

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮಂಗಳವಾರ ಅಂತಿಮಗೊಂಡಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಎರಡೂ ಕಡೆಯವರಿಗೆ ಎಷ್ಟು ಮಹತ್ವದ್ದೆಂದರೆ ಅದನ್ನು ‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಲಾಗಿದೆ. ಇದೊಂದು ಮಹತ್ವಾಕಾಂಕ್ಷಿ ಒಪ್ಪಂದ ಆಗಿರುವು ದರಿಂದಲೇ ಇದು ಕೆಲವು ಅಡ್ಡಿ- ಆತಂಕಗಳಿಂದಾಗಿ ಸ್ಥಗಿತಗೊಂಡಿತ್ತು. ಬಳಿಕ ಸುದೀರ್ಘ ಮಾತುಕತೆ ನಡೆದು ಕೊನೆಗೂ ಒಪ್ಪಂದಕ್ಕೆ ಉಭಯ ದೇಶಗಳು ಒಪ್ಪಿವೆ. ಅಂದಹಾಗೆ ಇದು ಸರಾಗವಾಗಿ ನಡೆದಿದ್ದಲ್ಲ, 18 ವರ್ಷಗಳ ಕಾಲ ಸತತ ಪ್ರಯತ್ನಗಳಿಂದ ಅಂತಿಮಗೊಂಡಿರುವ ಒಪ್ಪಂದ. ಈ ‘ಮಹಾತಾಯಿ’ ನಡೆದು ಬಂದ ಹಾದಿಯ ಕಿರು ಪರಿಚಯ ಇಲ್ಲಿದೆ.
ಸುಮಾರು 200 ಕೋಟಿ ಜನಸಂಖ್ಯೆಯನ್ನು ಒಳಗೊಂಡಿರುವ ಎರಡು ಬೃಹತ್ ಆರ್ಥಿಕತೆಗಳನ್ನು ಬೆಸೆದಿರುವ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದಕ್ಕೆ ದಶಕಗಳ ಇತಿಹಾಸವಿದೆ. ಬ್ರಸೆಲ್ಸ್ನಲ್ಲಿ 2007ರಲ್ಲಿ ಈ ಕುರಿತು ಮಾತುಕತೆ ಆರಂಭವಾಗಿದ್ದು, ಸಾಕಷ್ಟು ಉತ್ಸಾಹದಲ್ಲೇ ಮುಂದುವರಿದಿತ್ತು. ಆದರೆ ಎರಡೂ ಕಡೆಯವರಿಂದ ಭಿನ್ನ ಬೇಡಿಕೆಗಳು ವ್ಯಕ್ತವಾಗಿದ್ದರಿಂದ ಈ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿತ್ತು. ಒಪ್ಪಂದದ ಬಗ್ಗೆ ಭಾರತ-ಐರೋಪ್ಯ ಒಕ್ಕೂಟದವರು ಸುಮಾರು 16 ಸುತ್ತು ಮಾತುಕತೆ ನಡೆಸಿದ್ದರೂ ಪರಸ್ಪರ ಸಹಮತ ಮೂಡದ್ದರಿಂದ 2013ರಲ್ಲಿ ಮಾತುಕತೆ ಸ್ಥಗಿತಗೊಂಡಿತ್ತು.
