

ನವದೆಹಲಿ: ಮುಂಬೈ ಮೇಲೆ 2008ರಲ್ಲಿ ನಡೆದ 26/11 ಭಯೋತ್ಪಾದಕ ದಾಳಿ ರೀತಿಯಲ್ಲೇ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆ ಮತ್ತೊಂದು ಸಮುದ್ರ ಮಾರ್ಗದ ದಾಳಿಗೆ ಸಿದ್ಧತೆ ನಡೆಸುತ್ತಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಕರಾಚಿ ಸಮೀಪದ ಪ್ರವಾಸಿ ತಾಣವೊಂದರಲ್ಲಿ ಲಷ್ಕರ್ ಉಗ್ರರಿಗೆ ಸಮುದ್ರದೊಳಗಿನ ಕಾರ್ಯಾಚರಣೆಗಳ ವಿಶೇಷ ತರಬೇತಿ ನೀಡಲಾಗುತ್ತಿದೆ. ಪ್ರವಾಸಿಗರ ಸೋಗಿನಲ್ಲಿ ದ್ವೀಪಕ್ಕೆ ತೆರಳುವ ಉಗ್ರರು ಸ್ಕೂಬಾ ಡೈವಿಂಗ್ ಮತ್ತಿತರ ಚಟುವಟಿಕೆಗಳ ನೆಪದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಮಧ್ಯಮವೊಂದು ವರದಿ ಮಾಡಿದೆ. ಕರಾಚಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಚರ್ನಾ ದ್ವೀಪದಲ್ಲಿ ಈ ಚಟುವಟಿಕೆಗಳು ನಡೆಯುತ್ತಿವೆ. ಸ್ಕೂಬಾ ಡೈವಿಂಗ್ಗೆ ಹೆಸರುವಾಸಿಯಾಗಿರುವ ಈ ಪ್ರದೇಶಕ್ಕೆ ಪ್ರವಾಸಿಗರಂತೆ ತೆರಳುವ ಉಗ್ರರಿಗೆ ಸಮುದ್ರದೊಳಗೆ ಕಾರ್ಯಾಚರಣೆ ನಡೆಸುವ ಕೌಶಲ ಕಲಿಸಲಾಗುತ್ತಿದೆ ಎನ್ನಲಾಗಿದೆ.
ಲಷ್ಕರ್ ‘ದಾವಾ ಮೆರೈನ್ ವಿಂಗ್’ ಅಥವಾ ‘ಸದಾ-ಎ-ಹುರಿಯತ್’ ಎಂದು ಗುರುತಿಸಲಾಗುವ ಘಟಕಕ್ಕೆ ಸೇರಿದ ಉಗ್ರರು ಈ ತರಬೇತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮುದ್ರದಾಳದಲ್ಲಿ ಉಸಿರಾಟದ ಉಪಕರಣಗಳ ನೆರವಿನಿಂದ ಸಂಚರಿಸುವ ಸ್ಕೂಬಾ ಡೈವಿಂಗ್ ತರಬೇತಿ ನೀಡಲಾಗುತ್ತಿದೆ. ಸಮರ ಕಾರ್ಯಾಚರಣೆಗಳಿಗೆ ಅಗತ್ಯವಾದ ಈಜು ಕೌಶಲ (ಕಾಂಬ್ಯಾಟ್ ಸ್ವಿಮ್ಮಿಂಗ್) ಅನ್ನು ಈ ಉಗ್ರರಿಗೆ ಕಲಿಸಲಾಗುತ್ತಿದೆ. ಸಾಮಾನ್ಯ ಪ್ರವಾಸಿ ಚಟುವಟಿಕೆಗಳ ನಡುವೆಯೇ ಈ ತರಬೇತಿಯನ್ನು ಗುಪ್ತವಾಗಿ ನಡೆಸಲಾಗುತ್ತಿದೆ.
ಈ ತರಬೇತಿ ನೀಡುತ್ತಿರುವವರು ಪಾಕಿಸ್ತಾನದ ‘ಮರ್ಕಝಿ ಮುಸ್ಲಿಂ ಲೀಗ್’ (ಪಿಎಂಎಂಎಲ್) ಸಂಘಟನೆಯ ಸದಸ್ಯರು ಎನ್ನಲಾಗಿದೆ. ಇದು ಲಷ್ಕರ್-ಎ-ತೊಯ್ಬಾದ ಬೆಂಬಲಿತ ಸಂಘಟನೆಯಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸಮುದ್ರ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ವಿಸ್ತರಿಸಲು ಲಷ್ಕರ್ ಸಂಘಟನೆ ಪ್ರಯತ್ನಿಸುತ್ತಿದೆ. ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದ ಮಂಗ್ಲಾ ಅಣೆಕಟ್ಟಿನಲ್ಲಿಯೂ ಉಗ್ರರಿಗೆ ಜಲಚಟುವಟಿಕೆಗಳ ತರಬೇತಿ ನೀಡಿರುವುದು ಪತ್ತೆಯಾಗಿತ್ತು. ಉಗ್ರರ ನೆಲೆಗಳಲ್ಲಿದ್ದ ಈಜುಕೊಳಗಳನ್ನೂ ತರಬೇತಿಗೆ ಬಳಸಲಾಗಿತ್ತು ಎನ್ನಲಾಗಿದೆ.
2008ರ ನವೆಂಬರ್ನಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಲಷ್ಕರ್ ಉಗ್ರರು ಸಮುದ್ರ ಮಾರ್ಗದ ಮೂಲಕ ನಗರ ಪ್ರವೇಶಿಸಿದ್ದರು. 2008ರಿಂದಲೇ ಸಂಘಟನೆ ಸಣ್ಣ ಪ್ರಮಾಣದ ಸಮುದ್ರ ಕಾರ್ಯಾಚರಣೆ ಘಟಕವನ್ನು ಹೊಂದಿದೆ ಎನ್ನಲಾಗಿದೆ. ಆದರೆ ಇದೀಗ ಸಮುದ್ರ ಮಾರ್ಗದ ಮೂಲಕ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದು ಭಾರತೀಯ ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ.