ಪ್ರತಿಭಟನೆಯ ಹಕ್ಕು! ಅನುಮತಿ ಪಡೆಯದೆ ನಡೆಸಿದರೆ ಏನಾಗುತ್ತದೆ? ನಿಯಮಗಳೇನು ಹೇಳುತ್ತವೆ?

ಪ್ರತಿಭಟನೆಯ ಹಕ್ಕು! ಅನುಮತಿ ಪಡೆಯದೆ ನಡೆಸಿದರೆ ಏನಾಗುತ್ತದೆ? ನಿಯಮಗಳೇನು ಹೇಳುತ್ತವೆ?
Published on: 

ನವದೆಹಲಿ: ಕಾಂಗ್ರೆಸ್ ಮತ್ತು ಕಾಕ್ರೋಚ್ ಜನತಾ ಪಾರ್ಟಿಯ (ಕೆಜೆಪಿ) ಪ್ರತಿಭಟನೆಯ ಮೇಲೆ ಪೊಲೀಸರ ಕ್ರಮ ಮುಂದುವರಿದಿದೆ. ಕೆಜೆಪಿಯ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಅ.10ರಂದು ವಿಮಾನದಿಂದಲೇ ವಶಕ್ಕೆ ಪಡೆಯಲಾಯಿತು. ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಪಿಣರಾಯಿ ವಿಜಯನ್ ಅವರಂತಹ ಮಾಜಿ ಮುಖ್ಯಮಂತ್ರಿಗಳನ್ನೂ ಸಹ ವಶಕ್ಕೆ ತೆಗೆದುಕೊಂಡು, ಬಳಿಕ ಬಿಡುಗಡೆ ಮಾಡಲಾಯಿತು.

‘ಈ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಹಾಗೂ ದೆಹಲಿಯಲ್ಲಿ ಬಿಎನ್​ಎಸ್​ನ ಸೆಕ್ಷನ್ 163 ಜಾರಿಯಲ್ಲಿದೆ’ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ‘ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬ ನಾಗರಿಕನ ಹಕ್ಕು’ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಹಾಗಾದರೆ,ಪ್ರತಿಭಟನೆ ಮಾಡುವುದು ಮೂಲಭೂತ ಹಕ್ಕೇ? ಹಾಗಿದ್ದಲ್ಲಿ, ಪೊಲೀಸರ ಅನುಮತಿ ಏಕೆ ಅಗತ್ಯ? ಪೊಲೀಸರು ವಶಕ್ಕೆ ಪಡೆದರೆ ಏನು ಮಾಡಬೇಕು? ಈ ಎಲ್ಲ ಸಂಗತಿಗಳ ವಿವರ ಇಲ್ಲಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಮತ್ತು ಶಾಂತಿಯುತವಾಗಿ ಪ್ರತಿಭಟಿಸುವುದು ನಾಗರಿಕರ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳಿಗೆ ಅನುಮತಿ, ನಿಷೇಧಾಜ್ಞೆಗಳು ಹಾಗೂ ಪೊಲೀಸರ ಕ್ರಮಗಳ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಭಾರತೀಯ ಸಂವಿಧಾನ, ಹೊಸ ಅಪರಾಧ ಕಾನೂನುಗಳು (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-ಬಿಎನ್​ಎಸ್​ಎಸ್ ಮತ್ತು ಭಾರತೀಯ ನ್ಯಾಯ ಸಂಹಿತೆ-ಬಿಎನ್​ಎಸ್ ) ಹಾಗೂ ಸುಪ್ರೀಂ ಕೋರ್ಟ್​ನ ತೀರ್ಪಗಳ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ಕಾನೂನು ಅಂಶಗಳ ವಿವರವಾದ ಅವಲೋಕನ ಇಲ್ಲಿದೆ.

ಪ್ರತಿಭಟನೆ ಮಾಡುವುದು ಮೂಲಭೂತ ಹಕ್ಕೇ?

