

ಸಿನಿಮಾ, ವೆಬ್ ಸ್ಟ್ರೀಮಿಂಗ್, ಜಾಹೀರಾತು, ಗೇಮಿಂಗ್ ಕ್ಷೇತ್ರಗಳಲ್ಲಿ ಸೃಜನಾತ್ಮಕ ಡಿಜಿಟಲ್ ಕಂಟೆಂಟ್ಗಳ ಬೇಡಿಕೆ ಹೆಚ್ಚುತ್ತಿದೆ. ಡಿಜಿಟಲ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ. ಎಐ ಪರಿಣಾಮ ಈ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ.
ಈ ಸಂದರ್ಭದಲ್ಲಿ, ಮುಂಬೈನ ಭಾರತೀಯ ಸೃಜನಾತ್ಮಕ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ಅನಿಮೇಶನ್, ದೃಶ್ಯ ಪರಿಣಾಮಗಳು (ವಿಎಫ್ಎಕ್ಸ್), ಗೇಮಿಂಗ್, ಕಾಮಿಕ್ಸ್, ಎಕ್ಸ್ಟೆಂಡೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್ಆರ್) ಕ್ಷೇತ್ರಕ್ಕೆ ಆಧುನಿಕ ಆಯಾಮ ನೀಡಲಿದೆ. ಕ್ಷೇತ್ರಕ್ಕೆ ತರಬೇತಿ ಹೊಂದಿದ ಪ್ರತಿಭೆಗಳನ್ನು ನೀಡುವ ಉದ್ದೇಶದ ಜತೆ ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ಎಐ ಜಗತ್ತಿಗೆ ಬೇಕಾದ ನೀತಿ ರೂಪಿಸಲು ಸರ್ಕಾರಕ್ಕೆ ಸಲಹೆ ನೀಡುವುದು, ಸ್ಟಾರ್ಟಪ್ಗಳಿಗೆ ಬೆಂಬಲ, ಹೊಸ ಆವಿಷ್ಕಾರಗಳು ಇದರ ಮೂಲ ಉದ್ದೇಶ.
ವಿಭಿನ್ನ ವಿವಿ: ಪ್ರತಿಷ್ಠಿತ ಐಐಟಿಗಳಂತೆ ತಂತ್ರಜ್ಞಾನ ಕಲಿಸುವ ಒಂದು ವಿಶ್ವವಿದ್ಯಾಲಯವಾಗಿ ಐಐಸಿಟಿ ಪ್ರಾರಂಭವಾಗಿದೆ. ಆದರೆ, ಇದರ ಉದ್ದೇಶ, ಗುರಿ ವಿಭಿನ್ನ. ಇದರಲ್ಲಿ ಶೇ. 34ರಷ್ಟು ಕೇಂದ್ರ, ಶೇ.14ರಷ್ಟು ಮಹಾರಾಷ್ಟ್ರ ಸರ್ಕಾರ ಹೂಡಿಕೆ ಮಾಡಿವೆ. ಉಳಿದ ಶೇ. 52 ಪಾಲನ್ನು ಎಐಸಿಸಿಐ, ಸಿಐಐ ಮುಂತಾದ ಕಂಪನಿಗಳು ಹೊಂದಿವೆ. ಇದರಿಂದ ಇದೊಂದು ಸ್ವಾಯತ್ತ ವಿವಿಯಾಗಿ ರೂಪುಗೊಳ್ಳುತ್ತಿದೆ.
ಗೂಗಲ್, ಮೆಟಾ, ಯುಟ್ಯೂಬ್, ಜಿಯೋ ಹಾಟ್ಸ್ಟಾರ್, ಅಡೋಬ್ ಸೇರಿ ಜಗತ್ತಿನ 24 ಡಿಜಿಟಲ್ ಮಾಧ್ಯಮ ಕ್ಷೇತ್ರದ ಕಂಪನಿಗಳ ಜತೆ ಐಐಸಿಟಿ ಒಪ್ಪಂದ ಮಾಡಿಕೊಂಡಿದೆ. ಸಾಂಪ್ರದಾಯಿಕ ಪಠ್ಯಕ್ರಮದ ಬದಲು ಸಂಬಂಧಪಟ್ಟ ಉದ್ಯಮಕ್ಕೆ ಬೇಕಾಗಿರುವ ಕೌಶಲವನ್ನು ಕಲಿಸಲಿದೆ.
ಬೋಧಕರು ಶೈಕ್ಷಣಿಕ ಹಿನ್ನೆಲೆಗಿಂತ ಹೆಚ್ಚಾಗಿ ಆಯಾ ಕ್ಷೇತ್ರದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ, ಸಾಕಷ್ಟು ಅನುಭವ ಹೊಂದಿದ್ದಾರೆ. ಹಾಗಾಗಿ ಇಲ್ಲಿ ಪಠ್ಯಕ್ರಮಕ್ಕಿಂತ ಹೆಚ್ಚಾಗಿ ವೃತ್ತಿಪರತೆಗೆ ಬೆಲೆ ಇದೆ. ಅತ್ಯಾಧುನಿಕ ಸ್ಟುಡಿಯೋಗಳು ರೂಪುಗೊಂಡಿದ್ದು ವೃತ್ತಿ ಆಧಾರಿತ ತರಬೇತಿಗಳೇ ಕಲಿಕೆಯಾಗಿವೆ. ಕರ್ನಾಟಕ ಸರ್ಕಾರ ಸೇರಿದಂತೆ ವಿವಿಧ ರಾಜ್ಯ, ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಈಗಾಗಲೇ ಎಐ ಆಧಾರಿತ ಅನಿಮೇಟೆಡ್, ಡಿಜಿಟಲ್ ಕಂಟೆಂಟ್ಗಳನ್ನು ಮಾಡಿಕೊಡುತ್ತಿದ್ದಾರೆ.
ಪಿಯುಸಿ ವಿದ್ಯಾರ್ಥಿನಿ: ಒಟ್ಟು 18 ಕೋರ್ಸ್ಗಳನ್ನು ಪ್ರಾರಂಭಿಸಲು ಐಐಸಿಟಿ ಮುಂದಾಗಿದ್ದು, 2 ವರ್ಷದ ಡಿಪ್ಲೊಮಾ ಶುರುವಾಗಿದೆ. 130 ವಿದ್ಯಾರ್ಥಿಗಳು ಮೊದಲ ಬ್ಯಾಚ್ನಲ್ಲಿದ್ದಾರೆ. ಪಿಯುಸಿ ಮುಗಿಸಿರಬೇಕು ಎಂಬ ನಿಯಮವಿದ್ದರೂ ಇಲ್ಲಿ ಕೌಶಲಕ್ಕೆ ಬೆಲೆ ಸಿಗಲಿದೆ. ಎಲ್ಲ ವಿದ್ಯಾರ್ಥಿಗಳು ಎವಿಜಿಸಿ ಕ್ಷೇತ್ರದಲ್ಲಿ ಫ್ಯಾಸಿನೇಟ್ ಆಗಿರುವುದು ವಿಶೇಷ. ಮೊದಲ ಪಿಯುಸಿ ಓದುತ್ತಿರುವ ರೀತ್ ಗುಪ್ತಾ ಸಹ ಒಬ್ಬಳು. ಡಿಜಿಟಲ್ ಕ್ರಿಯೇಟಿವ್ ಕಂಟೆಂಟ್ ಕ್ಷೇತ್ರದಲ್ಲಿ ಅತ್ಯುತ್ಸಾಹಿಯಾಗಿರುವ ಆಕೆಯ ಗುರಿ ಈಗಾಗಲೇ ನಿಗದಿಯಾಗಿದೆ.
ವಿಶಾಲ ಅವಕಾಶ: ಎವಿಜಿಸಿ ವಲಯದಲ್ಲಿ ವಿವಿಧ ದೇಶಗಳು ಈಗಾಗಲೇ ಸಾಕಷ್ಟು ಮುಂದಿವೆ. ಜಾಗತಿಕ ಎವಿಜಿಸಿ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 1ಕ್ಕೂ ಕಡಿಮೆ ಇದೆ. ಪ್ರಸಿದ್ಧ ಅನಿಮೇಷನ್ ಹಾಲಿವುಡ್ ಸಿನಿಮಾಗಳಲ್ಲಿ ಹಲವು ಭಾರತೀಯ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಆದರೆ ನಮ್ಮಲ್ಲಿ ಆ ರೀತಿಯ ಚಿತ್ರಗಳು ನಿರ್ವಣವಾಗುತ್ತಿಲ್ಲ. ನಮ್ಮದೇ ಬ್ರ್ಯಾಂಡ್ ಇಲ್ಲ ಎನ್ನುತ್ತಾರೆ ಅನಿಮೇಷನ್ ಕ್ಷೇತ್ರದಲ್ಲಿ 24 ವರ್ಷ ಅನುಭವ ಹೊಂದಿರುವ ಐಐಸಿಟಿ ಪ್ರಾಧ್ಯಾಪಕ ಮುಕುಲ್ ಚಕ್ರಬರ್ತಿ.
