ಇನ್ನು, ಮಿತವ್ಯಯದ ಭಾಗವಾಗಿ ಪ್ರಧಾನಿ ಮೋದಿ ಇಂಧನ ಬಳಕೆಯನ್ನು ತಗ್ಗಿಸುವ ಸಲಹೆಯನ್ನು ಸಹ ಮಾಡಿದ್ದಾರೆ. ಭಾರತದಲ್ಲಿ ಕಚ್ಚಾ ತೈಲದ ನಿಕ್ಷೇಪಗಳಿಲ್ಲ. ಹೀಗಾಗಿ ಇಂಧನಕ್ಕಾಗಿ ಆಮದಿನ ಮೇಲೆಯೇ ಬಹುತೇಕ ಅವಲಂಬನೆ. 2024-25ರಲ್ಲಿ ಕಚ್ಚಾ ತೈಲ ಆಮದು ಮೊತ್ತ 11.66 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಕೊಲ್ಲಿ ಕೋಲಾಹಲ ಆರಂಭವಾದ ನಂತರ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 44ರಷ್ಟು ಏರಿಕೆಯಾಗಿದೆ. ಇದೇ ರೀತಿ ಮುಂದುವರಿದರೆ, ಈ ವರ್ಷ ಕಚ್ಚಾ ತೈಲದ ಆಮದಿನ ವೆಚ್ಚ 17 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದೆಂಬುದು ತಜ್ಞರ ಅಭಿಮತ. ಇನ್ನೊಂದೆಡೆ, ಭಾರತದಲ್ಲಿ ವಾಹನಗಳ ಮಾರಾಟ ಏರಿಕೆ ಕಾಣುತ್ತಲೇ ಇದೆ. ಬದಲಾದ ಸಾಮಾಜಿಕ, ಆರ್ಥಿಕ ಸನ್ನಿವೇಶದಿಂದಾಗಿ ವಾಹನವೆಂಬುದು ಜನರನ್ನು ಒಯ್ಯುವ ಸಾಧನ ಮಾತ್ರವಾಗಿರದೆ, ಪ್ರತಿಷ್ಠೆಯ ಸಂಕೇತವೂ ಆಗಿದೆ. 2025ರ ಹೊತ್ತಿಗೆ ಭಾರತದಲ್ಲಿ ಒಟ್ಟು ವಾಹನಗಳ ಸಂಖ್ಯೆ ಸುಮಾರು 40 ಕೋಟಿ ಇತ್ತು. ಈ ಪೈಕಿ ಸರಿಸುಮಾರು ಶೇ. 75 ದ್ವಿಚಕ್ರ ವಾಹನಗಳು. ಸದ್ಯ 57 ಲಕ್ಷದಷ್ಟು ಇ-ವಾಹನಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇ-ವಾಹನ ಖರೀದಿಗೆ ಆದ್ಯತೆ ನೀಡುತ್ತಿವೆ. ಮಹಾನಗರಗಳಲ್ಲಂತೂ ಒಂದು ಮನೆಯಲ್ಲಿ ಎರಡು ಮೂರು ವಾಹನಗಳು ಸಾಮಾನ್ಯ ಎಂಬಂತಾಗಿದೆ. ಬೆಂಗಳೂರನ್ನೇ ತೆಗೆದುಕೊಂಡರೆ, 1.2 ಕೋಟಿ ವಾಹನಗಳಿವೆ. ಇವುಗಳಲ್ಲಿ ಸುಮಾರು 86 ಲಕ್ಷ ದ್ವಿಚಕ್ರ ವಾಹನಗಳಾದರೆ, 25 ಲಕ್ಷ ಕಾರುಗಳು, 3 ಲಕ್ಷ ಕ್ಯಾಬ್/ ಟ್ಯಾಕ್ಸಿಗಳು. ಅಧ್ಯಯನಗಳು ಹೇಳುವ ಪ್ರಕಾರ, ಬೆಂಗಳೂರಿನಲ್ಲಿ ವಾಹನ ದಟ್ಟಣೆ ಪ್ರಮಾಣ ಪ್ರತಿ ಕಿಲೋಮೀಟರಿಗೆ 900ರಷ್ಟು ಇದೆ. ದೆಹಲಿಗಿಂತ ಇದು ಡಬಲ್. ಪ್ರತಿನಿತ್ಯ ಸುಮಾರು 2000 ಹೊಸ ವಾಹನಗಳು ರಸ್ತೆಗಿಳಿಯುತ್ತವೆ. 2024-25ರಲ್ಲಿ 7.2 ಲಕ್ಷ ವಾಹನಗಳು ಬೆಂಗಳೂರಲ್ಲಿ ಮಾರಾಟವಾಗಿದ್ದರೆ, 2025-26ರಲ್ಲಿ 7.9 ಲಕ್ಷದಷ್ಟಿತ್ತು. ಈ ಎಲ್ಲ ಅಂಕಿಅಂಶಗಳು ಸ್ಪಷ್ಟವಾಗಿ ಹೇಳುವುದೇನೆಂದರೆ, ವಾಹನಪ್ರೀತಿ ಹೀಗೇ ಮುಂದುವರಿಯುತ್ತದೆ. ಅಂದರೆ, ದಿನಕ್ಕೆ, ತಿಂಗಳಿಗೆ, ವರ್ಷಕ್ಕೆ ಎಷ್ಟು ಇಂಧನ ಬೇಕಾಗಬಹುದು? ತೈಲಕ್ಕಾಗಿ ಆಮದನ್ನೇ ಹೆಚ್ಚಾಗಿ ಅವಲಂಬಿಸಿರುವ ದೇಶವೊಂದು ಈ ಸನ್ನಿವೇಶವನ್ನು ನಿಭಾಯಿಸುವುದು ನಿಜಕ್ಕೂ ಸವಾಲು. ಇನ್ನು ಈ ವಿಷಯಕ್ಕೆ ಇನ್ನೊಂದು ಮಜಲು ಸಹ ಇದೆ. ಭಾರತದ ವಾಹನೋದ್ಯಮವು ಬೃಹತ್ತಾಗಿ ಬೆಳೆದಿದ್ದು, 2025ರಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿತ್ತು. ಅಮೆರಿಕ (880 ಬಿಲಿಯನ್ ಡಾಲರ್ ಮೌಲ್ಯದ ವಾಹನಗಳ ಉತ್ಪಾದನೆ) ಮತ್ತು ಚೀನಾ (530 ಬಿಲಿಯನ್ ಡಾಲರ್) ನಂತರ ಭಾರತ 250 ಬಿಲಿಯನ್ ಡಾಲರ್ ಮೂಲಕ ಮೂರನೆಯ ಸ್ಥಾನದಲ್ಲಿದೆ. ಅಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವಲಯಗಳಲ್ಲಿ ಆಟೊಮೊಬೈಲ್ ಸಹ ಒಂದು.