ಹೌದು. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಪ್ರತಿಭಟಿಸುವ ಹಕ್ಕನ್ನು ಖಾತರಿಪಡಿಸಿದೆ. ವಿಧಿ 19(1)(ಎ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ವಿಧಿ 19(1)(ಬಿ)- ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆ, ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಕಲ್ಪಿಸುತ್ತದೆ. ಆದಾಗ್ಯೂ, ಈ ಹಕ್ಕು ಸಂಪೂರ್ಣವಾಗಿ ಅನಿಯಂತ್ರಿತವಲ್ಲ. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ದೇಶದ ಸಾರ್ವಭೌಮತೆಯನ್ನು ಕಾಪಾಡುವ ದೃಷ್ಟಿಯಿಂದ ವಿಧಿ 19(3)ರ ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಲು ಸರ್ಕಾರಕ್ಕೆ ಅವಕಾಶವಿದೆ.

ಪ್ರತಿಭಟನೆಗೆ ಪೊಲೀಸ್ ಅನುಮತಿ ಕಡ್ಡಾಯವೇ?

ಹೌದು. 2018ರ ಮಹತ್ವದ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ (ಎಂಕೆಎಸ್​ಎಸ್) ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಶಾಂತಿಯುತ ಪ್ರತಿಭಟನೆಯ ಮೂಲಕ ತಮ್ಮ ಕುಂದುಕೊರತೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವುದು ನಾಗರಿಕರ ಮೂಲಭೂತ ಹಕ್ಕಾಗಿದ್ದರೂ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಮಿಷನರ್ ಅಥವಾ ಅಧಿಕೃತ ಅಧಿಕಾರಿಯಿಂದ ಮುಂಚಿತವಾಗಿ ಅನುಮತಿ ಪಡೆಯುವ ನಿಯಮವನ್ನು ರೂಪಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಪೊಲೀಸ್ ಅನುಮತಿಯ ಮೂಲ ಉದ್ದೇಶವು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸುವುದೇ ಹೊರತು ಪ್ರತಿಭಟನೆಯ ಹಕ್ಕನ್ನು ದಮನಿಸುವುದಲ್ಲ. ಅನುಮತಿ ನಿರಾಕರಿಸುವ ಸಂದರ್ಭದಲ್ಲಿ ಸರ್ಕಾರ ಅಥವಾ ಪೊಲೀಸರು ಕಾನೂನುಬದ್ಧ ಕಾರಣಗಳನ್ನು ನೀಡುವುದು ಕಡ್ಡಾಯ.

ಅನುಮತಿ ಸಿಗದಿದ್ದಾಗ ಇರುವ ಕಾನೂನು ಮಾರ್ಗಗಳು

ಪೊಲೀಸ್ ಇಲಾಖೆಗೆ ಮರುಅರ್ಜಿ: ಅನುಮತಿ ನಿರಾಕರಣೆಗೆ ಪೊಲೀಸರು ನೀಡಿದ ಕಾರಣಗಳನ್ನು ಪರಿಶೀಲಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಕಡಿಮೆ ಮಾಡುವುದು, ಸಮಯವನ್ನು ಮೊಟಕುಗೊಳಿಸುವುದು ಅಥವಾ ಬೇರೆ ಸ್ಥಳವನ್ನು ಪ್ರಸ್ತಾಪಿಸಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಬಹುದು.

ಹೈಕೋರ್ಟ್ ಮೆಟ್ಟಿಲೇರುವುದು: ಡಿಸಿಪಿ ಅವರ ಆದೇಶದ ವಿರುದ್ಧ ಪ್ರತ್ಯೇಕ ಮೇಲ್ಮನವಿಗೆ ಅವಕಾಶವಿಲ್ಲದಿದ್ದರೂ, ಪೊಲೀಸರ ನಿರ್ಧಾರವು ನಿರಂಕುಶ ಅಥವಾ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕಂಡುಬಂದರೆ, ಸಂವಿಧಾನದ ವಿಧಿ 226ರ ಅಡಿಯಲ್ಲಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಸವಾಲು ಹಾಕಬಹುದು.

ಅನುಮತಿ ಇಲ್ಲದೆ ಪ್ರತಿಭಟಿಸಿದರೆ...

