ಚಾಟಿಂಗ್​ನಲ್ಲಿ ಅರಳಿದ ಪ್ರೇಮ... ಯುಪಿ ಯುವಕನ ನಂಬಿ ತಾಳಿ ಕಟ್ಟಿಸಿಕೊಂಡ ಥೈಲ್ಯಾಂಡ್​ ಬೆಡಗಿ ಕಣ್ಣೀರು​ | Thailand Women

ಉತ್ತರ ಪ್ರದೇಶದ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಇಷ್ಟಪಟ್ಟ ಥೈಲ್ಯಾಂಡ್ ಮೂಲದ ಮಹಿಳಾ ಉದ್ಯಮಿ, ಈತನ ಮರುಳಾದ, ಬಣ್ಣದ ಮಾತುಗಳಿಗೆ ನಂಬಿದ್ದಲ್ಲದೇ ಪ್ರೀತಿಗೆ ಜಾರಿದರು. ನಂತರದಲ್ಲಿ ದಾಂಪತ್ಯಕ್ಕೂ ಕಾಲಿಟ್ಟರು. ಆದರೆ, ಪ್ರಿಯಕರ ಮಾಡಿದ್ದು ಮಾತ್ರ ನಂಬಿಕೆ ದ್ರೋಹ.
Thai Woman
ಚಾಟಿಂಗ್​ನಲ್ಲಿ ಅರಳಿದ ಪ್ರೇಮ... ಯುಪಿ ಯುವಕನ ನಂಬಿ ತಾಳಿ ಕಟ್ಟಿಸಿಕೊಂಡ ಥೈಲ್ಯಾಂಡ್​ ಬೆಡಗಿ ಕಣ್ಣೀರು​ | Thai Woman
Published on: 

ಉತ್ತರ ಪ್ರದೇಶ: ಸೋಷಿಯಲ್​ ಮೀಡಿಯಾದಲ್ಲಿ ಅರಳುವ ಸ್ನೇಹ, ನಂತರ ಪ್ರೀತಿಗೆ ತಿರುಗಿ ಅಲ್ಲಿಂದ ಕೆಲವೇ ಕೆಲವು ದಿನ ಅಥವಾ ತಿಂಗಳಲ್ಲಿ ಮದುವೆ ಹಂತಕ್ಕೆ ಹೋಗಿರುವ ಅದೆಷ್ಟೋ ನಿದರ್ಶನಗಳು ಇಂದು ನಮ್ಮ ನಿಮ್ಮ ಮುಂದಿವೆ. ಅದರಲ್ಲೂ, ದಾಂಪತ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಮುರಿದು ಬಿದ್ದ ಘಟನೆಗಳು ಅದಕ್ಕಿಂತ ಹೆಚ್ಚಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್​, ಬಣ್ಣದ ಮಾತುಗಳು, ಲವ್ವಿಡವ್ವಿಗಳು ಕೊನೆಗೆ ನಂಬಿಕೆ ದ್ರೋಹ, ವಂಚನೆ, ಕಣ್ಣೀರಿಗೆ ಕಾರಣವಾಗುತ್ತೆ ಎಂಬುದಕ್ಕೆ ಈ ಘಟನೆ ಕೂಡ ಒಂದು ಜ್ವಲಂತ ಸಾಕ್ಷಿ.

ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ಪರಿಚಯ, ಪ್ರೀತಿಯಾಗಿ ಅರಳಿ, ಕೊನೆಗೆ ಮದುವೆಯ ಸಪ್ತಪದಿಯನ್ನೂ ತುಳಿಯಿತು. ಸಿನಿಮಾ ಕಥೆಯನ್ನೂ ಮೀರಿಸುವಂತಿದ್ದ ಈ ಪ್ರೇಮಕಥೆಯ ಅಂತ್ಯ ಮಾತ್ರ ಸುಖದ ಹಾದಿಯಲ್ಲಿ ಸಾಗಲಿಲ್ಲ. ಉತ್ತರ ಪ್ರದೇಶದ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಇಷ್ಟಪಟ್ಟ ಥೈಲ್ಯಾಂಡ್ ಮೂಲದ ಮಹಿಳಾ ಉದ್ಯಮಿ, ಈತನ ಮರುಳಾದ, ಬಣ್ಣದ ಮಾತುಗಳಿಗೆ ನಂಬಿದ್ದಲ್ಲದೇ ಪ್ರೀತಿಗೆ ಜಾರಿದರು. ನಂತರದಲ್ಲಿ ದಾಂಪತ್ಯಕ್ಕೂ ಕಾಲಿಟ್ಟರು. ಆದರೆ, ಪ್ರಿಯಕರ ಮಾಡಿದ್ದು ಮಾತ್ರ ನಂಬಿಕೆ ದ್ರೋಹ.

