ಬಸ್ತಾರ್‌ನಲ್ಲಿ ನಕ್ಸಲರ ಸಾಮ್ರಾಜ್ಯ ಸಂಪೂರ್ಣ ಧ್ವಂಸ! ಕಾಂಗ್ರೆಸ್​ಸರ್ಕಾರದ ನಕ್ಸಲ್ ಪ್ರೇಮವನ್ನು ಬಯಲಿಗೆಳೆದ ಅಮಿತ್ ಷಾ! Amit Shah In Bastar

ಬಸ್ತಾರ್‌ನಲ್ಲಿ ನಕ್ಸಲರ ಸಾಮ್ರಾಜ್ಯ ಸಂಪೂರ್ಣ ಧ್ವಂಸ! ಕಾಂಗ್ರೆಸ್​ಸರ್ಕಾರದ ನಕ್ಸಲ್ ಪ್ರೇಮವನ್ನು ಬಯಲಿಗೆಳೆದ ಅಮಿತ್ ಷಾ!
ಬಸ್ತಾರ್‌ನಲ್ಲಿ ನಕ್ಸಲರ ಸಾಮ್ರಾಜ್ಯ ಸಂಪೂರ್ಣ ಧ್ವಂಸ! ಕಾಂಗ್ರೆಸ್​ಸರ್ಕಾರದ ನಕ್ಸಲ್ ಪ್ರೇಮವನ್ನು ಬಯಲಿಗೆಳೆದ ಅಮಿತ್ ಷಾ!
Published on
ರಾಯ್‌ಪುರ: ಯಾವ ಬಸ್ತಾರ್ ಅಂಗಳ ಒಂದು ಕಾಲದಲ್ಲಿ ನಕ್ಸಲೈಟ್‌ಗಳ ಭೀಕರ ಗುಂಡಿನ ಸದ್ದಿಗೆ ನಡುಗುತ್ತಿತ್ತೋ, ಅದೇ ಬಸ್ತಾರ್ ಇನ್ನು ಮುಂದೆ ದೇಶದ ಅತಿ ದೊಡ್ಡ ಅಭಿವೃದ್ಧಿಯ ಕೇಂದ್ರವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah In Bastar) ಘೋಷಿಸಿದ್ದಾರೆ.

ಬಸ್ತಾರ್ ಈಗ ಸಂಪೂರ್ಣವಾಗಿ ನಕ್ಸಲ್ ಮುಕ್ತ ಪ್ರದೇಶ

ಮಂಗಳವಾರ (ಮೇ.19) ಛತ್ತೀಸ್‌ಗಢದ ಬಸ್ತಾರ್‌ಗೆ ಭೇಟಿ ನೀಡಿದ ಗೃಹ ಸಚಿವರು, ಕೇಂದ್ರ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಸ್ತಾರ್ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಕ ಮತ್ತು ಬೃಹತ್ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಬಸ್ತಾರ್ ಈಗ ಸಂಪೂರ್ಣವಾಗಿ ನಕ್ಸಲ್ ಮುಕ್ತ ಪ್ರದೇಶವಾಗಿದೆ ಎಂದು ಹೆಮ್ಮೆಯಿಂದ ಸಾರಿದ ಅಮಿತ್ ಷಾ, ಬಸ್ತಾರ್‌ನ ಪ್ರತಿಯೊಬ್ಬ ಬುಡಕಟ್ಟು ನಿವಾಸಿಗೂ ತಲಾ ಒಂದು ಹಸು ಮತ್ತು ಒಂದು ಎಮ್ಮೆಯನ್ನು ಉಚಿತವಾಗಿ ನೀಡುವುದಾಗಿ ಮಹತ್ತರ ಆಶ್ವಾಸನೆ ನೀಡಿದ್ದಾರೆ.

