ನದಿಜೋಡಣೆಯ ಆ ಮುಖ - ಈ ಮುಖ

river-system
river-system
Published on

ರಾಜಶೇಖರ ಜೋಗಿನ್ಮನೆ

(ಲೇಖಕರು ವಿಜಯವಾಣಿ ಸಹಾಯಕ ಸಂಪಾದಕ)

ಒಂದು: ಅದು 1987ನೇ ಇಸವಿ. ಎಲ್ಲ ರಾಜ್ಯಗಳ ನೀರಾವರಿ ಸಚಿವರ ಸಭೆ ಆಯೋಜನೆಯಾಗಿತ್ತು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಆ ಸಭೆಯಲ್ಲಿ ಮಾಡಿದ ಭಾಷಣ ಆಡಳಿತಗಾರರು ಇಂದಿಗೂ ಆತ್ಮಾವಲೋಕನ ಮಾಡಿಕೊಳ್ಳುವಂತಿತ್ತು: ‘ದೇಶದಲ್ಲಿ 1951ರಿಂದ 246 ಭಾರಿ ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಆ ಪೈಕಿ 67 ಯೋಜನೆಗಳು ಮಾತ್ರ ಮುಕ್ತಾಯವಾಗಿವೆ. 16 ವರ್ಷಗಳ ಕಾಲ ವ್ಯರ್ಥವಾಗಿ ಹಣ ಸುರಿದಿದ್ದೇವೆ. ಆದರೆ ಈ ಯೋಜನೆಗಳಿಂದ ನೀರಾವರಿ, ಕುಡಿಯುವ ನೀರು ಇತ್ಯಾದಿ ಯಾವ ಲಾಭವೂ ಜನತೆಗೆ ದೊರೆತಿಲ್ಲ’.
ಇದು 1987ರ ಕಥೆಯಷ್ಟೇ ಅಲ್ಲ. ಈಗಲೂ ಹಾಗೇ ಇದೆ. ಗಣಿಗಾರಿಕೆ, ಅಣೆಕಟ್ಟು, ನದಿ ತಿರುವು ಇತ್ಯಾದಿ ಯೋಜನೆಗಳಿಂದ ಈವರೆಗೆ ದೇಶದ ಸುಮಾರು 6 ಕೋಟಿ ಜನ ನಿರಾಶ್ರಿತರಾಗಿದ್ದಾರೆ. ಆ ಪೈಕಿ 1.50 ಕೋಟಿ ಜನರಿಗೆ ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿನ ಪುನರ್ವಸತಿ ಆಗಿದೆ. ಆದರೆ ಇತರ 4.50 ಕೋಟಿ ಜನರಿಗೆ ಏನೂ ದೊರೆತಿಲ್ಲ. ಅವರು ಎಲ್ಲಿ ಹೋದರೋ, ಹೇಗಿದ್ದಾರೋ ಗೊತ್ತಿಲ್ಲ. ಎರಡು: ಅತಿಹೆಚ್ಚು ದೊಡ್ಡ ಅಣೆಕಟ್ಟುಗಳನ್ನು ಹೊಂದಿದ ಜಗತ್ತಿನ ಮೂರನೆಯ ದೇಶ ನಮ್ಮದು.
