ಹಿಂಸಾಚಾರದ ಕರಾಳ ಛಾಯೆ

ಹಿಂಸಾಚಾರದ ಕರಾಳ ಛಾಯೆ
ಹಿಂಸಾಚಾರದ ಕರಾಳ ಛಾಯೆ
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದರೂ, ಹಿಂಸಾಚಾರ ನಿಲ್ಲುತ್ತಿಲ್ಲ. ಕಳೆದ 72 ಗಂಟೆಗಳಲ್ಲೇ ನಾಲ್ಕು ಹತ್ಯೆಗಳು ನಡೆದಿವೆ. ಬಿಜೆಪಿ ನಾಯಕ ಸುವೆಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ವಿುಗಳು ಬುಧವಾರ ರಾತ್ರಿ, ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದು, ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದೆ. ನಾಲ್ಕು ಗುಂಡುಗಳು ರಥ್ ದೇಹ ಹೊಕ್ಕಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬಿತಾಗಿದೆ.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ದೀರ್ಘಾವಧಿಯಿಂದ ಬೇರುಬಿಟ್ಟಿದ್ದು, ಇದರ ವಿರುದ್ಧ ಗೆಲುವು ಸಾಧಿಸುವುದು ಹೊಸ ಸರ್ಕಾರದ ಮುಂದಿನ ಕಠಿಣ ಮತ್ತು ಮೊದಲ ಸವಾಲಾಗಿದೆ. ಎಡಪಕ್ಷಗಳ ಆಳ್ವಿಕೆಯ ಆರಂಭದ ದಿನಗಳಲ್ಲಿ ಬಂಗಾಳ ಶಾಂತವಾಗಿಯೇ ಇತ್ತು. ಆದರೆ, ಎಡಪಕ್ಷಗಳ ಆಳ್ವಿಕೆ ಮುಂದುವರಿದಂತೆ, ವಿರೋಧಿ ಪಕ್ಷ ಟಿಎಂಸಿಯ ನಾಯಕರು, ಕಾರ್ಯಕರ್ತರನ್ನು ಗುರಿಯಾಗಿಸಿ ಸರಣಿ ದಾಳಿಗಳು ನಡೆಯತೊಡಗಿದವು. ಮುಂದೆ, ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದರೂ ಅದೇ ‘ವಯಲೆನ್ಸ್ ಪ್ಯಾಟರ್ನ್’ನ್ನು ಮುಂದುವರಿಸಿದ್ದು ಮಾತ್ರವಲ್ಲ, ಹಿಂಸಾಚಾರ ಹಾಗೂ ಗಂಭೀರ ಅಪರಾಧ ಪ್ರಕರಣಗಳು ಮತ್ತಷ್ಟು ಹೆಚ್ಚಾದವು. ಈ ರಾಜಕೀಯ ಹಿಂಸಾಚಾರ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದರೆ, ಎಷ್ಟೋ ಜನರನ್ನು ಜೀವಂತ ಶವದಂತೆ ಬದುಕುವಂತೆ ಮಾಡಿದೆ ಎಂಬುದು ಕಠೋರ ವಾಸ್ತವ.

ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರವು ದಶಕಗಳ ಇತಿಹಾಸವನ್ನು ಹೊಂದಿದೆ. ಬಂಗಾಳದಲ್ಲಿ ಅಧಿಕಾರವೆಂದರೆ ಅದು ಕೇವಲ ಆಡಳಿತವಲ್ಲ, ಅದು ಸಂಪನ್ಮೂಲಗಳ ಮೇಲಿನ ಹಿಡಿತ ಎಂದು ಪರಿಗಣಿಸಲ್ಪಟ್ಟಿದೆ. ಗೆದ್ದವನೇ ಎಲ್ಲವನ್ನೂ ಪಡೆಯುತ್ತಾನೆ ಎಂಬ ಮನೋಭಾವವೇ ಇಲ್ಲಿನ ಹಿಂಸಾಚಾರಕ್ಕೆ ಮೂಲ ಕಾರಣವಾಗಿದೆ. ಹಿಂಸಾಚಾರ ಕೇವಲ ಚುನಾವಣೆಗಳಿಗೆ ಸೀಮಿತವಾಗದೆ, ಸಾಮಾಜಿಕ ಮತ್ತು ಆರ್ಥಿಕ ಸ್ತರಗಳಲ್ಲೂ ಆಳವಾಗಿ ಬೇರೂರಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯವು ಕೇವಲ ಸಿದ್ಧಾಂತವಲ್ಲ, ಅದು ಅಸ್ತಿತ್ವದ ಹೋರಾಟವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ.

