ನಾಡನೆಳೆಯುತಿಹ ತಂತ್ರಜ್ಞಾನದ ತೇರು

ಟೆಕ್ನಾಲಜಿ
ಟೆಕ್ನಾಲಜಿ
Published on

ವಿಕ್ರಮ್ ಜೋಶಿ, (ಲೇಖಕರು ಮಾಹಿತಿ-ತಂತ್ರಜ್ಞಾನ ಬರಹಗಾರರು)

ತಂತ್ರಜ್ಞಾನ ಹಾಗೂ ಒಂದು ಸಮಾಜದ ಅಭಿವೃದ್ಧಿ ನಿರಂತರವಾದದ್ದು. ಕನ್ನಡನಾಡು ಈ ತಂತ್ರಜ್ಞಾನದ ಬೆಳವಣಿಗೆಯನ್ನು ಮೊದಲಿನಿಂದಲೂ ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ. ಈ ಕರುನಾಡ ಸಂಸ್ಕೃತಿಯ ತಕ್ಕಡಿಯು ಎಂದಿಗೂ ಸಮತೋಲನವನ್ನು ಕಳೆದುಕೊಳ್ಳದೆ ಬೆಳೆಯುತ್ತಿದೆ. ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎಂಬ ವರಕವಿ ದ.ರಾ. ಬೇಂದ್ರೆಯವರ ನುಡಿಯಂತೆ, ತಂತ್ರಜ್ಞಾನಗಳು ನಮ್ಮ ನೆಲ, ಜನ, ಭಾಷೆ, ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತಿವೆ.

ಜಾಗತೀಕರಣದಿಂದ ನಮ್ಮ ಭಾಷೆ ಹಾಗೂ ಸಂಸ್ಕೃತಿಯಲ್ಲಿ ಗಣನೀಯವಾದ ಬದಲಾವಣೆಗಳನ್ನು ನಾವು ಈಗಾಗಲೇ ಕಂಡಿದ್ದೇವೆ. ಅದರ ಜತೆಗೆ ಕ್ಷಿಪ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನವೂ ತನ್ನ ಪ್ರಭಾವವನ್ನು ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ರೂಪರೇಖೆಗಳನ್ನು ಬದಲಾಯಿಸುವುದರಲ್ಲಿ ಮುಖ್ಯ ಪಾತ್ರವನ್ನು ಹೊಂದಿದೆ. ಯಾವ ನಾಡು ತಂತ್ರಜ್ಞಾನವನ್ನು ಬೇಗ ತನ್ನಲ್ಲಿ ಅಳವಡಿಸಿಕೊಳ್ಳುವುದೋ ಅದು ಬಹುಬೇಗ ಬೆಳೆಯುವುದನ್ನು ನಾವು ಗಮನಿಸಬಹುದು. ಆಕ್ಟರ್ ನೆಟ್ವರ್ಕ್ ಸಿದ್ಧಾಂತವು ಮನುಷ್ಯ, ನಿಸರ್ಗ ಹಾಗೂ ತಂತ್ರಜ್ಞಾನದ ನಡುವಿನ ಸಂಕೀರ್ಣ ಸಾಮರಸ್ಯವನ್ನು ಸೆರೆಹಿಡಿಯುವ ಪ್ರಯತ್ನಕ್ಕೆ ಕೈ ಹಾಕುತ್ತದೆ.


ತಂತ್ರಜ್ಞಾನವೆಂದರೆ ಕೇವಲ ಡಿಜಿಟಲ್ ಜಗತ್ತಲ್ಲ, ನಮ್ಮ ಸುತ್ತ ನಮ್ಮನ್ನು ಆವರಿಸಿಕೊಂಡ ಹಲವಾರು ತಂತ್ರಜ್ಞಾನಗಳಿವೆ. ಉದಾಹರಣೆಗೆ ಜಿಪಿಎಸ್ ಹಾಗೂ ಕಾರು. ಒಂದು ಆಧಾರದ ಪ್ರಕಾರ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಕನಿಷ್ಠ ಪಕ್ಷ 5-6 ಕೋಟಿ ಪ್ರವಾಸಿಗರು ಹೆಚ್ಚುತ್ತಿದ್ದಾರಂತೆ. ಇಂದು ನಾವು ಕೇಳದ, ನೋಡದ, ಊಹಿಸದ ಪ್ರದೇಶಗಳನ್ನು ಕೂಡ ತಲುಪುವ ಹಾಗೆ ಮಾಡಿರುವುದು ಜಿಪಿಎಸ್ ಮತ್ತು ಕಾರುಗಳು. ಮೇಲ್ನೋಟಕ್ಕೆ ಜಿಪಿಎಸ್ ಒಂದು ಡಿಜಿಟಲ್ ತಂತ್ರಜ್ಞಾನ ಆಗಿದ್ದರೂ ಮೊಬೈಲ್, ಮೊಬೈಲ್ ಟವರ್, ಜನರೇಟರ್, ಉಪಗ್ರಹ, ಅದರೊಳಗೆ ಸಾವಿರಾರು ಅತ್ಯಾಧುನಿಕ ತಂತ್ರಜ್ಞಾನ, ಹೀಗೆ ಮಾರುದ್ದದ ಪಟ್ಟಿ ಮಾಡಬಹುದು. 

