

ಈ ವರ್ಷದ ಮೊದಲ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಕುರಿತಾಗಿ ನಮ್ಮ ಮನಸ್ಸಿನಲ್ಲಿದ್ದ ಚಿತ್ರಗಳೇನು, ಅಭಿಪ್ರಾಯಗಳೇನು? ಅಮೆರಿಕದ 47ನೇ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಲಿದ್ದ ಆ 78ರ ವ್ಯವಹಾರಜ್ಞ ತಮ್ಮ ಬಗ್ಗೆ ಮೂಡಿಸಿದ್ದ ಭಾವನೆಗಳೇನು? ಈಗ ಅವೆಲ್ಲವೂ ಯಾವುದೋ ಇತಿಹಾಸಪೂರ್ವಕಾಲದ, ಸ್ಪಷ್ಟವಾಗಿ ನೆನಪಿಸಿಕೊಳ್ಳಲಾಗದ ವಿಷಯಗಳೆನಿಸುತ್ತಿವೆಯಲ್ಲವೇ? ಅದು ಸಹಜ. ಯಾಕೆಂದರೆ ನಂತರದ ಈ 11 ತಿಂಗಳಲ್ಲಿ ಟ್ರಂಪ್ ಕಾಣಿಸಿಕೊಂಡದ್ದೇ ಸಂಪೂರ್ಣ ಬೇರೆಯಾಗಿ.
ಅಂದು ಅವರು ಯೂರೋಪ್ಅನ್ನು ಕಡೆಗಣಿಸಿದ್ದರು, ಯೂರೋಪಿಯನ್ನು ನ್ಯಾಟೋ ದೇಶಗಳು ತಮ್ಮದೇ ಸುರಕ್ಷೆಗಾಗಿ ಅಗತ್ಯ ಪ್ರಮಾಣದಲ್ಲಿ ತಮ್ಮ ಹಣ ಖರ್ಚು ಮಾಡದೇ ಅಮೆರಿಕದ ಮೇಲೆ ಹೊರೆ ಹೊರಿಸುತ್ತಿವೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅದಕ್ಕೆ ವಿರುದ್ಧವಾಗಿ ರಷ್ಯಾ ಕುರಿತು ಅವರಿಗೆ ಸದ್ಭಾವನೆಗಳಿದ್ದವು. ಅಮೆರಿಕದ ಪ್ರಮುಖ ಶತ್ರು ರಷ್ಯಾ ಅಲ್ಲ, ಅದೆಲ್ಲ ಇನ್ನೂ ಶೀತಲಸಮರ ಮನಸ್ಥಿತಿಯಿಂದ ಹೊರಬರಲಾಗದ ಡೆಮೋಕ್ರಾಟಿಗರು ಎಬ್ಬಿಸುತ್ತಿರವ ಹುಯಿಲು, ಇದನ್ನು ತಿರಸ್ಕರಿಸಿ ತಾವು ರಷ್ಯಾ ಜತೆ ಉತ್ತಮ ಸಂಬಂಧ ಇರಿಸಿಕೊಳ್ಳುವುದೇ ತಮ್ಮ ವಿದೇಶ ನೀತಿ ಎಂದವರು ಮತ್ತೆಮತ್ತೆ ಹೇಳಿದ್ದರು. ಯೂರೋಪ್ನ ಉರಿಯುವ ಗಾಯಕ್ಕೆ ಉಪ್ಪು ಹಚ್ಚುವಂತೆ ಐರೋಪ್ಯ ಒಕ್ಕೂಟದ ಪ್ರಮುಖ ದೇಶಗಳಲ್ಲೊಂದಾದ ಡೆನ್ಮಾರ್ಕ್ನ ಅಧೀನದಲ್ಲಿರುವ ಗ್ರೀನ್ಲ್ಯಾಂಡ್ಅನ್ನು ಅಮೆರಿಕದ ಭಾಗವಾಗಿಸಿಕೊಳ್ಳುವ ಮಾತುಗಳನ್ನು ಆಡುತ್ತಿದ್ದರು.
