ಮಧ್ಯಪ್ರಾಚ್ಯ ಸಂಘರ್ಷದ ಉದ್ವಿಗ್ನತೆ ಇನ್ನೂ ತಗ್ಗಿಲ್ಲ. ಪರಿಣಾಮ, ಕಚ್ಚಾ ತೈಲದ ಪೂರೈಕೆ ಜಾಲ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಇದರಿಂದ ಡಾಲರ್ ವಹಿವಾಟು ಹೆಚ್ಚಿದ್ದು, ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿದಿದೆ (1 ಡಾಲರ್ಗೆ 95ರ ಆಸುಪಾಸು). ಭಾರತ ತನ್ನ ವಿದೇಶಿ ವಿನಿಮಯ ಉಳಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೆಲೆಯೇರಿಕೆಯ ಗ್ರಾಫ್ ಊಹೆಗೂ ಮೀರಿ ಬೆಳೆದು, ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿಯೇ, ಪ್ರಧಾನಿ ನರೇಂದ್ರ ಮೋದಿಯವರೇ ಮಿತವ್ಯಯ ಮತ್ತು ಸರಳ ಜೀವನದ ಮಂತ್ರವನ್ನು ಪಠಿಸಿದ್ದಾರೆ ಮತ್ತು ತಮ್ಮ ಭದ್ರತೆಗಿದ್ದ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವ ಮೂಲಕ, ಕ್ರಮಕ್ಕೆ ಚಾಲನೆಯನ್ನೂ ನೀಡಿದ್ದಾರೆ. ಇದೇ ದಾರಿಯನ್ನು ಹಲವು ಸಚಿವರು ತುಳಿದಿದ್ದಾರೆ. ದೇಶ ಸಂಕಷ್ಟದಲ್ಲಿದ್ದಾಗಲೆಲ್ಲ ಜನರು ಸ್ಪಂದಿಸಿದ್ದಾರೆ. ಈಗ ಅಂಥದ್ದೇ ಸಂದರ್ಭವನ್ನು ಒಗ್ಗಟ್ಟಿನಿಂದ ಎದುರಿಸಲು ದೇಶ ಸನ್ನದ್ಧವಾಗಬೇಕಿದೆ.