ಇನ್ನೊಂದು ಉದಾಹರಣೆ ಕಾರನ್ನು ಪರಿಗಣಿಸಿದರೆ ಅದರ ಚಕ್ರ, ಸೀಟು, ಮೈಲೇಜ್, ಕಂಫರ್ಟ್, ಬಾಳಿಕೆ ಹೀಗೆ ಲೆಕ್ಕವಿಡಲು ಸಾಧ್ಯವಿಲ್ಲದಷ್ಟು ತಂತ್ರಜ್ಞಾನದ ಬದಲಾವಣೆಯಾಗಿವೆ. ಎಲ್ಲವೂ ನಿರಂತರವಾಗಿ ನಮ್ಮ ನೆಲ, ಭಾಷೆ, ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ಪೋ›ತ್ಸಾಹಕರವಾಗಿರುವುದನ್ನು ಗಮನಿಸಬಹುದು. ಈ ಲೇಖನದಲ್ಲಿ ಕಳೆದ ಒಂದೆರಡು ದಶಕಗಳಲ್ಲಿ ಆದ ಮಹತ್ವದ ತಂತ್ರಜ್ಞಾನಗಳನ್ನು ಸ್ಥೂಲವಾಗಿ ಐದು ಬಾನಿನಲ್ಲಿ ಇಟ್ಟು ಅದು ಹೇಗೆ ನಮ್ಮ ಭಾಷೆ ಹಾಗೂ ಸಂಸ್ಕೃತಿಗೆ ಪೂರಕವಾಗಿದೆ ಎಂಬುದನ್ನು ಅವಲೋಕಿಸಲಾಗಿದೆ.

ರೀಲ್ಸ್, ಬ್ಲಾಗ್ಸ್, ವ್ಲೋಗ್ಸ್, ಡಿಜಿಟಲ್ ಮಾಧ್ಯಮ

ಸಾಮಾಜಿಕ ಜಾಲತಾಣಗಳು ಇಂದು ಭಾಷೆ, ಸಂಸ್ಕೃತಿಗಳ ಅಭಿವೃದ್ಧಿಯ ಹರಿಕಾರರು ಎನಿಸಿಕೊಳ್ಳುತ್ತಿವೆ. ಮೊದಲು ದಿನಪತ್ರಿಕೆ, ಸುದ್ದಿಮನೆ ಎನ್ನುವ ಒಂದು ಚೌಕಟ್ಟು ಆಯಾ ಪ್ರಾಂತ್ಯಕ್ಕಿತ್ತು. ಇಂದು ಆ ಮೇಲ್ಚಾವಣಿ ಮುರಿದಿದೆ. ಪ್ರತಿಯೊಬ್ಬರೂ ಅವರದ್ದೇ ಸುದ್ದಿಮನೆಯನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ; ಇದರ ಶ್ರೇಯ ಕಡಿಮೆ ವೆಚ್ಚದಲ್ಲಿ ಸಿಗುವ ಮೊಬೈಲ್ ಹಾಗೂ ಡೇಟಾಕ್ಕೆ ಸೇರಬೇಕು. ದೀಪ ಹಚ್ಚುವ ಮನೆಯಿದ್ದಲ್ಲೆಲ್ಲ ಮೊಬೈಲ್ ಟವರ್! ಇದರಿಂದಾಗಿ ಫೇಸ್​ಬುಕ್, ಎಕ್ಸ್, ಇನ್ಸ್​ಟಾಗ್ರಾಮ್ ವಾಟ್ಸ್​ಆಪ್ ಹೀಗೆ ಹಲವಾರು ಸಾಮಾಜಿಕ ಜಾಲತಾಣಗಳು ತಲೆಯೆತ್ತಿವೆ. ರಿಯಲ್ ಲೈಫ್ ಬಗ್ಗೆ ಇಂದು ಚಿಂತನ ಮಂಥನ ಕಡಿಮೆ ಆಗಿದ್ದರೂ ರೀಲ್ ಬಗೆಗೆ ಮಾತ್ರ ದಿನವಿಡೀ ಜನರು ವ್ಯಯ ಮಾಡಬಲ್ಲರು. ಸಾಮಾಜಿಕ ಜಾಲತಾಣಗಳು ನಮ್ಮ ಭಾಷೆಯ ಮೇಲೆ ಅಪಾರವಾದ ಪರಿಣಾಮವನ್ನು ಬೀರಿವೆ. 

