_1780683228908.webp?w=480&auto=format%2Ccompress&fit=max)
_1780683228908.webp?w=480&auto=format%2Ccompress&fit=max)
ಜಾಗತಿಕ ಷೇರುಪೇಟೆಗಳ ಮಾರುಕಟ್ಟೆ ಬಂಡವಾಳ ಶ್ರೇಯಾಂಕದಲ್ಲಿ ಭಾರತೀಯ ಷೇರುಪೇಟೆಯು 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದ್ದು, ಹೂಡಿಕೆದಾರರಲ್ಲಿ ಕಳವಳಕ್ಕೆ ಕಾರಣವಾಗಿದೆ. ವಿದೇಶಿ ಹೂಡಿಕೆಯ ಹರಿವು ಕೂಡ ಕಡಿಮೆಯಾಗಿದೆ. ಆದರೆ, ಜಾಗತಿಕ ಮಾರುಕಟ್ಟೆಯ ಏರಿಳಿತಗಳು ತಹಬಂದಿಗೆ ಬಂದಾಗ ಭಾರತೀಯ ಮಾರುಕಟ್ಟೆ ಮತ್ತೆ ಪುಟಿದೇಳುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದಾಗಿ ತೈವಾನ್ 5ನೇ ಸ್ಥಾನಕ್ಕೆ ಮತ್ತು ದಕ್ಷಿಣ ಕೊರಿಯಾ 6ನೇ ಸ್ಥಾನಕ್ಕೆ ಜಿಗಿದು ಭಾರತವನ್ನು ಹಿಂದೆ ಹಾಕಿವೆ. ಪ್ರಸ್ತುತ ಭಾರತದ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 4.8 ಟ್ರಿಲಿಯನ್ ಡಾಲರ್ಗೆ (456 ಲಕ್ಷ ಕೋಟಿ ರೂಪಾಯಿ) ಇಳಿಕೆಯಾಗಿದ್ದರೆ, ದಕ್ಷಿಣ ಕೊರಿಯಾ ಮತ್ತು ತೈವಾನ್ 5 ಟ್ರಿಲಿಯನ್ ಡಾಲರ್ (ಅಂದಾಜು 471 ಲಕ್ಷ ಕೋಟಿ ರೂ.) ಗಡಿಯನ್ನು ದಾಟಿ ಮುನ್ನಡೆದಿವೆ. ಈ ವಿದ್ಯಮಾನಕ್ಕೆ ಕಾರಣಗಳು ಮತ್ತು ಅದರ ಪರಿಣಾಮಗಳ ಕುರಿತಾದ ವಿವರ ಇಲ್ಲಿದೆ.
ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಆರ್ಥಿಕ ವರ್ಷ (2026-2027) ಸವಾಲಿನದ್ದಾಗಿ ಪರಿಣಮಿಸಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ 24 ಬಿಲಿಯನ್ ಡಾಲರ್ ಅಂದರೆ ಸರಿಸುಮಾರು -ಠಿ;2 ಲಕ್ಷ ಕೋಟಿ ರೂಪಾಯಿ ಹಿಂತೆಗೆದುಕೊಂಡಿದ್ದಾರೆ. ಭಾರತೀಯ ಷೇರುಗಳ ಅತಿಯಾದ ಮೌಲ್ಯೀಕರಣ ಮತ್ತು ರೂಪಾಯಿ ಮೌಲ್ಯದ ಕುಸಿತವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಹೂಡಿಕೆದಾರರು ಎಐ, ಹಾರ್ಡ್ವೇರ್ ಮತ್ತು ಮ್ಯಾನುಫ್ಯಾಕ್ಚರಿಂಗ್ ವಲಯದೊಂದಿಗೆ ನೇರ ಸಂಪರ್ಕ ಹೊಂದಿರುವ ತೈವಾನ್ ಹಾಗೂ ದಕ್ಷಿಣ ಕೊರಿಯಾದಂತಹ ಮಾರುಕಟ್ಟೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಇದರ ಪರಿಣಾಮ, ಜಾಗತಿಕ ಷೇರುಪೇಟೆಗಳ ಬಂಡವಾಳ ಮೌಲ್ಯದಲ್ಲಿ 5ನೇ ಸ್ಥಾನದಲ್ಲಿದ್ದ ಭಾರತ, 7ನೇ ಸ್ಥಾನಕ್ಕೆ ಕುಸಿದಿದೆ. ಪುಟ್ಟರಾಷ್ಟ್ರ ತೈವಾನ್ 5ನೇ ಸ್ಥಾನ ಮತ್ತು ದಕ್ಷಿಣ ಕೊರಿಯಾದ ಷೇರುಪೇಟೆ 6 ಸ್ಥಾನಕ್ಕೆ ಬಡ್ತಿ ಪಡೆದಿವೆ. ಭಾರತದಲ್ಲಿ ಜಾಗತಿಕ ಎಐ ಮೂಲಸೌಕರ್ಯ ಅಥವಾ ಹಾರ್ಡ್ವೇರ್ ಉತ್ಪಾದನಾ ವಲಯದೊಂದಿಗೆ ನೇರವಾಗಿ ಗುರುತಿಸಿಕೊಂಡಿರುವ ಕಂಪನಿಗಳ ಕೊರತೆ ಇದ್ದು, ಹೂಡಿಕೆದಾರರು ಇತರ ದೇಶಗಳತ್ತ ಮುಖ ಮಾಡಿದ್ದಾರೆ.
