ಅಜಿತ್ ಪವಾರ್ ವಿಮಾನ ಪತನದ ಕೊನೆಯ ಕ್ಷಣದ ಭೀಕರ ದೃಶ್ಯಗಳು CCTVಯಲ್ಲಿ ಸೆರೆ! ವಿಡಿಯೋ ಇಲ್ಲಿದೆ..

 CCTV
CCTV
Published on
ಬಾರಾಮತಿ: ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಅಂತಿಮ ಕ್ಷಣಗಳ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿದ್ದು, ಘಟನೆಯ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತಿದೆ.
ಹೌದು, ಮಹಾರಾಷ್ಟ್ರದ ಪ್ರಭಾವಿ ನಾಯಕ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಆ ಭೀಕರ ವಿಮಾನ ಅಪಘಾತದ ಸಿಸಿಟಿವಿ (CCTV) ದೃಶ್ಯಾವಳಿಗಳು ಇದೀಗ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಮಾನವು ಸುರಕ್ಷಿತವಾಗಿ ಇಳಿಯುವ ಬದಲು ರನ್‌ವೇಗೆ ಅಪ್ಪಳಿಸಿ ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ ಬದಲಾದ ದೃಶ್ಯಗಳು ಎದೆ ನಡುಗಿಸುವಂತಿವೆ.

ಸಿಸಿಟಿವಿಯಲ್ಲಿ ಏನಿದೆ?

ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಸಮೀಪದ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ, 'ಲಿಯರ್‌ಜೆಟ್ 45' ವಿಮಾನವು ಭೂಸ್ಪರ್ಶ ಮಾಡಲು ವೇಗವಾಗಿ ಕೆಳಗಿಳಿಯುತ್ತಿತ್ತು. ಆದರೆ, ವಿಮಾನದ ಸಮತೋಲನ ತಪ್ಪಿದಂತೆ ಕಂಡುಬಂದಿದ್ದು, ರನ್‌ವೇ 11ರ ಆರಂಭದ (Threshold) ಭಾಗಕ್ಕೆ ಅಪ್ಪಳಿಸಿದೆ. ನೆಲಕ್ಕೆ ಅಪ್ಪಳಿಸಿದ ತಕ್ಷಣ ವಿಮಾನವು ಹಲವು ಬಾರಿ ಉರುಳಿ ಹೊತ್ತಿ ಉರಿಯಲು ಪ್ರಾರಂಭಿಸಿತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಪ್ರದೇಶವು ಕ್ಷಣಾರ್ಧದಲ್ಲಿ ದಟ್ಟವಾದ ಕಪ್ಪು ಹೊಗೆಯಿಂದ ಆವೃತವಾಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ತನಿಖಾ ಸಂಸ್ಥೆಗಳ ಕೈ ಸೇರಿದ ಮಹತ್ವದ ಸುಳಿವು
ಈ ಸಿಸಿಟಿವಿ ದೃಶ್ಯಾವಳಿಗಳು ಈಗ ವಾಯು ಅಪಘಾತ ತನಿಖಾ ಸಂಸ್ಥೆ (AAIB) ಗೆ ಪ್ರಮುಖ ಪುರಾವೆಯಾಗಿವೆ. ವಿಮಾನವು ಮೊದಲ ಯತ್ನದಲ್ಲಿ ಲ್ಯಾಂಡಿಂಗ್ ಮಾಡಲು ವಿಫಲವಾಗಿ ಎರಡನೇ ಬಾರಿ ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ. ವಿಮಾನವು ಇಳಿಯುವ ಮುನ್ನವೇ ತಾಂತ್ರಿಕವಾಗಿ ವಿಫಲವಾಗಿತ್ತೇ ಅಥವಾ ಪೈಲಟ್‌ಗಳಿಗೆ ರನ್‌ವೇ ಅಂದಾಜು ಸಿಗದೆ ಈ ಅವಘಡ ಸಂಭವಿಸಿದೆಯೇ ಎಂಬ ಬಗ್ಗೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಐವರ ಸಾವು ದೃಢ: ಕಣ್ಣೀರಲ್ಲಿ ಬಾರಾಮತಿ

ಈ ಅಗ್ನಿ ದುರಂತದಲ್ಲಿ ಅಜಿತ್ ಪವಾರ್, ಅವರ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಪೈಲಟ್‌ಗಳಾದ ಸುಮಿತ್ ಕಪೂರ್, ಸಾಂಭವಿ ಪಾಠಕ್ ಮತ್ತು ಸಿಬ್ಬಂದಿ ಪಿಂಕಿ ಮಾಲಿ ಸಾವನ್ನಪ್ಪಿದ್ದಾರೆ. ರಕ್ಷಣಾ ಸಿಬ್ಬಂದಿ ಕೇವಲ 2 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದರೂ, ಅತಿಯಾದ ತಾಪಮಾನ ಮತ್ತು ಬೆಂಕಿಯಿಂದಾಗಿ ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬಾರಾಮತಿ ಸ್ತಬ್ಧ: ಶೋಕತಪ್ತ ಬೆಂಬಲಿಗರು

ಅಜಿತ್ ಪವಾರ್ ಅವರ ಅಂತಿಮ ಕ್ಷಣಗಳ ವಿಡಿಯೋ ನೋಡಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ತಮ್ಮ ನೆಚ್ಚಿನ 'ದಾದಾ' ಇನ್ನು ನೆನಪು ಮಾತ್ರ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಬಾರಾಮತಿಯ ಜನತೆಗೆ ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net