ಶಾರದೆಯ ನೆಲೆ : ಸನಾತನಿಗಳಿಗೆ ಸಾಂಸ್ಕೃತಿಕ ವಿಜಯ

victory for Sanatanis
victory for Sanatanis
Published on

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಪಿನ ಮಾದರಿಯಲ್ಲೇ, ಜ್ಞಾನದೇವತೆಯ ನೆಲೆವೀಡಾಗಿದ್ದ ಭೋಜಶಾಲಾ ಹಲವು ಶತಮಾನಗಳ ನಂತರ ಮತ್ತೆ ಹಿಂದೂಗಳಿಗೆ ಹಸ್ತಾಂತರವಾಗಿರುವುದು ಸನಾತನ ಧರ್ಮದ ಸಾಂಸ್ಕೃತಿಕ ವಿಜಯ ಎಂದು ಇತಿಹಾಸ ತಜ್ಞರು ವ್ಯಾಖ್ಯಾನಿಸಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ಈ ತೀರ್ಪು ನೀಡುವಾಗ, ಸುಪ್ರೀಂ ಕೋರ್ಟ್ ಅಯೋಧ್ಯಾ ಪ್ರಕರಣದಲ್ಲಿ ಬಳಸಿದ್ದ ಪ್ರಮುಖ ಹತ್ತು ಕಾನೂನು ಮತ್ತು ವೈಜ್ಞಾನಿಕ ತತ್ವಗಳನ್ನು ಆಧಾರವಾಗಿಟ್ಟುಕೊಂಡು ತೀರ್ಪು ಪ್ರಕಟಿಸಿದೆ. ಇದು ಮುಂದಿನ ಇಂತಹದೇ ಇತರ ಐತಿಹಾಸಿಕ ವಿವಾದಗಳ ಪರಿಹಾರಕ್ಕೂ (ಉದಾಹರಣೆಗೆ ಜ್ಞಾನವಾಪಿ, ಮಥುರಾ) ದಾರಿದೀಪವಾಗಬಲ್ಲದು.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಭಾರತದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಹಾಗೂ ಇತ್ತೀಚಿನ ದಿನಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಒಂದು ಐತಿಹಾಸಿಕ ತಾಣ. ಪೂಜೆಯಷ್ಟೇ ಅಲ್ಲದೆ, ಈ ಜಾಗದಲ್ಲಿ ಮತ್ತೆ ಪುರಾತನ ಮಾದರಿಯ ಸಂಸ್ಕೃತ ಅಧ್ಯಯನ ಕೇಂದ್ರ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಹಾಗೂ ಎಎಸ್​ಐಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿರುವುದರಿಂದ, ಭೋಜಶಾಲಾ ಮತ್ತೆ ತನ್ನ ಹಳೆಯ ಜ್ಞಾನಕೇಂದ್ರದ ವೈಭವವನ್ನು ಪಡೆಯುವ ಮಹತ್ವದ ಅವಕಾಶ ಸಿಕ್ಕಂತಾಗಿದೆ.

1993ರಿಂದ 2003ರವರೆಗಿನ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪ್ರತಿಭಟನಾಕಾರರು ಮತ್ತು ಆಡಳಿತ ಮಂಡಳಿಯ ನಡುವೆ ನೇರ ಸಂಘರ್ಷಗಳು ಏರ್ಪಡುತ್ತಿದ್ದವು. ಆ ದಿನಗಳಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿ, ಮುನ್ನೆಚ್ಚರಿಕೆ ಬಂಧನಗಳು ಹಾಗೂ ಹೊರಗಿನ ಸಂತರ ಪ್ರವೇಶಕ್ಕೆ ನಿರ್ಬಂಧ ಹೇರುವುದು ಸಾಮಾನ್ಯ ಎಂಬಂತಾಗಿತ್ತು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರ ವಿರುದ್ಧ ‘ಶಾಂತಿ ಭಂಗ’ ಉಂಟುಮಾಡಿದ ಆರೋಪದಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ದಿಗ್ವಿಜಯ್ ಸರ್ಕಾರವು ಹಿಂದೂಗಳ ಪೂಜಾ ಹಕ್ಕುಗಳನ್ನು ನಿಯಂತ್ರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರೆ, ಕೋಮು ಸೌಹಾರ್ದ ಕಾಪಾಡುವ ಉದ್ದೇಶದಿಂದಲೇ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಸಮರ್ಥಿಸಿಕೊಳ್ಳುತ್ತಿತ್ತು.

