ಶಿವಸೇನೆ: ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳಾಗಿ ಸಂಪೂರ್ಣ ವಿಭಜನೆಯಾಗಿದೆ. ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ಅಧಿಕೃತ ಚಿಹ್ನೆ ನೀಡಿದೆ. ಪ್ರಸ್ತುತ, ಉದ್ಧವ್ ಬಣದ ಆರು ಸಂಸದರು ಈಗ ಶಿಂಧೆ ಬಣದತ್ತ ವಾಲಿದ್ದಾರೆ. 2022ರ ಜೂನ್ನಲ್ಲಿ ಏಕನಾಥ್ ಶಿಂಧೆ 39 ಶಾಸಕರ ನೇತೃತ್ವದಲ್ಲಿ ಬಂಡಾಯವೆದ್ದರು. ಪರಿಣಾಮ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರ ಪತನಗೊಂಡಿತು. ಮುಂದೆ, ಶಿಂಧೆ ಎನ್ಡಿಎ ಅನ್ನು ಬೆಂಬಲಿಸಿ, ಮುಖ್ಯಮಂತ್ರಿಯಾದರು. ಈಗ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಏಕನಾಥ್ ಪುತ್ರ ಶ್ರೀಕಾಂತ್ ಶಿಂಧೆ ಲೋಕಸಭಾ ಸದಸ್ಯರಾಗಿದ್ದಾರೆ. ಉದ್ಧವ್ ಬಣದ ಶಿವಸೇನೆಯಲ್ಲಿ ಉದ್ಧವ್ ಪುತ್ರ ಆದಿತ್ಯ ಠಾಕ್ರೆಗೆ ಹೆಚ್ಚಿನ ಪ್ರಾಶಸ್ಱ ನೀಡಿರುವುದು ಹಿರಿಯ ನಾಯಕರ, ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಜೂನ್ 19ರಂದು ಶಿವಸೇನೆಯ 60ನೇ ವರ್ಷಾಚರಣೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಆದಿತ್ಯರನ್ನು ಉದ್ಧವ್ ಉತ್ತರಾಧಿಕಾರಿಯಾಗಿ ಘೋಷಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಸಂಸದರು ಶಿಂಧೆ ಬಣದತ್ತ ವಾಲಿದ್ದಾರೆ.