ವಿದ್ಯುತ್ತು, ನೀರಾವರಿ ಹೆಸರಿನಲ್ಲಿ 2019ರ ವರೆಗೆ 5334 ಬೃಹತ್ ಅಣೆಕಟ್ಟುಗಳನ್ನು ಕಟ್ಟಿದ್ದೇವೆ. ನೀರಾವರಿ ಒದಗಿಸುತ್ತೇವೆ, ಕೃಷಿ ಉತ್ಪಾದನೆ ಹೆಚ್ಚಳವಾಗುತ್ತದೆ, ಪ್ರವಾಹ ನಿಯಂತ್ರಿಸುತ್ತೇವೆ ಎಂದೆಲ್ಲ ಪ್ರತಿ ಸಲವೂ ಕಥೆ ಹೇಳಿದ್ದೇವೆ. ಅಚ್ಚರಿಯೆಂದರೆ ಈ ಅಣೆಕಟ್ಟುಗಳ ಪೈಕಿ 2000ಕ್ಕೂ ಹೆಚ್ಚು ಮಹಾರಾಷ್ಟ್ರದಲ್ಲೇ ಇವೆ. ದುರಂತವೆಂದರೆ ಅದೇ ಮಹಾರಾಷ್ಟ್ರ ಇಂದಿಗೂ ಅತಿ ಹೆಚ್ಚು ಬರಪೀಡಿತ ರಾಜ್ಯ!
ಮೂರು: ವಿಶ್ವಸಂಸ್ಥೆಯು 1998ರಲ್ಲಿ ಸಮಿತಿಯೊಂದನ್ನು ಅಣೆಕಟ್ಟುಗಳ ಅಧ್ಯಯನಕ್ಕೆ ನೇಮಿಸಿತ್ತು. ಆ ಸಮಿತಿ 2002ರಲ್ಲಿ ನೀಡಿದ ಅಧ್ಯಯನ ವರದಿಯಲ್ಲಿ, ‘ಜಾಗತಿಕವಾಗಿ ದೊಡ್ಡ ದೊಡ್ಡ ಅಣೆಕಟ್ಟುಗಳು ಎಲ್ಲ ವಿಧದಲ್ಲಿ ವಿಫಲವಾಗಿವೆ. ಆದ್ದರಿಂದ ಪ್ರಪಂಚದಲ್ಲಿ ಎಲ್ಲಿಯೂ ದೊಡ್ಡ ದೊಡ್ಡ ಡ್ಯಾಂ ಗಳನ್ನು ಕಟ್ಟಬಾರದು’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತು.
ನದಿತಿರುವು ಯೋಜನೆಗಳು ವಿಫಲವಾಗಿವೆ. ಇದರಿಂದ ನೀರೂ ಇಲ್ಲ, ಪರಿಸರವೂ ಹಾಳು, ಹಣವೂ ಪೋಲು.  ಆದ್ದರಿಂದ ಇಂಥ ಯೋಜನೆಗಳ ವಿರುದ್ಧ ಪಶ್ಚಿಮಘಟ್ಡದ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಗಟ್ಟಿ ಧ್ವನಿ ಎತ್ತಬೇಕಾಗಿದೆ.

ಅನಂತ ಅಶೀಸರ ಅಧ್ಯಕ್ಷರು ವೃಕ್ಷಲಕ್ಷ ಆಂದೋಲನ, ಕರ್ನಾಟಕ

ಪರಿಸರ ತಜ್ಞ ಪ್ರೊ. ಬಿ ಎಂ. ಕುಮಾರಸ್ವಾಮಿ ಅವರು ಈಗಾಗಲೇ ಉಲ್ಲೇಖಿಸಿದ ಸಂಗತಿಗಳಿವು.
ವಿಪರ್ಯಾಸವೆಂದರೆ ವಿಶ್ವಸಂಸ್ಥೆಗೆ ಆ ವರದಿ ಸಲ್ಲಿಕೆಯಾದ ಸಂದರ್ಭದಲ್ಲಿಯೇ ಭಾರತದಲ್ಲಿ ನ್ಯಾಷನಲ್ ವಾಟರ್ ಡೆವಲಪ್​ವೆುಂಟ್ ಏಜೆನ್ಸಿ (ಎನ್​ಡಬ್ಲ್ಯೂಡಿಎ) ನದಿಗಳ ಹೆಚ್ಚುವರಿ ನೀರನ್ನು ಕಡಿಮೆ ಹರಿವು ಇರುವ ನದಿಗೆ ಜೋಡಿಸುವ ಪ್ರಸ್ತಾವ ಮುಂದಿಟ್ಟಿತ್ತು!
