂಟೆಗಳ ಗಡುವು ನೀಡಿದ್ದಾರೆ. ಇದಕ್ಕೆ ತೀಕ್ಷ ್ಣ ಪ್ರತಿಕ್ರಿಯೆ ನೀಡಿರುವ ಇರಾನ್, ಹೊಮುಜ್ ಜಲಸಂಧಿಯನ್ನು ವೈರಿರಾಷ್ಟ್ರಗಳಿಗೆ ಮುಚ್ಚಲಾಗಿದೆ. ಆ ರಾಷ್ಟ್ರಗಳಿಗೆ ಮಾರ್ಗ ತೆರೆಯುವ ಪ್ರಶ್ನೆಯೇ ಇಲ್ಲ ಎಂದಿದೆ. ಆದರೆ, ಹೊಮುಜ್ ಜಲಸಂಧಿಯನ್ನು ತೆರೆಸುವುದೇ ಅಮೆರಿಕದ ಈಗಿನ ರಣನೀತಿಯಾಗಿದೆ.
ಹೊಮುಜ್ ಜಲಸಂಧಿ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಕಚ್ಚಾ ತೈಲದ ಪೂರೈಕೆ ಸುಗಮವಾಗಬೇಕು ಎಂದಾದರೆ ಮುಚ್ಚಿರುವ ಹೊಮುಜ್ ಜಲಸಂಧಿ ತೆರೆಯಲೇ ಬೇಕು. ಆದರೆ, ಇರಾನ್ ಶತ್ರುರಾಷ್ಟ್ರಗಳಿಗೆ ಈ ಮಾರ್ಗ ಬಳಸಲು ಅನುವು ಮಾಡಿಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಇದೇ ನೆಪ ಇರಿಸಿಕೊಂಡು ಅಮೆರಿಕ ಇರಾನ್ ಮೇಲಿನ ದಾಳಿಗಳನ್ನು ಹೆಚ್ಚಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಅದೇನಿದ್ದರೂ, ಈ ಬಿಕ್ಕಟ್ಟಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಯುದ್ಧದ ಮುನ್ನ ಪ್ರತಿ ಬ್ಯಾರೆಲ್ಗೆ 70-73 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ ಪ್ರಸ್ತುತ ಪ್ರತಿ ಬ್ಯಾರೆಲ್ಗೆ 108-110 ಡಾಲರ್ಗೆ ತಲುಪಿದೆ. ಹೊಮುಜ್ ಜಲಸಂಧಿ ವಿಶ್ವದ ಅತ್ಯಂತ ಆಯಕಟ್ಟಿನ ಮತ್ತು ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಹೊಮುಜ್ ಕೇವಲ ಒಂದು ಜಲಮಾರ್ಗವಲ್ಲ, ಅದು ವಿಶ್ವದ ಶಕ್ತಿ ಸರಬರಾಜಿನ ಪ್ರಮುಖ ಕೊಂಡಿಯಾಗಿದೆ. ಇದು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ನಡುವೆ ಇದೆ. ಹೊಮುಜ್ ಜಲಸಂಧಿ ಒಂದು ಕಡೆ ಇರಾನ್ ದೇಶವನ್ನು, ಇನ್ನೊಂದು ಕಡೆ ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳನ್ನು ಬೇರ್ಪಡಿಸುತ್ತದೆ. ಇಲ್ಲಿ ಹಡಗುಗಳು ಸಂಚರಿಸಲು ಇರುವ ಸುರಕ್ಷಿತ ಮಾರ್ಗವು ಕೇವಲ 3 ಕಿಲೋಮೀಟರ್ ಅಗಲವಿದ್ದು, ಇರಾನ್ ಮತ್ತು ಓಮಾನ್ ದೇಶಗಳ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಬರುತ್ತದೆ.
ಕಿರಿದಾದ ಮಾರ್ಗ: ಇದು ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕೆ ಹಡಗುಗಳು ಚಲಿಸುವ ಅತ್ಯಂತ ಕಿರಿದಾದ ಜಲಸಂಧಿಯಾಗಿದೆ.
ಭೌಗೋಳಿಕ ಪ್ರಾಮುಖ್ಯ: ಪರ್ಷಿಯನ್ ಕೊಲ್ಲಿಯಿಂದ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಪ್ರವೇಶಿಸಲು ಇರುವ ಏಕೈಕ ಜಲಮಾರ್ಗ ಇದಾಗಿದೆ.
