ಒಂದು ಸಣ್ಣ ವಿರಾಮದ ನಂತರ... ಕರಿಯರ್​ನಲ್ಲಿ ಸಣ್ಣ ಬ್ರೇಕ್ ಪಡೆಯುವ ಹೊಸ ಟ್ರೆಂಡ್!

ಹೊಸ ಟ್ರೆಂಡ್
ಹೊಸ ಟ್ರೆಂಡ್
Published on

ಬೆಂಗಳೂರು: ಸಾಮಾನ್ಯ ಜನರು ಕೆಲಸದಿಂದ ವಿರಾಮ ಪಡೆಯಲು ಕೆಲ ವಾರಗಳ ರಜೆ ಪಡೆದು ದೀರ್ಘ ಪ್ರವಾಸಕ್ಕೆ ಹೋಗುವುದು ಅಥವಾ ಲಾಂಗ್ ವೀಕೆಂಡ್ನಲ್ಲಿ ರಿಲ್ಯಾಕ್ಸ್ ಆಗುವ ಯೋಜನೆ ರೂಪಿಸುತ್ತಾರೆ. ಕೆಲವರು ಇನ್ನೂ ಭಿನ್ನವಾದ ಹೆಜ್ಜೆ ಇರಿಸಿ, ವೃತ್ತಿಯಿಂದ ನಿವೃತ್ತರಾಗದೆ ಒಂದು ಸಣ್ಣ ಬಿಡುವು ಪಡೆದುಕೊಳ್ಳುತ್ತಾರೆ. ಇಂಥ ಟ್ರೆಂಡ್ ಕಾರ್ಪೆರೇಟ್ ಮತ್ತು ಕಾರ್ಪೆರೇಟ್ಯುೕತರ ಎರಡೂ ವಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. 

ಖ್ಯಾತ ಗಾಯಕ ಅರಿಜಿತ್ ಸಿಂಗ್ ‘ಇನ್ಮುಂದೆ ಹಿನ್ನೆಲೆ ಗಾಯಕನಾಗಿ ಕೆಲಸ ಮಾಡುವುದಿಲ್ಲ’ ಎಂದು ಘೋಷಿಸಿದ ಮೇಲೆ, ಬೇರೆ ಬೇರೆ ವೃತ್ತಿಯ ಜನರು ‘ಒಂದು ಸಣ್ಣ ವಿರಾಮದ ನಂತರ...’ ವೃತ್ತಿಗೆ ಮರಳಲು ಅಥವಾ ಹೊಸದಾಗಿ ಏನಾದರೂ ಮಾಡಲು ಚಿಂತನೆ ನಡೆಸಿದ್ದಾರೆ. ಇಂಥ ಹೆಜ್ಜೆ ಮಾನಸಿಕ ಒತ್ತಡದಿಂದ ಮುಕ್ತಿ ನೀಡುವ ಜತೆಗೆ ವ್ಯಕ್ತಿಯ ಸೃಜನಶೀಲತೆ, ಆಲೋಚನಾ ಶಕ್ತಿ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯನ್ನೂ ಹೆಚ್ಚಿಸುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ದುಡಿಯುವುದೇ ಜೀವನಕ್ಕಾಗಿ. ಆದರೆ, ಕೆಲಸ ಮತ್ತು ಬರೀ ಕೆಲಸದಲ್ಲೇ ಬದುಕು ಕಳೆದುಹೋಗುತ್ತಿದೆ ಎಂಬ ಕೊರಗು ಹಲವರದ್ದು. ಹಾಗೇ ಕೊರಗುತ್ತ ಕೂತರೆ ಶಾರೀರಿಕ ಸ್ವಾಸ್ಥ್ಯ ಹಾಗೂ ಮಾನಸಿಕ ಸ್ವಾಸ್ಥ್ಯ ಎರಡೂ ಬಿಗಡಾಯಿಸುವ ಸಾಧ್ಯತೆ ಹೆಚ್ಚು. 

