

ಗುಜರಾತಿನ ನ್ಯಾಯಾಲಯವೊಂದು ಇತ್ತೀಚೆಗೆ ಗೋಹತ್ಯೆ ಅಪರಾಧಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ತೀರ್ಪಿನಲ್ಲಿ ಮನುಸ್ಮೃತಿ ಮತ್ತು ವೇದಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ‘ಹಸುಗಳ ಬಾಯಿ, ಹೊಟ್ಟೆ ಮತ್ತು ಕಾಲುಗಳನ್ನು ನಿರ್ದಯವಾಗಿ ಕಡಿದು, ನಂತರ 277 ಕೆಜಿ ಮಾಂಸವನ್ನು ಹೊರತೆಗೆದು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಇವರಿಗೆ ಶಿಕ್ಷೆ ನೀಡದಿದ್ದರೆ, ಕಾಲಕ್ರಮೇಣ ಭೂಮಿಯಿಂದ ಗೋವಂಶವೇ ನಶಿಸಿಹೋಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. ಗೋಸಂರಕ್ಷಣೆಯ ನಿಟ್ಟಿನಲ್ಲಿ ಕಾನೂನಿನ ಅಂಶಗಳು ಏನು ಹೇಳುತ್ತವೆ? ಹಿಂದೆ ಗೋಸಂರಕ್ಷಣೆ ಹೇಗೆಲ್ಲ ನಡೆಯುತ್ತಿತ್ತು? ಈ ಕುರಿತಾದ ಅವಲೋಕನ ಇಲ್ಲಿದೆ.
ಗುಜರಾತಿನ ಗಾಂಧಿನಗರದಲ್ಲಿ ಜಾಮಲಾ ಎಂಬ ಹಳ್ಳಿಯಿದೆ. 2024ರ ಆಗಸ್ಟ್ 22ರಂದು ಇಲ್ಲಿನ ಮನೆ ಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದರು. ಸರ್ಕಾರಿ ಅಭಿಯೋಜಕರು (ವಕೀಲರು) ಬಂಧಿತರ ವಿರುದ್ಧ ವಾದ ಮಂಡಿಸುತ್ತ, ಮನೆಯಿಂದ ಪೊಲೀಸರು 277 ಕೆಜಿ ಗೋಮಾಂಸ, ಹಸುಗಳನ್ನು ಕಡಿಯಲು ಬಳಸುತ್ತಿದ್ದ ಆಯುಧಗಳು ಹಾಗೂ ಮಾಂಸ ಸಾಗಿಸುತ್ತಿದ್ದ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. ವಕೀಲರು ತಿಳಿಸಿದ ಪ್ರಕಾರ, ವಸೀಮ್ ಖುರೇಷಿ ಮತ್ತು ಮೊಹಮ್ಮದ್ ರಫೀಕ್ ಖುರೇಷಿ ಬಲಹೀನ ಅಥವಾ ಹಾಲು ನೀಡದ ಹಸುಗಳು ಮತ್ತು ಎಮ್ಮೆಗಳನ್ನು ಖರೀದಿಸುತ್ತಿದ್ದರು. ಆ ಬಳಿಕ ಅವರು ಅಹಮದಾಬಾದ್ನಿಂದ ನಾಲ್ವರನ್ನು ಕರೆಸಿ ಪ್ರಾಣಿಗಳನ್ನು ನಿರ್ದಯವಾಗಿ ಕಡಿಯುತ್ತಿದ್ದರು.
ಗುಲಾಮ್ ಮೊಯಿನ್ ಎಂಬ ವ್ಯಕ್ತಿ ಇವರಿಂದ ಮಾಂಸ ವನ್ನು ಖರೀದಿಸುತ್ತಿದ್ದ. ಪೊಲೀಸರು 6 ಜನರ ವಿರುದ್ಧ ಗೋಹತ್ಯೆ, ನಿಷೇಧಿತ ಮಾಂಸವನ್ನು ಹೊಂದಿರುವುದು, ಸಾಗಾಟ ಮತ್ತು ಮಾರಾಟ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ (ಅಭಿಯೋಗ ಪಕ್ಷ) 54 ಸಾಕ್ಷಿಗಳು ಮತ್ತು 18 ದಾಖಲೆ ಸಾಕ್ಷ್ಯಗಳನ್ನು ಹಾಜರುಪಡಿಸಿತು. ವಿಚಾರಣೆಯ ನಂತರ ಗಾಂಧಿನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಸೀಮ್ ಖುರೇಷಿ, ಮೊಹಮ್ಮದ್ ರಫೀಕ್ ಖುರೇಷಿ ಮತ್ತು ಅಸ್ಪಾಕ್ ಬಹೇಲಿಮ್ ಅವರನ್ನು ದೋಷಿಗಳು ಎಂದು ತೀರ್ಪು ನೀಡಿತು. ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು 2026ರ ಅ. 26ರಂದು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಲ್ಲದೆ, ತಲಾ 3 ಲಕ್ಷ ರೂ. ದಂಡವನ್ನೂ ವಿಧಿಸಿದರು.