ಮೊದಲು ಟಿವಿಯಲ್ಲಿ ತೋರಿಸಿದ ಭಾಷೆಯನ್ನೇ ಕೇಳಬೇಕಿತ್ತು, ಅವರು ತೋರಿಸಿದ ವಿಷಯವನ್ನೇ ನೋಡಬೇಕಿತ್ತು, ಪತ್ರಿಕೆಗಳಲ್ಲಿ ಬಂದದ್ದಷ್ಟೇ ಓದಬೇಕಿತ್ತು. ಬಹುತೇಕ ಎಲ್ಲವೂ ಗ್ರಾಂಥಿಕ ಕನ್ನಡವೇ ಆಗಿರುತ್ತಿತ್ತು. ಆದರೆ ಈಗ ಹಾಗಲ್ಲ. ಜರ್ಮನಿಯಲ್ಲಿ ಕೂತು ನಾವು ಉತ್ತರ ಕನ್ನಡದ ಆಡು ಭಾಷೆಯಲ್ಲಿ ರೀಲ್ ನೋಡಬಹುದು, ಉತ್ತರ ಕರ್ನಾಟಕದ ಶೈಲಿಯಲ್ಲಿ ಬರೆದ ಲೇಖನವೊಂದನ್ನು ಓದಬಹುದು, ಮಂಡ್ಯದ ಧಾಟಿಯಲ್ಲಿ ಪಾಡ್​ಕಾಸ್ಟ್ ಕೇಳಬಹುದು. ನಿಜವಾಗಿಯೂ ಹೇಳಬೇಕೆಂದರೆ ಕನ್ನಡದ ಮೇಲಿನ ಆಸಕ್ತಿ ಈ ಸಾಮಾಜಿಕ ಜಾಲತಾಣ ಹಾಗೂ ರೀಲ್​ಗಳಿಂದ ವೃದ್ಧಿಯಾಗಿದೆ. ಅಷ್ಟೇ ಅಲ್ಲ, ನಮ್ಮ ಸಂಸ್ಕೃತಿಗಳ ಪರಿಚಯವಾಗುತ್ತಿದೆ; ಮೂಲೆ ಮೂಲೆಯಲ್ಲಿರುವ ಐತಿಹಾಸಿಕ ಪ್ರದೇಶಗಳು ಆಕರ್ಷಣೆಗೆ ಒಳಗಾಗುತ್ತಿವೆ. ಜನರು ರೀಲ್​ಗಳನ್ನು ನೋಡಿ, ವ್ಲೋಗ್​ಗಳನ್ನು ಅಧ್ಯಯನ ಮಾಡಿ ಪ್ರವಾಸದ ಯೋಜನೆ ಹಾಕಿಕೊಳ್ಳುತ್ತಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಲ್ಲದು. 

