ದೆಹಲಿ ಸ್ಫೋಟಕ್ಕೂ ಮುನ್ನ ಹಮಾಸ್ ಮಾದರಿಯ ಡ್ರೋನ್​ ದಾಳಿಗೆ ಉಗ್ರರ ಸಂಚು! ಹೊರಬಿತ್ತು ಭಯಾನಕ ಸತ್ಯ

ದೆಹಲಿ ಬ್ಲಾಸ್ಟ್​
ದೆಹಲಿ ಬ್ಲಾಸ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಕೆಂಪುಕೋಟೆಯ ಬಳಿ ಕಾರು ಸ್ಫೋಟ ಪ್ರಕರಣ
  • ಹಮಾಸ್ ಶೈಲಿಯ ಡ್ರೋನ್​ ದಾಳಿಗೆ ಸಂಚು
  • ರಾಕೆಟ್ ಬಾಂಬ್ ಮತ್ತು ಡ್ರೋನ್ ಆಧಾರಿತ ಸ್ಫೋಟಕ
ನವದೆಹಲಿ: ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯ ಬಳಿ ಕಾರು ಸ್ಫೋಟಗೊಂಡ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದನ್ನು ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ನಡೆಸಿದೆ ಎಂದು ವರದಿಗಳು ಸೂಚಿಸಿವೆ. ದೆಹಲಿ ಸ್ಫೋಟಕ್ಕೂ ಮೊದಲು, ಡ್ರೋನ್‌ಗಳನ್ನು ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸಲು ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಗಳು ನಡೆದಿವೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.
ಹಮಾಸ್ ಶೈಲಿಯ ಡ್ರೋನ್​ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಹಮಾಸ್ ಪ್ಯಾಲೇಸ್ಟಿನಿಯನ್ ಸಶಸ್ತ್ರ ಸಂಘಟನೆಯಾಗಿದೆ. ಅ.7, 2023ರಂದು ಇಸ್ರೇಲ್‌ನಲ್ಲಿ ಹಮಾಸ್ ಅಂತಹ ಭೀಕರ ದಾಳಿಯನ್ನು ನಡೆಸಿತ್ತು. ಇದೇ ಮಾದರಿಯಲ್ಲಿ ದಾಳಿ ನಡೆಸಲು ಸಂಚು ಹೂಡಿದ್ದಾಗಿ ತನಿಖಾ ಸಂಸ್ಥೆಗಳು ಉಲ್ಲೇಖಿಸಿವೆ.
ದೆಹಲಿ ಸ್ಫೋಟ ಬೆನ್ನಲ್ಲೇ ಭಾರತದಲ್ಲಿ ಎರಡನೇ ಶಂಕಿತನನ್ನು ಎನ್​ಐಎ ಬಂಧಿಸಿದ ನಂತರ ಹಲವಾರು ವಿಷಯಗಳು ಬೆಳಕಿಗೆ ಬಂದಿವೆ. ಈತ ಆತ್ಮಹತ್ಯಾ ಬಾಂಬರ್ ಉಮರ್-ಉನ್-ನಬಿಯೊಂದಿಗೆ ಕೆಲಸ ಮಾಡಿದ್ದಾನೆ. ಮೊದಲ ಶಂಕಿತ ಅಮೀರ್ ರಶೀದ್ ಅಲಿಲಾ ಜಮ್ಮು ಮತ್ತು ಕಾಶ್ಮೀರದ ನಿವಾಸಿ. ಎರಡನೇ ಶಂಕಿತ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಕೂಡ ಜಮ್ಮು ಮತ್ತು ಕಾಶ್ಮೀರದವನು. ಈತನನ್ನು ಶ್ರೀನಗರದಲ್ಲಿ ತನಿಖಾ ತಂಡ ಬಂಧಿಸಿದೆ.
ದೆಹಲಿ ಸ್ಫೋಟದ ಕುರಿತು ಎನ್‌ಐಎ ನಡೆಸಿದ ತನಿಖೆಯಲ್ಲಿ ಆರೋಪಿಗಳು ಆರಂಭದಲ್ಲಿ ಹೆಚ್ಚಿನ ಭದ್ರತಾ ವಲಯಗಳಲ್ಲಿ ರಾಕೆಟ್ ಬಾಂಬ್ ಮತ್ತು ಡ್ರೋನ್ ಆಧರಿತ ಸ್ಫೋಟಕ ದಾಳಿಗಳನ್ನು ಸಂಚು ರೂಪಿಸಿದ್ದರು. ಈ ಮಾಸ್ಟರ್​ಪ್ಲ್ಯಾನ್​ ಅನ್ನು ಕಾರ್ಯಗತಗೊಳಿಸಲು ಟೆಕ್ನಿಕಲ್​ ಎಕ್ಸ್​ಪರ್ಟ್​ಗಳನ್ನು ಹುಡುಕುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅನಂತನಾಗ್ ಜಿಲ್ಲೆಯ ನಿವಾಸಿ ಡ್ಯಾನಿಶ್, ಈ ವೈಟ್-ಕಾಲರ್ ಮಾಡ್ಯೂಲ್ ಮತ್ತು ಆತ್ಮಹತ್ಯಾ ಬಾಂಬರ್ ನಬಿಯ ಸಹಚರನಾಗಿ ಕೆಲಸ ಮಾಡಿದ್ದ ಎಂದು ಎನ್​ಐಎ ತಿಳಿಸಿದೆ.

