ಅದು ಸಂಭ್ರಮವಲ್ಲ, ಆ ಒಂದು ಭ್ರಮೆ! ವೈರಲ್ ವಿಡಿಯೋ ಬಗ್ಗೆ ಮಹಿಕಾ ಸ್ಪಷ್ಟನೆ: ಸಿಕ್ಸರ್ ಅಂದುಕೊಂಡಿದ್ದೇ ತಪ್ಪಾಯ್ತಾ..? Mahieka Sharma

ಅದು ಸಂಭ್ರಮವಲ್ಲ, ಆ ಒಂದು ಭ್ರಮೆ! ವೈರಲ್ ವಿಡಿಯೋ ಬಗ್ಗೆ ಮಹಿಕಾ ಸ್ಪಷ್ಟನೆ: ಸಿಕ್ಸರ್ ಅಂದುಕೊಂಡಿದ್ದೇ ತಪ್ಪಾಯ್ತಾ..?
ಅದು ಸಂಭ್ರಮವಲ್ಲ, ಆ ಒಂದು ಭ್ರಮೆ! ವೈರಲ್ ವಿಡಿಯೋ ಬಗ್ಗೆ ಮಹಿಕಾ ಸ್ಪಷ್ಟನೆ: ಸಿಕ್ಸರ್ ಅಂದುಕೊಂಡಿದ್ದೇ ತಪ್ಪಾಯ್ತಾ..?
Published on
ಅಹಮ್ಮದಾಬಾದ್: ಟೀಮ್ ಇಂಡಿಯಾ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಮತ್ತು ಆಟದ ಬಗ್ಗೆ ಯಾವಾಗಲೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಹಾರ್ದಿಕ್ ಔಟ್ ಆದಾಗ ಅವರ ಪ್ರೇಯಸಿ, ಮಾಡೆಲ್ ಮಹಿಕಾ ಶರ್ಮಾ(Mahieka Sharma) ಚಪ್ಪಾಳೆ ತಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿತ್ತು. ಗೆಳೆಯ ಔಟ್ ಆದಾಗ ಈಕೆ ಸಂಭ್ರಮಿಸುತ್ತಿದ್ದಾಳೆ ಎಂಬ ಟೀಕೆಗಳಿಗೆ ಇದೀಗ ಮಹಿಕಾ ಶರ್ಮಾ ಅವರೇ ಅಂತಿಮ ತೆರೆ ಎಳೆದಿದ್ದಾರೆ.

ಅದು ಸಂಭ್ರಮವಲ್ಲ, ಆ ಒಂದು ಭ್ರಮೆ..!

ತಮ್ಮ ವಿರುದ್ಧ ಹರಡುತ್ತಿರುವ ನೆಗೆಟಿವ್ ಸುದ್ದಿಗಳ ಬಗ್ಗೆ ಮೌನ ಮುರಿದಿರುವ ಮಹಿಕಾ ಶರ್ಮಾ, ಹಾರ್ದಿಕ್ ಔಟ್ ಆದಾಗ ನಾನು ಸಂಭ್ರಮಿಸಿದೆ ಎನ್ನುವುದೆಲ್ಲ ಸುಳ್ಳು. ಎಲ್ಲರೂ ತಪ್ಪು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಹಾರ್ದಿಕ್ ಹೊಡೆದ ಆ ಬಾಲ್ ಸಿಕ್ಸರ್ ಹೋಗಿದೆ ಎಂದು ನಾನು ಭಾವಿಸಿದ್ದೆ. ಆ ಕ್ಷಣದ ಖುಷಿಯಲ್ಲಿ ನಾನು ಚಪ್ಪಾಳೆ ತಟ್ಟಿದೆ. ಆದರೆ ಕೊನೆಯಲ್ಲಿ ಅದು ಔಟ್ ಎಂದು ತಿಳಿಯಿತು. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
ಘಟನೆ ನಡೆದಿದ್ದು ಹೇಗೆ..?
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್‌ಗೆ ಇಳಿದ ಹಾರ್ದಿಕ್ ಪಾಂಡ್ಯ, ಕೇಶವ್ ಮಹಾರಾಜ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದರು. ಫೀಲ್ಡರ್ ಟ್ರಿಸ್ಟಾನ್ ಸ್ಟಬ್ಸ್ ಬೌಂಡರಿ ಲೈನ್‌ ಬಳಿಕ ಅದ್ಭುತವಾಗಿ ಕ್ಯಾಚ್ ಹಿಡಿದರು. ಆ ಕ್ಷಣದಲ್ಲಿ ಕ್ಯಾಮರಾ ಮಹಿಕಾ ಕಡೆ ತಿರುಗಿದಾಗ ಅವರು ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರೀತಿ ಮತ್ತು ಆಟದ ನಡುವೆ ಸಿಲುಕಿದ ಹಾರ್ದಿಕ್

ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಕಳೆದ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದು, ಈ ವಿಶ್ವಕಪ್‌ನ ಎಲ್ಲಾ ಪಂದ್ಯಗಳಲ್ಲೂ ಮಹಿಕಾ ಅವರು ಹಾರ್ದಿಕ್‌ಗೆ ಬೆಂಬಲವಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಟ ಮತ್ತು ಪ್ರೀತಿಯನ್ನು ಮಿಕ್ಸ್ ಮಾಡಬೇಡಿ ಎಂದು ನೆಟ್ಟಿಗರು ಟೀಕಿಸುತ್ತಿರುವ ಬೆನ್ನಲ್ಲೇ ಈ ಚಪ್ಪಾಳೆ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು

ನಿನ್ನೆ (ಫೆ.22) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್​ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್​, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್​ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್​, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್​, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್​ ಸಿಂಗ್​ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್​, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್​ನಲ್ಲಿ ವಿಫಲರಾದ್ದರಿಂದ ಟೀಮ್​ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net