ಹಣ, ಸಮಯ ಎಲ್ಲವೂ ವ್ಯರ್ಥ! ಯಾವುದೇ ಚರ್ಚೆಗಳಿಲ್ಲದೇ ಮುಗಿದ ಸಂಸತ್ತಿನ ಅಧಿವೇಶನ

ಸಂಸತ್ತಿನ ಮಳೆಗಾಲದ ಅಧಿವೇಶನ
ಸಂಸತ್ತಿನ ಮಳೆಗಾಲದ ಅಧಿವೇಶನ
Published on
ಸಂಸತ್ತಿನ ಅಧಿವೇಶನ ಎಂಬುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಶಕ್ತಗೊಳಿಸುವ ವೇದಿಕೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಕಲಾಪ ರಾಜಕೀಯ ಪ್ರತಿಷ್ಠೆಗೆ ಬಲಿಯಾಗುತ್ತಿದ್ದು, ಬರೀ ಕಲಹ, ಗದ್ದಲ, ಗೊಂದಲದಲ್ಲೇ ಮುಗಿದುಹೋಗುತ್ತಿದೆ. ಈ ಬಾರಿಯ ಮುಂಗಾರು ಅಧಿವೇಶನ ಕೂಡ ಇದಕ್ಕೆ ಭಿನ್ನವೇನಲ್ಲ. ಪ್ರತಿಪಕ್ಷಗಳ ಸರಣಿ ಪ್ರತಿಭಟನೆ, ಸರ್ಕಾರದ ಹಠಮಾರಿತನದ ಧೋರಣೆಯ ನಡುವೆ ಗುರುವಾರ ಅಧಿವೇಶನ ಅಂತ್ಯಗೊಂಡಿದೆ. ಆದರೆ, ಸಂಸತ್ತಿನ ಅಧಿವೇಶನಕ್ಕೆ ಬಳಕೆಯಾಗುವುದು ಜನರ ತೆರಿಗೆ ದುಡ್ಡು ಎಂಬುದನ್ನು ಜನಪ್ರತಿನಿಧಿಗಳು ಮರೆತಂತಿದೆ. 
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿವೇಶನ ನಡೆದರೂ, ಅದರ ಫಲಶ್ರುತಿ ಶೂನ್ಯ ಎಂಬುದು ತೀರಾ ವಿಷಾದನೀಯ ಸಂಗತಿ. ಸಂಸತ್ತಿನ ಕಲಾಪ ಬಲಿಯಾದರೆ ಎಷ್ಟು ನಷ್ಟವಾಗುತ್ತದೆ? ‘ಪ್ರಶ್ನೋತ್ತರ ವೇಳೆ’ ಏಕೆ ಅಷ್ಟು ಪ್ರಮುಖ? ಕಾರ್ಯಾಂಗವನ್ನು ಪ್ರಶ್ನಿಸುವ ಅವಕಾಶವನ್ನು ಜನಪ್ರತಿನಿಧಿಗಳು ಕಳೆದುಕೊಂಡಾಗ ಎದುರಾಗುವ ಪರಿಣಾಮಗಳೇನು? ಈ ಕುರಿತಾದ ವಿವರ ಇಲ್ಲಿದೆ. ಯಾವುದೇ ಚರ್ಚೆ ಇಲ್ಲದೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನ ಪ್ರತಿಭಟನೆಗಳು, ನಿರಂತರ ಗದ್ದಲ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಸಂಸತ್ತಿನ ಮುಂಗಾರು ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಆದರೆ, ಈ ಚಿರಪರಿಚಿತ ಧರಣಿಗಳು ಮತ್ತು ಘೊಷಣೆಗಳ ಆಚೆಗೆ ಆಗುವ ನಷ್ಟವೆಂದರೆ- ದೇಶದ ತೆರಿಗೆದಾರರ ಹಣದಿಂದ ನಡೆಯುವ, ಆದರೆ ಚರ್ಚೆ, ಸಮಾಲೋಚನೆ ಮತ್ತು ಹೊಣೆಗಾರಿಕೆಗೆ ಬಳಸಿಕೊಳ್ಳದ ಸಂಸತ್ತಿನ ಅಮೂಲ್ಯ ಸಮಯ!
ಜುಲೈ 20ರಿಂದ ಆಗಸ್ಟ್ 13ರ ನಡುವೆ 19 ಕಲಾಪ ದಿನಗಳನ್ನು ಈ ಮುಂಗಾರು ಅಧಿವೇಶನಕ್ಕಾಗಿ ನಿಗದಿಪಡಿಸಲಾಗಿತ್ತು. ಅಧಿವೇಶನದಲ್ಲಿ ಕೆಲವು ವಿಧೇಯಕಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾದರೂ (ಅದೂ ಚರ್ಚೆ ಇಲ್ಲದೆ!), ನಿರಂತರ ಅಡೆತಡೆಗಳು ಸಂಸತ್ತಿನ ಕಾರ್ಯಕಲಾಪಗಳ ಸಮಯವನ್ನು ನುಂಗಿಹಾಕಿದವು. ಈ ಜಡತ್ವಕ್ಕೆ ಬಲಿಯಾದ ಪ್ರಮುಖ ಸಂಸದೀಯ ಪ್ರಕ್ರಿಯೆಯೆಂದರೆ ಪ್ರಶ್ನೋತ್ತರ ವೇಳೆ. ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸಂಸದರು ನೇರವಾಗಿ ಸಚಿವರನ್ನು ಪ್ರಶ್ನಿಸಬಹುದಾದ ಏಕೈಕ ವೇದಿಕೆ ಇದಾಗಿದೆ. 

