ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದ ಕನ್ನಡಿಗ: ನಿವೃತ್ತಿಯ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸ್ಟಾರ್ ಬ್ಯಾಟರ್..! KL Rahul

ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದ ಕನ್ನಡಿಗ: ನಿವೃತ್ತಿಯ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸ್ಟಾರ್ ಬ್ಯಾಟರ್..!
ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದ ಕನ್ನಡಿಗ: ನಿವೃತ್ತಿಯ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸ್ಟಾರ್ ಬ್ಯಾಟರ್..!
Published on
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಧಾರಸ್ತಂಭ, ಕನ್ನಡಿಗ ಕೆ.ಎಲ್. ರಾಹುಲ್ (KL Rahul) ತಮ್ಮ ನಿವೃತ್ತಿಯ ಕುರಿತು ನೀಡಿರುವ ಹೇಳಿಕೆ ಈಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಿವೃತ್ತಿಯ ಆಲೋಚನೆ ನನ್ನ ಮನಸ್ಸಿನಲ್ಲಿ ಬಂದಿದೆ. ಆದರೆ ಅದಕ್ಕೆ ಇನ್ನೂ ಸ್ವಲ್ಪ ಸಮಯವಿದೆ ಎಂದು ಹೇಳುವ ಮೂಲಕ ರಾಹುಲ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ.

ಕೆವಿನ್ ಪೀಟರ್‌ಸನ್ ಜೊತೆಗಿನ ಸಂದರ್ಶನದಲ್ಲಿ ಅಚ್ಚರಿಯ ಮಾತು

ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾಹುಲ್, ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಿವೃತ್ತಿಯ ಬಗ್ಗೆ ನಾನು ಯೋಚಿಸಿದ್ದೇನೆ. ಆ ನಿರ್ಧಾರ ತೆಗೆದುಕೊಳ್ಳುವುದು ನನಗೆ ಅಷ್ಟೇನೂ ಕಷ್ಟವಾಗಲಾರದು ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದಾರೆ.

ಸಮಯ ಬಂದಾಗ ನಾನು ಹೊರನಡೆಯುತ್ತೇನೆ

ಕ್ರಿಕೆಟ್ ನಂತರದ ಬದುಕಿನ ಬಗ್ಗೆಯೂ ರಾಹುಲ್ ಸ್ಪಷ್ಟನೆ ನೀಡಿದ್ದಾರೆ. ಕ್ರಿಕೆಟ್ ಆಚೆಗೂ ಒಂದು ಜೀವನವಿದೆ. ಹಾಗಾಗಿ ಆಟದಿಂದ ದೂರ ಸರಿಯುವುದು ಕಷ್ಟದ ನಿರ್ಧಾರವೇನಲ್ಲ. ಆದರೆ ಈಗಲೇ ನಾನು ನಿವೃತ್ತಿಯಾಗುತ್ತಿಲ್ಲ, ಅದಕ್ಕೆ ಇನ್ನೂ ಸಮಯವಿದೆ. ಆದರೆ ಸರಿಯಾದ ಸಮಯ ಬಂದಾಗ, ನಾನು ವಿನಾಕಾರಣ ಆಟವನ್ನು ಎಳೆಯುವುದಿಲ್ಲ ಎಂದು ರಾಹುಲ್ ಮಾರ್ಮಿಕವಾಗಿ ನುಡಿದಿದ್ದಾರೆ.

ಕನ್ನಡಿಗನ ಅದ್ಭುತ ಪಯಣ

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಆಟಗಾರನಾಗಿರುವ ರಾಹುಲ್, ಕಳೆದ ಹಲವು ವರ್ಷಗಳಿಂದ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗಾಯದ ಸಮಸ್ಯೆ ಮತ್ತು ಫಾರ್ಮ್ ಏರಿಳಿತಗಳ ನಡುವೆಯೂ ಅವರು ತಂಡಕ್ಕೆ ಮರಳುವ ರೀತಿ ಅದ್ಭುತವಾಗಿದೆ. ಪ್ರಸ್ತುತ 33ನೇ ವಯಸ್ಸಿನಲ್ಲಿರುವ ರಾಹುಲ್, ತಮ್ಮ ವೃತ್ತಿಜೀವನದ ಅಂತಿಮ ಹಂತದ ಬಗ್ಗೆ ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗುತ್ತಿರುವುದು ಅವರ ಪ್ರೌಢಿಮೆಯನ್ನು ತೋರಿಸುತ್ತದೆ.

ಅಭಿಮಾನಿಗಳಲ್ಲಿ ಆತಂಕ ಮತ್ತು ಕುತೂಹಲ

ರಾಹುಲ್​ರ ಈ ಹೇಳಿಕೆ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ರಾಹುಲ್ ಇನ್ನೂ ಕೆಲವು ವರ್ಷಗಳ ಕಾಲ ಭಾರತಕ್ಕಾಗಿ ಆಡಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದರೆ. ಒಬ್ಬ ಆಟಗಾರನಿಗೆ ತನ್ನ ನಿವೃತ್ತಿಯ ಬಗ್ಗೆ ಸ್ಪಷ್ಟತೆ ಇರುವುದು ಒಳ್ಳೆಯದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net