ಕಾಲಘಟ್ಟ

ನಕ್ಸಲ್ಬರಿ ಚಳವಳಿ (1960ರ ದಶಕ): 1967ರಲ್ಲಿ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿಯಿಂದ ಆರಂಭವಾದ ಸಶಸ್ತ್ರ ಕ್ರಾಂತಿ, ರಾಜ್ಯದಲ್ಲಿ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆಯಿತು. ಇದು ಜಮೀನ್ದಾರರು ಮತ್ತು ಕಮ್ಯುನಿಸ್ಟ್ ಕಾರ್ಯಕರ್ತರ ನಡುವಿನ ತೀವ್ರ ಸಂಘರ್ಷಕ್ಕೆ ಕಾರಣವಾಯಿತು.

ಎಡರಂಗದ ಆಡಳಿತ (1977-2011): ಸಿಪಿಐ(ಎಂ) ನೇತೃತ್ವದ ಎಡರಂಗವು ಅಧಿಕಾರಕ್ಕೆ ಬಂದ ನಂತರ, ಗ್ರಾಮ ಮಟ್ಟದಲ್ಲಿ ಪಕ್ಷದ ಹಿಡಿತ ಸಾಧಿಸಲು ‘ಕ್ಯಾಡರ್’ ವ್ಯವಸ್ಥೆಯನ್ನು ಬಳಸಿಕೊಂಡಿತು. ಈ ಅವಧಿಯಲ್ಲಿ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಹತ್ಯೆಗಳು ವರದಿಯಾಗುತ್ತಿದ್ದವು. 2007ರ ನಂದಿಗ್ರಾಮ ಮತ್ತು ಸಿಂಗೂರು ಘಟನೆಗಳು ಭೂಸ್ವಾಧೀನ ವಿರೋಧಿ ಚಳವಳಿಯ ಭಾಗವಾಗಿ ತೀವ್ರ ಹಿಂಸಾಚಾರಕ್ಕೆ ಸಾಕ್ಷಿಯಾದವು.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾಲ (2011ರಿಂದ 2026): 2011ರಲ್ಲಿ ಅಧಿಕಾರ ಬದಲಾವಣೆಯಾದರೂ ಹಿಂಸಾಚಾರ ನಿಲ್ಲಲಿಲ್ಲ. ಎಡಪಕ್ಷಗಳು ಮತ್ತು ಟಿಎಂಸಿ ನಡುವಿನ ಸಂಘರ್ಷವು ನಂತರದ ದಿನಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ನೇರ ಹಣಾಹಣಿಯಾಗಿ ಬದಲಾಗಿದೆ. ಅಲ್ಲದೆ, ಸ್ಥಳೀಯ ನಾಯಕರು ಪಕ್ಷ ಬದಲಿಸಿದಾಗ ಅವರ ಅನುಯಾಯಿಗಳ ನಡುವೆ ಸಂಘರ್ಷಗಳು ನಡೆಯುತ್ತವೆ

ರಾಜಕೀಯ ಹಿಂಸಾಚಾರದ ಸ್ವರೂಪ

ಚುನಾವಣಾ ಪೂರ್ವ ಮತ್ತು ನಂತರದ ಹಿಂಸೆ: ನಾಮಪತ್ರ ಸಲ್ಲಿಕೆಯ ವೇಳೆ ಅಡ್ಡಿಪಡಿಸುವುದು, ಮತದಾನದ ದಿನ ಬೂತ್ ವಶಪಡಿಸಿಕೊಳ್ಳುವುದು ಮತ್ತು ಫಲಿತಾಂಶದ ನಂತರ ವಿರೋಧ ಪಕ್ಷದ ಬೆಂಬಲಿಗರ ಮನೆ/ಆಸ್ತಿಗಳ ಮೇಲೆ ದಾಳಿ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ.