ವಿಶ್ವದ ಅತಿ ದೊಡ್ಡ ಚಿಪ್ ತಯಾರಿಕಾ ಸಂಸ್ಥೆ ‘ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ’ (ಟಿಎಸ್ಎಂಸಿ) ಷೇರುಗಳಲ್ಲಿ ಕಂಡುಬಂದ ದಾಖಲೆ ಮಟ್ಟದ ಏರಿಕೆಯ ಬೆನ್ನಲ್ಲೇ ತೈವಾನ್ ಷೇರುಪೇಟೆ ಮಾರುಕಟ್ಟೆ ಮೌಲ್ಯದಲ್ಲಿ ಜಾಗತಿಕವಾಗಿ ಐದನೇ ಸ್ಥಾನಕ್ಕೆ ಜಿಗಿತ ಕಂಡಿದೆ. ತೈವಾನ್ ಷೇರು ಮಾರುಕಟ್ಟೆಯ ಮೌಲ್ಯವು 5.15 ಟ್ರಿಲಿಯನ್ ಡಾಲರ್ಗೆ ತಲುಪಿದೆ. ಟಿಎಸ್ಎಂಸಿ ಒಂದೇ ಸಂಸ್ಥೆ ಈಗ ತೈವಾನ್ನ ಪ್ರಮುಖ ಷೇರು ಸೂಚ್ಯಂಕದ ಶೇಕಡ 42ರಷ್ಟು ಪಾಲು ಹೊಂದಿದೆ. ಎಐ ಚಿಪ್ಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಿರುವುದರಿಂದ ಈ ಕಂಪನಿಯ ಷೇರುಗಳ ಮೌಲ್ಯ ಶೇ.49ರಷ್ಟು ಏರಿಕೆ ಕಂಡಿದೆ. ಟಿಎಸ್ಎಂಸಿಯು ಎನ್ವಿಡಿಯಾ, ಆಪಲ್, ಕ್ವಾಲ್ಕಾಮ್ ಸಂಸ್ಥೆಗಳು ಬಳಸುವ ಅತ್ಯಾಧುನಿಕ ಚಿಪ್ಗಳನ್ನು ತಯಾರಿಸುತ್ತಿದೆ. ಹೊಸ ನಿಯಮಗಳ ಪ್ರಕಾರ, ತೈವಾನ್ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡುವವರು, ಈಗ ತಮ್ಮ ನಿಧಿಯ ಶೇಕಡ 25ರಷ್ಟನ್ನು ಒಂದೇ ದೊಡ್ಡ ಕಂಪನಿಯಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗಿದೆ. ಈ ಹಿಂದಿನ ಮಿತಿ ಶೇ.10ರಷ್ಟಿತ್ತು.
ದಕ್ಷಿಣ ಕೊರಿಯಾ ವಿಶ್ವದ ಆರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಬ್ಲೂಮ್ಗ್ ವರದಿಯ ಪ್ರಕಾರ, ಕೊರಿಯಾದ ನೋಂದಾಯಿತ ಕಂಪನಿಗಳ ಒಟ್ಟು ಬಂಡವಾಳ ಕ್ರೋಡೀಕರಣ ಶೇ.86ರಷ್ಟು ಏರಿಕೆಯಾಗಿ, 5 ಟ್ರಿಲಿಯನ್ ಡಾಲರ್ಗೆ ತಲುಪಿದೆ. ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ (ಚಿಪ್ ತಯಾರಿಕಾ) ಕ್ಷೇತ್ರದಲ್ಲಿ ಕಂಪನಿಗಳ ಅದ್ಭುತ ಪ್ರದರ್ಶನ ದಿಂದಲೇ ಕೊರಿಯಾ ಈ ಪ್ರಗತಿಯನ್ನು ಕಂಡಿದೆ. ದಕ್ಷಿಣ ಕೊರಿಯಾದ ಪ್ರಮುಖ ಸೂಚ್ಯಂಕವಾದ ಕೊಸ್ಪಿ 2026ರಲ್ಲಿ ಶೇ.110ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ.
ಯಾವುದೇ ದೇಶದ ಷೇರು ಮಾರುಕಟ್ಟೆಯ ‘ಮಾರುಕಟ್ಟೆ ಬಂಡವಾಳ’ (Market Capitalization) ಎಂದರೆ, ಅಲ್ಲಿ ಪಟ್ಟಿ ಮಾಡಲಾದ (Listed) ಎಲ್ಲ ಕಂಪನಿಗಳ ಒಟ್ಟು ಷೇರುಗಳ ಮೌಲ್ಯವಾಗಿದೆ. ಒಂದು ದೇಶದ ಮಾರ್ಕೆಟ್ ಕ್ಯಾಪ್ ಹೆಚ್ಚಾಗುತ್ತಿದೆ ಎಂದರೆ, ಅಲ್ಲಿನ ಕಂಪನಿಗಳ ಮೇಲೆ ಹೂಡಿಕೆದಾರರಿಗೆ ನಂಬಿಕೆ ಮತ್ತು ವಿಶ್ವಾಸ ವೃದ್ಧಿಸುತ್ತಿದೆ ಎಂದೇ ಅರ್ಥ.
ಮಾರುಕಟ್ಟೆಯ ಮಂತ್ರ: ‘ಪ್ರತಿ ಬಿಕ್ಕಟ್ಟೂ ಒಂದು ಅವಕಾಶ’. ಭಾರತೀಯ ಮಾರುಕಟ್ಟೆ ಬಿದ್ದಾಗಲೆಲ್ಲ ಹೂಡಿಕೆದಾರರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಷೇರುಗಳನ್ನು ಕೊಳ್ಳುವ ದೊಡ್ಡ ಅವಕಾಶ ಸಿಕ್ಕಂತಾಗಿದೆ, ತದನಂತರ ಮಾರುಕಟ್ಟೆ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ.
ಈ ಶ್ರೇಯಾಂಕದ ಕುಸಿತವು ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಎಐ ತಂತ್ರಜ್ಞಾನ ಕ್ಷೇತ್ರಕ್ಕಿರುವ ಭಾರಿ ಬೇಡಿಕೆಯ ತಾತ್ಕಾಲಿಕ ಪ್ರತಿಫಲನವಾಗಿದೆ. ಭಾರತದ ಒಟ್ಟಾರೆ ಆರ್ಥಿಕತೆಯು ಇನ್ನೂ ಬಲವಾದ ಅಡಿಪಾಯವನ್ನು ಹೊಂದಿದ್ದು, ಜಾಗತಿಕ ಮಾರುಕಟ್ಟೆಯ ಏರಿಳಿತಗಳು ತಹಬಂದಿಗೆ ಬಂದಾಗ ಭಾರತೀಯ ಮಾರುಕಟ್ಟೆ ಮತ್ತೆ ಪುಟಿದೇಳುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು ಮತ್ತು ವಿಶ್ಲೇಷಕರು.
1) ಅಮೆರಿಕ
2) ಚೀನಾ
3) ಜಪಾನ್
4) ಹಾಂಕಾಂಗ್
5) ತೈವಾನ್
6) ದಕ್ಷಿಣ ಕೊರಿಯಾ
7) ಭಾರತ
8) ಕೆನಡಾ
9) ಯುಕೆ
10) ಫ್ರಾನ್ಸ್
ಹಿಂದೆಲ್ಲ ವಿದೇಶಿ ಹೂಡಿಕೆದಾರರು (ಎಫ್ಐಐಎಸ್) ಹಣ ಹಿಂತೆಗೆದುಕೊಂಡರೆ ಭಾರತದ ಮಾರುಕಟ್ಟೆ ಸಂಪೂರ್ಣ ನಡುಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ 2025-26ರ ಜಾಗತಿಕ ಏರಿಳಿತಗಳ ನಡುವೆಯೂ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಮತ್ತು ಸಾಮಾನ್ಯ ಜನರ ಎಸ್ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಶಕ್ತಿ ಎಷ್ಟು ಹೆಚ್ಚಾಗಿದೆಯೆಂದರೆ, ವಿದೇಶಿಗರು ಎಷ್ಟೇ ಷೇರುಗಳನ್ನು ಮಾರಾಟ ಮಾಡಿದರೂ ಭಾರತದ ಮಾರುಕಟ್ಟೆ ಅದನ್ನು ತಡೆದುಕೊಂಡು ಎದ್ದು ನಿಲ್ಲುವಂತಹ ಆಂತರಿಕ ಬಲವನ್ನು ಪಡೆದುಕೊಂಡಿದೆ.