ಮೊಟ್ಟೆ ಎಸೆದು ಮಮತಾ ಸೋದರಳಿಯನ ಕೂದಲನ್ನು ರೇಷ್ಮೆಯಂತೆ ಸಿಲ್ಕಿ ಮಾಡಿದ ಜನಕ್ಕೆ ಧನ್ಯವಾದ! ಆರ್‌.ಜಿ ಕರ್ ಸಂತ್ರಸ್ತೆಯ ತಾಯಿ ರತ್ನಾ ದೇವ್‌ನಾಥ್ ವ್ಯಂಗ್ಯ | Ratna Devnath on Abhishek Banerjee

ಮೊಟ್ಟೆ ಎಸೆದು ಮಮತಾ ಸೋದರಳಿಯನ ಕೂದಲನ್ನು ರೇಷ್ಮೆಯಂತೆ ಸಿಲ್ಕಿ ಮಾಡಿದ ಜನಕ್ಕೆ ಧನ್ಯವಾದ! ಆರ್‌.ಜಿ ಕರ್ ಸಂತ್ರಸ್ತೆಯ ತಾಯಿ ರತ್ನಾ ದೇವ್‌ನಾಥ್ ವ್ಯಂಗ್ಯ
ಮೊಟ್ಟೆ ಎಸೆದು ಮಮತಾ ಸೋದರಳಿಯನ ಕೂದಲನ್ನು ರೇಷ್ಮೆಯಂತೆ ಸಿಲ್ಕಿ ಮಾಡಿದ ಜನಕ್ಕೆ ಧನ್ಯವಾದ! ಆರ್‌.ಜಿ ಕರ್ ಸಂತ್ರಸ್ತೆಯ ತಾಯಿ ರತ್ನಾ ದೇವ್‌ನಾಥ್ ವ್ಯಂಗ್ಯ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತದ ಪತನದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲಾದ ದಾಳಿಯ ಸುತ್ತಲಿನ ರಾಜಕೀಯ ಹಗ್ಗಜಗ್ಗಾಟ ಮತ್ತಷ್ಟು ಉಗ್ರ ರೂಪ ಪಡೆದುಕೊಂಡಿದೆ. ಕೋಲ್ಕತ್ತಾದ ಸೋನಾರ್‌ಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ಮೊಟ್ಟೆ ಮತ್ತು ಕಲ್ಲು ತೂರಾಟದ ಘಟನೆಯನ್ನು ಮುಕ್ತವಾಗಿ ಬೆಂಬಲಿಸಿರುವ ಪಾಣಿಹಾಟಿ ಕ್ಷೇತ್ರದ ನೂತನ ಬಿಜೆಪಿ ಶಾಸಕಿ ರತ್ನಾ ದೇವ್‌ನಾಥ್(Ratna Devnath on Abhishek Banerjee), ಟಿಎಂಸಿ ನಾಯಕನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಕೃತ್ಯಗಳ ಫಲವನ್ನು ಪ್ರತಿಯೊಬ್ಬರೂ ಅನುಭವಿಸಲೇಬೇಕು ಎಂದು ಎಚ್ಚರಿಸಿರುವ ಅವರು, ದಾಳಿ ನಡೆಸಿದ ಸಾರ್ವಜನಿಕರನ್ನು ಕೊಂಡಾಡಿದ್ದಾರೆ.

ಅಭಿಷೇಕ್ ತ್ವಚೆ ಮತ್ತು ಕೂದಲಿನ ಆರೈಕೆ ಮಾಡಿದ ಸೋನಾರ್‌ಪುರ ಜನತೆ! - ಶಾಸಕಿಯ ಚೀಕಿ ಜಿಬೆ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಟಿಎಂಸಿ ಯುವ ನಾಯಕನಿಗೆ ಅತ್ಯಂತ ತೀಕ್ಷ್ಣವಾದ ಚುಚ್ಚುಮಾತುಗಳಿಂದ ಅಣಕಿಸಿದ ರತ್ನಾ ದೇವ್‌ನಾಥ್, ಅಭಿಷೇಕ್ ಬ್ಯಾನರ್ಜಿ ಅವರ ತ್ವಚೆ ಮತ್ತು ಕೂದಲಿನ ಆರೈಕೆಯನ್ನು ಮಾಡಲು ಸ್ವತಃ ಮುಂದಾದ ಸೋನಾರ್‌ಪುರ ಜನತೆಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಅವರ ಮೇಲೆ ಮೊಟ್ಟೆಗಳನ್ನು ಎಸೆಯುವ ಮೂಲಕ ಅವರ ಕೂದಲನ್ನು ಅತ್ಯಂತ ಮೃದು ಹಾಗೂ ರೇಷ್ಮೆಯಂತೆ ಕಂಗೊಳಿಸುವಂತೆ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅನುಭವಿಸಿದ ಸೋಲನ್ನು ಸ್ಮರಿಸಿದ ರತ್ನ ದೇವ್‌ನಾಥ್, ಬಂಗಾಳದ ಮತದಾರರು ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ರಾಜ್ಯದಲ್ಲಿದ್ದ ಚುನಾವಣಾ ಹಿಂಸಾಚಾರಕ್ಕೆ ಬ್ರೇಕ್ ಹಾಕಿದ್ದಾರೆ ಎಂದಿದ್ದಾರೆ. ಒಂದೊಮ್ಮೆ ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಗೆದ್ದಿದ್ದರೆ, ಅವರು ನಮ್ಮನ್ನು ಕನಿಷ್ಠ ಬಂಗಾಳಿಗಳಾಗಿಯಾದರೂ ಬದುಕಲು ಬಿಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ರಕ್ತಪಾತದ ಸರಣಿಗೆ ಕೊನೆಯೇ ಇರುತ್ತಿರಲಿಲ್ಲ ಎಂದು ಆತಂಕ ಹೊರಹಾಕಿದ್ದಾರೆ.