ಕಾನೂನುಬದ್ಧ ಸರ್ಕಾರಿ ಆದೇಶವನ್ನು ಉದ್ದೇಶಪೂರ್ವಕ ವಾಗಿ ಉಲ್ಲಂಘಿಸಿದ್ದಕ್ಕಾಗಿ ಬಿಎನ್​ಎಸ್ ಕಲಂ 223 ಅಡಿ ಪ್ರಕರಣವನ್ನು ದಾಖಲಿಸಬಹುದು (ಹಿಂದಿನ ಐಪಿಸಿ ಸೆಕ್ಷನ್ 188). ಇದಕ್ಕೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ. ಪೊಲೀಸರು ಇಡೀ ಘಟನೆಯ ವಿಡಿಯೋ ಚಿತ್ರೀಕರಣ ನಡೆಸುತ್ತಾರೆ. ನಿಯಮ ಉಲ್ಲಂಘನೆಯ ದಾಖಲೆಯನ್ನು ಇರಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ಅನುಮತಿ ಕೋರಿದಾಗ ಇದು ಅಡ್ಡಿಯಾಗಬಹುದು.ಅಲ್ಲದೆ, ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದರೆ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ದೂರಕ್ಕೆ ಕರೆದೊಯ್ದು ಬಿಡುಗಡೆ ಮಾಡಬಹುದು.

ವಶಕ್ಕೆ ಪಡೆಯುವುದು ಮತ್ತು ಬಂಧನ ನಡುವಿನ ವ್ಯತ್ಯಾಸವೇನು?

ಬಂಧನ ಎಂಬುದು ಒಂದು ಔಪಚಾರಿಕ ಕ್ರಮವಾಗಿದೆ. ಇದರಲ್ಲಿ ಪೊಲೀಸರು ಯಾವುದಾದರೂ ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ ಮತ್ತು ತಕ್ಷಣವೇ ಕ್ರಿಮಿನಲ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದರೊಂದಿಗೆ ಸಂವಿಧಾನಬದ್ಧ ಮತ್ತು ಕಾನೂನುಬದ್ಧ ರಕ್ಷಣೆಗಳು ತಕ್ಷಣವೇ ಜಾರಿಗೆ ಬರುತ್ತವೆ. ‘ವಶಕ್ಕೆ ಪಡೆಯುವುದು’ ಎಂಬ ಪದಕ್ಕೆ ಬಿಎನ್​ಎಸ್​ಎಸ್​ನಲ್ಲಿ ಯಾವುದೇ ನೇರ ವ್ಯಾಖ್ಯಾನವಿಲ್ಲ. ಆದರೆ ಜನರನ್ನು ತಡೆಯುವ, ಸ್ಥಳದಿಂದ ತೆರವುಗೊಳಿಸುವ ಅಥವಾ ಸ್ವಲ್ಪ ಸಮಯ ತಮ್ಮ ಬಳಿ ಇರಿಸಿಕೊಳ್ಳುವ ಅಧಿಕಾರವನ್ನು ಕಾನೂನು ಪೊಲೀಸರಿಗೆ ನೀಡುತ್ತದೆ.

ಪ್ರತಿಭಟನೆಗಳಲ್ಲಿ ಸಾಮಾನ್ಯವಾಗಿ ಇದೇ ನಡೆಯುತ್ತದೆ. ಜನರು ಕೆಲವೇ ಗಂಟೆಗಳ ಕಾಲ ಪೊಲೀಸರ ಬಳಿ ಇರುತ್ತಾರೆ, ಯಾವುದೇ ಪ್ರಕರಣ ದಾಖಲಾಗುವುದಿಲ್ಲ ಮತ್ತು ಸಂಜೆಯ ವೇಳೆಗೆ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಜನರಿಗೆ ಇದು ಬಂಧನದಂತೆ ಅನಿಸಿದರೂ, ಪೊಲೀಸರು ಇದನ್ನು ಕೇವಲ ಮುನ್ನೆಚ್ಚರಿಕೆ ಕ್ರಮ ಎಂದು ಕರೆಯುತ್ತಾರೆ. ಔಪಚಾರಿಕ ಬಂಧನದ ಕುರಿತಂತೆ ನಡೆಯುವ ನ್ಯಾಯಾಲಯದ ಪರಿಶೀಲನೆ ಅಥವಾ ಕಾನೂನು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪೊಲೀಸರು ಈ ವ್ಯತ್ಯಾಸವನ್ನು ಮಾಡುತ್ತಾರೆ.

ಕಲಂ 163ರ ಮಹತ್ವ

ಹಿಂದೆ ಸಿಆರ್​ಪಿಸಿ ಅಡಿಯಲ್ಲಿದ್ದ ಸೆಕ್ಷನ್ 144 (ನಿಷೇಧಾಜ್ಞೆ) ಈಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್​ಎಸ್​ಎಸ್)ಯ ಕಲಂ 163 ಆಗಿದೆ. ಇದರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಲಿಖಿತ ಆದೇಶದ ಮೂಲಕ ಯಾವುದೇ ಪ್ರದೇಶದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಾಗಿ ಸೇರುವುದನ್ನು ನಿಷೇಧಿಸಬಹುದು.