ಅರವತ್ತು ವರ್ಷಕ್ಕೆ ನಿವೃತ್ತಿಯಾದ ನಂತರವೇ ಸ್ವಂತಕ್ಕೆ ಸಮಯ ಕೊಟ್ಟುಕೊಳ್ಳುತ್ತೇವೆ ಎಂಬುದು ಬರೀ ಸಬೂಬು. 60 ವರ್ಷದ ನಂತರ ಒಂದೊಂದೇ ಕಾಯಿಲೆಗಳು ಆಹ್ವಾನ ನೀಡದೇ ಬಂದು, ವ್ಯಕ್ತಿಯನ್ನು ಮನೆಗೆ, ಔಷಧಕ್ಕೆ ಸೀಮಿತವಾಗಿಸಿಬಿಡುತ್ತವೆ. ಹಾಗಾಗಿಯೇ, ನೆಮ್ಮದಿ ಪಡೆದುಕೊಳ್ಳಲು ಈಗ ನಿವೃತ್ತಿಯವರೆಗೆ ಕಾಯಬೇಕಿಲ್ಲ. ವೃತ್ತಿಜೀವನ ಎಷ್ಟು ಮುಖ್ಯವೋ ಮಾನಸಿಕ, ಶಾರೀರಿಕ, ಆಧ್ಯಾತ್ಮಿಕ ಶಾಂತಿ ಕೂಡ ಅಷ್ಟೇ ಮುಖ್ಯ ಎಂಬುದನ್ನು ಯುವಪೀಳಿಗೆ ಅರ್ಥ ಮಾಡಿಕೊಂಡಿದ್ದು, ಕೆಲಸದ ಒತ್ತಡ ಅತಿಯಾದಾಗ ವರ್ಕ್ ಮೋಡ್ನ್ನು ಪಾಸ್ ಮಾಡಿ (ಅಲ್ಪವಿರಾಮ ನೀಡಿ), ಬಿಂದಾಸ್ ಆಗಿ ಬ್ರೇಕ್ ಪಡೆಯುತ್ತಿದ್ದಾರೆ. 

ಇದು ಒಂದರಿಂದ ಆರು ತಿಂಗಳ ಅವಧಿ, ಕೆಲವೊಮ್ಮೆ ಒಂದು ವರ್ಷದವರೆಗೂ ಸಾಗುತ್ತದೆ. ಆದರೆ, ಈ ಅವಧಿ ಅವಿಸ್ಮರಣೀಯ. ಇಷ್ಟದ ಹವ್ಯಾಸಗಳಿಗೆ ಸಮಯ ನೀಡುವುದು, ಬೇಕು ಎನಿಸಿದ್ದಲ್ಲಿ ಪ್ರವಾಸ ಮಾಡುವುದು, ಕುಟುಂಬ ಸದಸ್ಯರಿಗೆ ಸಮಯ ನೀಡುವುದು, ಸ್ನೇಹಿತರೊಂದಿಗೆ ಬೆರೆಯುವುದು, ಹೊಸ ಕೌಶಲ ಕಲಿಯುವುದು... ಹೀಗೆ ಮನಸ್ಸಲ್ಲೇ ಮಂಕಾಗಿಬಿಟ್ಟಿದ್ದ ಕನಸುಗಳೆಲ್ಲ ನನಸಾಗಿಸುವ ಸಮಯ. ಉದ್ಯೋಗಿಗಳ ಈ ಟ್ರೆಂಡ್ ನೋಡಿ, ಕಂಪನಿಗಳು ಕೂಡ ಬದಲಾಗಿವೆ. ಉತ್ತಮ ಕೌಶಲ ಹಾಗೂ ಅನುಭವ ಹೊಂದಿರುವ ನುರಿತ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಕಂಪನಿಗಳು ಕೆಲ ವಾರ ಅಥವಾ ತಿಂಗಳುಗಳ ಪೇಡ್/ಅನ್ಪೇಡ್ ರಜೆಗಳನ್ನು ಮಂಜೂರು ಮಾಡುತ್ತಿವೆ. 