ಥೈಲ್ಯಾಂಡ್‌ನಲ್ಲಿ ರೆಸ್ಟೋರೆಂಟ್ ಮತ್ತು ಕ್ಯಾಂಟೀನ್ ನಡೆಸುತ್ತಿರುವ ಉಪ್ಸೋರ್ನ್ ಎಂಬ ಮಹಿಳೆಗೆ ಕಾನ್ಪುರದ ಉದ್ಯಮಿ ಇರ್ಫಾನ್ ಎಂಬಾತ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ. 'ನನಗೆ ಇನ್ನೂ ಮದುವೆಯಾಗಿಲ್ಲ' ಎಂದು ಆಕೆಯನ್ನು ನಂಬಿಸಿದ್ದ ಇರ್ಫಾನ್. ನೇರವಾಗಿ ಥೈಲ್ಯಾಂಡ್‌ಗೆ ಹೋಗಿ, ತನ್ನ ಮೋಸದ ಖೆಡ್ಡಾಗೆ ಉಪ್ಸೋರ್ನ್ ಬೀಳಿಸಿ, ಎರಡು ವರ್ಷಗಳ ಹಿಂದೆ ಥೈಲ್ಯಾಂಡ್‌ನಲ್ಲೇ ಮದುವೆ ಕೂಡ ಆಗಿಬಿಟ್ಟ. ಆದರೆ, ದಾಂಪತ್ಯಕ್ಕೆ ಕಾಲಿಟ್ಟ ಬಳಿಕ ಅಸಲಿ ಬಣ್ಣವನ್ನು ಹಂತ ಹಂತವಾಗಿ ಬಯಲು ಮಾಡಿದ್ದಾನೆ.

ಬಿಜಿನೆಸ್ ನೆಪದಲ್ಲಿ 60 ಲಕ್ಷ ರೂ. ಲೂಟಿ

ಮದುವೆಯಾದ ಬೆನ್ನಲ್ಲೇ ಇರ್ಫಾನ್ ತನ್ನ ಅಸಲಿ ಆಟ ತೋರಿಸಲು ಶುರುಮಾಡಿದ್ದ. ಉದ್ಯಮದ ಅಗತ್ಯತೆಗಳು ಹಾಗೂ ಆರ್ಥಿಕ ಸಂಕಷ್ಟದ ನೆಪ ಹೇಳಿ ಮಹಿಳೆಯಿಂದ ಹಂತ ಹಂತವಾಗಿ ಹಣ ಪೀಕಲು ಆರಂಭಿಸಿದ್ದ. ಪತಿಯ ಮಾತನ್ನು ನಂಬಿದ ಉಪ್ಸೋರ್ನ್, ತಮ್ಮ ರೆಸ್ಟೋರೆಂಟ್ ಸಂಪಾದನೆ ಹಾಗೂ ಸಂಬಂಧಿಕರಿಂದ ಸಾಲ ಮಾಡಿ ಒಟ್ಟು 60 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಹಣ ತನ್ನ ಕೈಸೇರುತ್ತಿದ್ದಂತೆ ಇರ್ಫಾನ್ ಸಂಪರ್ಕವನ್ನೇ ಕಡಿತಗೊಳಿಸಿ ಭಾರತಕ್ಕೆ ಪರಾರಿಯಾಗಿದ್ದ. ಈ ಶಾಕ್​ಗಿಂತಲೂ ಮತ್ತೊಂದು ಅಚ್ಚರಿ ವಿಷಯ ಕೇಳಿ ಥೈಲ್ಯಾಂಡ್​ ಮಹಿಳೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅದುವೇ ತಾನು ಎರಡನೇ ಹೆಂಡತಿ ಎಂಬ ಸತ್ಯ.

ಕಾನ್ಪುರಕ್ಕೆ ಬಂದ ಮಹಿಳೆಗೆ ಕಾದಿತ್ತು ಸತ್ಯ!

