ಪೂರ್ಣತ್ವದ ಸಾಕಾರ

ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಧರ್ಮಧ್ವಜಾರೋಹಣ
ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಧರ್ಮಧ್ವಜಾರೋಹಣ
Published on
ಶ್ರೀರಾಮ ಮಂದಿರ ನಿರ್ಮಾಣದ ಅಡಿಗಲ್ಲು (2020ರ ಆಗಸ್ಟ್​ 05), ಬಾಲರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ (2024ರ ಜನವರಿ 22) ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ನ.25) ಧರ್ಮಧ್ವಜಾರೋಹಣ ಮಾಡುವ ಮೂಲಕ ಭಾವುಕರಾದರು. 161 ಅಡಿ ಎತ್ತರದ ಗೋಪುರದ ಮೇಲೆ 42 ಅಡಿ ಎತ್ತರದ ಧ್ವಜಸ್ತಂಭದ ಮೇಲೆ 10 ಅಡಿ ಎತ್ತರದ ಕೇಸರಿ ತ್ರಿಕೋನ ಧ್ವಜ ಅಪರಾಹ್ನ 12 ಗಂಟೆಗೆ ರಾರಾಜಿಸುತ್ತಿದ್ದಂತೆ ಮೋದಿ ಎರಡು ಕೈ ಮುಗಿದು, ಶಿರಬಾಗಿ ನಮಸ್ಕರಿಸಿದರು. ಈ ಕ್ಷಣಗಳು ಎಷ್ಟು ಅಪೂರ್ವ ಮತ್ತು ಮಹತ್ವದ್ದು ಎಂಬುದನ್ನು ಅವರ ಭಾವುಕ ಕಣ್ಣುಗಳೇ ಹೇಳುತ್ತಿದ್ದವು.

ದೇಶದ ಪರಂಪರೆಯ ಬಗ್ಗೆ, ಅಸ್ಮಿತೆಯ ಬಗ್ಗೆ ಹೆಮ್ಮೆಯ ಭಾವ ಹೊಂದಿದಾಗಲೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಪ್ರತಿಪಾದಿಸಿದ ಪ್ರಧಾನಿ ಮೋದಿ, ಇನ್ನಾದರೂ ಮಾನಸಿಕ ಗುಲಾಮಿತನದಿಂದ ಹೊರಬರಬೇಕಿದೆ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕ ಮೋಹನ್​ ಭಾಗವತ್​, "ಶ್ರೀರಾಮ ಮಂದಿರ ಆಂದೋಲನದಲ್ಲಿ ಪ್ರಾಣಾರ್ಪಣೆಗೈದವರ ಆತ್ಮಗಳಿಗೆ ಇಂದು ಶಾಂತಿ ದೊರೆತಿದೆ' ಎಂದು ಧನ್ಯತಾಭಾವ ವ್ಯಕ್ತಪಡಿಸಿದರು. ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್​ ಪಟೇಲ್​ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಮಹಂತ್​ ನೃತ್ಯಗೋಪಾಲದಾಸ್​ ಜತೆಗಿದ್ದರು.
  1. ದೇವಾಲಯದ 70 ಎಕರೆ ಸಂಕೀರ್ಣದಲ್ಲಿರುವ ಶೇಷವತಾರ ದೇವಾಲಯ, ಅನ್ನಪೂರ್ಣಾ ದೇವಾಲಯ, ಸಪ್ತ ಮಂಟಪ ಸೇರಿ ಎಲ್ಲ ದೇವಾಲಯಗಳಿಗೂ ಪ್ರಧಾನಿ ಭೇಟಿ ನೀಡಿ, ದರ್ಶನ ಪಡೆದರು.
  2. ಮುಖ್ಯ ಮಂದಿರ ಸೇರಿ ಎಲ್ಲ ಮಂದಿರಗಳ ಮೇಲಿನ ಧ್ವಜವನ್ನು ವರ್ಷದಲ್ಲಿ 2 ಬಾರಿ ಬದಲಿಸಲಾಗುತ್ತದೆ. ಚೈತ್ರ ನವರಾತ್ರಿ ಉತ್ಸವ (ಏಪ್ರಿಲ್​&ಮೇ) ಮತ್ತು ಶಾರದಾ ನವರಾತ್ರಿ ಉತ್ಸವ (ಸೆಪ್ಟೆಂಬರ್​&ಅಕ್ಟೋಬರ್​) ಸಂದರ್ಭದಲ್ಲಿ ಧ್ವಜ ಬದಲಾವಣೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಡಾ.ಅನಿಲ್​ ಮಿಶ್ರ ಹೇಳಿದ್ದಾರೆ.
  3. ಬೆಳಗ್ಗೆ 10.30ರಿಂದ 12.30ರ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಮಂದಿರದಲ್ಲಿ ಪೂಜ