ಬಾಂಬ್ ತಯಾರಿಕೆ ಮತ್ತು ಬಳಕೆ: ಪಶ್ಚಿಮ ಬಂಗಾಳದ ರಾಜಕೀಯ ಸಂಘರ್ಷಗಳಲ್ಲಿ ಕಚ್ಚಾ ಬಾಂಬ್​ಗಳ ಬಳಕೆ ವ್ಯಾಪಕವಾಗಿದೆ.

ಪ್ರಮುಖ ಪರಿಣಾಮಗಳು

ಪ್ರಜಾಪ್ರಭುತ್ವದ ಮೇಲೆ ಹೊಡೆತ: ಸಾಮಾನ್ಯ ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ, ಮುಕ್ತವಾಗಿ ಮತ ಚಲಾಯಿಸಲು ಹಿಂಜರಿಯುವಂತಾಗುತ್ತದೆ.

ಆರ್ಥಿಕ ಹಿನ್ನಡೆ: ನಿರಂತರ ಬಂದ್, ಮುಷ್ಕರ ಮತ್ತು ಹಿಂಸಾಚಾರದ ಭೀತಿಯಿಂದಾಗಿ ಕೈಗಾರಿಕೆಗಳು ರಾಜ್ಯದಿಂದ ಹೊರಹೋಗಿವೆ. ಹೊಸ ಹೂಡಿಕೆದಾರರು ಪಶ್ಚಿಮ ಬಂಗಾಳಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಸಾಮಾಜಿಕ ಅಸ್ಥಿರತೆ: ಹಳ್ಳಿಗಳಲ್ಲಿ ಜನರು ರಾಜಕೀಯ ಸಿದ್ಧಾಂತಗಳ ಆಧಾರದ ಮೇಲೆ ವಿಭಜನೆಯಾಗಿದ್ದಾರೆ. ಇದು ಕುಟುಂಬಗಳ ನಡುವೆ ಮತ್ತು ನೆರೆಹೊರೆಯವರ ನಡುವೆ ದ್ವೇಷಕ್ಕೆ ಕಾರಣವಾಗಿದೆ.

ಕಾನೂನು ಸುವ್ಯವಸ್ಥೆ ಕುಸಿತ: ಪೊಲೀಸ್ ವ್ಯವಸ್ಥೆಯು ರಾಜಕೀಯ ಪ್ರಭಾವಕ್ಕೆ ಒಳಗಾಗಿದೆ ಎಂಬ ಆರೋಪಗಳು ಪದೇಪದೆ ಕೇಳಿಬರುತ್ತವೆ, ಇದು ಜನಸಾಮಾನ್ಯರಿಗೆ ನ್ಯಾಯ ಸಿಗದಂತೆ ಮಾಡುತ್ತದೆ.

ಹಿಂಸಾಚಾರಕ್ಕೆ ಕಾರಣಗಳು

ಪಕ್ಷದ ಅಧಿಪತ್ಯ: ಹಳ್ಳಿಗಳಲ್ಲಿ ಯಾವ ಪಕ್ಷದ ಬಾವುಟ ಹಾರುತ್ತದೆಯೋ ಆ ಪಕ್ಷದ ನಾಯಕರು ಅಲ್ಲಿನ ಪಡಿತರ ವ್ಯವಸ್ಥೆ, ಉದ್ಯೋಗ ಮತ್ತು ಸರ್ಕಾರಿ ಯೋಜನೆಗಳನ್ನು ನಿಯಂತ್ರಿಸುತ್ತಾರೆ. ಈ ಹಿಡಿತ ತಪ್ಪಬಾರದು ಎಂಬುದು ಹಿಂಸೆಗೆ ಮುಖ್ಯ ಕಾರಣ.