ಸಂಸದೀಯ ಕೆಲಸಗಳಿಗೆ ಹಿನ್ನಡೆ

ಸಂಸತ್ತಿನ ಕಲಾಪ ಸ್ಥಗಿತವಾದರೆ ಹಣದ ನಷ್ಟಕ್ಕಿಂತ ಆಗುವ ದೊಡ್ಡ ನಷ್ಟವೆಂದರೆ ನಡೆಯದೇ ಹೋದ ಸಂಸದೀಯ ಕೆಲಸ. ಕಲಾಪಗಳು ನಿರಂತರವಾಗಿ ಸ್ಥಗಿತಗೊಂಡಾಗ, ಸಂಸದರು ಸಚಿವರನ್ನು ಪ್ರಶ್ನಿಸುವ, ಶಾಸನಗಳ ಮೇಲೆ ಚರ್ಚಿಸುವ, ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸುವ ಮತ್ತು ಸರ್ಕಾರದ ನೀತಿಗಳನ್ನು ತನಿಖೆಗೆ ಒಳಪಡಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಇದು ಒಂದು ವಿಚಿತ್ರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಅಧಿವೇಶನದಲ್ಲಿ ಗದ್ದಲದ ನಡುವೆಯೂ ವಿಧೇಯಕಗಳನ್ನು ಅಂಗೀಕರಿಸಬಹುದು; ಆದರೆ ಪ್ರಜಾಪ್ರಭುತ್ವದ ಜೀವನಾಡಿಯಾದ ‘ಚರ್ಚೆ, ಪ್ರಶ್ನಿಸುವಿಕೆ ಮತ್ತು ಪರಿಶೀಲನೆ’ ಸಂಪೂರ್ಣವಾಗಿ ಹತೋಟಿ ತಪ್ಪಿಹೋಗುತ್ತದೆ.

