ಹಸು ಮೇಯಿಸಲು ಹೋದ ರೈತನನ್ನು 30 ನಿಮಿಷ ಕಚ್ಚಿ ಹಿಡಿದ ಸಿಂಹ! ಬದುಕಿದ್ದೇ ಪವಾಡ.. Lion Attack

Lion Attack ಸಾಂದರ್ಭಿಕ ಚಿತ್ರ
Lion Attack ಸಾಂದರ್ಭಿಕ ಚಿತ್ರ
Published on
ಗಾಂಧಿನಗರ: ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ಕಾಡಿನಿಂದ ನಾಡಿಗೆ ಬಂದ ಸಿಂಹವೊಂದು ದನ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಹಠಾತ್​ ದಾಳಿ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. 

ಘಟನೆಯ ಹಿನ್ನೆಲೆ

ಭಾವನಗರ ಜಿಲ್ಲೆಯ ಗರಾಜಿಯಾ ಗ್ರಾಮದಲ್ಲಿ ಭಾನುವಾರ (ಜು 05) ಬೆಳಿಗ್ಗೆ ಸುಮಾರು 8:30 ಕ್ಕೆ ಈ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕಾಲುಭಾಯ್ ಬೋಘಾಭಾಯ್ ಪರ್ಮಾರ್ ಎಂದು ಗುರುತಿಸಲಾಗಿದೆ. ಅವರು ಎಂದಿನಂತೆ ತಮ್ಮ ಮನೆಯ ಸಮೀಪ ಹಸುಗಳಿಗೆ ಮೇವು ಹಾಕಲು ಹೋದಾಗ, ಪೊದೆಯಲ್ಲಿದ್ದ ಸಿಂಹವೊಂದು ಅವರ ಮೇಲೆ ಹಠಾತ್ತಾಗಿ ಜಿಗಿದು ಭೀಕರ ದಾಳಿ ನಡೆಸಿದೆ.

ವೈರಲ್ ವೀಡಿಯೊದಲ್ಲಿ ಏನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ  ಸಿಂಹವು ಕಾಲುಭಾಯ್ ಅವರನ್ನು ನೆಲಕ್ಕೆ ತಳ್ಳಿ, ಅವರ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿರುವುದು ಕಂಡುಬಂದಿದೆ. ಸಿಂಹವು ಅವರ ಒಂದು ಕಾಲನ್ನು ತನ್ನ ಪಂಜಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಮತ್ತೊಂದು ಕೈಯನ್ನು ತನ್ನ ದವಡೆಯಲ್ಲಿ ಬಿಗಿಯಾಗಿ ಹಿಡಿದಿರುವುದನ್ನು ಕಾಣಬಹುದು. 
ಆ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಹತಾಶ ಪ್ರಯತ್ನ ನಡೆಸುತ್ತಿರುವುದು ಕಾಣಿಸುತ್ತದೆ. ಈ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಸಿಂಹವನ್ನು ಹೆದರಿಸಿ ಓಡಿಸಲು ಜೋರಾಗಿ ಕೂಗುತ್ತಾ, ಹರಸಾಹಸ ಪಡುತ್ತಿದ್ದರೂ ಸಿಂಹವು ಗ್ರಾಮಸ್ಥರ ಕೂಗಾಟಕ್ಕೆ ಎದರದೇ ಸುಮಾರು 30 ನಿಮಿಷಗಳ ಕಾಲ ಅವರನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿತ್ತು. ಕೊನೆಗೂ ಗ್ರಾಮಸ್ಥರ ತೀವ್ರ ಪ್ರತಿರೋಧದ ನಂತರ ಆತನನ್ನು ಬಿಟ್ಟ ಸಿಂಹ, ಹತ್ತಿರದಲ್ಲೇ ಕಟ್ಟಿದ್ದ ಹಸುವಿನ ಕಡೆಗೆ ಓಡಿಹೋಗಿದೆ.

ಗಾಯಾಳುವಿನ ಸ್ಥಿತಿ ಗಂಭೀರ

ಸಿಂಹದ ತೀಕ್ಷ್ಣವಾದ ಉಗುರುಗಳು ಮತ್ತು ಹಲ್ಲುಗಳ ದಾಳಿಯಿಂದಾಗಿ ಕಾಲುಭಾಯ್ ತೀವ್ರವಾಗಿ ರಕ್ತಸ್ರಾವಕ್ಕೊಳಗಾಗಿದ್ದು, ಅವರನ್ನು ತಕ್ಷಣವೇ ರಕ್ಷಿಸಿ ಅಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ

ದಾಳಿ ನಡೆಯುತ್ತಿದ್ದಂತೆಯೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರು. ಆದರೆ, ತಕ್ಷಣವೇ ಸ್ಥಳಕ್ಕೆ ತಲುಪಲಿಲ್ಲ ಎಂದು ಸಂತ್ರಸ್ತನ ಕುಟುಂಬ ಮತ್ತು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಮರುಕಳಿಸುವ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಬಲವಾದ ಸುರಕ್ಷತಾ ಕ್ರಮಗಳು ಮತ್ತು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಆದಾಗ್ಯೂ, ಈ ಘಟನೆಯ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net