ಬಳಿಕ, ಸಂಶೋಧಕರು ಈ ನೂತನ ಆವಿಷ್ಕಾರವನ್ನು ಪುರಾಣಗಳು ಮತ್ತು ವಾಸ್ತುಶಿಲ್ಪ ಗ್ರಂಥಗಳಲ್ಲಿನ ವಿವರಣೆಗಳೊಂದಿಗೆ ಹೋಲಿಸಿ ನೋಡಿದಾಗ, ಈ ಶಿಲ್ಪವು ಸರಸ್ವತಿಯದ್ದಲ್ಲ, ಸಾಕ್ಷಾತ್ ಗಾಯತ್ರಿ ದೇವಿಯದ್ದು ಎಂಬುದು ಸಂಪೂರ್ಣವಾಗಿ ಖಚಿತಪಟ್ಟಿತು. ನಾಲ್ಕು ಹಸ್ತಗಳನ್ನು ಹೊಂದಿರುವ ಈ ದೇವಿಯು ಕಮಲದ ಪೀಠದ ಮೇಲೆ ಆಸೀನಳಾಗಿದ್ದಾಳೆ. ದೇವಿಯ ಕೆಳಗಿನ ಬಲಗೈನಲ್ಲಿ ಅಕ್ಷರಮಾಲೆ, ಮೇಲಿನ ಬಲಗೈನಲ್ಲಿ ಕಮಲದ ಹೂವು ಮತ್ತು ಕೆಳಗಿನ ಎಡಗೈನಲ್ಲಿ ವೇದಗಳನ್ನು ಪ್ರತಿನಿಧಿಸುವ ಪುಸ್ತಕವನ್ನು ಹಿಡಿದಿರುವುದನ್ನು ಸ್ಪಷ್ಟವಾಗಿ ಕಾಣಬಹುದು.