ತಿಂಗಳುಗಟ್ಟಲೆ ಪತಿಯಿಂದ ಯಾವುದೇ ಫೋನ್​ ಕರೆ ಅಥವಾ ಸಂದೇಶ ಬಾರದಿದ್ದಾಗ ಆತಂಕ ಹಾಗೂ ಅನುಮಾನಗೊಂಡ ಉಪ್ಸೋರ್ನ್, ಕಿರಾತಕನನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ. ಅ. 6ರಂದು ಕಾನ್ಪುರದಲ್ಲಿರುವ ಇರ್ಫಾನ್ ಮನೆಯನ್ನು ಹೇಗೋ ಹುಡುಕಿಕೊಂಡು ಬಂದ ಆಕೆಗೆ ಮನೆಯೊಳಗಿದ್ದ ಮಹಿಳೆಯನ್ನು ನೋಡಿ ಅಚ್ಚರಿಯಾಗಿದೆ. ಈ ವೇಳೆ ನೀವ್ಯಾರು ಎಂದು ಪ್ರಶ್ನಿಸಿದಾಗ, ಇರ್ಫಾನ್‌ಗೆ ಈಗಾಗಲೇ ಮದುವೆಯಾಗಿ 12 ವರ್ಷಗಳಾಗಿದ್ದು, ಮೂವರು ಮಕ್ಕಳಿದ್ದಾರೆ ಎಂಬ ಸತ್ಯ ಬಯಲಿಗೆ ಬಂದಿದೆ.

ಧರ್ಮ ಬದಲಿಸು, ಬುರ್ಖಾ ಧರಿಸು

ತನಗೆ ವಂಚನೆ ಮಾಡಿರುವುದನ್ನು ಪ್ರಶ್ನಿಸಿ, ತಾನು ಕೊಟ್ಟಿದ್ದ 60 ಲಕ್ಷ ರೂಪಾಯಿ ಹಣವನ್ನು ವಾಪಸ್ ನೀಡುವಂತೆ ಉಪ್ಸೋರ್ನ್ ಒತ್ತಾಯಿಸಿದಾಗ ಪರಿಸ್ಥಿತಿ ತೀವ್ರ ಜಗಳಕ್ಕೆ ತಿರುಗಿದೆ. ಇರ್ಫಾನ್ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ನನ್ನೊಂದಿಗೆ ಇರಬೇಕಾದರೆ ಅಥವಾ ನಿನಗೆ ಹಣ ವಾಪಸ್ ಬೇಕಿದ್ದರೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬುರ್ಖಾ ಧರಿಸಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಉಪ್ಸೋರ್ನ್ ಆರೋಪಿಸಿದ್ದಾರೆ.

Also Read
ಬೆರಳಷ್ಟಿಲ್ಲದ ಈ ಸೀಗಡಿ ಮಾಡೋ ಸೌಂಡ್​ ಮುಂದೆ ಬುಲೆಟ್​ ಶಬ್ದವೇ ಠುಸ್​! ಇಲ್ಲಿದೆ ನಿಮ್ಮ ಹುಬ್ಬೇರಿಸುವ ಸಂಗತಿ | Pistol Shrimp
Thai Woman

ಹೆಡೆಮುರಿ ಕಟ್ಟಿದ ಪೊಲೀಸರು

ನಿರಾಶೆ ಮತ್ತು ವಂಚನೆಯಿಂದ ಕಂಗಾಲಾದ ಥೈಲ್ಯಾಂಡ್ ಮಹಿಳೆ, ನಗರದ ಹೆಚ್ಚುವರಿ ಪೊಲೀಸ್ ಉಪಾಯುಕ್ತ (ಈಸ್ಟ್) ಶಿವಾ ಸಿಂಗ್ ಅವರನ್ನು ಭೇಟಿ ಮಾಡಿ ತಮಗಾದ ಅನ್ಯಾಯವನ್ನು ದೂರಿನ ಮೂಲಕ ವಿವರಿಸಿದ್ದಾರೆ. ಪ್ರಕರಣದಲ್ಲಿ ಧಾರ್ಮಿಕ ಮತಾಂತರದ ಆರೋಪವೂ ಸೇರಿದ್ದರಿಂದ ಗಂಭೀರವಾಗಿ ಪರಿಗಣಿಸಿದ ಖಾಕಿ ಪಡೆ, ತಕ್ಷಣವೇ ಮಹಿಳೆಯ ದೂರಿನ ಆಧಾರದ ಮೇಲೆ ಇರ್ಫಾನ್​ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net