ಆಧುನಿಕ ಯುದ್ಧತಂತ್ರದಲ್ಲಿ ವಿಜಯದ ಗುಟ್ಟು ಕೇವಲ ಶಸ್ತ್ರಾಸ್ತ್ರಗಳಲ್ಲಿ ಇಲ್ಲ, ಬದಲಾಗಿ ಸೇನಾಪಡೆಗಳ ನಡುವಿನ ಸಮನ್ವಯದಲ್ಲಿದೆ. ‘ಆಪರೇಷನ್ ಸಿಂಧೂರ’ ಸ್ತಬ್ಧಚಿತ್ರದ ಪ್ರಮುಖ ಆಕರ್ಷಣೆಯೆಂದರೆ ‘ಜಾಯಿಂಟ್ ಆಪರೇಷನ್ ಸೆಂಟರ್’ (ಜೆಒಸಿ). ಇದು ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳು ಒಂದೇ ಸೂರಿನಡಿ ಹೇಗೆ ಕಾರ್ಯಾಚರಣೆ ನಡೆಸುತ್ತವೆ ಎಂಬುದನ್ನು ತೋರಿಸುತ್ತದೆ. ಹಿಂದೆ ಪ್ರತಿ ಪಡೆಯೂ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೆ, ಈಗ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಮೂಲಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹಂಚಿಕೊಳ್ಳುತ್ತವೆ. ಉದಾಹರಣೆಗೆ, ನೌಕಾಪಡೆಯ ಸ್ಯಾಟಲೈಟ್ ಪತ್ತೆ ಹಚ್ಚಿದ ಶತ್ರು ನೆಲೆಯ ಮಾಹಿತಿಯನ್ನು ತಕ್ಷಣವೇ ವಾಯುಪಡೆಯ ಯುದ್ಧ ವಿಮಾನಗಳಿಗೆ ರವಾನಿಸಿ ದಾಳಿ ಮಾಡುವುದು ಈ ಕೇಂದ್ರದ ಕೆಲಸ. ಸ್ತಬ್ಧಚಿತ್ರದಲ್ಲಿರುವ ಈ ಮಾದರಿ ಸ್ಯಾಟಲೈಟ್ ಲಿಂಕ್ಗಳು, ಡಿಜಿಟಲ್ ಪರದೆಗಳು ಮತ್ತು ಸುಧಾರಿತ ಸಂವಹನ ಸಾಧನಗಳ ಮೂಲಕ ಯುದ್ಧರಂಗದ ‘ಲೈವ್’ ಚಿತ್ರಣವನ್ನು ಬಿಂಬಿಸುತ್ತದೆ. ಇದು ಭಾರತದ ರಕ್ಷಣಾ ನೀತಿಯಲ್ಲಿನ ಕ್ರಾಂತಿಕಾರಿ ಬದಲಾವಣೆಯಾದ ‘ಜಾಯಿಂಟ್ನೆಸ್’ (ಜಂಟಿ ಶಕ್ತಿ) ಅನ್ನು ವಿಶ್ವಕ್ಕೆ ಸಾರಲಿದೆ.