ಕಾನೂನು ಮತ್ತು ಪೊಲೀಸ್: ದಶಕಗಳಿಂದ ಇಲ್ಲಿನ ಪೊಲೀಸ್ ವ್ಯವಸ್ಥೆಯು ಆಡಳಿತ ಪಕ್ಷದ ಕೈಗೊಂಬೆಯಂತೆ ಕೆಲಸ ಮಾಡುತ್ತದೆ ಎಂಬ ಆರೋಪವಿದೆ, ಇದು ಅಪರಾಧಿಗಳಿಗೆ ಭಯವಿಲ್ಲದಂತೆ ಮಾಡಿದೆ.

ಬಡತನ ಮತ್ತು ನಿರುದ್ಯೋಗ: ನಿರುದ್ಯೋಗಿ ಯುವಕರನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಈ ಹಿಂಸಾಚಾರದ ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ.

ತೀವ್ರ ಪ್ರಾಣಹಾನಿ

ಎಡರಂಗದ ಆಡಳಿತಾವಧಿ (1977-2011): ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕೆಲವು ಸಂಶೋಧಕರ ಪ್ರಕಾರ, ಸಿಪಿಐ(ಎಂ) ನೇತೃತ್ವದ 34 ವರ್ಷಗಳ ಆಡಳಿತದಲ್ಲಿ 55,000ಕ್ಕೂ ಹೆಚ್ಚು ರಾಜಕೀಯ ವಿರೋಧಿಗಳು ಅಥವಾ ಕಾರ್ಯಕರ್ತರು ಹತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಅಂದಿನ ಸರ್ಕಾರ ಇದನ್ನು ಒಪ್ಪಿರಲಿಲ್ಲ.

ಇತ್ತೀಚಿನ ದಶಕ (2011- 2026): ಕಳೆದ 15 ವರ್ಷಗಳಲ್ಲಿ ಬಿಜೆಪಿ, ಟಿಎಂಸಿ ಮತ್ತು ಎಡಪಕ್ಷಗಳ ನಡುವಿನ ಸಂಘರ್ಷದಲ್ಲಿ ನೂರಾರು ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. 2023ರ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಕೇವಲ 1 ತಿಂಗಳ ಅವಧಿಯಲ್ಲಿ 40-50 ಜನರು ಹಿಂಸಾಚಾರಕ್ಕೆ ಬಲಿಯಾದರು.

ತಲ್ಲಣ ಸೃಷ್ಟಿಸಿದ ಪ್ರಕರಣಗಳು

ಸೈಬರಿ ಹತ್ಯಾಕಾಂಡ (1970)

ಹಿನ್ನೆಲೆ: ಇದು ಬರ್ದಮಾನ್ ಜಿಲ್ಲೆಯ ಸೈಬರಿ ಕುಟುಂಬದ ಮೇಲೆ ನಡೆದ ದಾಳಿ. ಈ ಕುಟುಂಬದ ಸದಸ್ಯರು ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದರು.

ಘಟನೆ: ಅಂದಿನ ಸಿಪಿಐ(ಎಂ) ಕಾರ್ಯಕರ್ತರು ಸೈಬರಿ ಕುಟುಂಬದ ಸದಸ್ಯರನ್ನು ಹಗಲು ಹೊತ್ತಿನಲ್ಲೇ ಹತ್ಯೆ ಮಾಡಿದ್ದರು ಎನ್ನಲಾಗಿದೆ. ಹತ್ಯೆಯ ನಂತರ ಅವರ ರಕ್ತ ಬೆರೆತ ಅನ್ನವನ್ನು ತಾಯಿಗೆ ತಿನ್ನಲು ಒತ್ತಾಯಿಸಿದ ಘಟನೆ ಇತಿಹಾಸದಲ್ಲಿ ಅತ್ಯಂತ ಭೀಕರವಾಗಿ ದಾಖಲಾಗಿದೆ. ಇದು ರಾಜ್ಯದಲ್ಲಿ ಎಡಪಕ್ಷಗಳ ಭದ್ರಕೋಟೆ ನಿರ್ವಣವಾಗುತ್ತಿದ್ದ ಕಾಲದಲ್ಲಿ ನಡೆದ ಘರ್ಷಣೆಯಾಗಿತ್ತು.