ಏನಿದು ಘಟನೆ?

ಸೋಮವಾರ (ನ.10) ಸಂಜೆ, ಕೆಂಪು ಕೋಟೆ ಬಳಿಯ ಟ್ರಾಫಿಕ್​ ಸಿಗ್ನಲ್​ನಲ್ಲಿ ಬಿಳಿ ಬಣ್ಣದ ಹೂಂಡೈ ಐ20 ಕಾರು ಸ್ಫೋಟಗೊಂಡು 13 ಮಂದಿ ದುರಂತ ಸಾವಿಗೀಡಾದರು. ಅಲ್ಲದೆ, ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡರು. ಸ್ಫೋಟದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಹತ್ತಿರದ ಹಲವಾರು ವಾಹನಗಳು ಕೂಡ ಸುಟ್ಟು ಕರಕಲಾದವು. ಅಲ್ಲದೆ, ವಾಹನದ ಬಿಡಿಭಾಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಲ್ಲಿ ಬಿದ್ದಿದ್ದ ಹೆಣಗಳು ಮತ್ತು ಗಾಯಗೊಂಡು ನರಳುತ್ತಿದ್ದ ಮಂದಿಯನ್ನು ನೋಡಿ ಜನರ ಕೂಗಾಟ ಘಟನಾ ಸ್ಥಳವನ್ನು ತಕ್ಷಣವೇ ಅವ್ಯವಸ್ಥೆಯ ಗೂಡನ್ನಾಗಿ ಮಾಡಿತು.
ಇಡೀ ಪ್ರದೇಶ ರಕ್ತಸಿಕ್ತವಾಗಿತ್ತು. ಅಂದಹಾಗೆ, ಈ ಸ್ಫೋಟ ಸಂಭವಿಸುವುದಕ್ಕೂ ಮುನ್ನ ಪ್ರಮುಖ ಬೆಳವಣಿಗೆಯೊಂದು ನಡೆದಿತ್ತು. ಇದೇ ಬೆಳವಣಿಗೆ ಭೀಕರ ಸ್ಫೋಟಕ್ಕೆ ಕಾರಣ ಎಂದು ನಂಬಲಾಗಿದೆ. ಏನಾಗಿತ್ತು ಅಂದರೆ, ಸೋಮವಾರ ಸಂಜೆ ಕಾರು ಸ್ಫೋಟ ಆಗುವುದಕ್ಕೂ ಮುನ್ನ ಅದೇ ದಿನ ಬೆಳಗ್ಗೆ ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸರು ಬರೋಬ್ಬರಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net