ಎಲ್ಲದಕ್ಕಿಂತ ಮಿಗಿಲಾಗಿ ಅಡುಗೆ! ಹಳ್ಳಿಯ ಅಡುಗೆ, ಅಜ್ಜಿ ಕಲಿಸಿದ ಕಜ್ಜಾಯ, ನಮ್ಮೂರ ಪ್ರಸಿದ್ಧ ತಿಂಡಿ, ಆ ದಾರಿಯಲ್ಲಿ ಹೋಗಬೇಕಾದರೆ ಸಿಗುವ ಹೋಟೆಲ್, ಈ ದಾರಿಯಲ್ಲಿ ತಿನ್ನಬೇಕಾದ ಖಾದ್ಯ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ರೊಟ್ಟಿ, ಚಟ್ನಿ, ಹುಳಿ, ಹಸಿ, ಮೀನು, ಮಟನ್, ಚಿಕನ್.. ಹೀಗೆ ಜನರು ಅತಿ ಹೆಚ್ಚು ನೋಡುವ ಕಂಟೆಂಟ್ ಅಂದರೆ ಅಡುಗೆಗೆ ಸಂಬಂಧಿಸಿದ್ದು. ಬಹುಶಃ ಈ ಸಾಮಾಜಿಕ ಜಾಲತಾಣಗಳು ಇಲ್ಲದೇ ಹೋಗಿದ್ದರೆ, ಡಿಜಿಟಲ್ ತಂತ್ರಜ್ಞಾನ ನಮಗೆ ಒಲಿಯದೇ ಹೋಗಿದ್ದರೆ ನಮ್ಮ ಮುಂದಿನ ಪೀಳಿಗೆಯ ಜನ ನಮ್ಮಲ್ಲಿಯ ಅಡುಗೆ ಪದ್ಧತಿಯನ್ನೇ ಮರೆತು ಬಿಡುತ್ತಿದ್ದರೋ ಎಂದೆನಿಸುತ್ತದೆ!

ಕ್ಯಾಮೆರಾ, ಮೊಬೈಲ್, ಯುಟ್ಯೂಬ್

ಇರುಳಿನಲ್ಲಿ ಆಗಸದ ಕಡೆ ಕಣ್ಣುಹಾಯಿಸಿದಾಗ ಎಷ್ಟು ನಕ್ಷತ್ರಗಳು ಕಾಣಬಹುದೋ ಅದಕ್ಕೂ ಹೆಚ್ಚು ಯುಟ್ಯೂಬ್ ಚಾನೆಲ್​ಗಳಿವೆ ಇವತ್ತು. ಕನ್ನಡದಲ್ಲಂತೂ ಮುಖ್ಯವಾಹಿನಿಗಿಂತ ಯೂಟ್ಯೂಬ್ ಚಾನೆಲ್​ಗಳಿಗೇ ಬೇಡಿಕೆ ಹೆಚ್ಚು. ಇದಕ್ಕೆ ಕಾರಣ ಅದು ನಮ್ಮಲ್ಲಿ ಅವಿತಿದ್ದ ಪ್ರತಿಭೆಯ ಗಣಿಯನ್ನೇ ಹೊರತರಲು ಸಹಾಯ ಮಾಡಿದೆ. ಈ ದಿನ ‘ಸ್ಮಾರ್ಟ್​ಫೋನ್ ಇಟ್ಟುಕೊಳ್ಳದ ವ್ಯಕ್ತಿಯ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ’ ಎನ್ನುವ ಸ್ಥಿತಿ ಎದುರಾಗಿದೆ. ಡಿಜಿಕ್ಯಾಮ್ ಕೊಟ್ಟರೆ ಮಂಗನೂ ವೈಲ್ಡ್ ಲೈಫ್ ವಿಡಿಯೋಗ್ರಾಫರ್. ಹೀಗಾಗಿ ಎಲ್ಲೆಡೆ ನಾಡು, ನುಡಿಯ ವಿಷಯಗಳ ಕುರಿತಾದ ಕಂಟೆಂಟ್​ಗಳ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ವಾಸ್ತವಾಂಶ.