ಹೌದು, ವಿದೇಶಗಳಲ್ಲಿ ಬಹಳ ಹಿಂದಿನಿಂದಲೂ ಜನಪ್ರಿಯವಾಗಿರುವ ‘ಕರಿಯರ್ ಬ್ರೇಕ್’ ಅಥವಾ ‘ಸಬ್ಬಾಟಿಕಲ್’ ಸಂಸ್ಕೃತಿ ಈಗ ಭಾರತದಲ್ಲೂ ವೇಗವಾಗಿ ಹರಡುತ್ತಿದೆ. ಕೆಲಸದ ಒತ್ತಡದಿಂದ ಪಾರಾಗಲು ಮಾತ್ರವಲ್ಲದೆ, ಹೊಸ ಕೌಶಲ ಕಲಿಯಲು ಮತ್ತು ಜೀವನದ ಉತ್ಸಾಹವನ್ನು ಮರಳಿ ಪಡೆಯಲು ಭಾರತೀಯ ವೃತ್ತಿಪರರು ಈ ಹಾದಿ ಹಿಡಿದಿದ್ದಾರೆ. ಹಿಂದೆ ಭಾರತದಲ್ಲಿ ಕರಿಯರ್ ನಡುವೆ ವಿರಾಮ ತೆಗೆದುಕೊಳ್ಳುವುದನ್ನು ‘ಕೆಲಸವಿಲ್ಲದ ಸ್ಥಿತಿ’ ಎಂದು ನಕಾರಾತ್ಮಕವಾಗಿ ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಅನೇಕರು ತಮ್ಮ ಹವ್ಯಾಸಗಳನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಅಥವಾ ಸಂಪೂರ್ಣವಾಗಿ ಹೊಸ ಕ್ಷೇತ್ರಕ್ಕೆ ಜಿಗಿಯಲು ಈ ಬ್ರೇಕ್ನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ‘ಬರ್ನ್ ಔಟ್’ ಅಥವಾ ವಿಪರೀತ ಕೆಲಸದ ಒತ್ತಡದಿಂದ ಉಂಟಾಗುವ ಆಯಾಸವನ್ನು ಹೋಗಲಾಡಿಸಲು ವಿರಾಮ ಅನಿವಾರ್ಯವಾಗಿದೆ. ಭಾರತದಲ್ಲಿ ಕರಿಯರ್ ಬ್ರೇಕ್ ಎಂಬುದು ಈಗ ಉದ್ಯೋಗ ನಷ್ಟವಲ್ಲ, ಬದಲಾಗಿ ಅದು ‘ಉನ್ನತ ಸಾಧನೆಗೆ ಬೇಕಾದ ಅಲ್ಪವಿರಾಮ’ವಾಗಿ ಪರಿಣಮಿಸಿದೆ.

ಕಂಪನಿಗಳ ಮೇಲೆ ಪ್ರಭಾವ

ಭಾರತದ ಪ್ರಮುಖ ಕಂಪನಿಗಳಾದ ಟಾಟಾ, ಇನ್ಪೋಸಿಸ್ ಮತ್ತು ಸ್ಟಾರ್ಟಪ್ಗಳು ಕೂಡ ಈಗ ‘ಸಬ್ಬಾಟಿಕಲ್ ಪಾಲಿಸಿ’ಯನ್ನು ಅಧಿಕೃತವಾಗಿ ಜಾರಿಗೆ ತರುತ್ತಿವೆ. ಇದರಿಂದ ಕಂಪನಿಗಳಿಗೆ ಹಲವು ಆಯಾಮದಲ್ಲಿ ಲಾಭವೇ ಇದೆ. ಕಾರ್ಯದೊತ್ತಡದಿಂದ ಬೇಸತ್ತು ದಕ್ಷ ಉದ್ಯೋಗಿಗಳು ಕೆಲಸ ಬಿಡುವ ಬದಲು ಸಣ್ಣ ವಿರಾಮ ಪಡೆದು ಮರಳಿ ಬರುವುದರಿಂದ ಕಂಪನಿಗೆ ಅನುಕೂಲವಾಗುತ್ತದೆ. ಹೊಸ ಚಿಂತನೆ ಮತ್ತು ಸೃಜನಶೀಲತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿ, ಉದ್ಯೋಗಿಯ, ಆ ಮೂಲಕ ಕಂಪನಿಯ ಉತ್ಪಾದಕತೆ ಹೆಚ್ಚುತ್ತದೆ. ವೈಯಕ್ತಿಕ ಅಗತ್ಯಗಳಿಗೆ ಸ್ಪಂದಿಸುವ ಕಂಪನಿಗಳ ಬಗ್ಗೆ ಉದ್ಯೋಗಿಗಳಲ್ಲಿ ಗೌರವ ಹೆಚ್ಚುತ್ತದೆ.

