ಖಾಲಿಯಾಗುತ್ತಿದೆ ಅಸ್ಸಾಂನ ಕಾಂಗ್ರೆಸ್ ಕೋಟೆ.. ಹಿರಿಯ ನಾಯಕರು ಪಕ್ಷ ಬಿಡಲು ಇದೇನಾ ಅಸಲಿ ಕಾರಣ..? | Assam Politics

Assam Politics | ಖಾಲಿಯಾಗುತ್ತಿದೆ ಅಸ್ಸಾಂನ ಕಾಂಗ್ರೆಸ್ ಕೋಟೆ.
Assam Politics | ಖಾಲಿಯಾಗುತ್ತಿದೆ ಅಸ್ಸಾಂನ ಕಾಂಗ್ರೆಸ್ ಕೋಟೆ.
Published on
Assam Politics: ಅಸ್ಸಾಂ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಭಾರಿ ಆಘಾತ ಎದುರಾಗಿದ್ದು, ದಶಕಗಳ ಕಾಲ ಪಕ್ಷದ ಬೆನ್ನೆಲುಬಾಗಿದ್ದ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಮತ್ತು ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರಂತಹ ದಿಗ್ಗಜ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ ಚಾಣಾಕ್ಷ ತಂತ್ರಗಾರಿಕೆಯ ಫಲವಾಗಿ ಅಸ್ಸಾಂ ಕಾಂಗ್ರೆಸ್ ಈಗ ನಾಯಕರಿಲ್ಲದ ಪಾಳಯವಾಗಿ ಬದಲಾಗುತ್ತಿದೆ.

ಬಿಜೆಪಿ ಸೇರಿದ ಬೋರ್ಡೊಲೊಯ್

ನಾಗಾಂವ್ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಬುಧವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ಇದರ ಬೆನ್ನಲ್ಲೇ ಅವರ ಮಗ ಪ್ರತೀಕ್ ಅವರು ಮಾರ್ಗರಿಟಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದರು. ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಬೋರ್ಡೊಲೊಯ್​ರೊಂದಿಗೆ ಮಾಜಿ ಉಪಾಧ್ಯಕ್ಷ ದಿವ್ಯಜ್ಯೋತಿ ತಾಲೂಕ್‌ದಾರ್ ಕೂಡ ರಾಜೀನಾಮೆ ನೀಡಿದ್ದು, ಕೇಸರಿ ಕಣಕ್ಕೆ ಧುಮುಕಲು ಸಿದ್ಧರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಈಗಾಗಲೇ 88 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹೊಸದಾಗಿ ಬಂದವರಿಗೆ ಮಣೆ ಹಾಕಿದೆ.
ಪ್ರದ್ಯುತ್ ಬೋರ್ಡೊಲೊಯ್: ದಿಸ್ಪುರ ಕ್ಷೇತ್ರದಿಂದ ಸ್ಪರ್ಧೆ.
ಹಿಮಂತ ಬಿಸ್ವಾ ಶರ್ಮಾ: ಜಲುಕ್ಬರಿ ಕ್ಷೇತ್ರದಿಂದ ಕಣಕ್ಕೆ.
ಭೂಪೇನ್ ಕುಮಾರ್ ಬೋರಾ: ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೂ ಬಿಜೆಪಿ ಟಿಕೆಟ್ ನೀಡಲಾಗಿದೆ.
ಸೀಟು ಹಂಚಿಕೆಯ ಒಪ್ಪಂದದಂತೆ ಒಟ್ಟು 126 ಸ್ಥಾನಗಳಲ್ಲಿ ಬಿಜೆಪಿ 89 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಮಿತ್ರಪಕ್ಷಗಳಾದ ಅಸ್ಸೋಮ್ ಗಣ ಪರಿಷತ್​ಗೆ 26 ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್​ಗೆ 11 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ.