ಪ್ರಸ್ತಾವನೆ ಏನು?: ದೇಶಾದ್ಯಂತ 36 ಬೃಹತ್ ಅಣೆಕಟ್ಟು, 12500 ಕಿ. ಮೀ. ಉದ್ದದ ಕಾಲುವೆಯ ಜಾಲ ಹಾಗೂ 93 ಕಿ. ಮೀ. ಸುರಂಗ ಮಾರ್ಗ ನಿರ್ವಿುಸುವುದು. ? ಪಶ್ಚಿಮಕ್ಕೆ ಹರಿಯುವ ನದಿಯನ್ನು ಪೂರ್ವಕ್ಕೆ ತಿರುಗಿಸುವುದು. ಯೋಜನೆಯಡಿ ಬರುವ ದಕ್ಷಿಣ ಭಾರತದ ಎರಡು ಪ್ರಸ್ತಾವಗಳೆಂದರೆ, 1. ಕೇರಳ ರಾಜ್ಯದ ಪಾಂಬಾ ಮತ್ತು ಅಚ್ಚಂಕೋಯಿಲ್ ಎಂಬ ಪಶ್ಚಿಮವಾಹಿನಿ ನದಿಗಳನ್ನು ಸಂಪೂರ್ಣ ವಿರುದ್ಧ ದಿಕ್ಕಿಗೆ ಅಂದರೆ ಪೂರ್ವ ದಿಕ್ಕಿಗೆ ತಿರುಗಿಸುವುದು. 2. ಬೇಡ್ತಿ - ವರದಾ (ಹಿರೆವಡ್ಡಟ್ಟಿ) ನದಿ ಜೋಡಣೆ. ಮುಖ್ಯ ಯೋಜನೆಗಳಲ್ಲಿ ಅಘನಾಶಿನಿ- ವೇದಾವತಿ ಇರಲಿಲ್ಲ. ಅದನ್ನು ಕೊನೆ ಘಳಿಗೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿದೆ.
ವಿಫಲ ಯತ್ನಗಳು: 2002ರಲ್ಲಿ ಎನ್ಡಬ್ಲ್ಯೂಡಿಎ ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಜೋಡಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಹಿಮಾಲಯ ಜನ್ಯ ನದಿಗಳು ಮಳೆಗಾಲದಲ್ಲಿ ಪ್ರವಾಹದಿಂದ, ಬೇಸಿಗೆಯಲ್ಲಿ ಹಿಮ ಕರಗುವುದರಿಂದ ಸಮೃದ್ಧವಾಗಿರುತ್ತವೆ. ಇವನ್ನು ದಕ್ಷಿಣ ಭಾರತದ ನದಿಗಳಿಗೆ ಜೊಡಿಸಿದರೆ ಬೇಸಿಗೆಯಲ್ಲಿ ದಕ್ಷಿಣ ಭಾರತಕ್ಕೂ ನೀರು ಕೊಡಬಹುದು ಎಂಬುದು ಯೋಜನೆಯ ಸಾರ. 35 ದಶಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ, 34 ಸಾವಿರ ಮೆಗಾವಾಟ್ ಜಲವಿದ್ಯುತ್ ಉತ್ಪಾದನೆ, ನಗರ ನೀರು ಪೂರೈಕೆ, ಮಿನುಗಾರಿಕೆ ಸೇರಿದಂತೆ ಅನೇಕ ಉಪಯೋಗಗಳಿವೆ ಎಂಬುದು ಯೊಜನೆಯ ತಿರುಳು. ಈ ಯೊಜನೆಗೆ ಗಂಗಾ, ಬ್ರಹ್ಮಪುತ್ರಾ, ಮಹದಾಯಿ, ಗೋದಾವರಿ, ಕಾವೇರಿ ಮೊದಲಾದ 30 ಪ್ರಮುಖ ನದಿಗಳು ಸೇರಿ ಒಟ್ಟು 54 ನದಿಗಳನ್ನು ಗುರುತಿಸಲಾಗಿದೆ. ಆದರೆ ಕಳೆದ 25ವರ್ಷಗಳಲ್ಲಿ ಯೋಜನೆ ಮುಂದಕ್ಕೆ ಹೋಗಿಲ್ಲ.