ಇರಾನ್ ನಿಯಂತ್ರಣ: ಈ ಜಲಸಂಧಿಯ ಉತ್ತರ ಭಾಗವು ಸಂಪೂರ್ಣವಾಗಿ ಇರಾನ್ ದೇಶದ ಕರಾವಳಿಗೆ ಹತ್ತಿರವಿರುವುದರಿಂದ, ಯುದ್ಧ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಈ ಮಾರ್ಗವನ್ನು ಮುಚ್ಚುವ ಸಾಮರ್ಥ್ಯವನ್ನು ಇರಾನ್ ಹೊಂದಿದೆ. ಇದು ಜಾಗತಿಕ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿದೆ.
ತೈಲ ಸರಬರಾಜು: ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು 20% ರಿಂದ 25%ರಷ್ಟು ಭಾಗವು ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್ ಮತ್ತು ಇರಾನ್ ದೇಶಗಳು ತಮ್ಮ ಕಚ್ಚಾ ತೈಲವನ್ನು ರಫ್ತು ಮಾಡಲು ಈ ಮಾರ್ಗವನ್ನೇ ಅವಲಂಬಿಸಿವೆ.
ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ): ಕತಾರ್ ದೇಶವು ವಿಶ್ವದ ಅತಿ ದೊಡ್ಡ ಎಲ್ಎನ್ಜಿ ರಫ್ತುದಾರ ರಾಷ್ಟ್ರವಾಗಿದ್ದು, ಅದರ ಬಹುತೇಕ ಅನಿಲ ಸರಬರಾಜು ಇದೇ ಮಾರ್ಗದ ಮೂಲಕ ನಡೆಯುತ್ತದೆ.
ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ: ಈ ಜಲಸಂಧಿಯಲ್ಲಿ ಸ್ವಲ್ಪವೇ ಅಡೆತಡೆ ಉಂಟಾದರೂ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏಕಾಏಕಿ ಏರಿಕೆಯಾಗುತ್ತವೆ. ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಪ್ರಸಕ್ತ ವಿದ್ಯಮಾನಗಳೇ ಸಾಕ್ಷಿಯಾಗಿವೆ.
ಈ ಪ್ರದೇಶವು ಯಾವಾಗಲೂ ಸಂಘರ್ಷದ ಕೇಂದ್ರಬಿಂದುವಾಗಿರುತ್ತದೆ. ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆಯ ಸಂದರ್ಭದಲ್ಲಿ ಈ ಮಾರ್ಗದಲ್ಲಿ ತೈಲ ಹಡಗುಗಳ ಮೇಲೆ ದಾಳಿ ನಡೆಯುವ ಅಥವಾ ಮಾರ್ಗವನ್ನು ತಡೆಯುವ ಭೀತಿ ಇರುತ್ತದೆ. ಪ್ರಸ್ತುತ, ಇರಾನ್ ಈ ಮಾರ್ಗವನ್ನೇ ಮುಚ್ಚಿದ್ದು, ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.
ಪ್ರಪಂಚದ ಪ್ರಮುಖ ಜಲಸಂಧಿಗಳು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ರಾಜಕೀಯದ ಜೀವನಾಡಿಗಳು. ಒಂದು ಸಮುದ್ರವನ್ನು ಮತ್ತೊಂದು ಸಮುದ್ರಕ್ಕೆ ಜೋಡಿಸುವ ಈ ಕಿರಿದಾದ ಮಾರ್ಗಗಳು ಆಯಕಟ್ಟಿನ ಪ್ರದೇಶಗಳಾಗಿವೆ.