ಪ್ರಸ್ತುತ 2.5ರಿಂದ 3 ಬಿಲಿಯನ್ ಡಾಲರ್ ಜಾಗತಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಈ ವಲಯ, 2030ರ ವೇಳೆಗೆ 26 ಬಿಲಿಯನ್ ಡಾಲರ್ಗೆ ಏರಿಕೆಯಾಗಿ, 20 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಸಾಧ್ಯತೆ ಇದೆ. ಈಗ 2.6 ಲಕ್ಷ ವೃತ್ತಿಪರರಿಗೆ ಉದ್ಯೋಗ ನೀಡುತ್ತಿರುವ ಈ ಕ್ಷೇತ್ರದಲ್ಲಿ ಅಧಿಕೃತ ತರಬೇತಿ ಪಡೆದವರ ಕೊರತೆ ಇದೆ. ವಿಶೇಷ ಟೂಲ್ ಕಿಟ್ಗಳನ್ನು ರಚಿಸುವ ಸೃಜನಾತ್ಮಕ ತರಬೇತಿ ಪಡೆದವರು ಮತ್ತು ಡೆವಲಪರ್ಗಳ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಉದ್ಯೋಗಿಗಳನ್ನು ಒದಗಿಸುವ ಗುರಿಯನ್ನು ಐಐಸಿಟಿ ಹೊಂದಿದೆ.
ಕ್ರಿಯೇಟರ್ ಎಕಾನಮಿ: ಇ-ಗೇಮಿಂಗ್ ಕ್ಷೇತ್ರದಲ್ಲಿ ವರ್ಚುವಲ್ ರಿಯಾಲಿಟಿಗೂ ಹೆಚ್ಚಾಗಿ ನೈಜತೆಯ ಅನುಭವ ನೀಡುವ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ದೇಹ ಕವಚ ಹಾಕಿಕೊಂಡು ಆಡಬಹುದಾದ ವ್ಯವಸ್ಥೆ ಬರುತ್ತಿದೆ. ಆ ಕ್ಷೇತ್ರದಲ್ಲಿ ಸಧ್ಯಕ್ಕೆ ಭಾರತದ ವಿವಿಧ ಸಂಸ್ಥೆಗಳು ಸೇವೆ ನೀಡುತ್ತೇವೆ. ಆದರೆ, ನಾವೇ ಅಂಥ ಉತ್ಪನ್ನಗಳನ್ನು ಸೃಷ್ಟಿಸುವ (ಕ್ರಿಯೇಟರ್ ಎಕಾನಮಿ) ಗುರಿ ಹೊಂದಿದ್ದೇವೆ ಎನ್ನುತ್ತಾರೆ ಇ-ಗೇಮಿಂಗ್ ತಂತ್ರಜ್ಞ, ಐಐಸಿಟಿ ಪ್ರಧ್ಯಾಪಕ ಅಜಯ್ಕುಮಾರ್ ಶ್ರೀನಿವಾಸನ್. ಗೇಮಿಂಗ್ ಕ್ಷೇತ್ರದ ಅಭಿವೃದ್ಧಿಯಿಂದ ವೈದ್ಯಕೀಯ, ರಕ್ಷಣಾ ಕ್ಷೇತ್ರಕ್ಕೂ ಕೊಡುಗೆ ದೊರೆಯಬಹುದು ಎಂಬುದು ಅವರ ನಿರೀಕ್ಷೆ.