ಆದೇಶವನ್ನು ಪ್ರಶ್ನಿಸುವುದು ಹೇಗೆ?

ಕಲಂ 163(5)ರ ಅಡಿ ಅರ್ಜಿ: ಬಾಧಿತ ವ್ಯಕ್ತಿಯು ಆದೇಶ ಹೊರಡಿಸಿದ ಮ್ಯಾಜಿಸ್ಟ್ರೇಟ್​ಗೇ ಆದೇಶವನ್ನು ರದ್ದುಗೊಳಿಸಲು ಅಥವಾ ಮಾರ್ಪಡಿಸಲು ಅರ್ಜಿ ಸಲ್ಲಿಸಬಹುದು. ಮ್ಯಾಜಿಸ್ಟ್ರೇಟ್ ಅರ್ಜಿದಾರರಿಗೆ ತ್ವರಿತ ವಿಚಾರಣೆಯ ಅವಕಾಶ ನೀಡಬೇಕು ಮತ್ತು ಅರ್ಜಿಯನ್ನು ತಿರಸ್ಕರಿಸಿದರೆ ಅದಕ್ಕೆ ಲಿಖಿತ ಕಾರಣಗಳನ್ನು ದಾಖಲಿಸಬೇಕು.

ನ್ಯಾಯಾಲಯದಲ್ಲಿ ಸವಾಲು: ತುರ್ತು ಅಥವಾ ಗಂಭೀರ ಬೆದರಿಕೆ ಇಲ್ಲದೆ ನಿರಂಕುಶವಾಗಿ ನಿಷೇಧಾಜ್ಞೆ ಹೇರಿದರೆ, ಅದನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಬಹುದು. ನಿಷೇಧಾಜ್ಞೆಯು ನೈಜ ಮತ್ತು ಗಂಭೀರ ಅಪಾಯದ ಆಧಾರದ ಮೇಲೆ ಮಾತ್ರ ಇರಬೇಕು ಎಂದು ಸುಪ್ರೀಂ ಕೋರ್ಟ್ 2012ರ ರಾಮಲೀಲಾ ಮೈದಾನ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. 1961ರ ಬಾಬುಲಾಲ್ ಪರಾಟೆ ಪ್ರಕರಣದಲ್ಲೂ ಸಂವಿಧಾನ ಪೀಠವು ಇಂತಹ ಆದೇಶಗಳನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗಿದೆ ಎಂದು ತಿಳಿಸಿದೆ.

ಬಂಧನ ಅಥವಾ ವಶಕ್ಕೆ ಪಡೆದಾಗ ನಾಗರಿಕರಿಗಿರುವ ಹಕ್ಕುಗಳು

ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಅಥವಾ ಬಂಧಿಸಿದಾಗ ಸಂವಿಧಾನ ಮತ್ತು ಕಾನೂನು ಐದು ಪ್ರಮುಖ ರಕ್ಷಣೆಗಳನ್ನು ಒದಗಿಸುತ್ತದೆ.

1) 24 ಗಂಟೆಗಳ ನಿಯಮ: ಸಂವಿಧಾನದ ವಿಧಿ 22ರ ಪ್ರಕಾರ, ಬಂಧಿತ ವ್ಯಕ್ತಿಯನ್ನು ಪ್ರಯಾಣದ ಸಮಯವನ್ನು ಹೊರತುಪಡಿಸಿ 24 ಗಂಟೆಗಳ ಒಳಗೆ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕಡ್ಡಾಯ.

2) ಬಂಧನದ ಕಾರಣ ತಿಳಿಯುವ ಹಕ್ಕು: ಬಂಧನಕ್ಕೆ ಕಾರಣವೇನು ಎಂಬುದನ್ನು ಲಿಖಿತ ರೂಪದಲ್ಲಿ ತಿಳಿಸಬೇಕು. ಈ ನಿಯಮ ಪಾಲಿಸದ ಬಂಧನವು ಅಸಾಂವಿಧಾನಿಕ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.