ಅಪಾರ ಹಣ ವೆಚ್ಚ

ಸಂಸತ್ತಿನ ಕಲಾಪದ ಕುರಿತು ರ್ಚಚಿಸುವಾಗ ‘ಪ್ರತಿ ನಿಮಿಷಕ್ಕೆ 2.5 ಲಕ್ಷ ರೂಪಾಯಿ ವೆಚ್ಚ’ ಎಂಬ ಅಂಕಿಅಂಶವನ್ನು ಪದೇಪದೆ ಉಲ್ಲೇಖಿಸಲಾಗುತ್ತದೆ. ಆದರೆ, ಈ ಅಂದಾಜು 2012ರಷ್ಟು ಹಳೆಯದ್ದು. ಅಂದಿನ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಲ್ ಅವರು, ಸಂಸತ್ತನ್ನು ನಡೆಸಲು ಪ್ರತಿ ನಿಮಿಷಕ್ಕೆ ಸುಮಾರು 2.5 ಲಕ್ಷ ರೂ. ಅಂದರೆ ಲೋಕಸಭೆ ಮತ್ತು ರಾಜ್ಯಸಭೆಗೆ ತಲಾ 1.25 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದ್ದರು. ಸಂಸತ್ತಿನಲ್ಲಿ ಕಲಾಪ ನಡೆಯದ್ದರಿಂದ ಆಗುವ ಆರ್ಥಿಕ ನಷ್ಟವನ್ನು ವಿಶ್ಲೇಷಿಸುವಾಗ ‘ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್’ ಸಂಸ್ಥೆಯು ಸಹ ಇದೇ ಅಂದಾಜನ್ನು ಬಳಸುತ್ತದೆ. 
ಇದು ಪ್ರಸ್ತುತ ಅಧಿಕೃತ ದರವಲ್ಲದಿದ್ದರೂ, ಕಲಾಪ ನಷ್ಟದ ಆರ್ಥಿಕ ಪರಿಣಾಮವನ್ನು ವಿವರಿಸಲು ಸೂಕ್ತ ಮಾನದಂಡವಾಗಿದೆ. ಕಳೆದ 14 ವರ್ಷಗಳ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಪರಿಗಣಿಸಿದರೆ, ಪ್ರಸ್ತುತ ದಿನದ ನೈಜ ವೆಚ್ಚವು ಇದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿರುತ್ತದೆ. 2025ರ ಮುಂಗಾರು ಅಧಿವೇಶನದ ಆರಂಭಿಕ ದಿನಗಳಲ್ಲಿ, ಕೇವಲ ಮೊದಲ ಮೂರು ದಿನಗಳ ಗದ್ದಲದಿಂದಾಗಿ ಲೋಕಸಭೆಯು 1,026 ನಿಮಿಷ ಹಾಗೂ ರಾಜ್ಯಸಭೆಯು 816 ನಿಮಿಷಗಳ ಕಾಲ ಕೆಲಸ ಮಾಡಲಿಲ್ಲ ಎಂದು ಪಿಆರ್ಎಸ್ ಡೇಟಾ ತೋರಿಸಿತ್ತು. ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ.ಗಳ ಲೆಕ್ಕಾಚಾರದಂತೆ, ಕೇವಲ ಮೂರೇ ದಿನಗಳಲ್ಲಿ ಕಳೆದುಹೋದ ಸಂಸತ್ತಿನ ಸಮಯದ ಮೌಲ್ಯ 23 ಕೋಟಿ ರೂಪಾಯಿ! (ಲೋಕಸಭೆಗೆ 12.83 ಕೋಟಿ ರೂ. ಮತ್ತು ರಾಜ್ಯಸಭೆಗೆ 10.2 ಕೋಟಿ ರೂ).  ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಸಂಸದರು ಸದನದ ಕಲಾಪಕ್ಕೆ ಅಡ್ಡಿಪಡಿಸಿದಾಗಲೂ ಸಂಸತ್ತಿನ ಕಟ್ಟಡಗಳು, ಸಿಬ್ಬಂದಿ, ಭದ್ರತೆ, ತಂತ್ರಜ್ಞಾನ ಮತ್ತು ಇತರ ಮೂಲಸೌಕರ್ಯಗಳ ಮೇಲಿನ ದೈನಂದಿನ ವೆಚ್ಚವು ಮುಂದುವರಿಯುತ್ತಲೇ ಇರುತ್ತದೆ.
  • ಸಂಸತ್ತಿನ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ ಆಗುವ ವೆಚ್ಚ 2.5 ಲಕ್ಷ
  • ಒಂದು ಗಂಟೆಯ ಕಲಾಪಕ್ಕೆ: 1.5 ಕೋಟಿ
  • ಒಂದು ದಿನಕ್ಕೆ: 9 ಕೋಟಿ ರೂ.
  • ಪ್ರಸಕ್ತ ಮುಂಗಾರು ಅಧಿವೇಶನ ಕಲಾಪ ಗದ್ದಲದಲ್ಲೇ ಮುಗಿದಿದ್ದರಿಂದ ಆದ ನಷ್ಟ: 171-175 ಕೋಟಿ