ಸ್ಟಾರ್ಟಪ್ಗಳಿಗೆ ಬೆಂಬಲ: 2024ರಲ್ಲಿ ಕೇಂದ್ರ ಸರ್ಕಾರ ಐಐಸಿಟಿ ರಚನೆ ಘೊಷಿಸಿತು. 391.15 ಕೋಟಿ ರೂ. ಬಂಡವಾಳ ನೀಡಿತು. 2025ರ ಜುಲೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ಮುಂಬೈ ಎನ್ಎಫ್ಡಿಸಿ ಆವರಣದಲ್ಲಿ ಐಐಸಿಟಿ ಕ್ಯಾಂಪಸ್ ತಾತ್ಕಾಲಿಕವಾಗಿ ಶುರುವಾಗಿದೆ. ಮುಂದಿನ 18 ತಿಂಗಳಲ್ಲಿ ಗೋರೆಗಾಂವ ಮುಂಬೈ ಫಿಲ್ಮ್ ಸಿಟಿಯಲ್ಲಿ 10 ಎಕರೆ ಪ್ರದೇಶದಲ್ಲಿ ವಿಶಾಲ ಕ್ಯಾಂಪಸ್ ನಿರ್ವಣವಾಗಲಿದೆ. ಸ್ಟಾರ್ಟಪ್ಗಳಿಗೆ ತರಬೇತಿ ಹಾಗೂ ಬೆಂಬಲ ನೀಡುವುದು ಐಐಸಿಟಿ ಇನ್ನೊಂದು ಉದ್ದೇಶವಾಗಿದ್ದು, ಈಗಾಗಲೇ 10 ನವೋದ್ಯಮಗಳಿಗೆ ಬೆಂಬಲ ನೀಡಲಾಗಿದೆ ಎನ್ನುತ್ತಾರೆ ಐಐಸಿಟಿ ಸಿಇಒ ನಿನಾದ ರಾಯ್ಕರ್.
ಕ್ರಿಯೇಶನ್ ಲ್ಯಾಬ್ ಸ್ಥಾಪನೆ: ಎಐ ಸವಾಲುಗಳಿಗೆ ಭಾರತದ ಹೊಸ ಜಾಯಮಾನದ ಜನತೆಯನ್ನು ಸಜ್ಜು ಮಾಡಲು ಐಐಸಿಟಿ ಮೂಲಕ ಭಾರತದಾದ್ಯಂತ 15,000 ಶಾಲೆಗಳು ಮತ್ತು 500 ಕಾಲೇಜ್ಗಳಲ್ಲಿ ಕಂಟೆಂಟ್ ಕ್ರಿಯೇಷನ್ ಲ್ಯಾಬ್ಗಳನ್ನು ಪ್ರಾರಂಭಿಸುವುದಾಗಿ ಭಾರತ ಸರ್ಕಾರ ಘೊಷಿಸಿದೆ. ಆ ಸಂಬಂಧ ಈಗಾಗಲೇ ಎರಡು ಸಭೆಗಳು ನಡೆದಿವೆ. ಶೀಘ್ರದಲ್ಲಿ ಲ್ಯಾಬ್ಗಳ ಸ್ವರೂಪ, ಯಾವ ರಾಜ್ಯಕ್ಕೆ ಎಷ್ಟು ಲ್ಯಾಬ್ ಸಿಗಲಿದೆ ಎಂಬುದು ಖಚಿತವಾಗಲಿದೆ.
ಸವಾಲುಗಳೂ ಇವೆ: ನೈಜತೆಯ ತಲೆಯ ಮೇಲೆ ಹೊಡೆದಂತೆ ಇರುವ ಎಐ ನಿರ್ವಿುತ ಕಂಟೆಂಟ್ಗಳು ತಪ್ಪು ಸಂದೇಶ ಸಾರುವ ಹಾಗೂ ಗೇಮಿಂಗ್ಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಅಪಾಯವೂ ಇದೆ. ಅದಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಐಐಸಿಟಿ ಪೋಸ್ಟ್ ಪ್ರೊಡಕ್ಷನ್ ವಿಭಾಗದ ಮುಖ್ಯಸ್ಥ ಸಲಿಲ್ ದೇಶಪಾಂಡೆ. ಅಪಾಯವಿದೆ ಎಂದು ನಾವು ಈ ಕ್ಷೇತ್ರವನ್ನು ಮುಟ್ಟದೇ ಇದ್ದರೆ,ತಂತ್ರಜ್ಞಾನ ಪೈಪೋಟಿಯಲ್ಲಿ ನಾವು ಹಿಂದುಳಿಯಬೇಕಾಗಬಹುದು ಎಂಬುದು ಅವರ ಅಭಿಪ್ರಾಯ. ಐದು, ಹತ್ತು ನಿಮಿಷದ ಡಿಜಿಟಲ್ ಕಂಟೆಂಟ್ಗಳನ್ನು ನೀಡಬಹುದು. ಆದರೆ, ಮೂರು ತಾಸಿನ ಸಿನಿಮಾ ರೂಪಿಸುವಷ್ಟು ಇನ್ನೂ ಶಕ್ತಿಶಾಲಿಯಾಗಿಲ್ಲ ಎನ್ನುತ್ತಾರೆ ಎಐ ಡಿಸೈನ್ ಎಜುಕೇಟರ್ ಸಂದೇಶ ಪವಾರ್