‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯವನ್ನು ಹೊಂದಿದ್ದ 8ನೇ ತರಗತಿಯ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್ಸಿಇಆರ್ಟಿ) ಪಠ್ಯಪುಸ್ತಕವು ವಿವಾದಕ್ಕೆ ಗುರಿಯಾಗಿದೆ. ಈ ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್ ಅದರ ಮೇಲೆ ಸಂಪೂರ್ಣ ನಿಷೇಧ ಹೇರಿದ್ದು ಮಾತ್ರವಲ್ಲ, ಈ ರೀತಿಯ ಪಾಠ ಹೇಗೆ ಬರಲು ಸಾಧ್ಯವಾಯಿತು ಎಂದು ಕಿಡಿಕಾರಿದೆ. ಈ ವಿಷಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ ಮತ್ತು ಈ ವಿಷಯದ (ನ್ಯಾಯಾಂಗದಲ್ಲಿ ಭ್ರಷ್ಟಾಚಾರ) ಗಂಭೀರತೆ ಅರಿತು, ಅದನ್ನು ಪ್ರಮುಖ ವಿಷಯವಾಗಿ ಪ್ರಕಟಿಸಿದ/ಪ್ರಸಾರ ಮಾಡಿದ ಜವಾಬ್ದಾರಿಯುತ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಎನ್ಸಿಇಆರ್ಟಿ ಕ್ಷಮೆಯಾಚಿಸಿದ್ದು, ಪಠ್ಯಪುಸ್ತಕ ಮರುರಚಿಸುವುದಾಗಿ ಘೋಷಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 11ರಂದು ನಡೆಯಲಿದೆ. ವಿವಾದಿತ ಪಠ್ಯ ರಚಿಸಿದ ಇಬ್ಬರು ಲೇಖಕರನ್ನು ‘ಕಪು್ಪಪಟ್ಟಿ’ಗೆ ಸೇರಿಸಲಾಗಿದೆ ಎಂದು ಎನ್ಸಿಇಆರ್ಟಿ ಮೂಲಗಳು ತಿಳಿಸಿವೆ.