ತನ್ನ ತಯಾರಿಕೆಯ ಕಾರುಗಳ ಮೇಲಿನ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಬೇಕು ಎಂದು ಇಯು ಬೇಡಿಕೆ ಇರಿಸಿತ್ತು. ಆದರೆ ಭಾರತದಲ್ಲಿ ಇದು ಸ್ಥಳೀಯ ಉದ್ಯಮಕ್ಕೆ ಹೊಡೆತ ನೀಡುವ ಆತಂಕ ಇದ್ದಿದ್ದರಿಂದ ಭಾರತ ಒಪ್ಪಿರಲಿಲ್ಲ. ಸ್ಕಾಚ್ ವಿಸ್ಕಿ, ವೈನ್ ಮೇಲಿನ ಸುಂಕ ಕಡಿತಕ್ಕೂ ಇಯು ಒತ್ತಾಯಿಸಿತ್ತು. ಯುರೋಪಿನ ಕಠಿಣ ಕಾರ್ವಿುಕ ಮತ್ತು ಪರಿಸರ ಮಾನದಂಡಗಳನ್ನು ಪಾಲಿಸಬೇಕೆಂದೂ ಇಯು ಪಟ್ಟು ಹಿಡಿದಿತ್ತು. ಭಾರತ ‘ಡೇಟಾ ಸುರಕ್ಷತೆಯ ರಾಷ್ಟ್ರ’ ಎಂದು ಪರಿಗಣಿಸಲು ಇಯು ನಿರಾಕರಿಸಿತ್ತು. ಭಾರತ ಕೂಡ ತನ್ನ ಐಟಿ ವೃತ್ತಿಪರರು ಮತ್ತು ನುರಿತ ಕೆಲಸಗಾರರಿಗೆ ಯುರೋಪ್ನಲ್ಲಿ ಸುಲಭದಲ್ಲಿ ವೀಸಾ ಮತ್ತು ಕೆಲಸದ ಅನುಮತಿ ಬೇಕೆಂದು ಪಟ್ಟು ಹಿಡಿದಿತ್ತು. ರೈತರ ಹಿತಾಸಕ್ತಿ ಮುಂದಿಟ್ಟು, ಡೇರಿ-ಕೃಷಿ ಉತ್ಪನ್ನಗಳ ಆಮದಿಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಇವೆಲ್ಲ ಕಾರಣಗಳಿಂದಾಗಿ ಮಾತುಕತೆ ಸ್ಥಗಿತಗೊಂಡಿತ್ತು.
ಭೌಗೋಳಿಕ ರಾಜಕಾರಣ ಮತ್ತು ಬದಲಾದ ಆರ್ಥಿಕ ಸನ್ನಿವೇಶಗಳಿಂದಾಗಿ ಸುದೀರ್ಘ ಅಂತರದ ಬಳಿಕ ಈ ಮಾತುಕತೆಗೆ ಜೀವ ಬಂತು. ಪೋರ್ಚುಗಲ್ನಲ್ಲಿ 2021ರ ಮೇನಲ್ಲಿ ನಡೆದ ಶೃಂಗಸಭೆ ವೇಳೆ ಈ ಒಪ್ಪಂದ ಕುರಿತ ಮಾತುಕತೆ ಮುಂದುವರಿಕೆಗೆ ಬಲ ಸಿಕ್ಕಿತ್ತು. 2022ರ ಜೂನ್ನಲ್ಲಿ ಮಾತುಕತೆಗಳು ಪುನರಾರಂಭಗೊಂಡವು. ಕೋವಿಡ್ ನಂತರ ಮತ್ತು ಯೂಕ್ರೇನ್ ಯುದ್ಧದ ಬಳಿಕ ಯುರೋಪ್ ತನ್ನ ಪೂರೈಕೆ ಸರಪಳಿಗಾಗಿ ಚೀನಾದ ಮೇಲಿನ ಅವಲಂಬನೆ ಅಪಾಯಕಾರಿ ಎಂದು ಅರಿತುಕೊಂಡಿತು. ಭಾರತವೇ ಅತ್ಯುತ್ತಮ ಆಯ್ಕೆ ಎಂದು ಕಂಡುಕೊಂಡಿತು. ಅಲ್ಲದೆ, ಸುಂಕ ಏರಿಕೆ ಸೇರಿ ಅಮೆರಿಕದ ವ್ಯಾಪಾರ ನೀತಿಗಳಲ್ಲಿನ ಅನಿಶ್ಚಿತತೆ ಯುರೋಪ್ ಮತ್ತು ಭಾರತವನ್ನು ಪರಸ್ಪರ ಹತ್ತಿರವಾಗಿಸಿತು. ಕೊನೆಗೂ ಅಂತಿಮಗೊಂಡ ಒಪ್ಪಂದ ಕೇವಲ ವ್ಯಾಪಾರಕ್ಕೆ ಸೀಮಿತವಾಗಿರದೆ, ಜಾಗತಿಕ ರಾಜಕಾರಣದಲ್ಲಿ ಉಭಯತ್ರರ ಪ್ರಬಲ ಮೈತ್ರಿಯ ಸಂಕೇತವೂ ಆಯಿತು.