1992ರಲ್ಲಿ ಸಾಧ್ವಿ ರಿತಂಭರಾ ಅವರ ಕರೆಗೆ ಓಗೊಟ್ಟು ಭೋಜಶಾಲಾದಲ್ಲಿ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಪಠಣವನ್ನು ಪ್ರಾರಂಭಿಸಲಾಯಿತು. ಆದರೆ, ದಿಗ್ವಿಜಯ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇದಕ್ಕೆ ನಿಷೇಧ ಹೇರಿದಾಗ ಪ್ರತಿಭಟನೆಯು ಮತ್ತಷ್ಟು ಉಗ್ರರೂಪಕ್ಕೆ ತಿರುಗಿತ್ತು. ಕೊನೆಗೂ ತೀವ್ರ ಹೋರಾಟಗಳ ನಂತರ, 2003ರ ಏಪ್ರಿಲ್ 4ರಂದು ಎಎಸ್​ಐ ನೀಡಿದ ಆದೇಶದ ಮೇರೆಗೆ ಇಲ್ಲಿ ಪ್ರತಿವಾರ ಪೂಜೆ-ಅರ್ಚನೆಗಳನ್ನು ನೆರವೇರಿಸಲು ಅಧಿಕೃತ ಮಾರ್ಗ ಮುಕ್ತವಾಯಿತು. ಈಗ, ಕೋರ್ಟ್ ಆದೇಶದ ಬಳಿಕ ಭೋಜಶಾಲಾದಲ್ಲಿ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಇತಿಹಾಸದ ಹಾದಿ

  • ಸ್ಥಾಪನೆ ಮತ್ತು ವೈಭವ: ಕ್ರಿ.ಶ. 11ನೇ ಶತಮಾನದಲ್ಲಿ (ಅಂದಾಜು 1010-1055) ಮಾಳವ ಪ್ರದೇಶವನ್ನು ಆಳುತ್ತಿದ್ದ ಪರಮಾರ ವಂಶದ ಪ್ರಖ್ಯಾತ ರಾಜನಾದ ಭೋಜನು ಈ ಭೋಜಶಾಲಾವನ್ನು ನಿರ್ಮಿಸಿದನು. ರಾಜ ಭೋಜ ಸ್ವತಃ ಮಹಾ ವಿದ್ವಾಂಸನಾಗಿದ್ದನು. ಆತನ ಜ್ಞಾನದೇವತೆಯಾದ ಸರಸ್ವತಿ (ವಾಗ್ದೇವಿ) ದೇವಸ್ಥಾನವನ್ನು ನಿರ್ಮಿಸಿ, ಅದನ್ನು ಪ್ರಮುಖ ಸಂಸ್ಕೃತ ಅಧ್ಯಯನ ಕೇಂದ್ರ ಹಾಗೂ ವಿಶ್ವವಿದ್ಯಾಲಯವಾಗಿ ರೂಪಿಸಿದನು. ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಕಾವ್ಯ, ವ್ಯಾಕರಣ ಮತ್ತು ಶಾಸ್ತ್ರಗಳ ಅಧ್ಯಯನಕ್ಕೆ ಬರುತ್ತಿದ್ದರು.

  • ಆಕ್ರಮಣ ಮತ್ತು ಮಸೀದಿಯಾಗಿ ಪರಿವರ್ತನೆ: 13ನೇ ಮತ್ತು 14ನೇ ಶತಮಾನದಲ್ಲಿ ಮುಸ್ಲಿಮ್ ಆಕ್ರಮಣಕಾರರಾದ ಅಲ್ಲಾವುದ್ದೀನ್ ಖಿಲ್ಜಿ ಮತ್ತು ನಂತರ ಮಾಳವದ ಸುಲ್ತಾನರ ಆಳ್ವಿಕೆಯಲ್ಲಿ ಈ ಜ್ಞಾನದೇಗುಲದ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಲಾಯಿತು. ಕಾಲಾನಂತರದಲ್ಲಿ ಅದರದ್ದೇ ಅವಶೇಷಗಳನ್ನು ಬಳಸಿ ಅಲ್ಲಿ ‘ಕಮಲ್ ಮೌಲಾ ಮಸೀದಿ’ಯನ್ನು ನಿರ್ಮಿಸಲಾಯಿತು ಎಂದು ಇತಿಹಾಸಕಾರರು ಗುರುತಿಸುತ್ತಾರೆ.