ಇನ್ನು ಭಾರತದ ಕುರಿತಾಗಿ ಅವರ ನೀತಿನಿಲುವುಗಳತ್ತ ನೋಡುವುದಾದರೆ ಈಗ ಅದೊಂದು ಸುಂದರ ಸ್ವಪ್ನದಂತೆನಿಸುತ್ತದೆ. ತಾವು ಹಿಂದೂಗಳ ಹಿತೈಷಿ, ಭಾರತದ ಮಿತ್ರ, ನರೇಂದ್ರ ಮೋದಿ ತಮ್ಮ ಸನ್ಮಿತ್ರ ಎಂದು ಟ್ರಂಪ್ ಸಾರ್ವಜನಿಕವಾಗಿಯೇ ಹೇಳಿದ್ದರು. ಪಾಕಿಸ್ತಾನದ ಕುರಿತಾಗಿ ಅವರ ಮನಸ್ಸಿನ ತುಂಬ ತಿರಸ್ಕಾರವಿತ್ತು.
ಇದೆಲ್ಲವೂ ಅವರು 2017-21ರ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ತಳೆದಿದ್ದ, ಅನುಸರಿಸಿದ್ದ ನಿಲುವುಗಳೇ. ಹೀಗಾಗಿ ಅವರ 2ನೇ ಅವಧಿ ಮೊದಲನೆಯದರ ಮುಂದುವರಿಕೆಯಾಗಿರುತ್ತದೆ, ಭಾರತ-ಅಮೆರಿಕ ಮತ್ತು ಅಮೆರಿಕ-ರಷ್ಯಾ ಸಂಬಂಧ ಇನ್ನೂ ಎತ್ತರಕ್ಕೆ ಏರುತ್ತದೆ, ಯೂಕ್ರೇನ್ ಯುದ್ಧವನ್ನು ರಷ್ಯಾಗೆ ಅನುಕೂಲವಾಗುವಂತೆ ಪರಿಹರಿಸುವುದು ಟ್ರಂಪ್ರ ಪ್ರಥಮ ಆದ್ಯತೆ ಎಂದು ನಾವೆಲ್ಲ ಅದುಕೊಂಡಿದ್ದೆವು. ಖುದ್ದು ಟ್ರಂಪ್ ತಾವು ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಯುದ್ಧ ಅಂತ್ಯಗೊಳಿಸುವುದಾಗಿ ಘೊಷಿಸಿಬಿಟ್ಟಿದ್ದರು. ರಷ್ಯಾ ಆಕ್ರಮಿಸಿಕೊಂಡಿರುವ ಕ್ರಿಮಿಯಾ, ಡಾನ್ಬಾಸ್ ಪ್ರದೇಶಗಳನ್ನು ಆ ದೇಶಕ್ಕೇ ಬಿಟ್ಟುಕೊಡಬೇಕೆಂದು ಯೂಕ್ರೇನ್ಗೆ ಸಂದೇಶವನ್ನೂ ರವಾನಿಸಿದ್ದರು.
ಆಮೇಲೆ ನಮಗೆ ಕಂಡದ್ದು ಬೇರೆಯೇ ಟ್ರಂಪ್. ಯೂಕ್ರೇನ್ನಿಂದ ರಷ್ಯಾವನ್ನು ಹೊರಗಟ್ಟಿ ಆ ದೇಶದ ಖನಿಜ ಸಂಪನ್ಮೂಲಗಳ ಮೇಲೆ ಅಮೆರಿಕದ ಅಧಿಕಾರ ಸ್ಥಾಪಿಸಲು ಲಜ್ಜಾಹೀನ ಪ್ರಯತ್ನ ನಡೆಸಿದರು. ಒಂದು ಹಂತದಲ್ಲಿ ರಷ್ಯಾವನ್ನೂ ಏಮಾರಿಸುವ ಹುನ್ನಾರವೂ ಆಯಿತು. ಜತೆಗೆ, ‘ರಷ್ಯಾ ಮತ್ತು ಭಾರತದ್ದು ಮೃತ ಅರ್ಥವ್ಯವಸ್ಥೆಗಳು. ಅವೆರಡು ಆ ಮೃತ ಅರ್ಥವ್ಯವಸ್ಥೆಗಳೊಂದಿಗೆ ಹಾಳಾಗಿಹೋಗಲಿ’ ಎಂದೂ ಒದರಿಬಿಟ್ಟರು. ಭಾರತದ ಅರ್ಥವ್ಯವಸ್ಥೆ ಅದಾವ ಬಗೆಯಲ್ಲಿ ಮೃತ ಎನ್ನುವುದು ಖುದ್ದು ಟ್ರಂಪ್ಗೇ ಗೊತ್ತಿರಲಾರದು. ಬಹುಶಃ ತಾವು ಭಾರತದ ಸರಕುಗಳ ಆಯಾತದ ಮೇಲೆ ವಿಧಿಸಿರುವ ಶುಲ್ಕದಿಂದಾಗಿ ಈ ದೇಶದ ಅರ್ಥವ್ಯವಸ್ಥೆ ಸತ್ತುಹೋಗುತ್ತದೆಂದು ಅವರ ಮನದಾಳದ ಬಯಕೆಯಾಗಿತ್ತೇನೋ.
