1990ರ ದಶಕದ ಅಂತ್ಯದಷ್ಟರಲ್ಲಿ ಇ ಮೇಲ್ ಎನ್ನುವುದು ಜನಸಾಮಾನ್ಯರಿಗೆ ನೂತನ ಸಂಪರ್ಕ ಸಾಧನವಾಗುವುದರ ಜತೆಯಲ್ಲಿ ಅವರ ವೈಯಕ್ತಿಕ ಡಿಜಿಟಲ್ ವಿಳಾಸವಾಗಿ ಹೊರಹೊಮ್ಮಿತ್ತು. ಅಂದಿನ ದಿನಗಳಲ್ಲಿ ಉಚಿತವಾಗಿ ಈ ಸೇವೆಯನ್ನು ಒದಗಿಸುವಲ್ಲಿ ಯಾಹೂ ಮತ್ತು ಹಾಟ್ವೆುೕಲ್ ನಂತಹ ಸಂಸ್ಥೆಗಳು ಮುಂಚೂಣಿಯಲ್ಲಿದ್ದವು. ಬಳಕೆದಾರರು ಅತ್ಯಂತ ಸರಳ ರೀತಿಯಲ್ಲಿ ಉಪಯೋಗಿಸುವಂತೆ ರೂಪಿಸಿದ್ದ ಈ ಸೇವೆಯ ಸರಳತೆಯೇ ನಂತರದ ದಿನಗಳಲ್ಲಿ ಅವುಗಳಿಗೆ ಕುತ್ತಾಯಿತು. ಈ ಸೇವೆಗಳ ದುರುಪಯೋಗ ಪಡೆಯುವ ನಿಟ್ಟಿನಲ್ಲಿ ರೂಪಿಸಲಾಗಿದ್ದ ಸ್ವಯಂಚಾಲಿತ (ಕು)ತಂತ್ರಾಂಶ ಅರ್ಥಾತ್ ಬಾಟ್ಗಳ ಹಾವಳಿ ಅಂತರ್ಜಾಲದಲ್ಲಿ ಹೆಚ್ಚಿದ ಕಾರಣ ಅಸಲಿ ಮತ್ತು ನಕಲಿ ಖಾತೆಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಮನುಷ್ಯರಿಗಿಂತ ಹಲವು ಪಟ್ಟು ವೇಗವಾಗಿ ಕೆಲಸ ಮಾಡುತ್ತಿದ್ದ ಈ ಬಾಟ್ಗಳು ಸಾವಿರಾರು ನಕಲಿ ಇಮೇಲ್ ಖಾತೆಗಳನ್ನು ತೆರೆಯುವುದು, ಕಾಮೆಂಟ್ ವಿಭಾಗಗಳಲ್ಲಿ ಜಾಹೀರಾತು ತುಂಬುವುದು, ಸೆಕೆಂಡುಗಳಲ್ಲಿ ಸಾವಿರಾರು ಸಿನಿಮಾ ಅಥವಾ ರೈಲು ಟಿಕೆಟ್ಗಳನ್ನು ಬುಕ್ ಮಾಡಿ ಸಾಮಾನ್ಯ ಜನರಿಗೆ ಸಿಗದಂತೆ ಮಾಡುವುದು, ವೆಬ್ಸೈಟ್ಗಳಿಂದ ಮಾಹಿತಿಯನ್ನು ಅಕ್ರಮವಾಗಿ ಕದಿಯುವಂತಹ ಕುತಂತ್ರಗಳನ್ನು ಮಾಡತೊಡಗಿದವು.