  • ವಾಗ್ದೇವಿ ವಿಗ್ರಹ: ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ (1800ರ ದಶಕದ ಕೊನೆಯಲ್ಲಿ) ಇಲ್ಲಿದ್ದ ಅತ್ಯಂತ ಆಪೂರ್ವ ವಾಗ್ದೇವಿ (ಸರಸ್ವತಿ) ದೇವಿಯ ಸುಂದರ ವಿಗ್ರಹವನ್ನು ಲಂಡನ್​ಗೆ ಕೊಂಡೊಯ್ಯಲಾಯಿತು. ಪ್ರಸ್ತುತ ಈ ವಿಗ್ರಹವು ಲಂಡನ್​ನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ.

ಸಾರ್ಥಕವಾದ ಹೋರಾಟ

‘ನನ್ನ ಜೀವಿತಾವಧಿಯಲ್ಲೇ ನ್ಯಾಯಾಲಯದ ಈ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಇದು ನನ್ನ ಪಾಲಿನ ದೊಡ್ಡ ಸೌಭಾಗ್ಯವೇ ಸರಿ. ಭೋಜಶಾಲಾ ಮೂಲತಃ ಹಿಂದೂ ಮಂದಿರ ಎಂಬುದನ್ನು ಸಾಬೀತುಪಡಿಸಲು ನಾನು ಮತ್ತು ನನ್ನ ಸಹೋದ್ಯೋಗಿಗಳು ಸುದೀರ್ಘ ಹೋರಾಟ ನಡೆಸಿದ್ದೇವೆ’- 95 ವರ್ಷದ ಹಿರಿಯ ಹೋರಾಟಗಾರ ವಿಮಲ್ ಗೋಧಾ ಅವರು ಈ ಮಾತುಗಳನ್ನು ಹೇಳುವಾಗ ಅವರ ಕಣ್ಣುಗಳಲ್ಲಿ ವಿಜಯದ ಮಿಂಚು ಎದ್ದು ಕಾಣುತ್ತಿತ್ತು. ಭೋಜಶಾಲಾವನ್ನು ವಾಗ್ದೇವಿ (ಸರಸ್ವತಿ) ದೇವಸ್ಥಾನ ಎಂದು ಕಾನೂನಾತ್ಮಕವಾಗಿ ಸಾಬೀತುಪಡಿಸಲು ಸುದೀರ್ಘ ಹೋರಾಟ ನಡೆಸಿದ ಪ್ರಮುಖರಲ್ಲಿ ಗೋಧಾ ಕೂಡ ಒಬ್ಬರಾಗಿದ್ದಾರೆ. ಇವರೊಂದಿಗೆ ‘ಭೋಜ ಉತ್ಸವ ಸಮಿತಿ’ ಕೂಡ ಈ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸಕ್ರಿಯವಾಗಿ ಪಾಲ್ಗೊಂಡಿತ್ತು.