ನಾಲ್ಕು ಬಗೆ ಮಿನಿ ಸಬ್ಬಾಟಿಕಲ್: ಕೆಲಸದಿಂದ ಸ್ವಲ್ಪ ಅವಧಿಗೆ ತೆಗೆದುಕೊಳ್ಳುವ ವಿಶ್ರಾಂತಿ. ಅಡಲ್ಟ್ ಗ್ಯಾಪ್ ಇಯರ್: ವಯಸ್ಕ ಉದ್ಯೋಗಿಗಳು ವೃತ್ತಿಯಲ್ಲಿ ತೆಗೆದುಕೊಂಡ ಒಂದು ವರ್ಷದ ವಿರಾಮ. ಮೈಕ್ರೋ ರಿಟೈರ್ವೆುಂಟ್: 60ನೇ ವಯಸ್ಸಿಗೆ ನಿವೃತ್ತಿಯಾಗುವ ಬದಲು ವೃತ್ತಿಜೀವನದ ಹಲವು ಹಂತಗಳಲ್ಲಿ ಆಗಾಗ ವಿರಾಮ ಪಡೆಯುವುದು. ಭಾರತದ ಯುವಕರು 40ನೇ ವಯಸ್ಸಲ್ಲಿ ಮತ್ತು ಮತ್ತೊಮ್ಮೆ 50ನೇ ವಯಸ್ಸಲ್ಲಿ ‘ಮಿನಿ ನಿವೃತ್ತಿ’ ಪಡೆಯಲು ಒಲವು ತೋರುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿ, ಸ್ಥಿತಿವಂತರಾದ ಉದ್ಯೋಗಿಗಳಂತೂ 40-45ನೇ ವಯಸ್ಸಿಗೆ ನಿವೃತ್ತಿಯಾಗಿ, ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಳ್ಳುತ್ತಿದ್ದಾರೆ ಅಥವಾ ಹಣ ಸಂಪಾದನೆಯ ದಾರಿಯನ್ನು ತೊರೆದು ಸಾರ್ಥಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಡಿಜಿಟಲ್ ನೋಮ್ಯಾಡ್: ಸಾಂಪ್ರದಾಯಿಕವಾಗಿ ಅಲೆಮಾರಿ ಎಂದರ್ಥ. ನಿರ್ದಿಷ್ಟ ಕಚೇರಿ ಅಥವಾ ಸ್ಥಳಕ್ಕೆ ಅಂಟಿಕೊಳ್ಳದೆ, ಪ್ರಪಂಚದ ಯಾವುದೇ ಮೂಲೆಯಲ್ಲಿದ್ದೂ, ಇಂಟರ್ನೆಟ್ ಸಹಾಯದಿಂದ ಕೆಲಸಮಾಡುವ ಜೀವನಶೈಲಿ. ಡಿಜಿಟಲ್ ನೋಮ್ಯಾಡ್ಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುತ್ತ ಅಲ್ಲಿನ ಕೆಫೆ, ಗ್ರಂಥಾಲಯ ಅಥವಾ ಕೋ-ರ್ವಂಗ್ ಸ್ಪೇಸ್ನಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಕೋವಿಡ್ ಅವಧಿಯ ನಂತರ ಈ ಟ್ರೆಂಡ್ ಹೆಚ್ಚಿದೆ. ಇದು ‘ವರ್ಕೆಶನ್’ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿದೆ.

ಉದ್ಯೋಗ ಮಾರುಕಟ್ಟೆ ಸ್ಥಿತಿ

  • ಲಿಂಕ್ಡ್ಇನ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ 62ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಯಾವುದಾದರೊಂದು ಹಂತದಲ್ಲಿ ವಿರಾಮ ತೆಗೆದುಕೊಂಡಿದ್ದಾರೆ.
  • ಉದ್ಯೋಗದಾತರ ಬದಲಾದ ದೃಷ್ಟಿಕೋನ: ಶೇಕಡ 90ರಷ್ಟು ಕಂಪನಿಗಳ ಹೈರಿಂಗ್ ಮ್ಯಾನೇಜರ್ಗಳು ಕರಿಯರ್ ಬ್ರೇಕ್ ಪಡೆದ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲು ಈಗ ಸಿದ್ಧರಿದ್ದಾರೆ.
  • ಮಹಿಳೆಯರ ಪಾತ್ರ: ಈ ಹಿಂದೆ ಕೇವಲ ಕೌಟುಂಬಿಕ ಕಾರಣಗಳಿಗಾಗಿ ಮಹಿಳೆಯರು ಬ್ರೇಕ್ ತೆಗೆದುಕೊಳ್ಳುತ್ತಿದ್ದರು, ಆದರೆ ಈಗ ಶೇ. 40ರಷ್ಟು ಪುರುಷರು ಕೂಡ ವೈಯಕ್ತಿಕ ಬೆಳವಣಿಗೆಗಾಗಿ ವಿರಾಮ ಪಡೆಯುತ್ತಿದ್ದಾರೆ.