ಒಪ್ಪಂದಕ್ಕೆ ಭಾರತದ ಸಂಸತ್ತು ಮತ್ತು ಯೂರೋಪಿಯನ್ ಪಾರ್ಲಿಮೆಂಟ್ ಎರಡರಲ್ಲೂ ಅನುಮೋದನೆ ಸಿಗಬೇಕಿದೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ.
ಭಾರತ-ಐರೋಪ್ಯ ಒಕ್ಕೂಟ ಯೂಕ್ರೇನ್ ಯುದ್ಧದ ಕುರಿತ ತಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು, ಐತಿಹಾಸಿಕ ರಕ್ಷಣೆ ಮತ್ತು ಭದ್ರತಾ ಒಪ್ಪಂದಕ್ಕೂ ಸಹಿ ಮಾಡಿವೆ. ಈ ಮೂಲಕ ಮುಂದಿನ ಐದು ವರ್ಷಗಳಿಗಾಗಿ ಸಮಗ್ರ ವ್ಯೂಹಾತ್ಮಕ ಕಾರ್ಯಸೂಚಿ ಅಳವಡಿಸಿಕೊಳ್ಳಲಾಗಿದೆ. ಕಡಲ ಭದ್ರತೆ, ರಕ್ಷಣಾ ಉದ್ಯಮ, ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರ ಈ ಒಪ್ಪಂದದಲ್ಲಿವೆ. ರಕ್ಷಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳ ವಿನಿಮಯಕ್ಕೂ ಈ ಮೂಲಕ ಚಾಲನೆ ಸಿಕ್ಕಂತಾಗಿದೆ. ರಕ್ಷಣಾ ಉಪಕರಣಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವುದು ಮತ್ತು ಉತ್ಪಾದಿಸುವುದಕ್ಕೆ ಒತ್ತು ನೀಡಲಾಗಿದ್ದು, ಇದಕ್ಕಾಗಿ ‘ಭಾರತ-ಇಯು ರಕ್ಷಣಾ ಉದ್ಯಮ ವೇದಿಕೆ’ ಸ್ಥಾಪಿಸುವುದಕ್ಕೂ ನಿರ್ಧರಿಸಲಾಗಿದೆ.
ಭಾರತದ ರಫ್ತುದಾರರಿಗೆ, ವಿಶೇಷವಾಗಿ ಜವಳಿ, ಚರ್ಮ, ಪಾದರಕ್ಷೆ ಮತ್ತು ಆಭರಣ ಉದ್ಯಮಗಳಿಗೆ ಈ ಒಪ್ಪಂದ ಹೊಸ ಚೈತನ್ಯ ನೀಡಿದೆ. ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಶೇ.12ರಿಂದ 26ರಷ್ಟು ಸುಂಕ ಎದುರಿಸುತ್ತಿವೆ. ಇದರಿಂದಾಗಿ, ಶೂನ್ಯ ಸುಂಕದ ಲಾಭ ಪಡೆಯುತ್ತಿರುವ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಎದುರು ಭಾರತ ಹಿನ್ನಡೆ ಅನುಭವಿಸುತ್ತಿತ್ತು. ಆದರೆ ಈ ಒಪ್ಪಂದದ ಮೂಲಕ ಭಾರತಕ್ಕೂ ಶೂನ್ಯ ಸುಂಕ ಪ್ರವೇಶ ಸಿಗಲಿದ್ದು ಸ್ಪರ್ಧಾತ್ಮಕತೆ ಹೆಚ್ಚಲಿದೆ. ಇದರಿಂದ ಜವಳಿ ರಫ್ತು 7 ಬಿಲಿಯನ್ ಡಾಲರ್ನಿಂದ 30-40 ಬಿಲಿಯನ್ ಡಾಲರ್ಗೆ ಏರುವ ಮತ್ತು ಲಕ್ಷಾಂತರ ಉದ್ಯೋಗ ಸೖಷ್ಟಿಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್.