‘ಈ ಹೋರಾಟವು ಪುರುಷರಿಗಷ್ಟೇ ಸೀಮಿತವಾಗಿರಲಿಲ್ಲ; ಇದರಲ್ಲಿ ಮಹಿಳೆಯರೂ ಅಭೂತಪೂರ್ವ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸಿದ್ದರು’ ಎನ್ನುವ ಗೋಧಾ, 2003ರ ಭೀಕರ ಲಾಠಿಚಾರ್ಜ್ ಘಟನೆಯನ್ನು ಮರೆತಿಲ್ಲ. ‘ಅಂದು ವಸಂತ ಪಂಚಮಿಯ ದಿನವಾಗಿತ್ತು. ನಾವು ಭೋಜಶಾಲಾದಲ್ಲಿ ಪೂಜೆ ಸಲ್ಲಿಸಲು ಬಯಸಿದ್ದೆವು, ಆದರೆ ಅಂದಿನ ದಿಗ್ವಿಜಯ್ ಸಿಂಗ್ ಸರ್ಕಾರವು ನಮ್ಮನ್ನು ತಡೆಯಲು ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿತ್ತು. ಆಡಳಿತದ ಕಣ್ಣು ತಪ್ಪಿಸಿ ವಿಭಿನ್ನ ಮಾರ್ಗಗಳ ಮೂಲಕ ಭೋಜಶಾಲಾವನ್ನು ತಲುಪುವ ತಂತ್ರದೊಂದಿಗೆ ನಾವು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡಿದ್ದೆವು. ಕೊನೆಗೂ, ಪೂಜೆ ಸಲ್ಲಿಸಿದಾಗ ಸಿಕ್ಕ ಸಂತೃಪ್ತಿ ಅನನ್ಯ’ ಎಂದು ಮಾಧ್ಯಮಗಳ ಜತೆ ಹೋರಾಟದ ನೆನಪುಗಳನ್ನು ಹಂಚಿಕೊಂಡು, ಭಾವುಕರಾದರು.

ಎಎಸ್​ಐ ಸಮೀಕ್ಷೆ

ಸ್ವಾತಂತ್ರ್ಯದ ನಂತರ ಈ ಸ್ಥಳದ ಹಕ್ಕುಗಳಿಗಾಗಿ ಕಾನೂನು ಹೋರಾಟಗಳು ನಡೆದವು. 2003ರಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ (ಎಎಸ್​ಐ) ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿತು. ಹಿಂದೂಗಳಿಗೆ ಪ್ರತಿ ಮಂಗಳವಾರ ಮತ್ತು ವಸಂತ ಪಂಚಮಿಯ ದಿನದಂದು ಪೂಜೆ ಸಲ್ಲಿಸಲು ಅವಕಾಶ, ಮುಸ್ಲಿಮರಿಗೆ ಪ್ರತಿ ಶುಕ್ರವಾರದಂದು ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಇಡೀ ಸಂಕೀರ್ಣವು ಮೂಲತಃ ವಾಗ್ದೇವಿ ದೇವಸ್ಥಾನವಾಗಿದ್ದರಿಂದ ತಮಗೆ ಸಂಪೂರ್ಣ ಪೂಜಾ ಹಕ್ಕು ಸಿಗಬೇಕೆಂದು ಹಿಂದೂ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.

ಹಿಂದೂ ಅರ್ಜಿದಾರರ ಮನವಿಯ ಮೇರೆಗೆ ಮಧ್ಯಪ್ರದೇಶ ಹೈಕೋರ್ಟ್, ಅಯೋಧ್ಯೆಯ ಮಾದರಿಯಲ್ಲೇ ಭೋಜಶಾಲಾದ ಸತ್ಯಾಸತ್ಯತೆಯನ್ನು ತಿಳಿಯಲು ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಆದೇಶಿಸಿತ್ತು. 2024ರಲ್ಲಿ ಎಎಸ್​ಐ ತಂಡವು ಕಾರ್ಬನ್ ಡೇಟಿಂಗ್, ಜಿಪಿಆರ್ ಸರ್ವೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಡಿಯೋಗ್ರಫಿ ಮೂಲಕ ಸುದೀರ್ಘ ಸಮೀಕ್ಷೆ ನಡೆಸಿ 2,200 ಪುಟಗಳ वರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ ಪ್ರಸ್ತುತ ಇರುವ ಮಸೀದಿ ರಚನೆಯನ್ನು ಹಳೆಯ ಹಿಂದೂ ದೇವಾಲಯದ ಕಂಬಗಳು, ಶಿಲ್ಪಗಳು ಮತ್ತು ಅವಶೇಷಗಳ ಮೇಲೆಯೇ ನಿರ್ಮಿಸಲಾಗಿದೆ ಎಂಬ ಬಲವಾದ ಪುರಾವೆಗಳನ್ನು ನೀಡಲಾಗಿತ್ತು.

ಹೈಕೋರ್ಟ್ ಹೇಳಿದ್ದೇನು?

ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ವಿವಾದಕ್ಕೆ ಸಂಬಂಧಿಸಿದಂತೆ ಮೇ 15ರಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದ್ದು, ಇಡೀ ಸಂಕೀರ್ಣವನ್ನು ಹಿಂದೂ ದೇವಸ್ಥಾನ ಎಂದು ಘೋಷಿಸಿದೆ. ಮಧ್ಯಪ್ರದೇಶ ಹೈಕೋರ್ಟ್​ನ ಇಂದೋರ್ ಪೀಠವು (ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರಿದ್ದ ಪೀಠ) ಸುದೀರ್ಘ ವಿಚಾರಣೆ ನಡೆಸಿ 242 ಪುಟಗಳ ತೀರ್ಪನ್ನು ಪ್ರಕಟಿಸಿತು.

  • ಸಂಪೂರ್ಣ ಸಂಕೀರ್ಣ ಹಿಂದೂ ದೇವಸ್ಥಾನ: ಇಡೀ ವಿವಾದಿತ ಭೋಜಶಾಲಾ ಸಂಕೀರ್ಣವು ರಾಜ ಭೋಜನ ಕಾಲದ ವಾಗ್ದೇವಿ (ಸರಸ್ವತಿ) ದೇವಾಲಯ, ಸಂಸ್ಕೃತ ಕಲಿಕಾ ಕೇಂದ್ರವಾಗಿತ್ತು ಎಂಬುದನ್ನು ಕೋರ್ಟ್ ಅಧಿಕೃತವಾಗಿ ಮಾನ್ಯ ಮಾಡಿದೆ.

  • ಎಎಸ್​ಐ ಆದೇಶ ರದ್ದು: ಮುಸ್ಲಿಮರಿಗೆ ಶುಕ್ರವಾರ ನಮಾಜ್ ಮಾಡಲು ಅವಕಾಶ ನೀಡಿದ್ದ 2003ರ ಎಎಸ್​ಐ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ. ಇನ್ನುಮುಂದೆ ಅಲ್ಲಿ ನಮಾಜ್ ಮಾಡಲು ಅವಕಾಶವಿರುವುದಿಲ್ಲ; ಹಿಂದೂ ಪೂಜಾ ವಿಧಿವಿಧಾನಗಳಿಗೆ ಮಾತ್ರ ಅವಕಾಶವಿರುತ್ತದೆ.

  • ಮುಸ್ಲಿಮರಿಗೆ ಪರ್ಯಾಯ ಭೂಮಿ: ಮುಸ್ಲಿಮ್ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ, ಧಾರ್ ಜಿಲ್ಲೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಬೇರೆ ಸೂಕ್ತವಾದ ಪರ್ಯಾಯ ಜಾಗವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

  • ವಾಗ್ದೇವಿ ವಿಗ್ರಹ ವಾಪಸಾತಿ: ಲಂಡನ್​ನ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಸರಸ್ವತಿ ದೇವಿಯ ಮೂಲ ವಿಗ್ರಹವನ್ನು ಭಾರತಕ್ಕೆ ಮರಳಿ ತಂದು ಭೋಜಶಾಲಾದಲ್ಲಿ ಮರುಸ್ಥಾಪಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಕರಣದ ಮಜಲುಗಳು

  • 1995: ಭೋಜಶಾಲಾ ಸಂಕೀರ್ಣದಲ್ಲಿ ಎರಡು ಸಮುದಾಯಗಳ ನಡುವೆ ವಿವಾದ ತಲೆದೋರಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಪ್ರತಿ ಮಂಗಳವಾರದಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರದಂದು ಮುಸ್ಲಿಮರಿಗೆ ನಮಾಜ್ ಮಾಡಲು ಅಧಿಕೃತವಾಗಿ ಅನುಮತಿ ನೀಡಿತು.

  • 1997: ಮೇ 12ರಂದು ಅಂದಿನ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಆದೇಶದ ಮೇರೆಗೆ ಭೋಜಶಾಲಾ ಸಂಕೀರ್ಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಇದರೊಂದಿಗೆ ಮಂಗಳವಾರದ ಪೂಜೆಗೂ ತಡೆ ನೀಡಲಾಯಿತು. ಆದರೆ, ನಂತರದ ದಿನಗಳಲ್ಲಿ ಹಿಂದೂಗಳಿಗೆ ವಸಂತ ಪಂಚಮಿಯಂದು ಪೂಜೆಗೆ ಹಾಗೂ ಮುಸ್ಲಿಮರಿಗೆ ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ನಮಾಜ್​ಗೆ ಸೀಮಿತ ಅವಕಾಶ ನೀಡಲಾಯಿತು. ಈ ತಾತ್ಕಾಲಿಕ ಆದೇಶವನ್ನು 1997ರ ಜುಲೈ 31ರಂದು ಹಿಂಪಡೆಯಲಾಯಿತು.