ಮಲಕ್ಕಾ ಜಲಸಂಧಿ ಇಂಡೋನೇಷ್ಯಾ ಮತ್ತು ಮಲೇಷ್ಯಾ ನಡುವೆ ಇದ್ದು, ಅಂಡಮಾನ್ ಸಮುದ್ರವನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಜೋಡಿಸುತ್ತದೆ. ಇದು ವಿಶ್ವದ ಜನನಿಬಿಡ ಮತ್ತು ಉದ್ದವಾದ (ಸುಮಾರು 800 ಕಿ.ಮೀ) ಜಲಸಂಧಿಯಾಗಿದೆ. ಮಾತ್ರವಲ್ಲ, ಏಷ್ಯಾ ಮತ್ತು ಯುರೋಪ್ ನಡುವಿನ ಹತ್ತಿರದ ಮಾರ್ಗ ಇದಾಗಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಹೋಗುವ ಕಾಲು ಭಾಗದಷ್ಟು ತೈಲ ಮತ್ತು ವ್ಯಾಪಾರ ಈ ಮಾರ್ಗದ ಮೂಲಕವೇ ನಡೆಯುತ್ತದೆ. ಇದನ್ನು ಚೀನಾದ ‘ಮಲಕ್ಕಾ ಡಿಲೆಮಾ’ ಎಂದೂ ಕರೆಯಲಾಗುತ್ತದೆ ಏಕೆಂದರೆ ಈ ಮಾರ್ಗ ಬಂದ್ ಆದರೆ ಚೀನಾದ ಇಂಧನ ಸರಬರಾಜು ನಿಂತುಹೋಗುತ್ತದೆ
ಜಿಬ್ರಾಲ್ಟರ್ ಜಲಸಂಧಿಯನ್ನು ‘ಮೆಡಿಟರೇನಿಯನ್ ಸಮುದ್ರದ ಕೀಲಿ ಕೈ’ ಎಂದು ಕರೆಯಲಾಗುತ್ತದೆ. ಇದು ಯುರೋಪ್ನ ಸ್ಪೇನ್ ಮತ್ತು ಆಫ್ರಿಕಾದ ಮೊರಾಕೊ ದೇಶಗಳ ನಡುವೆ ಇದ್ದು, ಅಟ್ಲಾಂಟಿಕ್ ಸಾಗರವನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಜೋಡಿಸುತ್ತದೆ. ಇದರ ಕಿರಿದಾದ ಭಾಗ ಕೇವಲ 14 ಕಿ.ಮೀ ಇದೆ. ಜಿಬ್ರಾಲ್ಟರ್ ಜಲಸಂಧಿ ಯುರೋಪ್ ಮತ್ತು ಉತ್ತರ ಆಫ್ರಿಕಾದ ನಡುವಿನ ಪ್ರಮುಖ ಕೊಂಡಿಯಾಗಿದೆ. ಅಟ್ಲಾಂಟಿಕ್ನಿಂದ ಸೂಯೆಜ್ ಕಾಲುವೆಯ ಮೂಲಕ ಏಷ್ಯಾಕ್ಕೆ ಹೋಗುವ ಹಡಗುಗಳು ಈ ಮಾರ್ಗವನ್ನೇ ಬಳಸಬೇಕು.
ಬೇರಿಂಗ್ ಜಲಸಂಧಿ ಏಷ್ಯಾದ ರಷ್ಯಾ ಮತ್ತು ಉತ್ತರ ಅಮೆರಿಕದ ಅಲಾಸ್ಕಾ ನಡುವೆ ಇದೆ. ಇದು ಆರ್ಕ್ಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರವನ್ನು ಜೋಡಿಸುತ್ತದೆ. ಇದು ಐಠಿಛ್ಟಿ್ಞಠಿಜಿಟ್ಞಚ್ಝ ಈಚಠಿಛಿ ಔಜ್ಞಿಛಿ ಹಾದುಹೋಗುವ ಸ್ಥಳವಾಗಿದೆ. ಪ್ರಸ್ತುತ ಇಲ್ಲಿ ವ್ಯಾಪಾರ ಕಡಿಮೆ, ಆದರೆ ಜಾಗತಿಕ ತಾಪಮಾನ ಏರಿಕೆಯಿಂದ ಆರ್ಕ್ಟಿಕ್ ಮಂಜುಗಡ್ಡೆ ಕರಗುತ್ತಿದ್ದು, ಭವಿಷ್ಯದಲ್ಲಿ ಇದು ಯುರೋಪ್ ಮತ್ತು ಏಷ್ಯಾ ನಡುವಿನ ಅತಿ ವೇಗದ ಹಡಗು ಮಾರ್ಗವಾಗುವ ಸಾಧ್ಯತೆಯಿದೆ.