ಕರ್ನಾಟಕದಲ್ಲಿ 1980ರಿಂದ ಕನಿಷ್ಠ ಆರು ನದಿ ಜೋಡಣೆ ಯೋಜನೆಗಳನ್ನು ರೂಪಿಸಲಾಗಿದ್ದರೂ ಜಾರಿಗೆ ಬಂದಿದ್ದು ಎತ್ತಿನಹೊಳೆ ಯೋಜನೆ ಮಾತ್ರ. ಕುಂಟುತ್ತ ಸಾಗಿರುವ ಅದರ ಯೋಜನಾ ವೆಚ್ಚ ಹೆಚ್ಚುತ್ತಿದೆ ಅಷ್ಟೇ. ಇತ್ತೀಚೆಗಷ್ಷೇ ಎತ್ತಿನಹೊಳೆ ಯೋಜನೆಯಿಂದ ಒಂದು ಹನಿ ನೀರೂ ಬಂದಿಲ್ಲ ಎಂದು ದೊಡ್ಡಬಳ್ಳಾಪುರ ಶಾಸಕರು ವಿಧಾನಸಭೆಯ ಗಮನಕ್ಕೂ ತಂದಿದ್ದಾರೆ. 
ದುಬಾರಿ ಯೋಜನೆಗಳೇ ಏಕೆ?: 1972ರಲ್ಲಿ ಗಂಗಾ-ಕಾವೇರಿ ಜೊಡಣೆ, 1974ರಲ್ಲಿ ಮಾಲೆ ಕಾಲುವೆ ಯೋಜನೆ ಪ್ರಸ್ತಾಪವಾಗಿತ್ತು. ಎರಡು ಬಾರಿಯೂ ತಜ್ಞರು ಇದನ್ನು ಪರಿಶೀಲಿಸಿ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿದ್ದರು. ಆದರೂ ಇಂಥ ಯೋಜನೆಗಳತ್ತಲೇ ನಮ್ಮ ರಾಜಕಾರಣಿಗಳ ಒಲವು. ಏಕೆ? ಉತ್ತರ ಸರಳ. ಬೃಹತ್ ಯೋಜನೆಗಳನ್ನು ತಂದಷ್ಟೂ ರಾಜಕಾರಣಿಗಳಿಗೆ ಕಿಕ್ ಬ್ಯಾಕ್ ಕೂಡ ಬೃಹತ್ತಾಗಿಯೇ ಇರುತ್ತದೆ. ಆದ್ದರಿಂದ ಚಿಕ್ಕ ಯೋಜನೆಗಳ ಕುರಿತಾಗಿ ಅವರಿಗೆ ಕಾಳಜಿ ಇಲ್ಲ್ಲ ಎಂಬುದು. ಅದು ಅರ್ಧಸತ್ಯ ಆಗಿರಬಹುದು, ಆದರೆ ಪೂರ್ಣಸುಳ್ಳಲ್ಲ. ಈಗಲೇ ನೋಡಿ, ಪ್ರಸ್ತಾಪಿತ ಬೇಡ್ತಿ -ವರದಾ ಹಾಗೂ ಅಘನಾಶಿನಿ- ವೇದಾವತಿ ಜೋಡಣೆಯ ಯೋಜನೆಗಳ ವೆಚ್ಚ ಸರಿಸುಮಾರು 50 ಸಾವಿರ ಕೋಟಿ! ಇದಲ್ಲದೆ ಕೆಲಸ ಆರಂಭವಾದರೆ ಯೋಜನಾ ವೆಚ್ಚ ಪರಿಷ್ಕೃತಗೊಳ್ಳುತ್ತ, ಅದು ಹಾಲು ಕರೆವ ಹಸುವಾಗಿಯೇ ಇರುತ್ತದೆ. 