ಕಾಂಗ್ರೆಸ್‌ನಲ್ಲಿ ಹಿಂದೂ ನಾಯಕರಿರುವುದಿಲ್ಲ – ಸಿಎಂ ಶರ್ಮಾ ವಾಗ್ದಾಳಿ

ಈ ರಾಜಕೀಯ ಸ್ಥಿತ್ಯಂತರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಕಾಂಗ್ರೆಸ್‌ನಲ್ಲಿ ಶೀಘ್ರದಲ್ಲೇ ಒಬ್ಬನೇ ಒಬ್ಬ ಹಿಂದೂ ನಾಯಕ ಉಳಿಯುವುದಿಲ್ಲ. ಕಾಂಗ್ರೆಸ್‌ನ ನೀತಿಯಿಂದ ಎಲ್ಲರೂ ಬೇಸತ್ತಿದ್ದಾರೆ. ರಾಜ್ಯದ ಜನಸಂಖ್ಯೆಯ ಬದಲಾವಣೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಕಾಂಗ್ರೆಸ್ಸಿಗರಿಗೆ ಕಾಳಜಿಯಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿ ಸೇರಿದ ಬಳಿಕ ಪ್ರದ್ಯುತ್ ಬೋರ್ಡೊಲೊಯ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಕಾಂಗ್ರೆಸ್ ನನ್ನ ಡಿಎನ್‌ಎಯಲ್ಲಿದೆ. ಕರಾಳ ದಿನಗಳಲ್ಲಿ ನಾನು ಪಕ್ಷದ ಜೊತೆಗಿದ್ದೆ. ಆದರೆ ಇಂದು ನನ್ನನ್ನು ಕಡೆಗಣಿಸಲಾಗಿದೆ, ಅವಮಾನಿಸಲಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಸ್ಕ್ರೀನಿಂಗ್ ಕಮಿಟಿ ನನ್ನ ಸಲಹೆಗಳನ್ನು ಗಾಳಿಗೆ ತೂರಿದೆ ಎಂದರು.
ವಿಶೇಷವಾಗಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯಲ್ಲಿರುವ ಇಮ್ರಾನ್ ಮಸೂದ್ ವಿರುದ್ಧ ಕಿಡಿಕಾರಿದ ಅವರು, ಮಸೂದ್ ಒಬ್ಬ ವಿಷಕಾರಿ ಮನಸ್ಸಿನ ವ್ಯಕ್ತಿ. ಅವರು ವಂದೇ ಮಾತರಂನ್ನು ಅವಮಾನಿಸುತ್ತಾರೆ ಮತ್ತು ಅಪರಾಧ ಹಿನ್ನೆಲೆಯವರಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹವರ ಕೈಗೆ ಪಕ್ಷದ ಚುಕ್ಕಾಣಿ ನೀಡಿರುವುದು ದುರದೃಷ್ಟಕರ ಎಂದು ಗುಡುಗಿದರು.

ಹೈಕಮಾಂಡ್ ಅಸಹಾಯಕತೆ

ಕಾಂಗ್ರೆಸ್ ಉಸ್ತುವಾರಿ ಭನ್ವರ್ ಜಿತೇಂದ್ರ ಸಿಂಗ್ ಮತ್ತು ಗೌರವ್ ಗೊಗೊಯ್ ಅವರು ಬೋರ್ಡೊಲೊಯ್ ಅವರನ್ನು ತಡೆಯಲು ಸತತ ಪ್ರಯತ್ನ ನಡೆಸಿದರೂ ಅದು ಫಲ ನೀಡಲಿಲ್ಲ. ಪ್ರಿಯಾಂಕಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಿ, ಸಿದ್ಧಾಂತ ಎಂಬುದು ಎಲ್ಲಕ್ಕಿಂತ ದೊಡ್ಡದು. ಕೇವಲ ಒಂದು ಟಿಕೆಟ್ ವಿಷಯಕ್ಕಾಗಿ ಪಕ್ಷ ಬಿಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ, 65% ಮುಸ್ಲಿಂ ಮತದಾರರಿರುವ ನಾಗಾಂವ್ ಕ್ಷೇತ್ರದಲ್ಲಿ ಗೆದ್ದಿದ್ದ ಬೋರ್ಡೊಲೊಯ್​​ರಂತಹ ಪ್ರಭಾವಿ ನಾಯಕನನ್ನು ಕಳೆದುಕೊಂಡಿರುವುದು ಕಾಂಗ್ರೆಸ್‌ಗೆ ಭರಿಸಲಾಗದ ನಷ್ಟವಾಗಿದೆ.

ಕಾಂಗ್ರೆಸ್ ಎಡವಿದ್ದೆಲ್ಲಿ..?

ಚುನಾವಣೆ ಬಂದಾಗಲೆಲ್ಲಾ ಕೈ ನಾಯಕರು ಬಿಜೆಪಿ ಸೇರುವುದು ಸಾಮಾನ್ಯವಾಗಿದೆ. ಇದಕ್ಕೆ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೂ, ವಾಸ್ತವದಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತ ಮತ್ತು ನಾಯಕತ್ವದ ಮೇಲಿನ ನಂಬಿಕೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾರ ಅಭಿವೃದ್ಧಿ ಮತ್ತು ಅಸ್ಮಿತೆಯ ರಾಜಕಾರಣದ ಮುಂದೆ ಕಾಂಗ್ರೆಸ್‌ನ ಸಮಾಧಾನ ನೀತಿ ಮಂಕಾಗುತ್ತಿದೆಯೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net