ಬಸ್ತಾರ್‌ನ ಪ್ರತಿಯೊಬ್ಬ ಬುಡಕಟ್ಟು ನಿವಾಸಿಗೂ ಹಸು-ಎಮ್ಮೆ ಭಾಗ್ಯ

ಬಸ್ತಾರ್ ಭಾಗದ ಬುಡಕಟ್ಟು ಜನರ ಆರ್ಥಿಕ ಸ್ಥಿತಿಯನ್ನು ಮುಂದಿನ 5 ವರ್ಷಗಳಲ್ಲಿ ಬರೋಬ್ಬರಿ 6 ಪಟ್ಟು ಹೆಚ್ಚಿಸುವ ಭೀಕರ ಜಾಗತಿಕ ರಣತಂತ್ರವನ್ನು ಗೃಹ ಸಚಿವರು ಬಿಚ್ಚಿಟ್ಟಿದ್ದಾರೆ. ನಕ್ಸಲಿಸಂನಿಂದಾಗಿ ದಶಕಗಳ ಕಾಲ ಜರ್ಜರಿತವಾಗಿದ್ದ ಇಲ್ಲಿನ ಜನರಿಗೆ ಈಗ ಉದ್ಯೋಗ ಮತ್ತು ಸುಸ್ಥಿರ ಆದಾಯ ತಂದುಕೊಡಲು ಸರ್ಕಾರ ಮುಂದಾಗಿದೆ.
ಸ್ವಾವಲಂಬನೆ: ಬಸ್ತಾರ್‌ನ ಪ್ರತಿಯೊಬ್ಬ ಬುಡಕಟ್ಟು ವ್ಯಕ್ತಿಗೂ ತಲಾ ಒಂದು ಹಸು ಮತ್ತು ಎಮ್ಮೆಯನ್ನು ವಿತರಿಸಲಾಗುವುದು.
ಹಾಲಿನ ಕ್ರಾಂತಿ: ಇಡೀ ಬಸ್ತಾರ್ ವಿಭಾಗದಲ್ಲಿ ಶೀಘ್ರದಲ್ಲೇ ಅತ್ಯಂತ ಬೃಹತ್ ಡೈರಿ ನೆಟ್‌ವರ್ಕ್ ಸ್ಥಾಪನೆಯಾಗಲಿದ್ದು, ಹಳ್ಳಿಗಳ ಪ್ರತಿಯೊಂದು ಹನಿ ಹಾಲು ನೇರವಾಗಿ ಕೇಂದ್ರವನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗುವುದು.
ಅರಣ್ಯ ಉತ್ಪನ್ನಗಳ ಲಾಭ: ಕಾಡಿನ ಉತ್ಪನ್ನಗಳ ಸಂಪೂರ್ಣ ಆರ್ಥಿಕ ಲಾಭವನ್ನು ನೇರವಾಗಿ ಬುಡಕಟ್ಟು ಜನರಿಗೇ ತಲುಪಿಸಲು ಬೃಹತ್ ಮಾರುಕಟ್ಟೆ ಜಾಲ ರೂಪಿಸಲಾಗುತ್ತಿದೆ.

ಬಂದೂಕು ಸಂಸ್ಕೃತಿಯ ಶಿಬಿರಗಳು ಇನ್ನು 'ವೀರ ಶಹೀದ್ ಗುಂಡಾಧುರ್ ಸೇವಾ ಡೇರಾ' ಕೇಂದ್ರಗಳು!

ನಕ್ಸಲರನ್ನು ಮಟ್ಟ ಹಾಕಲು ಬಸ್ತಾರ್‌ನಲ್ಲಿ ಈ ಹಿಂದೆ ಬರೋಬ್ಬರಿ 200 ಮುಂಚೂಣಿ ಕಾರ್ಯಾಚರಣೆ ನೆಲೆಗಳನ್ನು ಸ್ಥಾಪಿಸಲಾಗಿತ್ತು. ಈಗ ಬಸ್ತಾರ್ ಸಂಪೂರ್ಣ ನಕ್ಸಲ್ ಮುಕ್ತವಾಗಿರುವುದರಿಂದ, ಈ 200 ಭದ್ರತಾ ಶಿಬಿರಗಳ ಪೈಕಿ 70 ಶಿಬಿರಗಳನ್ನು ಅತ್ಯಾಧುನಿಕ ಸಾರ್ವಜನಿಕ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇವುಗಳಿಗೆ ವೀರ ಶಹೀದ್ ಗುಂಡಾಧುರ್ ಸೇವಾ ಡೇರಾ ಎಂದು ಹೆಸರಿಡಲಾಗಿದೆ.
ಶೇ.100 ಸರ್ಕಾರಿ ಸೌಲಭ್ಯ: ಈ 70 ಕೇಂದ್ರಗಳಲ್ಲಿ ಆಧಾರ್ ಸೌಲಭ್ಯಗಳು, ಅಂಗನವಾಡಿಗಳು, ಬ್ಯಾಂಕಿಂಗ್ ಸೇವೆಗಳು, ಕೌಶಲ್ಯಾಭಿವೃದ್ಧಿ ಕೇಂದ್ರಗಳು ಹಾಗೂ ಮಹಿಳೆಯರ ಸ್ವಾವಲಂಬನಾ ಕೇಂದ್ರಗಳನ್ನು ತೆರೆಯಲಾಗುವುದು.
ಒಂದೇ ಸೂರಿನಡಿ ಸೌಲಭ್ಯ: ಈ ಹಿಂದೆ ರೇಷನ್ ಕಾರ್ಡ್ ಅಥವಾ ಯಾವುದೇ ಮೂಲಭೂತ ಸರ್ಕಾರಿ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದ ಬಸ್ತಾರ್ ಜನರಿಗೆ, ಇನ್ನು ಮುಂದೆ ಎಲ್ಲಾ ಡಿಜಿಟಲ್ ಸೇವೆಗಳು ಹಾಗೂ ಸರ್ಕಾರಿ ಯೋಜನೆಗಳ ಶೇ. 100 ರಷ್ಟು ಪ್ರಯೋಜನಗಳು ಈ ಸೇವಾ ಡೇರಾಗಳ ಮೂಲಕವೇ ಸಿಗಲಿವೆ. ಇಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಮತ್ತು ಡೈರಿ ಘಟಕಗಳೂ ಇರಲಿವೆ.