ನ್ಯಾಯಾಧೀಶ ಬಿ.ಆರ್.ರಜಪೂತ್ ಅವರು ಹಸುವಿನ ಧಾರ್ವಿುಕ ಮಹತ್ವವನ್ನು ವಿವರಿಸಲು ಮನುಸ್ಮೃತಿ ಮತ್ತು ವೇದಗಳ ಉಲ್ಲೇಖವನ್ನು ನೀಡಿದರು. ಮನುಸ್ಮೃತಿಯಲ್ಲಿ ಹಸುವನ್ನು ಕೇವಲ ಪ್ರಾಣಿಯನ್ನಾಗಿ ನೋಡದೆ, ಸಮೃದ್ಧಿ, ಸಮಾಜ ಮತ್ತು ‘ಧರ್ಮ’ದ ಒಂದು ಪ್ರಮುಖ ಆಧಾರಸ್ತಂಭ ಎಂದು ಪರಿಗಣಿಸಲಾಗಿದೆ. ಋಷಿ-ಮುನಿಗಳು ಪ್ರಾಣಿಗಳ ರಕ್ಷಣೆ ಮತ್ತು ಆರೈಕೆಯ ಜವಾಬ್ದಾರಿಯನ್ನು ವೈಶ್ಯ ಸಮುದಾಯಕ್ಕೆ ವಹಿಸಿದ್ದರು. ಇದಲ್ಲದೆ ಆರ್ಷ ವಿವಾಹದಲ್ಲಿ (ವೈದಿಕ ಸಂಪ್ರದಾಯದ ವಿವಾಹ ಪದ್ಧತಿ) ಹಸು ಮತ್ತು ಎತ್ತಿನ ಜೋಡಿಗೆ ವಿಶೇಷ ಮಹತ್ವವಿದೆ. ಹಸುವನ್ನು ‘ಜಗದ ಮಾತೆ’ ಎಂದು ಭಾವಿಸಲಾಗಿದ್ದು, ಅದರಲ್ಲಿ 33 ಕೋಟಿ ದೇವ-ದೇವತೆಗಳು ನೆಲೆಸಿದ್ದಾರೆ.
ಹಸುವಿನ ನಾಲ್ಕು ಕಾಲುಗಳು ನಾಲ್ಕು ವೇದಗಳ ಸಂಕೇತವಾಗಿವೆ. ತಪಸ್ಸಿನ ಶಕ್ತಿಯಿಂದ ಅಮೃತದ ಹನಿಗಳು ಭೂಮಿಗೆ ಬಿದ್ದಾಗ, ದಿವ್ಯಹಸು ಕಾಮಧೇನು ಜನಿಸಿತು ಮತ್ತು ಅವಳನ್ನು ಭೂಮಿಯ ಮೇಲಿನ ಸಮಸ್ತ ಹಸುಗಳ ಮೂಲಮಾತೆ ಎಂದು ಪರಿಗಣಿಸಲಾಯಿತು. ಋಗ್ವೇದದಲ್ಲಿ ಹಸುವನ್ನು ಅಘ್ನಾ್ಯ ಎಂದು ಕರೆಯಲಾಗಿದೆ, ಅಂದರೆ ಯಾರನ್ನು ಕೊಲ್ಲಬಾರದೋ ಅಂಥದ್ದು ಎಂದರ್ಥ.
‘ತ್ವಂ ಮಾತಾ ಸರ್ವದೇವಾನಾಂ ತ್ವಂ ಚ ಯಜ್ಞಸ್ಯ ಕಾರಣಮ್ |
ತ್ವಂ ತೀರ್ಥಂ ಸರ್ವತೀರ್ಥಾನಾಂ ನಮಸ್ತೇಸ್ತು ಸದಾನಘೕ |’
ಇದರ ಅರ್ಥ: ‘ನೀವು ಸಮಸ್ತ ದೇವತೆಗಳ ತಾಯಿ ಮತ್ತು ಪವಿತ್ರ ಯಜ್ಞಗಳಿಗೆ ನೀವೇ ಕಾರಣ. ನೀವು ಎಲ್ಲ ಪವಿತ್ರ ತೀರ್ಥಕ್ಷೇತ್ರಗಳಿಗಿಂತಲೂ ಅತ್ಯಂತ ಪವಿತ್ರವಾದವರು. ಸದಾ ನಿಷ್ಕಳಂಕಳಾದ ನಿಮಗೆ ನಮ್ಮ ಅನಂತ ನಮಸ್ಕಾರಗಳು.’
ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ತಂದ ದೇಶದ ಮೊದಲ ರಾಜ್ಯ ಗುಜರಾತ್ ಆಗಿದೆ. 2011ರಲ್ಲಿ ಗುಜರಾತ್ನ ಅಂದಿನ ಸಿಎಂ ನರೇಂದ್ರ ಮೋದಿ ಅವರ ಸರ್ಕಾರವು ರಾಜ್ಯದ ಪ್ರಾಣಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು, ಹಸುಗಳ ಹತ್ಯೆ, ಅವುಗಳ ಸಾಗಾಟ ಮತ್ತು ಗೋಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿತು. ಅದರಲ್ಲಿ, ಗೋಹತ್ಯೆ ಮಾಡಿದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರೂ ದಂಡ ವಿಧಿಸುವ ನಿಬಂಧನೆಯಿತ್ತು. ಹಾಗೆಯೇ ಗೋಮಾಂಸ ಸಾಗಾಟ, ಸಂಗ್ರಹ ಅಥವಾ ಮಾರಾಟ ಮಾಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 25,000 ರೂ. ದಂಡವಿತ್ತು. ನಂತರ ಗುಜರಾತ್ ಸರ್ಕಾರವು 2017 ರಲ್ಲಿ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತಂದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿತು. ಈಗಿನ ನಿಯಮಗಳ ಪ್ರಕಾರ ಗೋಹತ್ಯೆಗೆ 10 ವರ್ಷಗಳ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 1 ಲಕ್ಷದಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸುವ ನಿಬಂಧನೆ ಇದೆ. ಗೋಮಾಂಸ ಸಾಗಾಟ, ಸಂಗ್ರಹ ಅಥವಾ ಮಾರಾಟಕ್ಕೆ 7 ವರ್ಷಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸುವ ನಿಬಂಧನೆ ಇದೆ. ಇದಕ್ಕೂ ಮುನ್ನ, 2025ರ ನವೆಂಬರ್ನಲ್ಲಿ ಅಹಮದಾಬಾದ್ನ ನ್ಯಾಯಾಲಯವೊಂದು ಒಂದೇ ಕುಟುಂಬದ ಮೂವರಾದ ಕಾಸಿಂ ಸೋಲಂಕಿ, ಸತ್ತಾರ್ ಮತ್ತು ಅಕ್ರಮ್ ಅವರನ್ನು ಗೋಹತ್ಯೆಯ ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಅಸ್ಸಾಂನಲ್ಲಿ ಪ್ರಮಾಣಪತ್ರವಿಲ್ಲದೆ ಜಾನುವಾರುಗಳನ್ನು ಕೊಲ್ಲುವುದು ಅಥವಾ ದೇವಸ್ಥಾನಗಳ ಆಸುಪಾಸು ಮತ್ತು ಗೋಮಾಂಸ ರಹಿತ ಪ್ರದೇಶಗಳಲ್ಲಿ ಮಾರಾಟ ಮಾಡುವುದಕ್ಕೆ 3 ರಿಂದ 8 ವರ್ಷಗಳ ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು. ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಪ್ರಮಾಣಪತ್ರವಿಲ್ಲದೆ ಜಾನುವಾರುಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಬಿಹಾರದಲ್ಲಿ ಹಸು ಮತ್ತು ಕರುಗಳನ್ನು ಕೊಲ್ಲುವುದು ನಿಷೇಧಿತವಾಗಿದೆ. ಆದರೆ 25 ವರ್ಷಕ್ಕಿಂತ ಮೇಲ್ಪಟ್ಟ, ಕೃಷಿ ಮತ್ತು ಸಂತಾನೋತ್ಪತ್ತಿ ಸಾನರ್ಥ್ಯ ಕಳೆದುಕೊಂಡ ಹೋರಿಗಳು ಹಾಗೂ ಹೆಣ್ಣು ಎಮ್ಮೆಗಳನ್ನು ಕೊಲ್ಲಲು ಅವಕಾಶವಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಭಾಗಶಃ ನಿಷೇಧವಿದೆ.
ಯಾವುದೇ ನಿರ್ಬಂಧವಿಲ್ಲ: ಕೇರಳಂ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಲಕ್ಷದ್ವೀಪ ಮತ್ತು ಮಣಿಪುರದಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಕಾನೂನುಗಳಿಲ್ಲ.