ಹೌದು, ಹಾಗೆಯೇ ಇರಬೇಕು. ಯಾಕೆಂದರೆ ತಮ್ಮ ಸನ್ಮಿತ್ರ ಮೋದಿಯವರ ಭಾರತದ ಸರಕುಗಳ ಮೇಲೆ ಅವರು ವಿಧಿಸಿದ ಶೇ. 50 ಶುಲ್ಕ ಯಾವುದೇ ದೇಶದ ಮೇಲೆ ಅವರು ವಿಧಿಸಿದ ಅತಿ ಹೆಚ್ಚಿನ ಶುಲ್ಕ. ಮೊನ್ನೆಯಂತೂ ಭಾರತ ತನ್ನ ಅಕ್ಕಿಯನ್ನು ತಂದು ಅಮೆರಿಕದಲ್ಲಿ ಸುರಿಯುತ್ತಿದೆ ಎಂದು ಟೆಕ್ಸಾಸ್ನ ಅಕ್ಕಿ ಗಿರಣಿ ಮಾಲಕಿಯೊಬ್ಬರು ಹೇಳಿದ ಚಾಡಿಮಾತನ್ನು ನಂಬಿ, ಭಾರತದ ಅಕ್ಕಿಯ ಮೇಲೂ ಶುಲ್ಕ ವಿಧಿಸುವ ಮಾತಾಡಿದರು ಟ್ರಂಪ್.
ಭಾರತದ ಬಗ್ಗೆ ಹೀಗೆ ಯಾವುದೋ ಜನ್ಮದ ಹಗೆ ಸಾಧಿಸುವಂತೆ ಆಡುತ್ತಲೇ ಪಾಕಿಸ್ತಾನದ ಮೇಲೆ ಪ್ರೀತಿಯ ಹೊಳೆ ಹರಿಸುತ್ತಿದ್ದಾರೆ. ಆಪರೇಷನ್ ಸಿಂಧೂರದಲ್ಲಿ ಇಕ್ಕಿಸಿಕೊಂಡ ಪಾಕಿಸ್ತಾನ ಮಾನ ಮುಚ್ಚಿಕೊಳ್ಳಲೆಂದು ಹೊಸೆದ ಸುಳ್ಳುಗಳನ್ನು ಟ್ರಂಪ್ ಪುನರುಚ್ಚರಿಸಿ ಭಾರತದ ಏಳೆಂಟು ಯುದ್ಧವಿಮಾನಗಳನ್ನು ಪಾಕಿಸ್ತಾನೀಯರು ಹೊಡೆದುರುಳಿಸಿದರೆಂದು ಹೇಳುವ ಹಂತಕ್ಕೂ ಹೋದರು! ಅಮೆರಿಕ ಕೊಟ್ಟಿದ್ದ ಎಫ್-16 ಯುದ್ಧವಿಮಾನಗಳಲ್ಲಿ ಕೆಲವನ್ನು ಭಾರತ ನಾಶ ಮಾಡಿದ್ದನ್ನು ಪಾಕಿಸ್ತಾನೀಯರಂತೆ ತಾವೂ ಮರೆಮಾಡಿದ ಟ್ರಂಪ್ ಆ ದೇಶದ ಬುರುಡೆವೀರ ಸೇನಾ ದಂಡನಾಯಕನನ್ನು ‘ನನ್ನ ಮೆಚ್ಚಿನ ಫೀಲ್ಡ್ಮಾರ್ಷಲ್’ ಎಂದು ಜಾಗತಿಕ ಗಣ್ಯರ ಸಮ್ಮುಖದಲ್ಲಿ ಕರೆದು ಅಮೆರಿಕದ ಅಧ್ಯಕ್ಷ ಸ್ಥಾನದ ಗರಿಮೆಯನ್ನು ಗಾಳಿಗೆ ತೂರಿದರು. ಭಾರತದ ದಾಳಿಯಿಂದ ಕ್ಷತಿಗೊಂಡ ಪಾಕಿಸ್ತಾನಿ ವಾಯುನೆಲೆಗಳ ದುರಸ್ತಿಗಾಗಿ ತಮ್ಮ ವಾಯುಸೇನೆಯ ಉನ್ನತಾಧಿಕಾರಿಗಳನ್ನು ಸೆಪ್ಟೆಂಬರ್ನಲ್ಲಿ ಕಳುಹಿಸಿದ ಟ್ರಂಪ್, ಪಾಕಿಸ್ತಾನಿ ವಾಯುಸೇನೆಯ ಎಫ್-16 ಯುದ್ಧವಿಮಾನಗಳ ಕಾಯಕಲ್ಪಕ್ಕೆಂದು 688 ಮಿಲಿಯನ್ ಡಾಲರ್ಗಳನ್ನೂ ನೀಡಹೊರಟಿದ್ದಾರೆ. ಅಷ್ಟೇ ಅಲ್ಲ, ಬಲೂಚಿಸ್ತಾನದಲ್ಲಿ ದುರ್ಲಭ ಖನಿಜಗಳ ಗಣಿಗಾರಿಕೆಗಾಗಿ ಅಮೆರಿಕದ ಎಕ್ಸಿಮ್ ಬ್ಯಾಂಕ್ 1.25 ಬಿಲಿಯನ್ ಡಾಲರ್ ನೆರವು ನೀಡುವ ಘೊಷಣೆಯೂ ವಾರದ ಹಿಂದಷ್ಟೇ ಹೊರಬಿದ್ದಿದೆ! ಬಲೂಚಿಸ್ತಾನದಲ್ಲಿ ಆ ದುರ್ಲಭ ಖನಿಜಗಳು ಇವೆಯೇ ಎನ್ನುವುದೇ ಇನ್ನೂ ಖಚಿತವಿಲ್ಲ. ಪಾಕಿಸ್ತಾನಕ್ಕೆ ಹಣದ ಹೊಳೆ ಹರಿಸುತ್ತಿರುವ ಟ್ರಂಪ್ ಆ ದೇಶದ ಪರವಾಗಿ ಅತಿಯಾಗಿ ವಾಲಿದ ಅಮೆರಿಕದ ಅಧ್ಯಕ್ಷ ಎಂದು ಇತಿಹಾಸದಲ್ಲಿ ದಾಖಲಾಗಲಿದ್ದಾರೆ. ಇದೇ ಟ್ರಂಪ್ ‘ಭಯೋತ್ಪಾದನೆ ವಿರುದ್ಧ ಹೋರಾಡಲು ನೀವು ನಮ್ಮಿಂದ 35 ಬಿಲಿಯನ್ ಡಾಲರ್ಪಡೆದಿದ್ದೀರಿ, ಪ್ರತಿಯಾಗಿ ನಿಮ್ಮಿಂದ ನಮಗೆ ಸಿಕ್ಕಿದ್ದೇನು? ಬರೀ ಮೋಸ, ಸುಳ್ಳೂಗಳು’ ಎಂದು 8 ವರ್ಷಗಳ ಹಿಂದೆ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಹೇಳಿ ಪಾಕಿಸ್ತಾನೀಯರ ಮುಖದ ನೀರಿಳಿಸಿ ಆ ದೇಶಕ್ಕೆ ಅಮೆರಿಕ ನೀಡುತ್ತಿದ್ದ ವಾರ್ಷಿಕ ಸಹಾಯಧನದಲ್ಲಿ ಶೇಕಡ 90 ಭಾಗ ಕತ್ತರಿಸಿಹಾಕಿದ್ದನ್ನು ನೆನಪಿಸಿಕೊಂಡರೆ ಅದು ಈಗ ಯಾವುದೋ ಬೇರೆ ಲೋಕದ ಚರಿತ್ರೆ ಅನಿಸುತ್ತದೆ.