ಹೆಚ್ಚುತ್ತದೆ ಉತ್ಪಾದಕತೆ

ಕರಿಯರ್ ಬ್ರೇಕ್ ಕೇವಲ ವಿಶ್ರಾಂತಿಯಲ್ಲ, ಅದು ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ತಂತ್ರವಾಗಿದೆ. ನಿರಂತರ ಏಕತಾನತೆಯಿಂದ ಹೊರಬಂದಾಗ ಮಿದುಳು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತದೆ. ಪ್ರಯಾಣ ಮತ್ತು ಹೊಸ ಹವ್ಯಾಸಗಳು ಸೃಜನಶೀಲತೆಯನ್ನು ಪೊರೆಯುತ್ತವೆ. ಅಲ್ಲದೆ, ಈ ಸಮಯದಲ್ಲಿ ಅನೇಕರು ಡೇಟಾ ಸೈನ್ಸ್, ಕಲೆ ಅಥವಾ ವಿದೇಶಿ ಭಾಷೆಗಳಂತಹ ಹೊಸ ಕೋರ್ಸ್ಗಳನ್ನು ಪೂರೈಸಿ ತಮ್ಮ ‘ರೆಸ್ಯೂಮ್ ಬಲಪಡಿಸಿಕೊಳ್ಳುತ್ತಾರೆ. ಕೆಲಸದ ಒತ್ತಡದಿಂದ ಮುಕ್ತರಾದಾಗ ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಬೆಳೆಯುತ್ತದೆ, ಇದು ವಾಪಸ್ ಕೆಲಸಕ್ಕೆ ಸೇರಿದಾಗ ಹೆಚ್ಚಿನ ವೇಗ ನೀಡುತ್ತದೆ.

ಸವಾಲುಗಳು ಮುನ್ನೆಚ್ಚರಿಕೆ...

1. ಹಣಕಾಸಿನ ಯೋಜನೆ: ಆದಾಯವಿಲ್ಲದ ಅವಧಿಗೆ ಬೇಕಾದ ಹಣಕಾಸಿನ ಸಿದ್ಧತೆ ಅತ್ಯಗತ್ಯ. ಕೆಲಸದ ಅವಧಿಯಲ್ಲೇ ಇದಕ್ಕಾಗಿ ತುರ್ತನಿಧಿ ಅಥವಾ ಪ್ರವಾಸನಿಧಿಯನ್ನು ಪ್ರತ್ಯೇತವಾಗಿ ಮಾಡಿಕೊಂಡಿರಬೇಕು. ಇಲ್ಲದಿದ್ದರೆ, ಸಂಬಳ ಇಲ್ಲದ ಸಮಯದಲ್ಲಿ ಸುತ್ತಾಟ ಅಥವಾ ಇತರ ಹವ್ಯಾಸಗಳಿಗೆ ಸಾಲ ಮಾಡಿ ಖರ್ಚು ಮಾಡಿದರೆ, ಅದರಿಂದ ಆರ್ಥಿಕ ಹೊರೆ ಹೆಚ್ಚುತ್ತದೆ ಮತ್ತು ಇದು ಹೊಸಬಗೆಯ ಒತ್ತಡವನ್ನು ಸೃಷ್ಟಿಸುತ್ತದೆ. ಹಾಗಾಗಿ, ಕೆಲಸದಿಂದ ವಿರಾಮ ಪಡೆಯುವ ಮುನ್ನ ಸೂಕ್ತ ಯೋಜನೆ ಮಾಡಿಕೊಳ್ಳುವುದು ಅವಶ್ಯ.