  • 1998: ಫೆಬ್ರವರಿ 6ರಂದು ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆಯು ಮತ್ತೊಂದು ಮಹತ್ವದ ಆದೇಶ ಹೊರಡಿಸಿ, ಮುಂದಿನ ಆದೇಶದವರೆಗೆ ಭೋಜಶಾಲಾ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿತು.

  • 2003: ಭೋಜಶಾಲಾದಲ್ಲಿ ಮಂಗಳವಾರದ ಪೂಜೆಗೆ ಆಡಳಿತ ಮಂಡಳಿ ಮರು-ಅನುಮತಿ ನೀಡಿತು. ಆದರೆ ಹೂವು-ಮಾಲೆಗಳನ್ನು ಕೊಂಡೊಯ್ಯದಂತೆ ಕಟ್ಟುನಿಟ್ಟಿನ ಷರತ್ತು ವಿಧಿಸಲಾಯಿತು ಹಾಗೂ ಪ್ರವಾಸಿಗರ ಭೇಟಿಗೆ ಮುಕ್ತ ಅವಕಾಶ ನೀಡಲಾಯಿತು. ಆದರೆ, ಫೆಬ್ರವರಿ 18ರಂದು ಭೋಜಶಾಲಾ ಆವರಣದಲ್ಲಿ ದಿಢೀರ್ ಕೋಮು ಉದ್ವಿಗ್ನತೆ ಸೃಷ್ಟಿಯಾಗಿ, ಅದು ಹಿಂಸಾಚಾರಕ್ಕೆ ತಿರುಗಿತು.

  • 2013: ವಸಂತ ಪಂಚಮಿ ಮತ್ತು ಶುಕ್ರವಾರದ ನಮಾಜ್ ಒಂದೇ ದಿನ ಎದುರಾಗಿದ್ದರಿಂದ ಧಾರ್ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರಿತು. ಧಾರ್ಮಿಕ ವಿಧಿವಿಧಾನ ಮುಗಿಯುವ ಮುನ್ನ ಜಾಗವನ್ನು ಬಿಟ್ಟುಕೊಡಲು ಹಿಂದೂಗಳು ನಿರಾಕರಿಸಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ತೀವ್ರ ಲಾಠಿಚಾರ್ಜ್ ನಡೆಸಿದ್ದಲ್ಲದೆ, ಗಾಳಿಯಲ್ಲಿ ಗುಂಡು ಹಾರಿಸಿದರು.

  • 2016: ಶುಕ್ರವಾರದ ದಿನವೇ ವಸಂತ ಪಂಚಮಿ ಹಬ್ಬ ಬಂದಿದ್ದರಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೆ ಭೋಜಶಾಲಾ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಬಾರಿ ಅಘೋಷಿತ ಕರ್ಫ್ಯೂ ಮಾದರಿಯ ಕಠಿಣ ದಿನಗಳನ್ನು ಜನರು ಎದುರಿಸುವಂತಾಗಿದೆ.

  • 2024: ಭೋಜಶಾಲಾ ಆವರಣದಲ್ಲಿ ಎಎಸ್​ಐ 98 ದಿನಗಳ ಕಾಲ ವೈಜ್ಞಾನಿಕ ಆಧಾರದಲ್ಲಿ ಸಮೀಕ್ಷೆ ನಡೆಸಿತು.

  • 2026 ಮೇ 15: ಭೋಜಶಾಲಾ ಸಂಕೀರ್ಣದ ಪ್ರದೇಶ ಹಿಂದೂಗಳಿಗೆ ಸೇರಿದ್ದು ಮತ್ತು ಇಲ್ಲಿ ವಾಗ್ದೇವಿಯ ದೇವಸ್ಥಾನವಿತ್ತು ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net