ಮಾರಿಚ್​ಝಾಂಪಿ ಹತ್ಯಾಕಾಂಡ (1979)

ಹಿನ್ನೆಲೆ: ದೇಶ ವಿಭಜನೆಯ ನಂತರ ಬಾಂಗ್ಲಾದೇಶದಿಂದ (ಅಂದಿನ ಪೂರ್ವ ಪಾಕಿಸ್ತಾನ) ಬಂದಿದ್ದ ದಲಿತ ಹಿಂದೂ ನಿರಾಶ್ರಿತರು ಸುಂದರಬನದ ಮಾರಿಚ್​ರkಾಂಪಿ ದ್ವೀಪದಲ್ಲಿ ನೆಲೆಸಿದ್ದರು.

ಏನಾಯಿತು?: ಅಂದಿನ ಎಡರಂಗ ಸರ್ಕಾರವು ಈ ನಿರಾಶ್ರಿತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿತು. ಈ ವೇಳೆ ನಡೆದ ಪೊಲೀಸ್ ಗುಂಡಿನ ದಾಳಿ ಮತ್ತು ಆರ್ಥಿಕ ದಿಗ್ಬಂಧನದಿಂದಾಗಿ ಸಾವಿರಾರು ಜನರು ಮೃತಪಟ್ಟರು ಎಂಬ ವರದಿಗಳಿವೆ. ಮಾನವ ಹಕ್ಕುಗಳ ದೃಷ್ಟಿಯಿಂದ ಇದು ಬಂಗಾಳದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿದೆ.

ಬಿಜೋನ್ ಸೇತು ಹತ್ಯಾಕಾಂಡ (1982)

ಹಿನ್ನೆಲೆ: ಕೋಲ್ಕತ್ತದ ಬಿಜೋನ್ ಸೇತುವೆಯ ಮೇಲೆ ನಡೆದ ಈ ಘಟನೆಯಲ್ಲಿ ಆನಂದ ಮಾರ್ಗಿ ಎಂಬ ಧಾರ್ವಿುಕ ಪಂಥದ ಸಂನ್ಯಾಸಿಗಳನ್ನು ಗುರಿಯಾಗಿಸಲಾಯಿತು.

ಘಟನೆ: ಸಾರ್ವಜನಿಕರ ಸಮ್ಮುಖದಲ್ಲೇ 16 ಸಂನ್ಯಾಸಿಗಳು ಮತ್ತು ಒಬ್ಬ ಸಂನ್ಯಾಸಿನಿಯನ್ನು ಜೀವಂತವಾಗಿ ದಹಿಸಲಾಯಿತು. ಈ ಘಟನೆಯ ಹಿಂದೆ ರಾಜಕೀಯ ಪ್ರೇರಿತ ಶಕ್ತಿಗಳಿದ್ದವು ಎಂಬ ಆರೋಪವಿದ್ದರೂ, ದಶಕಗಳ ಕಾಲ ಈ ಪ್ರಕರಣಕ್ಕೆ ಸರಿಯಾದ ನ್ಯಾಯ ಸಿಗಲಿಲ್ಲ.

ನಂದಿಗ್ರಾಮ, ಸಿಂಗೂರು ಹಿಂಸಾಚಾರ (2007-2008)

ಹಿನ್ನೆಲೆ: ಎಡರಂಗ ಸರ್ಕಾರವು ಕೈಗಾರಿಕೀಕರಣಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತು (ಸಿಂಗೂರಿನಲ್ಲಿ ಟಾಟಾ ನ್ಯಾನೋ ಕಾರ್ಖಾನೆ ಮತ್ತು ನಂದಿಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯಕ್ಕಾಗಿ).

ಏನಾಯಿತು?: ರೈತರ ತೀವ್ರ ಪ್ರತಿಭಟನೆ ಮತ್ತು ಪೊಲೀಸರ ಗುಂಡಿನ ದಾಳಿಯಿಂದಾಗಿ ನಂದಿಗ್ರಾಮದಲ್ಲಿ 14 ಜನರು ಪ್ರಾಣ ಕಳೆದುಕೊಂಡರು. ಈ ಘಟನೆಯು ಮಮತಾ ಬ್ಯಾನರ್ಜಿ ಅವರ ‘ಮಾ, ಮಾಟಿ, ಮಾನುಷ್’ ಚಳವಳಿಗೆ ದೊಡ್ಡ ಶಕ್ತಿ ನೀಡಿತು ಮತ್ತು ಬಂಗಾಳದಲ್ಲಿ 34 ವರ್ಷಗಳ ಕಮ್ಯುನಿಸ್ಟ್ ಆಡಳಿತದ ಪತನಕ್ಕೆ ನಾಂದಿ ಹಾಡಿತು.