  • ಧ್ವಜಾರೋಹಣದ ಮುನ್ನ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕರಾದ ಮೋಹನ್​ ಭಾಗವತ್​ ಅವರೊಂದಿಗೆ ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಾಣವಾಗಿರುವ ರಾಮ ದರ್ಬಾರ್​ನಲ್ಲಿ ಪೂಜೆ ಸಲ್ಲಿಸಿ, ಆರತಿ ಮಾಡಿದರು. ಬಳಿಕ ಬಾಲರಾಮನ ದರ್ಶನ ಪಡೆದರು. ಅಲ್ಲದೆ, ಬಾಲರಾಮನಿಗೆ ವಸ್ತ್ರ ಮತ್ತು ಚಂದನವನ್ನು ಅರ್ಪಿಸಿದರು. ಚಿನ್ನ ಮತ್ತು ರೇಷ್ಮೆಯಿಂದ ತಯಾರಿಸಲಾದ ಪೀತಾಂಬರದಿಂದ ಬಾಲರಾಮ ಸುಶೋಭಿತನಾಗಿದ್ದ.
  • ಸಮಾರಂಭಕ್ಕೂ ಮುನ್ನ ಮೋದಿ ಸಾಕೇತ್​ ಕಾಲೇಜಿನಿಂದ ರಾಮಜನ್ಮಭೂಮಿಯವರೆಗೆ ಒಂದೂವರೆ ಕಿ.ಮೀ. ರೋಡ್​ ಶೋ ನಡೆಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಮೋದಿಯವರನ್ನು ಸ್ವಾಗತಿಸಿದರೆ, ಶಾಲಾ ಮಕ್ಕಳು ಹೂವು ನೀಡಿದರು.

ಭಾರತದಿಂದ ವಿಶ್ವಶಾಂತಿ ಸ್ಥಾಪನೆ

ರಥ ಮುನ್ನಡೆಸಲು ಏಳು ಅಶ್ವಗಳಿರುತ್ತವೆ. ಆದರೆ ಸಾರಥಿಯೇ ಇಲ್ಲ ಎಂದಾದರೆ ಆ ರಥ ಮುಂದೆ ಸಾಗದು. ಪ್ರಸ್ತುತ ಹಲವೆಡೆ ಇಂಥ ಸನ್ನಿವೇಶಗಳಿವೆ. ಆದ್ದರಿಂದ ಶಾಂತಿಯನ್ನು ಜಗತ್ತಿಗೆ ನೀಡುವ ಭಾರತವನ್ನು ಮತ್ತೆ ನಿರ್ಮಿಸಬೇಕಿದೆ. ವಿಶ್ವಶಾಂತಿಗೆ ಭಾರತ ತನ್ನ ಕೊಡುಗೆ ನೀಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕ ಮೋಹನ್​ ಭಾಗ್ವತ್​ ಹೇಳಿದರು. ಮಂದಿರ ನಿರ್ಮಾಣದ ಆಂದೋಲನದಲ್ಲಿ ಜನರು ಪ್ರಾಣಾರ್ಪಣೆ ಮಾಡಿದರು. ಮಂದಿರದ ನಿರ್ಮಾಣದ ಮೂಲಕ ಅವರ ಆತ್ಮಗಳಿಗೆ ಶಾಂತಿ ದೊರೆತಿರಬಹುದು. ಅಶೋಕ್​ ಸಿಂಘಾಲ್​ (ವಿಶ್ವ ಹಿಂದೂ ಪರಿಷತ್​ನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದರು) ತಮ್ಮ ಪ್ರಾಣವನ್ನೇ ಅರ್ಪಿಸಿದರು. ಈಗ ಅವರ ಆತ್ಮಕ್ಕೂ ಶಾಂತಿ ದೊರೆತಿರಬಹುದೆಂದು ಹೋರಾಟಗಾರರ ತ್ಯಾಗ, ಬಲಿದಾನವನ್ನು ಭಾಗವತ್​ ಸ್ಮರಿಸಿದರು.

ಮೋದಿ ಮಾತು- ಹೊಸಯುಗದ ಆರಂಭ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ 500 ವರ್ಷಗಳ ಹಿಂದಿನ ಸಂಕಲ್ಪ ಈಡೇರಿದೆ. ಶತಮಾನಗಳ ಗಾಯ ಮತ್ತು ನೋವು ಶಮನವಾಗುತ್ತಿದೆ. ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಯಾಗಿದ್ದು, ಇಡೀ ದೇಶ ರಾಮಮಯವಾಗಿದೆ. ಇದು ಹೊಸಯುಗದ ಆರಂಭ. ಸತ್ಯವು ಅಂತಿಮವಾಗಿ ಸುಳ್ಳಿನ ಮೇಲೆ ಜಯ ಸಾಧಿಸುತ್ತದೆ ಎನ್ನುವುದನ್ನು ಈ ಧರ್ಮಧ್ವಜ ಸೂಚಿಸುತ್ತದೆ. 190 ವರ್ಷಗಳ ಹಿಂದೆ ಮೆಕಾಲೆ ದೇಶವನ್ನು ಮಾನಸಿಕ ಗುಲಾಮಿತನಕ್ಕೆ ತಳ್ಳಿದ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ಈ ದಾಸ್ಯಬುದ್ಧಿ ಹೋಗಲಿಲ್ಲ. ಈ ಮಾನಸಿಕತೆ ಎಷ್ಟು ತೀವ್ರವಾಗಿತ್ತು ಎಂದರೆ ಹಲವು ವರ್ಷಗಳ ತನಕ ಭಗವಾನ್​ ರಾಮನನ್ನು ಕಾಲ್ಪನಿಕ ಎಂದು ಹೇಳಿಕೊಂಡು ಬರಲಾಯಿತು. ಆದರೆ, ರಾಮನ ಬಗೆಗಿನ ಶ್ರದ್ಧೆ, ನಂಬಿಕೆಗೆ ಒಂದಿಷ್ಟು ಧಕ್ಕೆ ಬರಲಿಲ್ಲ. ಸತತ ಹೋರಾಟದ ಫಲವೇ ಮಂದಿರ ನಿರ್ಮಾಣದ ಕನಸು ಸಾಕಾರವಾಗಿದೆ.

ನಮ್ಮೊಳಗಿನ ರಾಮನನ್ನು ಜಾಗೃತವಾಗಿಸೋಣ

ಭಾರತ ವಿಕಾಸದ ಹಾದಿಯಲ್ಲಿ ಮುನ್ನುಗ್ಗುತ್ತಿದೆ. 2047ಕ್ಕೆ ಸ್ವಾತಂತ್ರ್ಯಪ್ರಾಪ್ತಿಯ ನೂರು ವರ್ಷಗಳಾಗಲಿದ್ದು, ಈ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕಿದೆ. ಈಗ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಯಾಗಿದೆ. ಇನ್ನು, ಭಾರತದ ಸಮಗ್ರ ವಿಕಾಸಕ್ಕಾಗಿ, ಈ ನೆಲದ ಸಾಂಸ್ಕೃತಿಕ ಚೈತನ್ಯದ ಮುಂದುವರಿಕೆಗಾಗಿ ನಮ್ಮೊಳಗಿನ ರಾಮನನ್ನು ಜಾಗೃತಗೊಳಿಸಬೇಕಿದೆ. ನಮ್ಮ ಹೃದಯಗಳಲ್ಲಿ ರಾಮನನ್ನು ಪ್ರತಿಷ್ಠಾಪಿಸಬೇಕಿದೆ. ಮುಂದಿನ ಒಂದು ಸಾವಿರ ವರ್ಷಗಳ ಸಭ್ಯತೆ ಮತ್ತು ಅಭಿವೃದ್ಧಿಗೆ ನಾವು ಅಡಿಗಲ್ಲು ಹಾಕಬೇಕಿದೆ. ವ್ಯಕ್ತಿಗಳು ಆಶಾಶ್ವತ, ದೇಶ ಶಾಶ್ವತ. ಮುಂದೆ ನಾವು ಇರುವುದಿಲ್ಲ, ಆದರೆ ದೇಶ ಇರುತ್ತದೆ. ಹಾಗಾಗಿ, ದೇಶದ ಉತ್ಕರ್ಷಕ್ಕಾಗಿ ಏಕಭಾವದಿಂದ ಮುಂದೆ ಸಾಗಬೇಕಿದೆ.