ಒಪ್ಪಂದದಲ್ಲಿ ಭಾರತ ತನ್ನ ಕೃಷಿ ಕ್ಷೇತ್ರಕ್ಕೆ ಸಂಪೂರ್ಣ ರಕ್ಷಣೆ ಒದಗಿಸಿದೆ. ಹಾಲು, ಅಕ್ಕಿ, ಗೋಧಿ, ಕಾಫಿ, ಟೀ, ಸಾಂಬಾರ ಪದಾರ್ಥಗಳ ಮೇಲಿನ ಆಮದು ಸುಂಕದಲ್ಲಿ ಯುರೋಪ್ಗೆ ಯಾವುದೇ ರಿಯಾಯಿತಿ ನೀಡಿಲ್ಲ ಎಂದು ವಾಣಿಜ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಸಣ್ಣ ರೈತರ ಹಿತದೃಷ್ಟಿಯಿಂದ ಕೋಳಿ, ಮೀನು, ಹಣ್ಣು ಮತ್ತು ತರಕಾರಿಗಳನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಭಾರತದಿಂದ ರಫ್ತಾಗುವ ಟೀ, ಕಾಫಿ ಮತ್ತು ದ್ರಾಕ್ಷಿಯಂಥ ಕೃಷಿ ಉತ್ಪನ್ನಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ ವಿಶೇಷ ಆದ್ಯತೆ ಸಿಗಲಿದೆ.
ಒಪ್ಪಂದದಿಂದಾಗಿ ಯುರೋಪ್ನ ಐಷಾರಾಮಿ ಕಾರುಗಳ ಆಮದು ಸುಂಕ ಇಳಿಯಲಿದೆ. ಯುರೋಪಿನ 25 ಲಕ್ಷ ರೂ.ಗೂ ಮೇಲ್ಪಟ್ಟ ಬೆಲೆಯ ಐಷಾರಾಮಿ ಕಾರುಗಳ ಆಮದು ಸುಂಕ ಮುಂದಿನ 10 ವರ್ಷಗಳಲ್ಲಿ ಶೇ. 110ರಿಂದ 10ಕ್ಕೆ ಇಳಿಯಲಿದೆ. ಹಾಗಂತ ಯು‘ರೋಪ್’ನ ಐಷಾರಾಮಿ ಕಾರುಗಳು ಭಾರತದಲ್ಲಿ ಅಗ್ಗದಲ್ಲಿ ಸಿಗುವಂತಾದರೂ ಅದಕ್ಕೆ ಮಿತಿಯ ‘ಹಗ್ಗ’ ಹಾಕಲಾಗಿದೆ. ಅಂದರೆ, ಈ ಮಾರಾಟಕ್ಕೆ ವಾರ್ಷಿಕ 2.5 ಲಕ್ಷ ವಾಹನಗಳ ಮಿತಿ ವಿಧಿಸಲಾಗಿದೆ. ಇದರಿಂದ ಮರ್ಸಿಡಿಸ್, ಬಿಎಂಡಬ್ಲ್ಯು, ಆಡಿ ಮುಂತಾದ ಕಂಪನಿಗಳಿಗೆ ಲಾಭವಾಗಲಿದ್ದು, ದೇಶೀಯ ವಾಹನ ರಫ್ತಿಗೂ ಅವಕಾಶ ಕಲ್ಪಿಸಲಾಗಿದೆ.
