ಪ್ರಿಯಾಂಕಾರೊಂದಿಗೆ ರಾಹುಲ್​ ಮುಸುಕಿನ ಗುದ್ದಾಟ..? ಕೇಂದ್ರ ಸಚಿವ ಬಿಟ್ಟು ಹೇಳಿದ್ದೇನು..? | 2 Gandhis Are Fighting

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
Published on
ದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ಎಲ್ಲವೂ ಸರಿ ಇಲ್ಲ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿಕೊಂಡಿದ್ದು, ಕಳೆದ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ತೊರೆದ ಬಿಟ್ಟು, ಬಿಜೆಪಿ ಸೇರ್ಪಡೆಯಾಗಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿಟ್ಟು, ಸದನದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ತಮ್ಮ ಭಾಷಣಗಳ ನಡುವಿನ ಹೋಲಿಕೆಯಿಂದ ಅಸಮಾಧಾನಗೊಂಡಿದ್ದ ರಾಹುಲ್​ ಸಂಸತ್ತಿನ ಚಳಿಗಾಲದ ಅಧಿವೇಶನದ ಮಧ್ಯದಲ್ಲೇ ಜರ್ಮನಿಗೆ ತೆರಳಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ಗಾಂಧಿಗಳು ಜಗಳವಾಡುತ್ತಿದ್ದಾರೆ. ಜನರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಭಾಷಣಗಳನ್ನು ಸದನದಲ್ಲಿ ಹೋಲಿಸಿದ್ದಾರೆಂದು ನನಗೆ ತಿಳಿದು ಬಂದಿದೆ. ಇದು ರಾಹುಲ್​​ರನ್ನು ಅಸಮಾಧಾನಗೊಳಿಸಿದ್ದು, ಆದ್ದರಿಂದಲೇ ಅವರು ಕುಟುಂಬ ಮತ್ತು ಪಕ್ಷದ ಕೆಲ ನಾಯಕರೊಂದಿಗೆ ಜಗಳವಾಡಿ ವಿದೇಶಕ್ಕೆ ತೆರಳಿದ್ದಾರೆ ಎಂದರು. ಸಚಿವ ಬಿಟ್ಟು ಅವರ ಈ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷದ ಯಾವ ನಾಯಕರು ಕೂಡ ಪ್ರತಿಕ್ರಿಯೆ ನೀಡಿಲ್ಲ.
ರಾಹುಲ್​ ಮತ್ತು ಪ್ರಿಯಾಂಕಾ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ. ವಂದೇ ಮಾತರಂ ಚರ್ಚೆಗೆ ಮುನ್ನ, ರಾಹುಲ್ ಗಾಂಧಿ ಮಾಧ್ಯಮಗಳಿಗೆ ಪ್ರಿಯಾಂಕಾ ಅವರ ಭಾಷಣವನ್ನು ಕೇಳಿ ಎಂದು ಹೇಳಿದ್ದರು. ಅಕ್ಕ ಪ್ರಿಯಾಂಕಾರ ಬಿಜೆಪಿಯ ವಿರುದ್ಧ ಟೀಕೆಗಳನ್ನು ರಾಹುಲ್ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗೆ ರಾಹುಲ್​ರ ವಿದೇಶ ಪ್ರವಾಸದ ಸುತ್ತಲಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ, ಪ್ರಧಾನಿ ಮೋದಿ ತಮ್ಮ ಕೆಲಸದ ಸಮಯದ ಅರ್ಧದಷ್ಟು ಸಮಯವನ್ನು ದೇಶದ ಹೊರಗೆ ಕಳೆಯುತ್ತಾರೆ, ವಿರೋಧ ಪಕ್ಷದ ನಾಯಕ ಪ್ರಯಾಣಿಸುವ ಬಗ್ಗೆ ಅವರು ಏಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.

ರಾಹುಲ್​ ಜರ್ಮನಿ ಪ್ರವಾಸ....

ಡಿಸೆಂಬರ್ 15 ರಿಂದ 20 ರವರೆಗೆ ರಾಹುಲ್​ ಗಾಂಧಿ ಬರ್ಲಿನ್‌ನಲ್ಲಿ ನಡೆಯುತ್ತಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಂದು ಕೊನೆಗೊಳ್ಳುತ್ತದೆ.
ರಾಹುಲ್ ಗಾಂಧಿಯ ಈ ಪ್ರವಾಸವನ್ನು ಪಕ್ಷದ ಜಾಗತಿಕ ಬೆಳವಣಿಗೆಗೆ ಪೂರಕವೆಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಬಣ್ಣಿಸಿದೆ. ಡಿಸೆಂಬರ್ 17 ರಂದು ಬರ್ಲಿನ್‌ನಲ್ಲಿ ಭಾರತೀಯ ವಲಸಿಗರೊಂದಿಗೆ ತೊಡಗಿಸಿಕೊಳ್ಳಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಂಸತ್ ಸದಸ್ಯ ಶ್ರೀ ರಾಹುಲ್ ಗಾಂಧಿ ಜಿ ಅವರನ್ನು ಸ್ವಾಗತಿಸಲು ನಮಗೆ ಗೌರವವಾಗಿದೆ. ಈ ಕಾರ್ಯಕ್ರಮವು ಯುರೋಪಿನಾದ್ಯಂತದ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಎಲ್ಲಾ ಅಧ್ಯಕ್ಷರನ್ನು ಒಟ್ಟುಗೂಡಿಸುತ್ತದೆ, ರಾಹುಲ್ ಗಾಂಧಿ ಅವರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ, ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು, ಅನಿವಾಸಿ ಭಾರತೀಯ ಸಮಸ್ಯೆಗಳು ಮತ್ತು ಪಕ್ಷಕ್ಕೆ ಹೆಚ್ಚಿನ ಜನರನ್ನು ಸಂಪರ್ಕಿಸುವಲ್ಲಿ ಮತ್ತು ಅದರ ಸಿದ್ಧಾಂತವನ್ನು ಹರಡುವಲ್ಲಿ ಐಒಸಿ ಹೇಗೆ ಪ್ರಮುಖ ಪಾತ್ರ ವಹಿಸಬಹುದು ಎಂಬುದನ್ನು ಮತ್ತಷ್ಟು ಅನ್ವೇಷಿಸುವುದು ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಹೇಳಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net