ಅವನಿಗೆ ಪಕ್ಷ ಎಲ್ಲವನ್ನೂ ಕೊಟ್ಟಿತ್ತು; ಆದರೂ ಬಿಜೆಪಿ ಮಡಿಲಿಗೆ ಬಿದ್ದ; ರಾಘವ್ ಚಡ್ಡಾ ವಿರುದ್ಧ ಆಪ್ ವಾಗ್ದಾಳಿ | AAP
ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್
Published on:
Copied
Follow Us
ನವದೆಹಲಿ: ಆಪ್ನ ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿದಿದ್ದ ಸಂಸದ ರಾಘವ್ ಚಡ್ಡಾ, ಇಂದು(ಏ. 24) ಇತರೆ ಆರು ಸಂಸದರೊಂದಿಗೆ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ(AAP), ಅವರೆಲ್ಲಾ ದೇಶದ್ರೋಹಿಗಳು, ಪಂಜಾಬ್ ಜನ ಇವರನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕಿಡಿಕಾರಿದೆ.
ಈ ಕುರಿತು ರಾಘವ್ ಚಡ್ಡಾ ವಿರುದ್ಧ ಹರಿಹಾಯ್ದಿರುವ ಸಂಸದ ಸಂಜಯ್ ಸಿಂಗ್, ಪಕ್ಷ ಅವನನ್ನು ಶಾಸಕ ಮತ್ತು ಸಂಸದನನ್ನಾಗಿ ಮಾಡಿತು. ಎಲ್ಲಾ ಅಧಿಕಾರವನ್ನು ನೀಡಿತು. ಆದರೂ ಅವನು ಬಿಜೆಪಿ ಮಡಿಲಿಗೆ ಹೋಗಿ ಬಿದ್ದ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಸಹ ಕಿಡಿಕಾರಿದ್ದು, ಪಂಜಾಬ್ನ ಆಪ್ ಸರ್ಕಾರ ಮಾಡಿದ ಒಳ್ಳೆಯ ಕೆಲಸಕ್ಕೆ ಬಿಜೆಪಿ ಅಡ್ಡಿಪಡಿಸಿದೆ. 7 ಎಎಪಿ ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರುತ್ತಿದ್ದಾರೆ, ಪಂಜಾಬ್ ಜನರು ಈ 7 ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪಂಜಾಬ್ ಜನರು ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸೇರುವ ಘೋಷಣೆ ಮಾಡುವ ಮುನ್ನ ಮಾತನಾಡಿರುವ ರಾಘವ್ ಚಡ್ಡಾ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಕಾರಣವನ್ನು ಬಹಿರಂಗಪಡಿಸಿದ್ದು, ಅವರ ಪಾಪಗಳಲ್ಲಿ ಭಾಗಿಯಾಗಲು ಇಷ್ಟಪಡದ ಕಾರಣ ಪಕ್ಷದಿಂದ ದೂರ ಉಳಿದಿದ್ದೇನೆ ಎಂದು ಹೇಳಿದ್ದಾರೆ.
ಆಪ್ ಹಿರಿಯ ನಾಯಕರು ಮಾಡಿದ ಅಪರಾಧಗಳಲ್ಲಿ ಭಾಗವಾಗಲು ಮತ್ತು ಅವರ ಸ್ನೇಹಕ್ಕೆ ನಾನು ಅರ್ಹನಾಗಿರಲಿಲ್ಲ. ನಮಗೆ ಎರಡು ಆಯ್ಕೆಗಳಿದ್ದವು. ಒಂದು ರಾಜಕೀಯವನ್ನು ತ್ಯಜಿಸುವುದು ಅಥವಾ ನಮ್ಮ ಸಾರ್ವಜನಿಕ ಕೆಲಸವನ್ನು ತ್ಯಜಿಸುವುದು. ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3 ನೇ ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಿ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಬಿಜೆಪಿ ಸೇರಿದ ಆಪ್ ಸಂಸದರು ಯಾರು?
ರಾಘವ್ ಚಡ್ಡಾ, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ರಾಜಿಂದರ್ ಗುಪ್ತಾ ಹಾಗೂ ವಿಕ್ರಮ್ ಸಾಹ್ನಿ ಕೂಡ ಬಿಜೆಪಿಗೆ ಸೇರಲಿದ್ದಾರೆ (ಏಜೆನ್ಸೀಸ್).