"ಅತ್ತೆ-ಸೋದರಾವಳಿ ಸೇರಿ ನನ್ನ ಮಗಳ ಕನಸುಗಳನ್ನು ಕಸಿದುಕೊಂಡರು!" - ರತ್ನಾ ದೇವ್‌ನಾಥ್ ಕಣ್ಣೀರು

ಕಳೆದ ೨೦೨೪ ರ ಆಗಸ್ಟ್‌ನಲ್ಲಿ ರಾಜ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನೊಳಗೆ ಅತ್ಯಂತ ಕ್ರೂರವಾಗಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ೩೧ ವರ್ಷದ ಟ್ರೈನಿ ವೈದ್ಯೆಯ ತಾಯಿಯಾಗಿರುವ ರತ್ನಾ ದೇವ್‌ನಾಥ್, ಮಮತಾ ಮತ್ತು ಅಭಿಷೇಕ್ ವಿರುದ್ಧ ತೀವ್ರ ಆಕ್ರೋಶದೊಂದಿಗೆ ಕಣ್ಣೀರು ಹಾಕಿದ್ದಾರೆ. ಆ ಅತ್ತೆ ಮತ್ತು ಸೋದರಾವಳಿ ಇಬ್ಬರೂ ಸೇರಿ ನನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ. ನನ್ನ ಮಗಳ ಆತ್ಮಕ್ಕೆ ಇನ್ನು ಎಷ್ಟು ಜನ್ಮವೆತ್ತಿದರೂ ಶಾಂತಿ ಸಿಗಲಾರದು. ಏಕೆಂದರೆ ಅವಳು ಕಂಡಿದ್ದ ಯಾವುದೇ ಕನಸುಗಳು ನನಸಾಗಲು ಇವರು ಬಿಡಲಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.

ಚೋರ್, ಚೋರ್’ ಘೋಷಣೆಗಳ ನಡುವೆ ಕ್ರಿಕೆಟ್ ಹೆಲ್ಮೆಟ್ ಧರಿಸಿ ಓಡಿದ ಅಭಿಷೇಕ್!

ಕೋಲ್ಕತ್ತಾದ ಸೋನಾರ್‌ಪುರಕ್ಕೆ ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿದ್ದಾಗ ನೂರಾರು ಜನರ ಆಕ್ರೋಶದ ರೊಚ್ಚಿಗೆ ಸಿಲುಕಿದ್ದರು. ಜಮಾಯಿಸಿದ್ದ ಬೃಹತ್ ಜನಸಮೂಹವು ಅವರ ಮುಖದ ಎದುರೇ ಚೋರ್, ಚೋರ್ ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಾ, ಸಿಕ್ಕಸಿಕ್ಕ ಕಲ್ಲು ಮತ್ತು ಮೊಟ್ಟೆಗಳನ್ನು ಅವರ ಮೇಲೆ ತೂರಿದ್ದರು. ಉದ್ರಿಕ್ತ ಗೂಂಡಾಗಳಿಂದ ತಪ್ಪಿಸಿಕೊಳ್ಳಲು ಅಭಿಷೇಕ್ ಬ್ಯಾನರ್ಜಿ ಅವರು ತರಾತುರಿಯಲ್ಲಿ ಕ್ರಿಕೆಟ್ ಹೆಲ್ಮೆಟ್ ಧರಿಸಿ ಕಾರಿನ ಕಡೆಗೆ ಓಡಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು.
ಈ ದಾಳಿಯನ್ನು ಬಿಜೆಪಿ ಪ್ರಾಯೋಜಿತ ಸಂಚು ಎಂದು ಟಿಎಂಸಿ ಹೈಕಮಾಂಡ್ ದೂರುತ್ತಿದ್ದರೂ, ೧೫ ವರ್ಷಗಳ ಮಮತಾ ಆಡಳಿತದ ಭ್ರಷ್ಟಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಬಂಗಾಳದ ಜನತೆ ತಾವಾಗಿಯೇ ಬೀದಿಗೆ ಇಳಿದು ತೀರಿಸಿಕೊಳ್ಳುತ್ತಿರುವ ಸಾರ್ವಜನಿಕ ಆಕ್ರೋಶ ಇದಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಪ್ರಚಂಡ ಬಹುಮತದೊಂದಿಗೆ ಹೊಸ ಸರ್ಕಾರ ರಚಿಸುತ್ತಿದ್ದಂತೆಯೇ ಟಿಎಂಸಿ ಪಾಳಯದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net