ಮಸೂದೆಗಳಿಗೆ ಗ್ರಹಣ

ಕಲಾಪ ಸ್ಥಗಿತವು ಮಸೂದೆಗಳ ಮೇಲೆ ಎರಡು ರೀತಿಯ ತೀವ್ರ ಪರಿಣಾಮಗಳನ್ನು ಬೀರುತ್ತದೆ? ವಿಧೇಯಕಗಳು ಬಾಕಿ ಉಳಿಯುವುದು: ಮಸೂದೆಯ ಚರ್ಚೆಗೆ ಕಡಿಮೆ ಸಮಯ ಸಿಕ್ಕರೆ ಅದು ದೀರ್ಘಕಾಲ ನನೆಗುದಿಗೆ ಬೀಳುತ್ತದೆ. 
ಚರ್ಚೆಯಿಲ್ಲದೆ ಶಾಸನ ಅಂಗೀಕಾರ: ಲಭ್ಯವಿರುವ ಕೆಲವೇ ಗಂಟೆಗಳಲ್ಲಿ ವಿಧೇಯಕಗಳನ್ನು ತರಾತುರಿಯಲ್ಲಿ ಅಂಗೀಕರಿಸಲಾಗುತ್ತದೆ. 2023ರ ಮುಂಗಾರು ಅಧಿವೇಶನದಲ್ಲಿ, ಲೋಕಸಭೆಯು 20 ವಿಧೇಯಕಗಳನ್ನು ತಲಾ 1 ಗಂಟೆಗಿಂತ ಕಡಿಮೆ ಅವಧಿಯ ಚರ್ಚೆಯಲ್ಲಿ ಅಂಗೀಕರಿಸಿತ್ತು. ಇದರಲ್ಲಿ 9 ವಿಧೇಯಕಗಳು ಕೇವಲ 20 ನಿಮಿಷಗಳಲ್ಲಿ ಅಂಗೀಕಾರಗೊಂಡಿದ್ದವು! ಅಂದರೆ, ಸಂಸತ್ತು ಚರ್ಚೆ ಇಲ್ಲದೆ ಕಾಯ್ದೆಗಳನ್ನು ಮಾಡುವ ಯಂತ್ರವಾಗಿ ಬದಲಾಗುತ್ತದೆ.

ಪ್ರಶ್ನೋತ್ತರ ವೇಳೆ ರದ್ದಾದರೆ ಆಗುವ ನಷ್ಟವೇನು?

