ಈ ಬಾರಿಯ ವಿಶೇಷವೆಂದರೆ, ದ್ರಾವಿಡ ಪಕ್ಷಗಳ ನಡುವೆ ಮೂರನೇ ಶಕ್ತಿಯಾಗಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪ್ರವೇಶಿಸಿರುವುದು. ಸಾಂಪ್ರದಾಯಿಕ ಮತಬ್ಯಾಂಕ್‌ಗಳಿಗೆ ಲಗ್ಗೆ ಇಡುವ ಇವರ ಪ್ರಯತ್ನವು ಯುವ ಸಮೂಹವನ್ನು ಸೆಳೆಯುತ್ತಿದೆ. ಆದರೆ, ಇದು ಮತವಾಗಿ ಪರಿವರ್ತನೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಫಲಿತಾಂಶದ ಮೇಲೆ ಹೊಸ ಪಕ್ಷ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದಷ್ಟೇ ಕುತೂಹಲ. ತಮಿಳುನಾಡಿನ ಅಸ್ಮಿತೆ ಮತ್ತು ಭಾಷಾಪ್ರೇಮ ಎಂದಿಗೂ ಇಲ್ಲಿನ ಚುನಾವಣೆಯ ಮುಖ್ಯ ಅಸ್ತ್ರ. ಕೇಂದ್ರ ಸರ್ಕಾರದ ನೀತಿಗಳು ಮತ್ತು ರಾಜ್ಯ ಹಕ್ಕುಗಳ ನಡುವಿನ ಸಂಘರ್ಷವನ್ನು ಆಡಳಿತಾರೂಢ ಪಕ್ಷವು ‘ಒಕ್ಕೂಟ ವ್ಯವಸ್ಥೆಯ ಉಳಿವು’ ಎಂಬ ಭಾವನಾತ್ಮಕ ನೆಲೆಯಲ್ಲಿ ಬಳಸಿಕೊಳ್ಳುತ್ತಿದೆ. ಆದರೆ, ಸಾಮಾನ್ಯ ಮತದಾರನಿಗೆ ಮೂಲಭೂತ ಸಮಸ್ಯೆಗಳೇ ಆದ್ಯತೆಯಾಗಿ ಕಾಣಿಸಿದೆ. ಭಾವನೆ ಮತ್ತು ಬದುಕಿನ ನಡುವಿನ ಈ ಹಗ್ಗಜಗ್ಗಾಟದಲ್ಲಿ ಮತದಾರ ಯಾರ ಪರವಾಗಿ ವಾಲಿದ್ದಾನೆ ಎಂಬುದು ಇನ್ನೂ ನಿಗೂಢವಾಗಿದೆ. ಸ್ಥಳೀಯ ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಬಾರಿ ‘ತಟಸ್ಥ ಮತದಾರರು’ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇವರು ಯಾವುದೇ ಪಕ್ಷದ ನಿಷ್ಠಾವಂತ ಕೇಡರ್ ಆಗಿರದೆ, ಕೇವಲ ಆಡಳಿತದ ಗುಣಮಟ್ಟವನ್ನು ನೋಡಿ ಮತ ಚಲಾಯಿಸುವವರಾಗಿದ್ದಾರೆ. ಇವರ ಸಂಖ್ಯೆಯೇ ಫಲಿತಾಂಶದ ಮೇಲೆ ಅಂತಿಮ ಮುದ್ರೆ ಒತ್ತಲಿದೆ. ಮತದಾರರ ಅಭಿಪ್ರಾಯ ಕೇಳಿದರೆ ‘ಕ್ಲೋಸ್ ಫೈಟ್’ ಎಂಬುದು ಸರ್ವೇಸಾಮಾನ್ಯ ಉತ್ತರ. ‘ಒನ್ ಸೈಡ್’ ಅಲ್ಲವೇ ಅಲ್ಲ ಎಂಬುದು ಸ್ಪಷ್ಟ.