ಬಚ್ಚಿಟ್ಟ ಹೊಲದಲ್ಲಿ 5 ಲಕ್ಷ ಹಣಕ್ಕೆ ಗೆದ್ದಲು! ಕಂಗಾಲಾದ ರೈತ | Termite for money

ಗೆದ್ದಲು ತಿಂದ  5 ಲಕ್ಷ ರೂ.
ಗೆದ್ದಲು ತಿಂದ 5 ಲಕ್ಷ ರೂ.
Published on
ರಾಜಸ್ಥಾನ: ಹಣವನ್ನು ಜೋಪಾನವಾಗಿ ಇಡಬೇಕು ಎಂದು ರೈತರೊಬ್ಬರು ಮಾಡಿದ ಕೆಲಸ ಕೊನೆಗೆ ಭಾರೀ ಆಘಾತ ತಂದೊಡ್ಡಿದೆ. ಮಕ್ಕಳಿಗೂ ಸಹ ಗುಟ್ಟು ಬಿಟ್ಟುಕೊಡದೆ ರೈತ ತನ್ನ ಹೊಲದಲ್ಲಿ ಹೂತಿಟ್ಟಿದ್ದ ಬರೋಬ್ಬರಿ 5 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದು ಹಾಕಿವೆ.
ಈ ಘಟನೆ ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ನೇವಾಯಿ ಗ್ರಾಮದಲ್ಲಿ ನಡೆದಿದೆ. ಮಂಗಿಲಾಲ್ ಮೇಘವಾಲ್ ಎಂಬ ರೈತ ತಮ್ಮ ಜಮೀನಿನಲ್ಲಿ ಸುಮಾರು 5 ಲಕ್ಷ ಹಣವನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಹೂತಿಟ್ಟು, ನನ್ನ ದುಡ್ಡು ಸುರಕ್ಷಿತವಾಗಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ. ಆದರೆ ಸ್ವಲ್ಪ ದಿನಗಳ ನಂತರ ಆತನಿಗೆ ಹಣದ ಅಗತ್ಯ ಎದುರಾಗಿದೆ.

ಹೊಲ ಊಳುವಾಗ ಸಿಕ್ಕ ಹಣ

ಹಣ ಸುರಕ್ಷಿತವಾಗಿದೆ ಎಂಬ ನಂಬಿಕೆಯಲ್ಲಿದ್ದ ರೈತನಿಗೆ, ಅದನ್ನು ಎಲ್ಲಿ ಹೂತಿಟ್ಟಿದ್ದೇನೆ ಎಂಬುದೇ ಮರೆತು ಹೋಗಿತ್ತು. ಕೊನೆಗೆ ವಿಧಿಯಿಲ್ಲದೆ ಅವರು ಈ ವಿಚಾರವನ್ನು ತಮ್ಮ ಮಕ್ಕಳಿಗೆ ತಿಳಿಸಿದ್ದಾರೆ. ನಂತರ ಹಣಕ್ಕಾಗಿ ಕುಟುಂಬಸ್ಥರು ಜಮೀನಿನ ತುಂಬಾ ಅಗೆದು ನೋಡಿದರೂ ದುಡ್ಡು ಮಾತ್ರ ಸಿಕ್ಕಿರಲಿಲ್ಲ. ಇದಾದ ಬಳಿಕ ಮಳೆ ಬಂದು, ಹೊಲ ಊಳುವ ವೇಳೆ ಪಾಲಿಥಿನ್ ಚೀಲವೊಂದು ಮಣ್ಣಿನಿಂದ ಹೊರಬಂದಿತ್ತು. ಆ ಚೀಲವನ್ನು ತೆಗೆದು ನೋಡಿದಾಗ ಮಂಗಿಲಾಲ್​ಗೆ ಶಾಕ್ ಕಾದಿತ್ತು.

ನೋಟು ಚೇಂಜ್​ಗೆ ನೋ ಎಂದ ಬ್ಯಾಂಕ್

ಚೀಲದೊಳಗೆ ಇದ್ದ 5 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದು ಹಾಕಿದ್ದವು. ನೋಟುಗಳು ಸಂಪೂರ್ಣವಾಗಿ ಹಾಳಾಗಿ, ಚೂರು ಚೂರಾಗಿದ್ದವು. ಹಣವನ್ನು ಸೇಫ್​ ಆಗಿರಬೇಕು ಎಂದು ಹೊಲದಲ್ಲಿ ಬಚ್ಚಿಟ್ಟಿದ್ದ ರೈತನಿಗೆ ಕೊನೆಗೆ ಉಳಿದಿದ್ದು ಗೆದ್ದಲು ತಿಂದು ಹಾಕಿದ ಪುಡಿ ನೋಟುಗಳು ಮಾತ್ರ. ಇನ್ನು, ನೋಟುಗಳ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ಅವುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಕೂಡ ಒಪ್ಪಲಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ, ಬ್ಯಾಂಕ್‌ನ ನಿಯಮಗಳು ಹಾಗೂ ಹಣದ ವ್ಯವಹಾರಕ್ಕೆ ಬೇಕಾದ ದಾಖಲೆಗಳ ಗೊಂದಲದಿಂದ ರೈತ ಬೇಸತ್ತಿದ್ದಾನೆ. ಹೀಗಾಗಿ ತಾನು ಕಷ್ಟಪಟ್ಟು ಸಂಪಾದಿಸಿದ್ದ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. ಇದೀಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net