3) ವಕೀಲರ ನೆರವು: ತಮ್ಮ ಆಯ್ಕೆಯ ವಕೀಲರನ್ನು ಸಂರ್ಪಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆರ್ಥಿಕ ಅಡಚಣೆ ಇದ್ದರೆ ಉಚಿತ ಕಾನೂನು ನೆರವು ಪಡೆಯಬಹುದು. ಬಿಎನ್​ಎಸ್​ಎಸ್ ಕಲಂ 38ರ ಪ್ರಕಾರ ವಿಚಾರಣೆಯ ವೇಳೆ ವಕೀಲರನ್ನು ಭೇಟಿ ಮಾಡಲು ಅವಕಾಶವಿದೆ.

4) ಮಹಿಳೆಯರ ರಕ್ಷಣೆ: ಬಿಎನ್​ಎಸ್​ಎಸ್​ನ ಕಲಂ 43(5)ರ ಅನ್ವಯ, ಮಹಿಳೆಯನ್ನು ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೆ ಮುನ್ನ ಬಂಧಿಸುವಂತಿಲ್ಲ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

5) ಡಿ.ಕೆ. ಬಸು ಮಾರ್ಗಸೂಚಿಗಳು (1997): ಬಂಧಿಸುವ ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿ ನೇಮ್್ಯಾಗ್ ಸ್ಪಷ್ಟವಾಗಿರಬೇಕು. ಸ್ಥಳೀಯ ಸಾಕ್ಷಿಯ ಉಪಸ್ಥಿತಿಯಲ್ಲಿ ‘ಅರೆಸ್ಟ್ ಮೆಮೊ’ ತಯಾರಿಸಬೇಕು. ಬಂಧಿತ ವ್ಯಕ್ತಿಯ ಕುಟುಂಬಕ್ಕೆ ಅಥವಾ ಸ್ನೇಹಿತರಿಗೆ ತಕ್ಷಣವೇ ಮಾಹಿತಿ ನೀಡಬೇಕು. ವೈದ್ಯಕೀಯ ತಪಾಸಣೆ ನಡೆಸಿ ಗಾಯಗಳನ್ನು ದಾಖಲಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಹಾಗೂ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬಹುದು.

ದೆಹಲಿ ಪೊಲೀಸರ ಕಾರ್ಯವಿಧಾನ

ದೆಹಲಿ ಪೊಲೀಸರ ಸ್ಟ್ಯಾಡಿಂಗ್​ ಆರ್ಡರ್ ಪ್ರಕಾರ ಪ್ರತಿಭಟನೆಗೆ ಈ ಕೆಳಗಿನ ನಿಯಮಗಳಿವೆ:

10 ದಿನಗಳ ಮುಂಚಿತ ಅರ್ಜಿ: ಸಾಮಾನ್ಯವಾಗಿ ಪ್ರತಿಭಟನೆಗೆ ಕನಿಷ್ಠ 10 ದಿನಗಳ ಮೊದಲು ಉಪ ಪೊಲೀಸ್ ಆಯುಕ್ತರಿಗೆ (ಡಿಸಿಪಿ) ಅರ್ಜಿ ಸಲ್ಲಿಸಬೇಕು. ತುರ್ತು ಸಂದರ್ಭಗಳಲ್ಲಿ ತಡವಾಗಿ ಬಂದ ಅರ್ಜಿಗಳನ್ನು ಸ್ಥಳಾವಕಾಶ ಮತ್ತು ಭದ್ರತಾ ವ್ಯವಸ್ಥೆಗೆ ತಕ್ಕಂತೆ ಪರಿಗಣಿಸಬಹುದು.

ಮೊದಲು ಬಂದವರಿಗೆ ಮೊದಲ ಆದ್ಯತೆ: ಅರ್ಜಿಗಳನ್ನು ‘ಊಜ್ಟಿಠಠಿ ಇಟಞಛಿ, ಊಜ್ಟಿಠಠಿ ಖಛ್ಟಿಡಛಿಛ’ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಈ ವೇಳೆ ಸ್ಪೆಷಲ್ ಬ್ರಾಂಚ್, ಟ್ರಾಫಿಕ್ ಪೊಲೀಸ್ ಮತ್ತು ಸ್ಥಳೀಯ ಜಿಲ್ಲಾ ಪೊಲೀಸರ ಅಭಿಪ್ರಾಯ ಪಡೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net