ಏಕೆ ಬೇಡ? ಜನ ನೀರು ಕೇಳುತ್ತಾರೆ, ಆದರೆ ಇಂಥದೇ ಯೋಜನೆ ತನ್ನಿ ಎನ್ನುವುದು ಕಡಿಮೆ. ಆದರೆ ತಾವೇ ಆಧುನಿಕ ಭಗೀರಥ ಎಂಬ ಭ್ರಮೆಯಲ್ಲಿರುವ ಪುಢಾರಿಗಳು ಅಧಿಕಾರಿಗಳೊಂದಿಗೆ ಸೇರಿ ದೊಡ್ಡ ಯೋಜನೆಗಳನ್ನು ಹುಡುಕುತ್ತಾರೆ. ನಂತರ ಜನರಲ್ಲಿ ಬಂಗಾರವನ್ನೇ ತಂದು ಹಾಸುವ ಆಸೆ ಬಿತ್ತುತ್ತಾರೆ. ಈ ನಡುವೆ ಯೋಜನೆಗೆ ಸುರಿಯಬಹುದಾದ ಮೊತ್ತದ ಅರ್ಧದಷ್ಟನ್ನು ಉಪಯೋಗಿಸಿಕೊಂಡರೆ ಇದ್ದಲ್ಲಿಯೇ ಜಲಸ್ವಾವಲಂಬನೆ ಸಾಧಿಸಬಹುದು ಎಂಬ ಸತ್ಯವನ್ನು ಬೇಕೆಂದೇ ಮರೆಮಾಚುತ್ತಾರೆ. ಕೆರೆ- ಕುಂಟೆಗಳ ಪುನರುಜ್ಜೀವನ, ಮಳೆನೀರ ಕೊಯ್ಲು, ಮಳೆಗಾಲದ ಹೆಚ್ಚುವರಿ ನದಿನೀರಿನ ಸಂಗ್ರಹ ವ್ಯವಸ್ಥೆ, ಈಗಿರುವ ಜಲಾಶಯಗಳ ಹೂಳೆತ್ತುವುದು ಇತ್ಯಾದಿಗಳತ್ತ ಅವರಿಗೆ ಆಸಕ್ತಿ ಇಲ್ಲ. ಅಂಥ ಶಾಶ್ವತ ಪರಿಹಾರಗಳು ಸಿಕ್ಕಿಬಿಟ್ಟರೆ ಮತ ಬೇಟೆಗೇನು ದಾರಿ?! ಎಂಬುದು ಅವರ ಚಿಂತೆ. ಇದಾದರೆ ಹಾಗಲ್ಲ, ಅವರಿಗೆ ಸಲೀಸು. ಹೇಗೆ?
ಆ ನದಿಯಲ್ಲಿ ಹೆಚ್ಚುವರಿ ನೀರಿದೆ ಎಂದು ಸುಳ್ಳು ಹೇಳಿದರಾಯಿತು- ಬೇಡ್ತಿ, ಅಘನಾಶಿನಿಯ ವಿಷಯದಲ್ಲಿ ಹೇಳಿದ ಹಾಗೆ. (ಬೇಡ್ತಿ ನದಿ ಕಳೆದ 20 ವರ್ಷಗಳಿಂದ ಬೇಸಿಗೆಯಲ್ಲಿ ಬತ್ತತೊಡಗಿದೆ. ಮಾರ್ಚ್ ತಿಂಗಳಲ್ಲಿ ನಡೆಯುವ ಶಿರಸಿ ಜಾತ್ರೆಗೆ ಸಾಕಾಗುವಷ್ಟು ನೀರನ್ನು ಆ ನದಿಯಿಂದ ತರಬೇಕೆಂದರೆ ಒಡ್ಡು ಕಟ್ಟಬೇಕಾಗಿದೆ!) ಅಲ್ಲದೆ ಪರಿಸರ ನಾಶವಾಗುವುದಿಲ್ಲ, ಒಂದು ಮರವನ್ನೂ ಕಡಿಯದೇ ನೀರನ್ನು ಒಯ್ಯುತ್ತೇವೆ ಎಂದರಾಯಿತು. 