ಮೂಲಸೌಕರ್ಯ ಯೋಜನೆ, ಸರ್ಕಾರಿ ಯೋಜನೆ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗ, ಆರೋಗ್ಯ ಕಾರ್ಯಕ್ರಮ ಅಥವಾ ಸಾರ್ವಜನಿಕ ಹಣದ ವೆಚ್ಚದ ಕುರಿತು ಸಚಿವಾಲಯವೊಂದು ಪ್ರಶ್ನೆಗಳನ್ನು ಎದುರಿಸುತ್ತಿದೆ ಎಂದು ಭಾವಿಸೋಣ. ಸಂಬಂಧಪಟ್ಟ ಸಂಸದರು ಸಚಿವರಿಂದ ಸತ್ಯಾಸತ್ಯತೆಗಳು, ಅಂಕಿಅಂಶಗಳು, ಗಡುವುಗಳು ಮತ್ತು ವಿವರಣೆಗಳನ್ನು ಕೇಳಬಹುದು. ಸಚಿವರು ಉತ್ತರಿಸಲೇಬೇಕು. ಕಲಾಪ ಕೋಲಾಹಲದಿಂದ ಈ ಸಮಯ ನಷ್ಟವಾದಾಗ, ಸಂಸದೀಯ ಹೊಣೆಗಾರಿಕೆಯ ಇಡೀ ಸರಣಿಯೇ ದುರ್ಬಲವಾಗುತ್ತದೆ. ಸಂಸತ್ತಿನ ಕಲಾಪವನ್ನು ರಾತ್ರಿಯವರೆಗೆ ವಿಸ್ತರಿಸುವುದರಿಂದ ಪ್ರಶ್ನೋತ್ತರ ವೇಳೆಯಲ್ಲಿ ನಷ್ಟವಾದ ಸಮಯವನ್ನು ಸರಿದೂಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. 
ಮೌಖಿಕವಾಗಿ ಸಚಿವರನ್ನು ಮುಖಾಮುಖಿ ಪ್ರಶ್ನಿಸುವ ಅವಕಾಶ ಒಮ್ಮೆ ಹೋದರೆ ಮತ್ತೆ ಸಿಗುವುದಿಲ್ಲ.ಈ ಹಿಂದೆ, 16ನೇ ಲೋಕಸಭೆಯಲ್ಲಿ, ಲೋಕಸಭೆಯ ಪ್ರಶ್ನೋತ್ತರ ವೇಳೆಯು ನಿಗದಿತ ಸಮಯದ 67%ರಷ್ಟು ಮಾತ್ರ ಕಾರ್ಯನಿರ್ವಹಿಸಿತ್ತು. 2023ರ ಮುಂಗಾರು ಅಧಿವೇಶನದಲ್ಲಿ, ರಾಜ್ಯಸಭೆಯಲ್ಲಿ 8 ದಿನಗಳ ಕಾಲ ಪ್ರಶ್ನೋತ್ತರ ವೇಳೆಯು ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಅವಧಿ ನಡೆದಿತ್ತು. ಇದಕ್ಕೆ ವ್ಯತಿರಿಕ್ತವಾಗಿ, 2025ರ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯು ಲೋಕಸಭೆಯಲ್ಲಿ 78% ಮತ್ತು ರಾಜ್ಯಸಭೆಯಲ್ಲಿ 83%ರಷ್ಟು ಪರಿಣಾಮಕಾರಿಯಾಗಿ ನಡೆದಿತ್ತು. 
ಪ್ರಶ್ನೋತ್ತರ ವೇಳೆಯ ಮಹತ್ವ: ಪ್ರಶ್ನೋತ್ತರ ವೇಳೆಯು ಸಂಸದರು ತಮ್ಮ ಸಚಿವಾಲಯಗಳ ಕಾರ್ಯವೈಖರಿ, ಸರ್ಕಾರದ ನೀತಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಸಚಿವರಿಗೆ ಅಧಿಕೃತವಾಗಿ ಪ್ರಶ್ನೆಗಳನ್ನು ಕೇಳುವ ಸಮಯವಾಗಿದೆ. ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸಚಿವರು ಮೌಖಿಕವಾಗಿ ಉತ್ತರಿಸಬೇಕಾಗುತ್ತದೆ. ಈ ಉತ್ತರಗಳ ಆಧಾರದ ಮೇಲೆ ಸಂಸದರಿಗೆ ಉಪಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ. ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಸಚಿವರು ಲಿಖಿತ ಉತ್ತರಗಳನ್ನು ನೀಡಬೇಕಾಗುತ್ತದೆ. ಪ್ರಶ್ನೋತ್ತರ ವೇಳೆಯು ಕೇವಲ ಮತ್ತೊಂದು ಸಂಸದೀಯ ಚರ್ಚೆಯಲ್ಲ. ಒಬ್ಬ ಸಂಸದನು ಸಚಿವರಿಗೆ ನಿರ್ದಿಷ್ಟ ಪ್ರಶ್ನೆಯನ್ನು ಕೇಳಲು ಮತ್ತು ಸದನದ ಒಳಗೆ ಉತ್ತರವನ್ನು ಪಡೆಯಲು ಇರುವ ಕೆಲವೇ ಕೆಲವು ಸಾಂಸ್ಥಿಕ ಮಾರ್ಗಗಳಲ್ಲಿ ಇದೂ ಒಂದಾಗಿದೆ. 

