ಹೈದರಾಬಾದ್​​ನಲ್ಲಿರಬೇಡಿ ಅನ್ನೋದಕ್ಕೆ ತೆಲಂಗಾಣ ನಿಮ್ಮಪ್ಪಂದಿರ ಆಸ್ತಿಯೇ?; ಕಾಂಗ್ರೆಸ್ ನಾಯಕರ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ | Pawan Kalyan

ಪವನ್ ಕಲ್ಯಾಣ್
ಪವನ್ ಕಲ್ಯಾಣ್
Published on
ಹೈದರಾಬಾದ್​​: ತೆಲಂಗಾಣದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ವರ್ಸಸ್ ಪವನ್ ಕಲ್ಯಾಣ್ ಎಂಬ ವಿವಾದ ಜೋರಾಗಿದ್ದು, ಹೈದರಾಬಾದ್​​ನಲ್ಲಿರಬೇಡಿ, ಇಲ್ಲಿಗೆ ಬರಬೇಡಿ ಅನ್ನೋದಕ್ಕೆ ತೆಲಂಗಾಣ ಏನೋ ನಿಮ್ಮಪ್ಪಂದಿರ ಆಸ್ತಿಯೇ ಎಂದು ಮಂಗಳವಾರ(ಜೂ. 02) ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ ರಾಜ್ಯ ರಚನೆ ದಿನವಾದ ಇಂದು ಜನಸೇನಾ ತೆಲಂಗಾಣ ನವನಿರ್ಮಾಣ ಸಭೆಯನ್ನು ಆಯೋಜಿಸಿತ್ತು. ಆದರೆ ಹೈದರಾಬಾದ್ ಪೊಲೀಸರು ಸಭೆಗೆ ಅನುಮತಿ ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು, ಆದರೆ ಕೋರ್ಟ್ ತುರ್ತು ವಿಚಾರಣೆಗೆ ನಿರಾಕರಿಸಿತು.
ಈ ಹಿನ್ನೆಲೆ ಪವನ್ ಕಲ್ಯಾಣ್, ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಿಂದ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದು, ರಾಜ್ಯ ಸರ್ಕಾರದ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವರು ಪ್ರತ್ಯೇಕವಾದಿಗಳಂತೆ ಮಾತನಾಡುತ್ತಿದ್ದು, ರಾಜ್ಯದಲ್ಲಿ ತಮ್ಮ ವಾಸಿಸುವಿಕೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪತ್ರಿಕಾಗೋಷ್ಠಿಗೂ ಅನುಮತಿ ನೀಡುವುದನ್ನು ವಿರೋಧಿಸಿದ ಕಾಂಗ್ರೆಸ್ ಎಂಎಲ್​ಸಿ ಅಡ್ಡಂಕಿ ದಯಾಕರ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಹೈದರಾಬಾದ್‌ಗೆ ಹೇಗೆ ಪ್ರವೇಶಿಸುತ್ತೇನೆ ಎಂದು ಕೆಲವು ನಾಯಕರು ಹೇಳುತ್ತಿದ್ದಾರೆ. ತೆಲಂಗಾಣ ನಿಮ್ಮ ತಂದೆಯ ಸ್ಥಳವೇ? ನನಗೆ ಬೆದರಿಕೆ ಹಾಕಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ.
ನೀವು ಒಂದು ರಾಷ್ಟ್ರೀಯ ಪಕ್ಷ. ಕೆಲವು ಕಾಂಗ್ರೆಸ್ ನಾಯಕರು ಪ್ರತ್ಯೇಕತಾವಾದಿಗಳಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ವಿವಿಧ ರಾಜ್ಯಗಳ ಜನರು ತಾರತಮ್ಯವಿಲ್ಲದೆ ಭಾರತದಾದ್ಯಂತ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಕಾಂಗ್ರೆಸ್ ನಾಯಕರ ಈ ವರ್ತನೆ ಕುರಿತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಪ್ರತಿಕ್ರಿಯಿಸಬೇಕು. ಕಾಂಗ್ರೆಸ್ ಸದಸ್ಯರು ವಿಭಜಕ ರಾಜಕೀಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ತೆಲಂಗಾಣ ರಚನೆ ದಿನಕ್ಕೆ ಶುಭಾಶಯ ತಿಳಿಸಿದ ಅವರು, ತೆಲಂಗಾಣದೊಂದಿಗಿನ ತಮ್ಮ ಸಂಬಂಧವು ಚುನಾವಣೆಗಿಂತ ಪ್ರೀತಿಯನ್ನು ಆಧರಿಸಿದೆ. ತೆಲಂಗಾಣದ ಸಂಸ್ಕೃತಿ ಮತ್ತು ಗುರುತನ್ನು ದೀರ್ಘಕಾಲದಿಂದ ಬೆಂಬಲಿಸಿದ್ದೇನೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲೇ ದೂರದ ಬುಡಕಟ್ಟು ಮತ್ತು ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net