ದೃಶ್ಯ ಮಾಧ್ಯಮದ ಮೂಲಕ ಯೂಟ್ಯೂಬ್ ತರಹದ ಹಲವಾರು ವಿಡಿಯೋ ಆಪ್​ಗಳು, ಕನ್ನಡದ ಕಂಪು ನಾಡಿನೊಳಗಷ್ಟೇ ಅಲ್ಲ, ಗಡಿಯ ಸೀಮೆಯನ್ನು ದಾಟಿ ದೇಶ, ವಿದೇಶದಲ್ಲಿ ನೆಲೆಸಿರುವ ಕೋಟ್ಯಂತರ ಕನ್ನಡಿಗರನ್ನು ಭಾಷೆ, ಸಂಸ್ಕೃತಿ, ಆಹಾರ, ಅಭಿರುಚಿ, ಇತಿಹಾಸ, ನೆಲೆ, ಸ್ಥಳಗಳ ಮಣಿಗಳೊಳಗೆ ಪೋಣಿಸಿ ಕಟ್ಟುತ್ತಿದೆ. ಒಂದೊಳ್ಳೆಯ ಗುಣಮಟ್ಟದ ವಿಡಿಯೋ ಬರಬೇಕು ಅಂದರೆ ಅದರಲ್ಲಿ ಅತ್ಯಾಧುನಿಕ ಕ್ಯಾಮರಾ, ಮೈಕ್ರೋಫೋನ್, ಬೆಳಕಿನ ಸಂಯೋಜನೆ, ಇನ್ನಿತರ ತಂತ್ರಜ್ಞಾನಗಳೂ ಬೇಕಾಗುತ್ತದೆ. ಇಂದು ಈ ಎಲ್ಲ ತಂತ್ರಜ್ಞಾನಗಳು ಕೇವಲ ಒಂದಿಷ್ಟು ಜನರಿಗೆ ಮಾತ್ರ ಸೀಮಿತವಾಗಿರದೆ ಸರ್ವರಿಗೂ ಲಭಿಸುವ ಹಾಗಾಗಿದೆ. ಹೀಗಾಗಿ ನಮ್ಮ ನಮ್ಮ ನಾಡಿನ ಒಂದು ಭಾಷೆಯನ್ನು ಯಾವುದೋ ಸಣ್ಣ ಹಳ್ಳಿಯಲ್ಲಿ ಚಿತ್ರೀಕರಿಸಿ ಅದನ್ನು ನಾವು ಜಗತ್ತಿನ ಯಾವುದೋ ಮೂಲೆಯಲ್ಲಿ ಕೂತು ನೋಡಬಹುದು. ಅಂದರೆ ಅದಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಜಗತ್ತು ಕಂಡ ತಂತ್ರಜ್ಞಾನದ ಬೆಳವಣಿಗೆಯೇ ಕಾರಣ.

ಕೀಲಿಮಣೆ, ಆಪ್ ಹಾಗೂ ಭಾಷಾನುವಾದ

ಕನ್ನಡ ಭಾಷೆಯ ಬೆಳವಣಿಗೆಗೆ ಹೆಗಲಿಗೆ ಹೆಗಲು ನೀಡಿ ನಿಂತಿರುವುದು ಮೊಬೈಲ್, ಲ್ಯಾಪ್​ಟಾಪ್, ಟ್ಯಾಬ್ಲೆಟ್​ಗಳಲ್ಲಿ ಲಭ್ಯವಿರುವ ಕನ್ನಡದ ಕೀಲಿಮಣೆಗಳು, ಬೆಳಕಿನ ಪರದೆಯ ಮೇಲೆ ಮೂಡಬಲ್ಲ ಕನ್ನಡದ ಅಕ್ಷರಗಳು. ಇಂದು ಬಹುತೇಕರು ಸಂವಹನ ನಡೆಸುವುದು ಧ್ವನಿಯನ್ನು ರವಾನೆ ಮಾಡಿ (ರೆಕಾರ್ಡ್ ಮಾಡಿ ಕಳಿಸುವುದು) ಅಥವಾ ಧ್ವನಿಯನ್ನು ಅಕ್ಷರವಾಗಿ ಬದಲಾಯಿಸಿ ಕಳಿಸುವುದರ ಮೂಲಕವೇ. ಇದರ ಹಿಂದೆ ಕೃತಕ ಬುದ್ಧಿಮತ್ತೆ, ಮೈಕ್ರೋಚಿಪ್, ಮೊದಲಾದ ತಂತ್ರಜ್ಞಾನಗಳು ನಿರಂತರವಾಗಿ ಕೆಲಸ ಮಾಡುತ್ತವೆ. ಕನ್ನಡದಲ್ಲಿಯೇ ಎಷ್ಟೊಂದು ಆಪ್​ಗಳು ಬಂದಿವೆ ಎಂಬುದನ್ನು ಗಮನಿಸಿ. ಅಷ್ಟೇ ಅಲ್ಲ ಇಂದು ಆನ್​ಲೈನ್ ರಿವ್ಯೂ ಕೂಡ ಕನ್ನಡದಲ್ಲೇ ಮೂಡಿ ಬರುತ್ತಿರುವುದು ನಿಜವಾಗಿಯೂ ಪ್ರಶಂಸನೀಯ. 