ಇವೆಲ್ಲ ಅನುಮತಿ ದೊರೆಯುವವರೆಗೆ ಮಾತ್ರ. ಇವರು ಹೇಳುವುದು ನಿಜವೇ ಆಗಿದ್ದರೆ ನದಿ ಜೋಡಣೆ ಅಷ್ಟು ಸುಲಭವೇ? ಖಂಡಿತ ಅಲ್ಲ. ಚಿಕ್ಕ, ದೊಡ್ಡ ಅಣೆಕಟ್ಟುಗಳನ್ನು ಕಟ್ಟಬೇಕು. ಸುತ್ತಲಿನ ಸಣ್ಣ ಹೊಳೆಗಳ ನೀರು ಪ್ರಮುಖ ಅಣೆಕಟ್ಟಿಗೆ ಬರುವಂತೆ ಮಾಡಬೇಕು. ಅಲ್ಲಿಂದ ನೀರನ್ನು ಮೇಲೆತ್ತಬೇಕು. ಅದಕ್ಕೆ ಪಂಪ್ ಹೌಸ್​​ಗಳು ಬೇಕು, ಅರಣ್ಯದಲ್ಲಿ ರಸ್ತೆ ಮಾಡಬೇಕು. ವಿದ್ಯುತ್ ಲೈನ್ ಎಳೆಯಬೇಕು. ಸುರಂಗ ಮಾರ್ಗ ಕೊರೆಯಬೇಕು. ಸುಮಾರು 200 ಅಡಿ ಅಗಲದ ಹಾಗೂ ಕನಿಷ್ಠ 50 ಅಡಿ ಆಳದ ಕಾಲುವೆಗಳು, ದೊಡ್ಡ ಜಲಾಶಯಗಳ ನಿರ್ವಣವಾಗಬೇಕು. ಇಷ್ಟೆಲ್ಲ ಆದ ಮೇಲೆ ಅಲ್ಲಲ್ಲಿ ವರ್ಕರ್ಸ್ ಕಾಲನಿ ಬರಲೇಬೇಕು. ಇವೆಲ್ಲ ಆಗುವ ಹೊತ್ತಿಗೆ ಕನಿಷ್ಠ 2500 ಎಕರೆ ಅರಣ್ಯ ನಾಶವಾಗುವುದು ಅನಿವಾರ್ಯ.
ಆದರೂ ಒಂದೂ ಮರ ಕಡಿಯುವುದಿಲ್ಲ ಎಂಬ ಮಾತನ್ನು ಜನತೆ ನಂಬಬೇಕು!
ದುಷ್ಪರಿಣಾಮ: ಹೆಕ್ಟೇರ್ ಲೆಕ್ಕದಲ್ಲಿ ಅರಣ್ಯ ನಾಶವಾದಾಗ ಕಾಡಿನ ವ್ಯಾಪ್ತಿ ಕಿರಿದಾಗುತ್ತದೆ. ಸಹಜವಾಗಿ ವನ್ಯ ಪ್ರಾಣಿಗಳ ಜತೆ ಮಾನವನ ಸಂಘರ್ಷ ಇನ್ನಷ್ಟು ಜಾಸ್ತಿಯಾಗುತ್ತದೆ. ಕಾಲುವೆ, ಸುರಂಗ ಇತ್ಯಾದಿಗಳಿಂದ ನೆಲ ಮೆದುವಾಗಿ ಸಡಿಲವಾಗುತ್ತದೆ. ಭೂ ಕುಸಿತ ಹೆಚ್ಚುತ್ತವೆ. ಉದಾಹರಣೆಗೆ ಉತ್ತರಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೇ ಕಾರಣದಿಂದ ಭೂಕುಸಿತ ಬೃಹತ್ ಸಮಸ್ಯೆಯಾಗಿದೆ. ಅಣೆಕಟ್ಟೆಯ ನಂತರ ಮೂಲ ನದಿಯ ಹರಿವು ಕಡಿಮೆಯಾಗುತ್ತದೆ. ಕನಿಷ್ಠ ಪ್ರಮಾಣದ ಹರಿವೂ ಇರದಿದ್ದರೆ ಆ ಭಾಗದಲ್ಲಿ ನೀರು ಇಂಗುವುದಿಲ್ಲ. ಅಂತರ್ಜಲ ಮರುಪೂರಣವಾಗುವುದಿಲ್ಲ. ಪರಿಣಾಮ ನೆಲ ಬರಡಾಗುತ್ತದೆ. ಜೀವ ವೈವಿಧ್ಯ ನಾಶವಾಗುತ್ತದೆ.