2. ಮಾರುಕಟ್ಟೆಯ ಬದಲಾವಣೆ: ತಂತ್ರಜ್ಞಾನ ವೇಗವಾಗಿ ಬದಲಾಗುವುದರಿಂದ, ಬ್ರೇಕ್ ಸಮಯದಲ್ಲಿ ಉದ್ಯೋಗ ಮಾರುಕಟ್ಟೆಯ ಅಪ್ಡೇಟ್ ಪಡೆದುಕೊಳ್ಳುತ್ತಿರಬೇಕು. ಇಲ್ಲದಿದ್ದರೆ, ಕೆಲಸಕ್ಕೆ ಮತ್ತೆ ಸೇರಿದ ಮೇಲೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.

ಖ್ಯಾತನಾಮರ ರಿಲ್ಯಾಕ್ಸ್ ಮಂತ್ರ

1. ಅರಿಜಿತ್ ಸಿಂಗ್: ಸುಮಧುರ ಕಂಠ ಹಾಗೂ ರೋಮ್ಯಾಂಟಿಕ್ ಹಾಡುಗಳಿಂದ ಸುಪ್ರಸಿದ್ಧರಾಗಿರುವ ಅರಿಜಿತ್ ಸಿಂಗ್ ಹಿನ್ನೆಲೆ ಹಾಡುಗಾರಿಕೆಯಿಂದ ಬ್ರೇಕ್ ಪಡೆಯುವ ಘೋಷಣೆಯನ್ನು 2026ರ ಆರಂಭದಲ್ಲೇ ಮಾಡಿದರು. ಕೆಲ ಸಮಯದ ಕಾಲ ಯಾವುದೇ ಹೊಸ ಯೋಜನೆ ಒಪ್ಪಿಕೊಳ್ಳುವುದಿಲ್ಲ ಎಂದಿರುವ ಅವರು ಬ್ರೇಕ್ ಅವಧಿಯಲ್ಲಿ ಹೊಸ ಚೈತನ್ಯ ಪಡೆದುಕೊಳ್ಳಲು ಗಮನ ನೀಡುವುದಾಗಿ ಹೇಳಿದ್ದಾರೆ.

2.ಜಾಕಿರ್ ಖಾನ್: ಖ್ಯಾತ ಸ್ಟ್ಯಾಂಡ್​ಅಪ್​ ಕಾಮಿಡಿಯನ್ ಜಾಕಿರ್ ಖಾನ್ ಕೂಡ ತಮ್ಮ ಆರೋಗ್ಯ ಮತ್ತು ಬರವಣಿಗೆ ಪ್ರೊಜೆಕ್ಟ್ಗಳ ಮೇಲೆ ಗಮನ ಕೇಂದ್ರೀಕರಿಸಲು, ಕೆಲ ಅವಧಿ ಕಾಮಿಡಿ ಶೋಗಳಿಂದ ದೂರ ಇರಲು ನಿರ್ಧರಿಸಿದ್ದಾರೆ. ನಿರಂತರ ಷೋಗಳ ಪರಿಣಾಮ ಆರೋಗ್ಯದ ಕಡೆಗೆ ಗಮನ ನೀಡಲಾಗುತ್ತಿಲ್ಲ ಹಾಗೂ ಹಳೆಯ ಬರವಣಿಗೆ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿಲ್ಲ ಎಂದಿದ್ದಾರೆ.

3. ಆಮೀರ್ ಖಾನ್: ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಬಳಿಕ ನಟ ಆಮೀರ್ ಖಾನ್ ನಟನೆಯಿಂದ ದೀರ್ಘಾವಧಿಯ ವಿರಾಮ ಪಡೆದುಕೊಂಡಿದ್ದಾರೆ. ಈ ಸಮಯವನ್ನು ಅವರು ಕುಟುಂಬದವರಿಗೆ ಮೀಸಲಾಗಿ ಇರಿಸಿದ್ದಾರೆ. ‘ಸಿತಾರೆ ಜಮೀನ್ ಪರ್’ ಸಿನಿಮಾ ಬರುವ ಮುಂಚೆಯೇ ಮುಂದಿನ ನಟನೆಗೆ ಹಾಗೂ ಹೊಸ ಯೋಜನೆಗಳಿಗೆ ಮಾನಸಿಕವಾಗಿ ಸಿದ್ಧತೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net