ಸಂಸದೀಯ ಸಮಿತಿಗಳ ಪಾತ್ರವೇನು?

ಸಂಸದೀಯ ಸಮಿತಿಗಳು ರಾಜಕೀಯ ಕೋಲಾಹಲದಿಂದ ದೂರವಾಗಿ, ಮಸೂದೆಗಳನ್ನು ಆಳವಾಗಿ ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಆದರೆ, ಸಮಿತಿಯ ಪರಿಶೀಲನೆಯು ಸಂಸತ್ತಿನ ಮುಖ್ಯ ಸದನದಲ್ಲಿ ನಡೆಯುವ ಚರ್ಚೆಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಸಮಿತಿಗಳು ಕರಡನ್ನು ಸೂಕ್ಷ್ಮರಾಗಿ ಪರಿಶೀಲಿಸಿದರೂ, ಕಾನೂನುಗಳನ್ನು ಅಂಗೀಕರಿಸುವ ಅಂತಿಮ ಹೊಣೆಗಾರಿಕೆ ಜನಪ್ರತಿನಿಧಿಗಳ ಮೇಲಿರುವುದರಿಂದ ಸದನದಲ್ಲಿ ಚರ್ಚೆ ನಡೆಯುವುದು ಕಡ್ಡಾಯವಾಗಿದೆ.

ಹೊಣೆಗಾರಿಕೆ ಮರೆತಾಗ...

ವಿರೋಧ ಪಕ್ಷಗಳು ಸಂಸತ್ತು ಕಾರ್ಯನಿರ್ವಹಿಸದಂತೆ ಮತ್ತು ತೆರಿಗೆದಾರರ ಹಣವನ್ನು ವ್ಯರ್ಥ ಮಾಡಲು ಗದ್ದಲವನ್ನು ಬಳಸಿಕೊಳ್ಳುತ್ತವೆ ಎಂಬುದು ಸರ್ಕಾರದ ವಾದ. ತುರ್ತು ಮತ್ತು ಪ್ರಮುಖ ವಿಷಯಗಳ ಬಗ್ಗೆ ರ್ಚಚಿಸಲು ಸರ್ಕಾರ ನಿರಾಕರಿಸಿದಾಗ ಪ್ರತಿಭಟನೆ ಮತ್ತು ಕಲಾಪ ತಡೆ ಅನಿವಾರ್ಯವಾಗುತ್ತದೆ ಎನ್ನುತ್ತವೆ ಪ್ರತಿಪಕ್ಷಗಳು. ಈ ಬಾರಿಯ ಮುಂಗಾರು ಅಧಿವೇಶನದಲ್ಲೂ ಅದೇ ಮರುಕಳಿಸಿದೆ. ನೀಟ್ ಗೊಂದಲ, ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸೇರಿದಂತೆ ಹಲವು ವಿಷಯಗಳ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದರೆ, ನಿಯಮಾವಳಿಗಳಂತೆ ಚರ್ಚೆಗೆ ಸಿದ್ಧವೆಂದು ಸರ್ಕಾರ ಹೇಳಿತು. ಆದರೆ, ಪ್ರತಿಭಟನೆ, ಕಲಾಪ ಮುಂದೂಡಿಕೆಯಿಂದ ಸಮಯ ಮತ್ತು ಹಣಕಾಸಿನ ನಷ್ಟವಾಯಿತು. ಇದರಿಂದ, ಸಂಸತ್ತು ಕಾನೂನುಗಳನ್ನು ಪರಿಶೀಲಿಸುವ ತನ್ನ ಮೂಲ ಸಾಮರ್ಥ್ಯವನ್ನು ಕಳೆದುಕೊಂಡು, ಕೇವಲ ವಿಧೇಯಕಗಳಿಗೆ ಅಂಕಿತ ಹಾಕುವ ಸಂಸ್ಥೆಯಾಗಿ ಬದಲಾಗುವ ಅಪಾಯವಿದೆ. 