ಈಗ ವರ್ಷಾಂತ್ಯದಲ್ಲಿ ನಿಂತು ಹಿಂದೆ ನೋಡಿದರೆ ಎದುರಾಗುವ ಪ್ರಶ್ನೆ- ಯಾವುದು ಟ್ರಂಪ್ ನಿಜರೂಪ? ವರ್ಷದ ಆರಂಭದಲ್ಲಿ ಕಂಡ ಭಾರತಪ್ರೀತಿ ಮತ್ತು ರಷ್ಯಾಸೆಳೆತವೋ ಅಥವಾ ವರ್ಷದುದ್ದಕ್ಕೂ ಕಾಣಿಸಿಕೊಂಡ ಭಾರತದ್ವೇಷ, ಪಾಕ್ಪ್ರೀತಿ ಹಾಗೂ ರಷ್ಯಾ ಉರಿತವೋ? ತಣ್ಣಗೆ ಕೂತು ನೋಡಿದಾಗ ವರ್ಷದ ಆರಂಭದಲ್ಲಿ ಕಂಡ ರೂಪವೇ ನೈಜ, ಶಾಶ್ವತ ರೂಪ. ವರ್ಷದುದ್ದಕ್ಕೂ ಕಂಡದ್ದು ಯಾವುದೋ ಅನೂಹ್ಯ ಅಗತ್ಯಕ್ಕಾಗಿ ಧರಿಸಿದ ಮುಖವಾಡ. ಅದು ತಾತ್ಕಾಲಿಕ. ಈಗಲೇ ಇದಮಿತ್ಥಂ ಎಂದು ಅಂತಿಮ ಷರಾ ಹೇಳುವ ಸ್ಥಿತಿ ಇಲ್ಲದಿದ್ದರೂ ಟ್ರಂಪ್ರ ಒಳತೋಟಿಯ ಮೇಲೆ ಬೆಳಕು ಹಾಯಿಸುವ ವಾಸ್ತವಗಳೂ ಕಾಣಿಸಿಕೊಂಡಿರುವುದು ಸತ್ಯ.
ಡಿಸೆಂಬರ್ ಮೊದಲ ವಾರದಲ್ಲಿ ಟ್ರಂಪ್ ಆಡಳಿತ ಅಮೆರಿಕದ ರಾಷ್ಟ್ರೀಯ ಸುರಕ್ಷಾ ದಸ್ತಾವೇಜನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಷ್ಯಾ ಬಗ್ಗೆ ಸದ್ಭಾವನೆಯ ಮಾತುಗಳಿವೆ. ಅಮೆರಿಕಕ್ಕೆ ರಷ್ಯಾ ವಿರೋಧಿಯಲ್ಲ ಎಂದು ಅದರಲ್ಲಿ ಬಣ್ಣಿಸಲಾಗಿದೆ! ಭಾರತದ ಬಗೆಗಿರುವ ಮಾತುಗಳು ಮತ್ತೂ ಆಸಕ್ತಿಕರ. ಭಾರತ ಅಮೆರಿಕದ ಸಾಮರಿಕ ಸಹಯೋಗಿ, ಉಭಯ ದೇಶಗಳ ನಡುವಿನ ಸ್ನೇಹ ಸಹಕಾರ ವೃದ್ಧಿಸುವುದರ ಮಹತ್ವದ ಬಗ್ಗೆ ಈ ದಸ್ತಾವೇಜಿನಲ್ಲಿ ಒತ್ತು ನೀಡಲಾಗಿದೆ! ಇದನ್ನೇ ಅಲ್ಲವೇ ಟ್ರಂಪ್ ವರ್ಷದ ಆರಂಭದಲ್ಲಿ ಹೇಳುತ್ತಿದ್ದುದು? ಈ ದಸ್ತಾವೇಜಿನಲ್ಲಿ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳುವುದು ಒಂದೇ ಸಲ, ಭಾರತ-ಪಾಕ್ ಸಂಬಂಧಗಳ ಬಗೆಗಿನ ಪ್ರಸ್ತಾಪದಲ್ಲಿ ಮಾತ್ರ. ಅದರ ಹೊರತಾಗಿ ಪಾಕಿಸ್ತಾನಕ್ಕೆ ಯಾವ ಮಹತ್ವವೂ ಇಲ್ಲ. ಟ್ರಂಪ್ರ ಆರಂಭಿಕ ನೀತಿನಿಲುವುಗಳಿಗೇ ಈ ದಸ್ತಾವೇಜು ಒತ್ತು ನೀಡುತ್ತದೆ.