ಇಂಗ್ಲಿಷ್​ಗಿಂತ ಕನ್ನಡದಲ್ಲಿ ಬರುವ (ಮೊಬೈಲ್, ಕಾರು, ಗೆಜೆಟ್ಸ್ ಇತ್ಯಾದಿ ವಸ್ತುಗಳ) ಸಮೀಕ್ಷೆಗಳನ್ನು ಜನರು ಹೆಚ್ಚು ವೀಕ್ಷಿಸುವುದು ಉತ್ತೇಜನಕಾರಿಯಾಗಿದೆ. ಇದರಿಂದ ನಮ್ಮ ಭಾಷೆಯ ವಿಶಾಲತೆ ಹೆಚ್ಚುವುದಲ್ಲದೆ, ಹೊಸ ಶಬ್ದಗಳು ಸಹಜವಾಗಿಯೇ ಸೇರಿಕೊಂಡು, ಹೊಂದಿಕೊಳ್ಳುತ್ತವೆ. ಭಾಷಾನುವಾದವೂ ದಿನದಿಂದ ದಿನಕ್ಕೆ ಪ್ರಬುದ್ಧತೆಯನ್ನು ಪಡೆಯುತ್ತಿದೆ. ಜೆನ್​ಎಐ ಹಾಗೂ ಬೃಹತ್ ಭಾಷಾ ಮಾದರಿಯು ಇದಕ್ಕೆ ಪೂರಕವಾಗಿದ್ದರೂ ಮುಂದಿನ ದಿನಗಳಲ್ಲಿ ಭಾಷಾನುವಾದದ ಕುರಿತು ಗಣನೀಯವಾದ ಆಲೋಚನೆ ಆಗಬೇಕಾದದ್ದು ಅನಿವಾರ್ಯ!

ಇ-ಕಾಮರ್ಸ್, ಯುಪಿಐ, ಇಂಟರ್ನೆಟ್

ಹಳ್ಳಿಯಿಂದ ದಿಲ್ಲಿಯವರೆಗೆ ಯಾವುದೇ ವಸ್ತುವನ್ನು ನೇರವಾಗಿ ತಲುಪಿಸಬಹುದು, ಹಾಗೆಯೇ ದಿಲ್ಲಿಯಿಂದ ಹಳ್ಳಿಗೆ ಒಂದು ಕ್ಲಿಕ್ ಮೂಲಕ ವಸ್ತುಗಳನ್ನು ತರಿಸಿಕೊಳ್ಳಬಹುದು; ಇದಕ್ಕೆಲ್ಲ ಕಾರಣ ನಮ್ಮ ನಾಡಿನ ನರನರವನ್ನು ಹಬ್ಬಿಕೊಂಡಿರುವ ಸರಬರಾಜು ಸರಪಳಿ ವ್ಯವಸ್ಥೆ ಮತ್ತು ಇ-ಕಾಮರ್ಸ್. ಈ ತಂತ್ರಜ್ಞಾನದ ಬಲದಿಂದ ಊರಿನಲ್ಲಿ ಕೂತು ಉದ್ದಿಮೆ ನಡೆಸಬಹುದು. ಜನರೇಟರ್ ಹಾಗೂ ಇನ್​ವರ್ಟರ್ ಇಲ್ಲದ ಪಟ್ಟಣ, ಹಳ್ಳಿಯನ್ನು ನಾ ಕಾಣೆ. ಇ-ಕಾಮರ್ಸ್​ಗೆ ಇಂಟರ್ನೆಟ್ ಬೇಕು, ಇಂಟರ್ನೆಟ್​ಗೆ ಟವರ್ ಬೇಕು, ಟವರ್​ಗೆ ಬ್ಯಾಕ್​ಅಪ್ ಅವಶ್ಯಕ. ಈ ಎಲ್ಲ ತಂತ್ರಜ್ಞಾನಗಳೂ ಹಳ್ಳಿಯಲ್ಲಿ ಲಭ್ಯ. ಅಷ್ಟೇ ಯಾಕೆ, ಹಣಕಾಸಿನ ವಿಷಯದಲ್ಲೂ ನಮ್ಮಲ್ಲಿ ಯುಪಿಐ ಬಳಕೆ ಸಾಮಾನ್ಯವಾಗಿದೆ. ಪ್ರವಾಸೋದ್ಯಮ ಇಷ್ಟೊಂದು ಬೆಳೆಯಲು ಮೂಲ ಕಾರಣವೇ ಇಂಟರ್ನೆಟ್, ಇ-ಕಾಮರ್ಸ್ ಹಾಗೂ ಯುಪಿಐ. ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಆರ್ಥಿಕ ಬೆಳವಣಿಗೆಯೂ ಅತಿ ಮುಖ್ಯ. ಮೂರೂ ಒಂದರ ಜೊತೆಗೆ ಇನ್ನೊಂದು ಬೆಳೆಯಬೇಕು, ಇದು ತಂತ್ರಜ್ಞಾನದಿಂದ ಮಾತ್ರ ಸಾಧ್ಯ!