ನಕ್ಸಲಿಸಂ ನಿರ್ಮೂಲನೆಗೆ ಕಾಂಗ್ರೆಸ್ ಸಹಕರಿಸಲಿಲ್ಲ- ಅಮಿತ್ ಷಾ ವಾಗ್ದಾಳಿ!

ಪತ್ರಿಕಾಗೋಷ್ಠಿಯಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಅಮಿತ್ ಷಾ, 2023ರ ಡಿಸೆಂಬರ್ 13 ರಂದು ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಬಸ್ತಾರ್‌ನ ವಿಮೋಚನೆಗೆ ಮುನ್ನುಡಿ ಬರೆಯಲಾಗಿತ್ತು. ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಲ್ಲೆ, ಈ ಹಿಂದಿನ ಕಾಂಗ್ರೆಸ್ ಸರ್ಕಾರ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ನಮಗೆ ಕಿಂಚಿತ್ತೂ ಸಹಕಾರ ನೀಡಲಿಲ್ಲ. 2026ರ ಮೇ 19 ಬಸ್ತಾರ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಿನವಾಗಿದೆ. ಬಸ್ತಾರ್ ಅಭಿವೃದ್ಧಿಯಾಗದಿರಲು ನಕ್ಸಲಿಸಂ ಒಂದೇ ಕಾರಣವಾಗಿತ್ತು, ಈಗ ಆ ಕಂಟಕವೇ ಮುಗಿದಿದೆ ಎಂದರು.
ಇದೇ ವೇಳೆ ಬಸ್ತಾರ್ ಒಲಿಂಪಿಕ್ಸ್ ಕುರಿತು ಮಾತನಾಡಿದ ಷಾ, ಬಸ್ತಾರ್‌ನ ಸಾಂಸ್ಕೃತಿಕ ಹೆಮ್ಮೆಯನ್ನು ಎತ್ತಿಹಿಡಿಯಲು ಬಸ್ತಾರ್ ಪಾಂಡುಮ್ ಉತ್ಸವದ ಮೂಲಕ ಇಲ್ಲಿನ ಸಂಸ್ಕೃತಿಯನ್ನು ರಕ್ಷಿಸಲಾಗುವುದು. ಪ್ರಸ್ತುತ ಬಸ್ತಾರ್ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ 3,94,000 ಕ್ರೀಡಾಪಟುಗಳು ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶ್ಲಾಘಿಸಿದರು. ನಕ್ಸಲ್ ಬೆಂಬಲಿಗರು ಯಾರಾದರೂ ಬಂದರೆ ಬಸ್ತಾರ್ ಜನರು ಅವರ ಮೋಸದ ಜಾಲಕ್ಕೆ ಬೀಳಬೇಡಿ. ಕಳೆದ 50 ವರ್ಷಗಳ ದ್ರೋಹಕ್ಕೆ ಅವರನ್ನು ಮೊದಲು ಹೊಣೆಗಾರರನ್ನಾಗಿ ಮಾಡಿ ಎಂದು ಗೃಹ ಸಚಿವರು ಕರೆ ನೀಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net