ನದಿಯೊಂದು ಸಮುದ್ರ ಸೇರುವ ಹಂತದಲ್ಲಿ ಮೀನು ಮತ್ತಿತರ ಜಲಚರಗಳ ಸಂತಾನೋತ್ಪತ್ತಿ ನಡೆಯುತ್ತದೆ. ಅಲ್ಲಿಗೆ ಸಿಹಿನೀರು ಹರಿಯದಿದ್ದರೆ ಮತ್ಸ್ಯಕ್ಷಾಮ ತಲೆದೋರಿ ಮೀನುಗಾರರ ಬದುಕು ದುಸ್ತರವಾಗುತ್ತದೆ. ಉಪ್ಪು ನೀರು ನದಿಗುಂಟ ಬರತೊಡಗಿದರೆ ಕುಡಿಯುವುದೇನನ್ನು? ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂದು ಹೇಳುವ ಪ್ರಭೃತಿಗಳಿಗೆ ಇದೆಲ್ಲ ಅರ್ಥವಾಗುವುದು ಯಾವಾಗ?.
ದಕ್ಷಿಣ ಭಾರತಕ್ಕೇ ಅಪಾಯ!: ನದಿಜೋಡಣೆ ಪರವಾಗಿರುವ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅಂಥವರು ಗಮನಿಸಲೇಬೇಕಾದ ಅಂಶವಿದು: ಕೃಷ್ಣಾ, ಕಾವೇರಿ, ತುಂಗಭದ್ರಾ ಮತ್ತು ಅದರ ಉಪನದಿಗಳೆಲ್ಲ ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಅಲ್ಲಿಂದ ದಕ್ಷಿಣ ಭಾರತದ ತೆಲಂಗಾಣ, ಆಂಧ್ರದವರೆಗೂ ನೀರುಣಿಸಿ ಬಂಗಾಳಕೊಲ್ಲಿ ಸೇರುತ್ತವೆ. ಹೀಗಾಗಿ ಪಶ್ಚಿಮ ಘಟ್ಟದಲ್ಲಿ, ಗುಡ್ಡ ಕುಸಿತವಾದರೆ, ಅರಣ್ಯ ನಾಶದಿಂದ ಮಳೆ ಕಡಿಮೆಯಾಗಿ ಜಲಮೂಲಗಳಿಗೆ ಹಾನಿಯಾಗಿ ಅನಾಹುತ ಸಂಭವಿಸಿದರೆ ಅದು ಇಡೀ ದಕ್ಷಿಣ ಭಾರತಕ್ಕೇ ಆಗುವ ಅನಾಹುತ!.
ಇಷ್ಟೆಲ್ಲ ಇದ್ದರೂ ಇಂಥ ವ್ಯರ್ಥ ಯೋಜನೆಯೇ ಬೇಕೆನ್ನುವುದು ಮೂರ್ಖತನವಲ್ಲದೆ ಮತ್ತೇನು?. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net