ಅಂತಿಮವಾಗಿ ತೆರಿಗೆದಾರನಿಗೆ ಸಿಗುತ್ತಿರುವುದೇನು?

ಸಂಸತ್ತಿನ ಪ್ರತಿಯೊಂದು ಅಧಿವೇಶನವೂ ಅಂತಿಮವಾಗಿ ಸಾರ್ವಜನಿಕರ ತೆರಿಗೆ ಹಣದಿಂದಲೇ ನಡೆಯುತ್ತದೆ. ಸಂಸದರು, ಸಿಬ್ಬಂದಿ, ಭದ್ರತೆ, ತಂತ್ರಜ್ಞಾನ ಮತ್ತು ಸಂಪೂರ್ಣ ವ್ಯವಸ್ಥೆಯ ವೆಚ್ಚವನ್ನು ದೇಶದ ಜನರೇ ಭರಿಸುತ್ತಾರೆ. ಆದರೆ, ಆ ವೆಚ್ಚದ ನೈಜ ಮೌಲ್ಯವು ‘ಎಷ್ಟು ವಿಧೇಯಕಗಳು ಅಂಗೀಕಾರಗೊಂಡವು’ ಎಂಬುದರ ಮೇಲೆ ಮಾತ್ರ ನಿರ್ಧಾರವಾಗುವುದಿಲ್ಲ; ಬದಲಿಗೆ ಜನಪ್ರತಿನಿಧಿಗಳು ಪ್ರಶ್ನೆಗಳನ್ನು ಕೇಳಲು ಸಾಧ್ಯವಾಯಿತೇ? ಸಚಿವರು ಸೂಕ್ತ ಉತ್ತರ ನೀಡಿದರೇ? ಮತ್ತು ಜಾರಿಯಾಗುವ ಕಾನೂನುಗಳ ಮೇಲೆ ಸಮಗ್ರ ಚರ್ಚೆ ನಡೆಯಿತೇ? ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಆದ್ದರಿಂದ, ಮುಂಗಾರು ಅಧಿವೇಶನ ಮುಕ್ತಾಯಗೊಂಡಿರುವುದು ಕೇವಲ ಸಂಸತ್ತು ಎಷ್ಟು ಗಂಟೆ ಕೆಲಸ ಮಾಡಿದೆ ಎಂಬುದರ ವಿವರಣೆಯಲ್ಲ; ಬದಲಿಗೆ ಕಳೆದುಹೋದ ಅಮೂಲ್ಯ ಸಮಯದಿಂದ ದೇಶಕ್ಕೆ ಏನೆಲ್ಲ ಸಿಗಬಹುದಾಗಿತ್ತು ಎಂಬುದರ ಮೇಲಿನ ಗಂಭೀರ ಚಿಂತನೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net