ಮತ್ತೊಂದು ಅಚ್ಚರಿ, ಕುತೂಹಲದ ವಿಷಯ ಜಾಗತಿಕವಾಗಿ ಚರ್ಚೆಯಾಗುತ್ತಿದೆ. ದಸ್ತಾವೇಜಿನ ಅಂತಿಮ ರೂಪ ಬಿಡುಗಡೆಯಾಗುವ ಮೊದಲು ಅದರ ಒಂದಕ್ಕಿಂತ ಹೆಚ್ಚು ಕರಡುಗಳು ಮಾಧ್ಯಮಗಳ ಕೈಗೆ ಸಿಕ್ಕಿದ್ದವು. ಅವುಗಳಲ್ಲೊಂದರಲ್ಲಿ ಜಾಗತಿಕವಾಗಿ ಸಿ5 ಎಂಬ ಹೊಸ ಕೂಟವನ್ನು ಕಟ್ಟುವ ಟ್ರಂಪ್ ಇರಾದೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅಮೆರಿಕದ ಕುಖ್ಯಾತ ಡೀಪ್ಸ್ಟೇಟ್ನ ಭಾಗವಾದ ‘ಪೊಲಿಟಿಕೋ’ ನಿಯತಕಾಲಿಕ ವಿವರವಾಗಿ ದಾಖಲಿಸಿರುವ ಪ್ರಕಾರ, ಸಿ5 ಅಂದರೆ ಕೋರ್ ಫೈವ್- ಕೇಂದ್ರ ಐದು ಎಂದು. ಟ್ರಂಪ್ ಆಡಳಿತದ ಚಿಂತನೆ ಪ್ರಕಾರ ಜಾಗತಿಕ ರಾಜಕಾರಣವನ್ನು ವಿಶ್ವಶಾಂತಿಯ ಹಾದಿಯಲ್ಲಿ ಮುನ್ನಡೆಸುವುದು ಇಂದಿನ ಐದು ಶಕ್ತಿಶಾಲಿ ರಾಷ್ಟ್ರಗಳು- ಅಮೆರಿಕ, ರಷ್ಯಾ, ಚೀನಾ, ಭಾರತ ಮತ್ತು ಜಪಾನ್! ಇದು ಏನು ಹೇಳುತ್ತದೆ?
ರಷ್ಯಾ ಮತ್ತು ಭಾರತದ ಮಹತ್ವ, ಚೀನಾದ ಅನಿವಾರ್ಯತೆಯ ವಾಸ್ತವದ ಅರಿವು ಟ್ರಂಪ್ ಆಡಳಿತಕ್ಕಿದೆ ಎಂಬುದನ್ನು ಇದು ತೋರಿಸುತ್ತದೆ. ಅದರಲ್ಲೀಗ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಖಾಯಂ ಸದಸ್ಯ ಸ್ಥಾನದಲ್ಲಿ ಪಟ್ಟಾಗಿ ಕೂತಿರುವ ಬ್ರಿಟನ್, ಫ್ರಾನ್ಸ್ಗೆ ಸ್ಥಾನವೇ ಇಲ್ಲ! ಅಂದರೆ ಈಗ ಕಾಲ ಬದಲಾಗಿದೆ, ಆ ಎರಡು ದೇಶಗಳು ಜಾಗತಿಕವಾಗಿ ಮಹತ್ವದ ಸ್ಥಾನ ಉಳಿಸಿಕೊಂಡಿಲ್ಲ, ಅವುಗಳ ಬದಲಿಗೆ ಭಾರತ ಮತ್ತು ಜಪಾನ್ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಮುನ್ನೆಲೆಗೆ ಬರಬೇಕು ಎಂದು ಟ್ರಂಪ್ ಆಡಳಿತ ತಿಳಿದಂತಿದೆ. ಈ ಸಿ5 ವಿಶ್ವಸಂಸ್ಥೆ ಭದ್ರತಾ ಸಮಿತಿಯ ಈಗಿನ ರೂಪವನ್ನೇ ನಿರಾಕರಿಸುವಂತಿದೆ!