ಮಂಡೆಬ್ ಜಲಸಂಧಿ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯ ನಡುವೆ ಇದೆ (ಯಮನ್ ಮತ್ತು ಜಿಬೂಟಿ ದೇಶಗಳ ನಡುವೆ). ಅರೇಬಿಕ್ ಭಾಷೆಯಲ್ಲಿ ಇದರ ಅರ್ಥ ‘ಕಣ್ಣೀರಿನ ದ್ವಾರ’. ಇದು ತುಂಬ ಅಪಾಯಕಾರಿ ಮತ್ತು ಕಿರಿದಾದ ಮಾರ್ಗವಾಗಿದೆ. ಸೂಯೆಜ್ ಕಾಲುವೆಗೆ ಹೋಗುವ ಎಲ್ಲ ಹಡಗುಗಳು ಈ ಜಲಸಂಧಿಯ ಮೂಲಕವೇ ಹಾದುಹೋಗಬೇಕು. ಪರ್ಷಿಯನ್ ಕೊಲ್ಲಿಯಿಂದ ಯುರೋಪ್ಗೆ ಹೋಗುವ ತೈಲ ಮತ್ತು ಅನಿಲದ ಬಹುಪಾಲು ಪಾಲು ಈ ಮಾರ್ಗದ ಮೂಲಕ ಸಾಗುತ್ತದೆ.
ಬಾಸ್ಪರಸ್ ಮತ್ತು ಡಾರ್ಡನೆಲ್ಸ್ ಜಲಸಂಧಿಗಳು ಟರ್ಕಿ ದೇಶದಲ್ಲಿವೆ. ಕಪ್ಪು ಸಮುದ್ರವನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಜೋಡಿಸುತ್ತವೆ. ಇವು ಏಷ್ಯಾ ಮತ್ತು ಯುರೋಪ್ ಖಂಡಗಳನ್ನು ಬೇರ್ಪಡಿಸುತ್ತವೆ. ಇಸ್ತಾನ್ಬುಲ್ ನಗರವು ಬಾಸ್ಪರಸ್ ಜಲಸಂಧಿಯ ಎರಡೂ ದಡಗಳಲ್ಲಿದೆ. ರಷ್ಯಾ, ಯೂಕ್ರೇನ್ ಮತ್ತು ಮಧ್ಯ ಏಷ್ಯಾದ ದೇಶಗಳಿಗೆ ಸಮುದ್ರ ಮಾರ್ಗದ ಏಕೈಕ ದಾರಿ ಇದು. ಆಹಾರ ಧಾನ್ಯಗಳು ಮತ್ತು ತೈಲ ರಫ್ತಿಗೆ ಇದು ಅತಿ ಮುಖ್ಯ.
ಇದು ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಇದೆ. ಉತ್ತರ ಸಮುದ್ರವನ್ನು ಅಟ್ಲಾಂಟಿಕ್ ಸಾಗರಕ್ಕೆ ಜೋಡಿಸುತ್ತದೆ. ವಿಶ್ವದ ಅತ್ಯಂತ ಹೆಚ್ಚಿನ ಸಂಚಾರ ಇರುವ ಜಲಮಾರ್ಗಗಳಲ್ಲಿ ಇಂಗ್ಲಿಷ್ ಕಾಲುವೆ ಒಂದು. ಇದರ ಅಡಿಯಲ್ಲಿ ಚಾನೆಲ್ ಟನಲ್ ಎಂಬ ರೈಲು ಮಾರ್ಗವೂ ಇದೆ. ಯುರೋಪ್ ಖಂಡ ಮತ್ತು ಬ್ರಿಟನ್ ನಡುವಿನ ವ್ಯಾಪಾರಕ್ಕೆ ಇದು ಅತ್ಯಗತ್ಯ.
ಸಮಯ ಮತ್ತು ಹಣದ ಉಳಿತಾಯ: ಈ ಜಲಸಂಧಿಗಳು ಇಲ್ಲದಿದ್ದರೆ ಹಡಗುಗಳು ಇಡೀ ಖಂಡವನ್ನೇ ಸುತ್ತಿ ಬರಬೇಕಾಗುತ್ತಿತ್ತು (ಉದಾಹರಣೆಗೆ ಆಫ್ರಿಕಾವನ್ನು ಸುತ್ತುವುದು), ಇದರಿಂದ ಇಂಧನ ಮತ್ತು ಸಮಯ ವ್ಯರ್ಥವಾಗುತ್ತಿತ್ತು.
ತೈಲ ಭದ್ರತೆ: ಜಗತ್ತಿನ ಬಹುತೇಕ ಇಂಧನ ಅಗತ್ಯಗಳು ಈ ‘ಚೋಕ್ ಪಾಯಿಂಟ್’ ಮೂಲಕ ಈಡೇರುತ್ತವೆ.
ಜಾಗತಿಕ ರಾಜಕೀಯ: ಈ ಜಲಸಂಧಿಗಳ ಮೇಲೆ ನಿಯಂತ್ರಣ ಹೊಂದಿರುವ ದೇಶಗಳು ಜಾಗತಿಕ ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಬೀರಿವೆ.