ಕಾಂಕ್ರೀಟ್​ ಕಾಡಲ್ಲಿ ಬೆಂಕಿಯ ಕೆನ್ನಾಲಿಗೆ

ಕಾಂಕ್ರೀಟ್​ ಕಾಡಲ್ಲಿ ಬೆಂಕಿಯ ಕೆನ್ನಾಲಿಗೆ
ಕಾಂಕ್ರೀಟ್​ ಕಾಡಲ್ಲಿ ಬೆಂಕಿಯ ಕೆನ್ನಾಲಿಗೆ
Published on
ನಗರೀಕರಣದ ವೇಗ ಹೆಚ್ಚಾದಂತೆ ಮಹಾನಗರುಗಳು ಕಾಂಕ್ರೀಟ್​ ಕಾಡುಗಳಾಗಿ ಮಾರ್ಪಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ಮಹಾನಗರಗಳಲ್ಲಿ ಅಗ್ನಿ ದುರಂತಗಳು ಹೆಚ್ಚಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ನಗರ ಪ್ರದೇಶಗಳಲ್ಲಿ ಬೆಂಕಿಯು ಕೆನ್ನಾಲಿಗೆ ಚಾಚಲು ಕೇವಲ ಆಕಸ್ಮಿಕಗಳಷ್ಟೇ ಕಾರಣವಲ್ಲ, ಮಾನವನ ನಿರ್ಲಕ್ಷ್ಯ ಮತ್ತು ನಿಯಮಗಳ ಉಲ್ಲಂಘನೆಯೂ ಪ್ರಮುಖ ಪಾತ್ರ ವಹಿಸಿವೆ. ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕೇವಲ ಕಾನೂನಿನ ಜವಾಬ್ದಾರಿಯಲ್ಲ, ಅದು ನಮ್ಮ ಮತ್ತು ಸುತ್ತಲಿನವರ ಜೀವ ರಕ್ಷಣೆಯ ಹೊಣೆಗಾರಿಕೆ. ಲೇಔಟ್​ ಯೋಜನೆಗಳಿಂದ ಹಿಡಿದು ಕಟ್ಟಡದ ಒಳಗಿನ ವೈರಿಂಗ್​ವರೆಗೆ ಪ್ರತಿಯೊಂದು ಹಂತದಲ್ಲೂ ಜಾಗರೂಕರಾಗಿದ್ದರೆ ಮಾತ್ರ ಇಂತಹ ದುರಂತಗಳಿಗೆ ಕಡಿವಾಣ ಹಾಕಬಹುದು. ಅಗ್ನಿ ಅವಘಡಗಳ ಹಿಂದಿನ ಪ್ರಮುಖ ಕಾರಣಗಳು ಮತ್ತು ಅವುಗಳನ್ನು ತಡೆಯಲು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ವಿವರವಾದ ಮಾಹಿತಿ ಇಲ್ಲಿದೆ.
ಒಂದು ಸಣ್ಣ ನಿಯಮದ ಉಲ್ಲಂಘನೆ ಅಥವಾ ಒಂದು ಸಣ್ಣ ನಿರ್ಲಕ್ಷ್ಯವೂ ಹೇಗೆ ದೊಡ್ಡ ದುರಂತಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ದೇಶದಲ್ಲಿ ಮರುಕಳಿಸುತ್ತಲೇ ಇರುವ ಅಗ್ನಿ ಅವಘಡಗಳೇ ಸಾಕ್ಷಿ. ಯಾರೋ ಮಾಡಿದ ತಪ್ಪಿಗೆ ಅಮಾಯಕ ಜೀವಗಳು ಬಲಿಯಾಗುತ್ತವೆ. ಅವರನ್ನು ನಂಬಿದ ಕುಟುಂಬಗಳು ಜೀವನವಿಡೀ ಕಣ್ಣೀರಿನಲ್ಲೇ ಕೈತೊಳೆಯುವಂತಾಗುತ್ತದೆ.
ಬಹುತೇಕ ಅಗ್ನಿ ದುರಂತಗಳಿಗೆ ವಾಣಿಜ್ಯ ಕಟ್ಟಡಗಳಲ್ಲಿನ ಕಳಪೆ ವೈರಿಂಗ್​ (ಶಾರ್ಟ್​ ಸರ್ಕ್ಯೂಟ್​), ತುರ್ತು ನಿರ್ಗಮನ ಮಾರ್ಗಗಳ ಕೊರತೆ ಮತ್ತು ಅಗ್ನಿಶಾಮಕ ಇಲಾಖೆಯ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿರುವುದೇ ಮುಖ್ಯ ಕಾರಣಗಳಾಗಿವೆ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಇದರ ಬಗ್ಗೆ ಗೊತ್ತಿಲ್ಲ ಅಂತೇನಲ್ಲ. ಆದರೆ, ಇದನ್ನು ಸರಿಪಡಿಸಬೇಕಾದವರೇ ಲಂಚ ಅಥವಾ ಕಮಿಷನ್​ ಪಡೆದು ಅಕ್ರಮ ಕಟ್ಟಡ ನಿರ್ಮಾಣ ಅಥವಾ ನಿಯಮ ಮೀರಿದ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡುತ್ತಾರೆ ಎಂಬುದು ನಿಜಕ್ಕೂ ದುರದೃಷ್ಟಕರ.

ಪ್ರಮುಖ ಕಾರಣಗಳು

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​: ಶೇಕಡ 70-80ರಷ್ಟು ಅಗ್ನಿ ಅವಘಡಗಳಿಗೆ ಅಸಮರ್ಪಕ ವೈರಿಂಗ್​ ಮತ್ತು ಶಾರ್ಟ್​ ಸರ್ಕ್ಯೂಟ್​ ಮುಖ್ಯ ಕಾರಣ. ಹಳೆಯ ಕಟ್ಟಡಗಳಲ್ಲಿ ವೈರಿಂಗ್​ ಬದಲಾಯಿಸದಿರುವುದು ಮತ್ತು ಗುಣಮಟ್ಟವಿಲ್ಲದ ಎಲೆಕ್ಟ್ರಿಕಲ್​ ಉಪಕರಣಗಳ ಬಳಕೆ ಇದಕ್ಕೆ ದಾರಿ ಮಾಡಿಕೊಡುತ್ತದೆ.
ಅತಿಯಾದ ವಿದ್ಯುತ್​ ಲೋಡ್​: ಬೇಸಿಗೆಯಲ್ಲಿ ಎಸಿ, ಫ್ರಿಡ್ಜ್​, ಕೂಲರ್​, ಫ್ಯಾನ್​ ಸೇರಿ ಹವಾನಿಯಂತ್ರಿತ ಉಪಕರಣಗಳ ಬಳಕೆ ಹೆಚ್ಚಾದಾಗ ಟ್ರಾನ್ಸ್​ಫಾರ್ಮರ್​ಗಳು ಮತ್ತು ಕಟ್ಟಡದ ವಿದ್ಯುತ್​ ವ್ಯವಸ್ಥೆಯ ಮೇಲೆ ಅತಿಯಾದ ಒತ್ತಡ ಬಿದ್ದು ಬೆಂಕಿ ಹೊತ್ತಿಕೊಳ್ಳುತ್ತದೆ.
ನಿಯಮಗಳ ಉಲ್ಲಂಘನೆ ಮತ್ತು ಅಕ್ರಮ ನಿರ್ಮಾಣ: ಅನೇಕ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಕೈಗಾರಿಕೆಗಳು ರಾಷ್ಟ್ರೀಯ ಕಟ್ಟಡ ಸಂಹಿತೆ ಮತ್ತು ಅಗ್ನಿಶಾಮಕ ಇಲಾಯೆಯ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣವಾಗಿರುತ್ತವೆ.
ಅಗ್ನಿಶಾಮಕ ವಾಹನಗಳಿಗೆ ದಾರಿಯಿಲ್ಲದಿರುವುದು: ಜನದಟ್ಟಣೆಯ ಪ್ರದೇಶಗಳಲ್ಲಿ ಕಿರಿದಾದ ರಸ್ತೆಗಳು, ಅನಧಿಕೃತ ಪಾರ್ಕಿಂಗ್​ ಮತ್ತು ಕಟ್ಟಡಗಳ ಸುತ್ತಲೂ ಸಾಕಷ್ಟು ಜಾಗ ಬಿಡದೇ ಇರುವುದರಿಂದ ದುರಂತ ಸಂಭವಿಸಿದಾಗ ಅಗ್ನಿಶಾಮಕ ವಾಹನಗಳು ಸಕಾಲಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ.
ಅಸಮರ್ಪಕ ನಿರ್ವಹಣೆ: ಕಟ್ಟಡಗಳಲ್ಲಿ ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಿದ್ದರೂ, ಅವುಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿವೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದಿಲ್ಲ.
ಎಲ್​ಪಿಜಿ ಮತ್ತು ರಾಸಾಯನಿಕಗಳ ಸೋರಿಕೆ: ಹೋಟೆಲ್​ಗಳು ಹಾಗೂ ಮನೆಗಳಲ್ಲಿ ಗ್ಯಾಸ್​ ಸಿಲಿಂಡರ್​ ಸೋರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ರಾಸಾಯನಿಕಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಿಡುವುದು.

ಮುನ್ನೆಚ್ಚೆರಿಕೆ ಕ್ರಮಗಳು

ಅಪಾಯ ಬರುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಜಾಣತನ. ಕಟ್ಟಡ ನಿರ್ಮಾಣ ಹಂತದಿಂದಲೇ ಈ ಕ್ರಮಗಳನ್ನು ಅನುಸರಿಸಬೇಕು.
ಫೈರ್​ ಎನ್​ಒಸಿ ಕಡ್ಡಾಯ: ಯಾವುದೇ ವಾಣಿಜ್ಯ ಅಥವಾ ಬಹುಮಹಡಿ ವಸತಿ ಸಮುಚ್ಚಯಗಳಿಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್​ಒಸಿ) ಪಡೆಯುವುದನ್ನು ಮತ್ತು ಅದನ್ನು ಪ್ರತಿ ವರ್ಷ ನವೀಕರಿಸುವುದನ್ನು ಕಡ್ಡಾಯಗೊಳಿಸಬೇಕು.
ಗುಣಮಟ್ಟದ ವೈರಿಂಗ್​: ಕಟ್ಟಡಗಳಲ್ಲಿ ಐಎಸ್​ಐ ಮುದ್ರೆ ಇರುವ, ಬೆಂಕಿ ನಿರೋಧಕ ಸಾಮರ್ಥ್ಯವಿರುವ ವೈರುಗಳನ್ನು ಮಾತ್ರ ಬಳಸಬೇಕು. ಪ್ರತಿ 10-15 ವರ್ಷಗಳಿಗೊಮ್ಮೆ ವೈರಿಂಗ್​ ತಪಾಸಣೆ ನಡೆಸಿ, ಅಗತ್ಯ ಇದ್ದಲ್ಲಿ ಬದಲಾಯಿಸಬೇಕು.
ತುರ್ತು ನಿರ್ಗಮನ ದಾರಿ: ಪ್ರತಿಯೊಂದು ದೊಡ್ಡ ಕಟ್ಟಡದಲ್ಲೂ ಕನಿಷ್ಠ ಎರಡು ತುರ್ತು ನಿರ್ಗಮನ ದಾರಿಗಳಿರಬೇಕು. ಈ ದಾರಿಗಳಲ್ಲಿ ಯಾವುದೇ ಸಾಮಗ್ರಿಗಳನ್ನು ಇಟ್ಟು ಅವುಗಳನ್ನು ಬ್ಲಾಕ್​ ಮಾಡಬಾರದು.
ಮುಕ್ತ ಜಾಗದ ಸಂರಕ್ಷಣೆ: ಕಟ್ಟಡದ ಸುತ್ತಲೂ ಅಗ್ನಿಶಾಮಕ ಟ್ರಕ್​ಗಳು ಸುಲಭವಾಗಿ ಚಲಿಸಲು ಕನಿಷ್ಠ 6 ಮೀಟರ್​ಗಳಷ್ಟು ಮುಕ್ತ ಜಾಗವನ್ನು ಬಿಡಬೇಕು.
ನೀರಿನ ಲಭ್ಯತೆ: ಕಟ್ಟಡದ ಒಳಗೆ ಸದಾ ನೀರಿನ ಒತ್ತಡವಿರುವ ಪೈಪ್​ಲೈನ್​ ವ್ಯವಸ್ಥೆ ಇರಬೇಕು, ಇದರಿಂದ ತುರ್ತು ಸಂದರ್ಭದಲ್ಲಿ ನೀರನ್ನು ಹಾರಿಸಲು ಸಾಧ್ಯವಾಗುತ್ತದೆ.

ಸಾರ್ವಜನಿಕರಲ್ಲಿ ಜಾಗೃತಿ

ತರಬೇತಿ ಉಪಕರಣಗಳಿದ್ದರೂ ಅದನ್ನು ಬಳಸುವ ಪ್ರಕ್ರಿಯೆ ಗೊತ್ತಿಲ್ಲದಿದ್ದರೆ ವ್ಯರ್ಥ. ಆದ್ದರಿಂದ, ಅಪಾರ್ಟ್​ಮೆಂಟ್​ಗಳು ಮತ್ತು ಕಚೇರಿಗಳಲ್ಲಿ ಕನಿಷ್ಠ 6 ತಿಂಗಳಿಗೊಮ್ಮೆ ಅಗ್ನಿಶಾಮಕ ದಳದ ನೆರವಿನೊಂದಿಗೆ ಮಾಕ್​ ಡ್ರಿಲ್​ ನಡೆಸಬೇಕು. ಬೆಂಕಿ ಬಿದ್ದಾಗ ಹೇಗೆ ಹೊರಹೋಗಬೇಕು, ನಿರ್ಗಮನ ದ್ವಾರ ಹೇಗೆ ಬಳಸಬೇಕು ಎಂಬುದನ್ನು ಎಲ್ಲರಿಗೂ ಕಲಿಸಬೇಕು. ಬೆಂಕಿ ಅವಘಡದ ಸಮಯದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳ್ಳುವುದರಿಂದ ಯಾವುದೇ ಕಾರಣಕ್ಕೂ ಲಿಫ್ಟ್ ಬಳಸಬಾರದು, ಮೆಟ್ಟಿಲುಗಳನ್ನು ಮಾತ್ರ ಬಳಸಬೇಕು. ಸುಟ್ಟ ಗಾಯಗಳಾದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ನಾಗರಿಕರಿಗೆ ಪ್ರಾಥಮಿಕ ಅರಿವಿರಬೇಕು.

ಎರಡು ವರ್ಷಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಗಳು

2025ರ ಏಪ್ರಿಲ್​ 1: ಗುಜರಾತ್​ನ ಡೀಸಾ ಬಳಿಯ ದೀಪಕ್​ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟದೊಂದಿಗೆ ಅಗ್ನಿ ದುರಂತ ಸಂಭವಿಸಿತು. ಈ ದುರಂತದಲ್ಲಿ 8 ಮಕ್ಕಳು ಸೇರಿದಂತೆ ಒಟ್ಟು 21 ಜನರು ಮರಣ ಹೊಂದಿದರು ಮತ್ತು ಹಲವರು ತೀವ್ರವಾಗಿ ಗಾಯಗೊಂಡರು.
2025ರ ಮೇ 18: ತೆಲಂಗಾಣದ ಹೈದರಾಬಾದ್​ನ ಹಳೆಯ ಬಜಾರ್​ ಪ್ರದೇಶದಲ್ಲಿದ್ದ ಮೂರು ಅಂತಸ್ತಿನ ವಾಣಿಜ್ಯ ಮತ್ತು ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ನೆಲಮಹಡಿಯ ಮುತ್ತುಗಳ ಅಂಗಡಿಯಲ್ಲಿ ಉಂಟಾದ ಶಾರ್ಟ್​ ಸರ್ಕ್ಯೂಟ್​ ಮತ್ತು ಎಸಿ ಕಂಪ್ರೆಸರ್​ ಸ್ಫೋಟದಿಂದಾಗಿ ಬೆಂಕಿ ಹರಡಿತು. ಕಟ್ಟಡದಲ್ಲಿ ಸೂಕ್ತ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಒಂದೇ ಕುಟುಂಬದ 8 ಮಕ್ಕಳು ಸೇರಿದಂತೆ 17 ಜನರು ಉಸಿರುಗಟ್ಟಿ, ದುರ್ಮರಣ ಹೊಂದಿದರು.
2026ರ ಜೂನ್​ 3: ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿದ್ದ ಐದು ಅಂತಸ್ತಿನ ಬಿ ಆ್ಯಂಡ್​ ಬಿ ಹೋಟೆಲ್​ ಕಟ್ಟಡದ ಬೇಸ್​ಮೆಂಟ್​ನಲ್ಲಿ ಬೆಂಕಿ ಹೊತ್ತಿಕೊಂಡಿತು. ಇಡೀ ಕಟ್ಟಡವನ್ನು ದಟ್ಟ ಹೊಗೆ ಆವರಿಸಿದ ಪರಿಣಾಮವಾಗಿ ಒಳಗಿದ್ದ ಪ್ರವಾಸಿಗರು ಸಿಲುಕಿಕೊಂಡರು. ಈ ಭೀಕರ ದುರಂತದಲ್ಲಿ ವಿದೇಶಿ ನಾಗರಿಕರು ಸೇರಿದಂತೆ 21 ಜನರು ಮೃತಪಟ್ಟರು, 40ಕ್ಕೂ ಅಧಿಕ ಜನರು ಗಾಯಗೊಂಡರು. ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
2026ರ ಜೂನ್​ 22: ಉತ್ತರ ಪ್ರದೇಶದ ಲಖನೌದ ಅಲಿಗಂಜ್​ ಪ್ರದೇಶದಲ್ಲಿದ್ದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತು. ಈ ಕಟ್ಟಡದಲ್ಲಿ ಅನಿಮೇಷನ್​ ಸ್ಟುಡಿಯೋ, ಕೋಚಿಂಗ್​ ಸೆಂಟರ್​ ಮತ್ತು ಸಾಕುಪ್ರಾಣಿಗಳ ಕ್ಲಿನಿಕ್​ ಇದ್ದವು. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಹರಡಿದ ಬೆಂಕಿಯಿಂದಾಗಿ ಇಡೀ ಕಟ್ಟಡದಲ್ಲಿ ಹೊಗೆ ತುಂಬಿಕೊಂಡಿತು. ಈ ದುರಂತದಲ್ಲಿ 15 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ನಿರ್ಗಮನಕ್ಕೆ ಎರಡನೇ ದ್ವಾರವೇ ಇರಲಿಲ್ಲ

ಲಖನೌದ ಅಲಿಗಂಜ್​ ಪ್ರದೇಶದ ಕೋಚಿಂಗ್​ ಸೆಂಟರ್​ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ಅಮೂಲ್ಯ ಜೀವಗಳು ಬಲಿಯಾಗಿದ್ದು, ಮೃತರ ಪೈಕಿ ಬಹುತೇಕರು ಗೇಮಿಂಗ್​ ಮತ್ತು ಅನಿಮೇಷನ್​ ಕಲಿಯಲು ಬರುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನದ ಊಟ ಮುಗಿಸಿ ವಿದ್ಯಾರ್ಥಿಗಳೆಲ್ಲರೂ ಕ್ಲಾಸ್​ ರೂಂನಲ್ಲಿದ್ದ ಸಂದರ್ಭದಲ್ಲಿಯೇ ಈ ದುರಂತ ಸಂಭವಿಸಿದೆ. ಕಟ್ಟಡದ ತುರ್ತು ಸುರಕ್ಷತಾ ಕ್ರಮಗಳಲ್ಲಿದ್ದ ಗಂಭೀರ ಲೋಪಗಳೇ ಈ ದುರಂತದ ತೀವ್ರತೆಯನ್ನು ಹೆಚ್ಚಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಮೂರು ಅಂತಸ್ತಿನ ಈ ವಾಣಿಜ್ಯ ಕಟ್ಟಡದಿಂದ ಹೊರಹೋಗಲು ಕೇವಲ ಒಂದೇ ಒಂದು ದಾರಿಯಿತ್ತು. ಅದಕ್ಕಿಂತಲೂ ಭೀಕರ ಸಂಗತಿಯೆಂದರೆ, ಕೋಚಿಂಗ್​ ಸೆಂಟರ್​ನ ಮುಖ್ಯ ದ್ವಾರವು ಸಂಪೂರ್ಣ ಆಟೋಮ್ಯಾಟಿಕ್​ ಆಗಿದ್ದು, ಅದು ಕೇವಲ ಹೆಬ್ಬೆರಳಿನ ಗುರುತು (ಬಯೋಮೆಟ್ರಿಕ್​) ಹಾಕಿದರೆ ಮಾತ್ರ ತೆರೆದುಕೊಳ್ಳುತ್ತಿತ್ತು. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯುತ್​ ಸಂಪರ್ಕ ಕಡಿತಗೊಂಡು ಆಟೋಮ್ಯಾಟಿಕ್​ ಗೇಟ್​ ಸಂಪೂರ್ಣವಾಗಿ ಲಾಕ್​ ಆಗಿದೆ. ಪರಿಣಾಮವಾಗಿ ಹೊರಹೋಗಲು ದಾರಿ ಸಿಗದೆ ಬಹುತೇಕ ವಿದ್ಯಾರ್ಥಿಗಳು ಒಳಗೇ ಸಿಲುಕಿಕೊಳ್ಳುವಂತಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net