ರಸ್ತೆ, ಸೇತುವೆ, ಬೈಕು, ಕಾರು

ಮನೆಗೊಂದು ಬೈಕು, ಕೇರಿಗೊಂದು ಕಾರು, ಬೇಜಾನ್ ಬಸ್ಸು, ಸರಕು ಸಾಗಿಸಲು ಟ್ರಕ್ಕು... ಇವೆಲ್ಲದಕ್ಕೂ ಪೂರಕವಾಗಿ ನಿಂತಿರುವ ಬಗೆಗೆಯ ಸೇತುವೆಗಳು ಹಾಗೂ ರಸ್ತೆಗಳ ನರವ್ಯೂಹ! ಈ ಎಲ್ಲ ವಾಹನಗಳ ಮೇಲೆ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದಲ್ಲಿಯೇ ವಾಹನ ಸಂಖ್ಯೆ, ಕನ್ನಡ ಸಾಹಿತ್ಯ ನೋಡುವುದೇ ಆನಂದ. ಕೆಲವೊಮ್ಮೆ ಕನ್ನಡದ ಜಾನಪದ ಹಾಡುಗಳನ್ನು ಕೇಳಲು ಅವುಗಳಲ್ಲಿ ಸವಾರಿ ಮಾಡಬೇಕು. ಕನ್ನಡ ಭಾಷೆಯ, ನಾಡಿನ ಅಭಿವೃದ್ಧಿಯ ಪಯಣದಲ್ಲಿ ಇವೆಲ್ಲ ನಮಗೆ ಕಾಣದ, ಅರಿವಿಗೆ ಬಾರದ, ಜಗಮಗವೆಂದು ಕಣ್ಣಿಗೆ ಕುಕ್ಕದ ತಂತ್ರಜ್ಞಾನಗಳು. ಕಳೆದ ಎರಡು ದಶಕಗಳಲ್ಲಿ ವಾಹನಗಳ ವಿನ್ಯಾಸದಲ್ಲಿ, ಸೇತುವೆಗಳ ನಿರ್ಮಾಣದಲ್ಲಿ, ರಸ್ತೆಯನ್ನು ನಿರ್ವಿುಸಲು ಬೇಕಾಗುವ ಉಪಕರಣಗಳಲ್ಲಿ ಊಹಿಸಲೂ ಸಾಕಾಗದಷ್ಟು ಬೆಳವಣಿಗೆಗಳು ನಡೆದಿವೆ. ನಮ್ಮ ನಾಡಿನ ಘಟ್ಟಗಳ ಶ್ರೇಣಿಯನ್ನು ಏರಿ, ಅರಬ್ಬೀ ಸಮುದ್ರದ ಅಲೆಗಳು ಬೀಸುವ ಉಪ್ಪಿನ ಗಾಳಿಗೆ ಮೈಯೊಡ್ಡಿ, ಸಹ್ಯಾದ್ರಿಯ ಮಲೆಗಳಲ್ಲಿ; ಕರಾವಳಿಯ ದಡದಲ್ಲಿ ಭೋರ್ಗರೆಯುವ ಮಳೆ, ಉತ್ತರ ಕರ್ನಾಟಕದಲ್ಲಿ ಸುಡುವ ಬಿಸಿಲು ಇವುಗಳ ಜತೆ ಸ್ನೇಹದಿಂದ ದಿನದಿನವೂ ಕರುನಾಡಿನೊಡನೆ ಬೆಸೆದು ಹೋಗುತ್ತಿವೆ ಈ ಎಲ್ಲ ತಂತ್ರಜ್ಞಾನಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net