ರಾಮನೆಂದರೆ...

ಭಾರತದ ಪ್ರತಿ ಮನೆಯಲ್ಲಿ, ಪ್ರತಿ ಭಾರತೀಯನ ಮನದಲ್ಲಿ ಮತ್ತು ಭಾರತದ ಕಣಕಣದಲ್ಲೂ ರಾಮ ನೆಲೆಸಿದ್ದಾನೆ. ಶ್ರೀರಾಮನಲ್ಲಿ ಯಾವುದೇ ಭೇದ ಇಲ್ಲ, ಅವನು ಭಾವದಿಂದ ಒಂದಾಗುತ್ತಾನೆ. ಅವನಿಗೆ ಕುಲ ಮುಖ್ಯವಲ್ಲ, ಭಕ್ತಿಯೇ ಮುಖ್ಯ. ರಾಮ ಎಂದರೆ ಆದರ್ಶ, ರಾಮ ಎಂದರೆ ಮರ್ಯಾದೆ, ರಾಮ ಎಂದರೆ ಜೀವನದ ಸವೋರ್ಚ್ಚ ನೈತಿಕತೆ, ರಾಮ ಎಂದರೆ ಧರ್ಮಪಥದಲ್ಲಿ ಸಾಗುವ ವ್ಯಕ್ತಿತ್ವ, ರಾಮ ಎಂದರೆ ಜನತೆಯ ಹಿತವನ್ನು ಕಾಪಾಡುವವನು, ರಾಮ ಎಂದರೆ ಶ್ರೇಷ್ಠ ಮೌಲ್ಯ... ಎಂದು ಮೋದಿ ವ್ಯಾಖ್ಯಾನಿಸಿದರು.

ಪೇಜಾವರ ಶ್ರೀಗಳು ಭಾಗಿ

ಮಂಗಳವಾರ ನಡೆದ ಭಗವಾಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಂದಿರದ ಟ್ರಸ್ಟಿ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ಹಿಂದೆ ಅಯೋಧ್ಯೆ ದುಸ್ಥಿತಿ ಮತ್ತು ಸಂಘರ್ಷದಲ್ಲಿ ಸಿಲುಕಿತ್ತು. ಈಗ ರಾಮನ ನಗರಿ ಅಯೋಧ್ಯೆ ಉತ್ಸವಗಳ ಜಾಗತಿಕ ರಾಜಧಾನಿಯಾಗಿ ಬದಲಾಗಿದೆ. ಇಲ್ಲಿ ಪ್ರತಿ ದಿನವೂ ಉತ್ಸವವೇ. ಪ್ರತಿ ದಿಕ್ಕಿನಲ್ಲೂ ರಾಮರಾಜ್ಯದ ಪುನರ್​ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತವೆ. ಧರ್ಮಧ್ವಜವು ರಾಷ್ಟ್ರಧರ್ಮದ ಪ್ರತಿಕವಾಗಿದೆ - ಯೋಗಿ ಆದಿತ್ಯನಾಥ
(ಉತ್ತರಪ್ರದೇಶದ ಸಿಎಂ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net