ಭಾರತ-ಇಯು ಎಫ್ಟಿಎನಿಂದಾಗಿ ಇನ್ಮುಂದೆ ಭಾರತೀಯ ಆಯುಷ್ ವೈದ್ಯರು ಯುರೋಪ್ ದೇಶಗಳಲ್ಲಿ ಅಧಿಕೃತವಾಗಿ ಸೇವೆ ನೀಡಲು ಸಾಧ್ಯವಾಗಲಿದೆ. ಕೇರಳದ ಆರ್ಯ ವೈದ್ಯಶಾಲಾ ಚಾರಿಟಬಲ್ ಹಾಸ್ಪಿಟಲ್ನಲ್ಲಿ ಬುಧವಾರ ಆಯೋಜಿಸಿದ್ದ ಶತಮಾನೋತ್ಸವದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಪಡೆದ ಪದವಿಗಳ ಆಧಾರದ ಮೇಲೆ ಯುರೋಪ್ನಲ್ಲಿ ಅಭ್ಯಾಸ ಮಾಡಲು ಅವಕಾಶ ಸಿಗುತ್ತಿರುವುದು ಆಯುರ್ವೆದ ಮತ್ತು ಯೋಗ ಕ್ಷೇತ್ರಕ್ಕೆ ದೊರೆತ ಜಾಗತಿಕ ಮನ್ನಣೆ. ಈ ಒಪ್ಪಂದ ಯುರೋಪ್ನಲ್ಲಿ ಆಯುಷ್ ವೆಲ್ನೆಸ್ ಕೇಂದ್ರಗಳನ್ನು ತೆರೆಯಲು ಮತ್ತು ಯುವ ವೈದ್ಯರಿಗೆ ವಿಪುಲ ಉದ್ಯೋಗಾವಕಾಶಗಳನ್ನು ಒದಗಿಸಲಿದೆ ಎಂದಿದ್ದಾರೆ.
ಭಾರತದ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಯುರೋಪ್ನಲ್ಲಿ ವಿಪುಲ ಅವಕಾಶಗಳನ್ನು ಈ ಒಪ್ಪಂದ ತೆರೆದಿಟ್ಟಿದೆ. ಯುರೋಪ್ಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮೇಲೆ ಯಾವುದೇ ಮಿತಿ ಇರುವುದಿಲ್ಲ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನುರಿತ ಕೆಲಸಗಾರರಿಗೆ ಯುರೋಪ್ನಲ್ಲಿ ನೆಲೆಸಲು ಮತ್ತು ಕೆಲಸ ಮಾಡಲು ವೀಸಾ ಪ್ರಕ್ರಿಯೆ ಸರಳಗೊಳ್ಳಲಿದೆ. ಮಾಹಿತಿ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ಉನ್ನತ ಶಿಕ್ಷಣ ಕ್ಷೇತ್ರದ ವೃತ್ತಿಪರರಿಗೆ ಯುರೋಪ್ ಪ್ರವೇಶ ಸುಲಭವಾಗಲಿದೆ. ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದಂತೆ, ಹಾಸ್ಪಿಟಾಲಿಟಿ ವಿದ್ಯಾರ್ಥಿಗಳಿಗೆ ಯುರೋಪ್ನಲ್ಲಿ ತರಬೇತಿ ಪಡೆಯಲಿಕ್ಕೂ ಇದು ಉತ್ತಮ ಅವಕಾಶವಾಗಬಲ್ಲದು. ವಿಶ್ವದ ಅತಿದೊಡ್ಡ ಸಂಶೋಧನಾ ಕಾರ್ಯಕ್ರಮವಾದ ‘ಹೊರೈಜನ್ ಯುರೋಪ್’ ಜತೆಗಿನ ಒಡಂಬಡಿಕೆ ಭಾರತದ ಸ್ಟಾರ್ಟ್ಅಪ್ಗಳು ಮತ್ತು ವಿಜ್ಞಾನಿಗಳಿಗೆ ಹೊಸ ದಾರಿಗಳನ್ನು ತೆರೆಯಲಿದೆ.
"ಭಾರತ- ಐರೋಪ್ಯ ಒಕ್ಕೂಟದ ನಡುವೆ ಏರ್ಪಟ್ಟಿರುವ ‘ಐತಿಹಾಸಿಕ’ ಮುಕ್ತ ವ್ಯಾಪಾರ ಒಪ್ಪಂದವು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ವೇಗ ನೀಡಲಿದೆ. ಇದು ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್’ ಸಂಕಲ್ಪವನ್ನು ಬಲಪಡಿಸುವುದಲ್ಲದೆ, ಲಕ್ಷಾಂತರ ಭಾರತೀಯ ಯುವಜನರಿಗೆ ಅಸಂಖ್ಯಾತ ಅವಕಾಶಗಳನ್ನು ತೆರೆಯಲಿದೆ" -ನರೇಂದ್ರ ಮೋದಿ ಪ್ರಧಾನಿ