ಸೈನ್ಬರಿ ಮತ್ತು ನಂತರದ ಚುನಾವಣಾ ಹಿಂಸಾಚಾರಗಳು (2018-2021)

ಹಿನ್ನೆಲೆ: ಅಧಿಕಾರ ಬದಲಾವಣೆಯ ನಂತರವೂ ಬಂಗಾಳದಲ್ಲಿ ಹಿಂಸಾಚಾರದ ಘಟನೆಗಳು ನಿರಂತರವಾಗಿ ನಡೆದವು. 2018ರ ಪಂಚಾಯತ್ ಚುನಾವಣೆ, 2021ರ ವಿಧಾನಸಭಾ ಚುನಾವಣೆ ಗಳು ಇಲ್ಲಿನ ರಾಜಕೀಯ ವೈಷಮ್ಯಕ್ಕೆ ಸಾಕ್ಷಿಯಾದವು.

ಘಟನೆ: 2021ರ ಫಲಿತಾಂಶದ ನಂತರ ರಾಜ್ಯದ ವಿವಿಧೆಡೆ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ, ಲೂಟಿ ಮತ್ತು ಹತ್ಯೆಗಳು ನಡೆದವು. ಈ ಪ್ರಕರಣಗಳು ಸುಪ್ರೀಂ ಕೋರ್ಟ್ ಮತ್ತು ಸಿಬಿಐ ತನಿಖೆಯವರೆಗೂ ತಲುಪಿವೆ.

ಯಾರೆಲ್ಲ ಬಲಿಯಾದರು?

ರಾಜಕೀಯ ಕಾರ್ಯಕರ್ತರು: ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಶೇಕಡ 80-90ರಷ್ಟು ಜನರು ರಾಜಕೀಯ ಕಾರ್ಯಕರ್ತರೇ ಆಗಿದ್ದಾರೆ. ಇವರಲ್ಲಿ ಕೆಳಮಟ್ಟದ ‘ಕ್ಯಾಡರ್’ ಅಥವಾ ಹಳ್ಳಿಯ ನಾಯಕರು ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ (2021-2024) ಕನಿಷ್ಠ 150-200 ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಹತರಾಗಿರುವ ಬಗ್ಗೆ ಪರಸ್ಪರ ಆರೋಪಗಳಿವೆ.

ಸಾಮಾನ್ಯ ಜನರು: ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲದಿದ್ದರೂ, ಬಾಂಬ್ ದಾಳಿ, ಗಲಭೆ ಅಥವಾ ಗುಂಡಿನ ದಾಳಿಗೆ ಸಿಲುಕಿ ಅನೇಕ ಸಾಮಾನ್ಯ ಜನರು ಬಲಿಯಾಗಿದ್ದಾರೆ. ಪಂಚಾಯತ್ ಚುನಾವಣೆಗಳ ಸಮಯದಲ್ಲಿ ಇವರ ಸಂಖ್ಯೆ ಹೆಚ್ಚಾಗಿರುತ್ತದೆ. ಉದಾಹರಣೆಗೆ, ಮತದಾನದ ದಿನದಂದು ಬೂತ್ ಬಳಿ ಇರುವ ಮತದಾರರು ಹಲವು ಬಾರಿ ಬಲಿಯಾಗಿದ್ದಾರೆ.

ಭದ್ರತಾ ಪಡೆಗಳು: ಗಲಭೆ ನಿಯಂತ್ರಿಸುವಾಗ ಅಥವಾ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ನಡೆದ ಸಂಘರ್ಷಗಳಲ್ಲಿ ಅನೇಕ ಪೊಲೀಸರು, ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net