ಗೋಹತ್ಯೆಗೆ ಸಂಬಂಧಿಸಿದ ಪ್ರಕರಣಗಳಿಗೆ ಯಾವುದೇ ಕೇಂದ್ರೀಯ ಕಾನೂನು ಇಲ್ಲ. ಈ ವಿಷಯಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ಎಲ್ಲ ರಾಜ್ಯಗಳಲ್ಲೂ ಪ್ರತ್ಯೇಕ ನಿಯಮಗಳಿವೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರಿಯಾಣ, ಕರ್ನಾಟಕ, ಜಾರ್ಖಂಡ್, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್ಗಢ, ದೆಹಲಿ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಲಡಾಖ್ನಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರಾಜ್ಯಗಳಲ್ಲಿ 1ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸುವ ನಿಬಂಧನೆ ಇದೆ. ಗುಜರಾತ್ಗೆ ಹೊಂದಿಕೊಂಡಿರುವ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದೀವ್ನಲ್ಲೂ ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಇತಿಹಾಸಕಾರರ ಪ್ರಕಾರ, ಮೌರ್ಯರ ಕಾಲದ ನಂತರ ಭೂಮಿ ಮತ್ತು ಹಸುಗಳನ್ನು ದಾನವಾಗಿ ನೀಡುವ ಪರಂಪರೆ ಪ್ರಾರಂಭವಾಯಿತು. ಇದರಿಂದಾಗಿ ಪಶುಸಂಗೋಪನೆ ಅನಿವಾರ್ಯವಾಯಿತು ಹಾಗೂ ಹಸುಗಳನ್ನು ಕೊಲ್ಲುವುದಕ್ಕೆ ವಿರೋಧ ವ್ಯಕ್ತವಾಗತೊಡಗಿತು. ಮಹಾಭಾರತ ಮತ್ತು ಪುರಾಣ ಗಳಲ್ಲೂ ಹಸುಗಳನ್ನು ದಾನ ಮಾಡುವ ಕುರಿತು ಬಲವಾಗಿ ಪ್ರತಿಪಾದಿಸಲಾಗಿದೆ. ‘ಗೋ-ಸಹಸ್ರದಾನ’, ಅಂದರೆ ಒಂದು ಸಾವಿರ ಹಸುಗಳನ್ನು ದಾನ ಮಾಡುವುದನ್ನು ಶ್ರೇಷ್ಠ ಧಾರ್ವಿುಕ ದಾನಗಳಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. 12ನೇ ಶತಮಾನ ಮತ್ತು ನಂತರದ ಮಧ್ಯಕಾಲೀನ ವ್ಯಾಖ್ಯಾನಕಾರರಾದ ಅಪರಾರ್ಕ, ರಘುನಂದನ, ನೀಲಕಂಠ ಮುಂತಾದವರು ಕಲಿಯುಗದಲ್ಲಿ ಹಸುಗಳನ್ನು ಕೊಲ್ಲಬಾರದು ಎಂದು ಪ್ರತಿಪಾದಿಸಿದರು.
ನಂತರದ ಮೊಘಲರ ಕಾಲದಲ್ಲಿ, ಜೈನ ಧರ್ಮದ ಪ್ರಭಾವದಿಂದಾಗಿ ಅಕ್ಬರ್ ಮತ್ತು ಜಹಾಂಗೀರ್ ಪ್ರಾಣಿಗಳ, ಅದರಲ್ಲೂ ಮುಖ್ಯವಾಗಿ ಹಸುವಿನ ಹತ್ಯೆಯನ್ನು ನಿಷೇಧಿಸಿ ಆದೇಶ ಹೊರಡಿಸಿದರು.17ನೇ ಶತಮಾನದಲ್ಲಿ ಮರಾಠ ದೊರೆ ಶಿವಾಜಿ ಹಸುಗಳ ರಕ್ಷಣೆಗೆ ಆದ್ಯತೆ ನೀಡಿದರು. ನಂತರ 19ನೇ ಶತಮಾನದಲ್ಲಿ ಸಿಖ್ಖ ಕೂಕಾ ಚಳವಳಿಯ ನಾಯಕ ರಾಮ್ ಸಿಂಗ್ ಅವರು ಗೋಹತ್ಯೆಗೆ ಅನುಮತಿ ನೀಡುತ್ತಿದ್ದ ಬ್ರಿಟಿಷರ ವಿರುದ್ಧ ಹಿಂದೂಗಳು ಮತ್ತು ಸಿಖ್ಖರನ್ನು ಒಗ್ಗೂಡಿಸಿದರು. 1882ರಲ್ಲಿ ಆರ್ಯ ಸಮಾಜದ ಸಂಸ್ಥಾಪಕ ದಯಾನಂದ ಸರಸ್ವತಿ ಅವರು ‘ಗೋರಕ್ಷಿಣಿ ಸಭಾ’ವನ್ನು ಪ್ರಾರಂಭಿಸಿದರು. ಸ್ವಾತಂತ್ರಾ್ಯನಂತರ ಹಂತ-ಹಂತವಾಗಿ ಗೋಹತ್ಯೆ ವಿರೋಧಿ ಕಾನೂನುಗಳನ್ನು ರೂಪಿಸಿ, ಜಾರಿಗೆ ತರಲಾಯಿತು.