ಕರಡಿನಲ್ಲಿದ್ದ ಈ ವಿಷಯ ದಸ್ತಾವೇಜಿನ ಅಂತಿಮ ರೂಪದಲ್ಲಿ ಮಾಯವಾಗಿದೆ! ಇದಕ್ಕೆ ಕಾರಣಗಳು ಸ್ಪಷ್ಟ. ಸಿ5ನಲ್ಲಿ ತಮ್ಮ ಹೆಸರಿಲ್ಲದ್ದನ್ನು ಕಂಡು ಬ್ರಿಟನ್, ಫ್ರಾನ್ಸ್ ವ್ಯಗ್ರಗೊಂಡವು. ಜಾಗತಿಕ ಹಳ್ಳೀಗೌಡ ಮನಸ್ಥಿತಿಯಿಂದ ಅವುಗಳನ್ನು ಹೊರತರಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದು ಟ್ರಂಪ್ ಆಡಳಿತ ರ್ತಸಿ, ಸೂಕ್ತ ಜಾಗತಿಕ ವಾತಾವರಣ ನಿರ್ವಣವಾಗುವವರೆಗೆ ಸಿ5 ಚಿಂತನೆಯನ್ನು ಅನಾವರಣ ಮಾಡಬಾರದು ಎಂದು ಟ್ರಂಪ್ ಆಡಳಿತ ನಿರ್ಧರಿಸಿರಬಹುದು.
ಇದೆಲ್ಲದರ ಅರ್ಥವೇನು? ಟ್ರಂಪ್ ವರ್ಷದ ಹಿಂದಿನವರೆಗೂ ಹೇಗಿದ್ದರೋ ಆಂತರ್ಯದಲ್ಲಿ ಈಗಲೂ ಹಾಗೇ ಇದ್ದಾರೆ, ಮುಂದೆಯೂ ಹಾಗೇ ಇರುತ್ತಾರೆ, ಕಳೆದ ಏಳೆಂಟು ತಿಂಗಳಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ಯಾವುದೋ ಲೆಕ್ಕಾಚಾರದ ನಾಟಕದ ಭಾಗ, ಉದ್ದೇಶ ಸಾಧನೆಯಾದೊಡನೇ ಆ ನಾಟಕಕ್ಕೆ ಪರದೆ ಬೀಳುತ್ತದೆ, ಟ್ರಂಪ್ರ ಹಿಂದಿನ ಅದೇ ಚಿಂತನೆ ಮುನ್ನೆಲೆಗೆ ಬರುತ್ತೆ, ರಷ್ಯಾ-ಭಾರತ ಅವರ ಸಾಮರಿಕ ನೀತಿಯಲ್ಲಿ ಪ್ರಮುಖ ಸ್ಥಾನದಲ್ಲಿರುತ್ತವೆ, ಜತೆಗೆ ಜಗತ್ತಿನ 2ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಚೀನಾವನ್ನು ತಿರಸ್ಕರಿಸುವಂತೆಯೇ ಇಲ್ಲ ಎಂಬ ವಾಸ್ತವವನ್ನೂ ಅವರು ಅರಿತಿದ್ದಾರೆ ಎಂದರ್ಥವೇ?
ಕಾದು ನೋಡೋಣ. ಹೊಸ ವರ್ಷ ತರುವ ಹೊಸತನ್ನು ತಾಳ್ಮೆಯಿಂದ ಎದುರುನೋಡೋಣ.
-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)