

5 ಗಂಟೆಯ ರೈಲು ಪ್ರಯಾಣದಲ್ಲಿ ಉಂಟಾದ ಕಹಿ ಅನುಭವ ಹಂಚಿಕೊಂಡ ಶಿವಶ್ರೀ ಸ್ಕಂದ ಪ್ರಸಾದ್
ನಾಗರಿಕ ಪ್ರಜ್ಞೆಯ ಆಟದಲ್ಲಿ ನಾವೆಲ್ಲ ಸೋತಿದ್ದೇವೆ ಎಂದು ಎಕ್ಸ್ನಲ್ಲಿ ಬರೆದುಕೊಂಡ ತೇಜಸ್ವಿ ಸೂರ್ಯ ಪತ್ನಿ
ಸಾರ್ವಜನಿಕ ಸ್ಥಳದಲ್ಲಿ ಶಾಂತಿಯುತವಾಗಿ ನಡೆದುಕೊಳ್ಳುವುದು, ಗೌರವ ಕೊಡುವುದು ಕಲಿಯೋದು ಎಂದು?
ನವ ದೆಹಲಿ: 'ದೇವರೇ ಈ ದೇಶವನ್ನು ಕಾಪಾಡಬೇಕು. ಇಂದು ನಾನು ಐದು ಗಂಟೆ ರೈಲಿನಲ್ಲಿ ಪ್ರಯಾಣಿಸಿದೆ. ಇದೊಂದು ಅಘಾತಕಾರಿಯಾಗಿ ಮಾರ್ಪಟ್ಟಿತ್ತು. ನಾವು ಸಾರ್ವಜನಿಕ ಸ್ಥಳದಲ್ಲಿ ನಮ್ಮ ವರ್ತನೆಯಲ್ಲಿ ಬದಲಾವಣೆಯನ್ನು ಎಂದು ಕಂಡು ಕೊಳ್ಳುತ್ತೇವೆಯೋ ಎನ್ನುವುದನ್ನು ಕಾದು ನೋಡಬೇಕು' ಹೀಗೆಂದು ಎಕ್ಸ್ನಲ್ಲಿ ಬರೆದುಕೊಂಡಿದ್ದು ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ರೈಲು ಪ್ರಯಾಣ ಕೆಟ್ಟ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟಿವ್ ಇರುತ್ತಾರೆ. ಅವರು ಅತಿ ವೇಗದಲ್ಲಿ ಕನ್ನಡ ಕಲಿತ ಪರಿ, ಮಾದೇವನ ಹಾಡು ಕನ್ನಡಿಗರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತ್ತು. ಸದ್ಯ ಅವರು ಎಕ್ಸ್ನಲ್ಲಿ ರೈಲು ಪ್ರಯಾಣ ಮತ್ತು ಬೋಗಿಗಳಲ್ಲಿ ಜನ ಸಾಮಾನ್ಯರ ನಡೆತೆಯೂ ಹೇಗಿತ್ತು ಎನ್ನುವ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ಗೆ ಹಲವರು ಜೊತೆಯಾಗಿದ್ದು, ಗಾಯಕಿಯ ಮಾತು ಸರಿ ಎಂದು ಒಪ್ಪಿಕೊಂಡಿದ್ದಾರೆ.
ಇಂದು ನನಗೆ ಅಘಾತಕಾರಿ ರೈಲು ಪ್ರಯಾಣದ ಅನುಭವವಾಯ್ತು. ನಾವಿರುವ ಸಾರ್ವಜನಿಕ ಸ್ಥಳದಲ್ಲಿ ಇತರಿಗೆ ಸಮಸ್ಯೆಯನ್ನುಂಟು ಮಾಡಬಾರದು. ಕೂಗಬಾರದು. ಜೋರಾಗಿ ಮಾತನಾಡಬಾರದು. ಸಹ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಡೆಯಬೇಕು. ಪ್ರತಿ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರಕೂಡದು. ಸಾರ್ವಜನಿಕ ಸ್ಥಳದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವ ವಿಚಾರವೂ ತಿಳಿಯದೇ ಇರುವುದು ವಿಷಾದನೀಯ ಎಂದಿದ್ದಾರೆ ಶಿವಶ್ರೀ ಸ್ಕಂದ ಪ್ರಸಾದ್.
ಮುಂದುವರೆದು, ಕಲಾವಿದರಾದ ನಾವು ಹೆಚ್ಚು ಶಾಂತ ವಾತಾವರಣವನ್ನು ಇಷ್ಟಪಡುತ್ತೇವೆ, ಮನಸ್ಸಲ್ಲಿ ನೂರೆಂಟು ಯೋಚನೆ, ಚಿಂತನೆ, ಸೃಜನಾಶೀಲಾತ್ಮಕ ಆಲೋಚನೆಗಳು ಥಟ್ಟನೆ ಹಾದುಹೋಗುತ್ತಿರುತ್ತದೆ. ಇದನ್ನು ಮನನ ಮಾಡಲು ನಮಗೆ ಪ್ರಶಾಂತವಾದ ವಾತಾವರಣದ ಅಗತ್ಯವಿರುತ್ತದೆ. ಆದರೆ, ನಾನು ಪ್ರಯಾಣಿಸುತ್ತಿದ್ದ ಬೋಗಿಯಲ್ಲಿದ್ದ ಜನರ ವರ್ತನೆ ನನ್ನ ಶಾಂತಿಯುತ ಪ್ರಯಾಣದ ನಂಬಿಕೆಯನ್ನು ಸುಳ್ಳಾಗಿಸಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಪ್ರಯಾಣಿಸುತ್ತಿದ್ದ ಬೋಗಿಯು 56 ಸೀಟುಗಳುಳ್ಳದ್ದು, ಆ ಪೈಕಿ 40 ಪುರುಷರು ಆವರಿಸಿಕೊಂಡಿದ್ದರು. ಐದು ಗಂಟೆಗಳ ಕಾಲ ಎಲ್ಲರೊಂದಿಗೂ ಜೋರಾಗಿ ಮಾತನಾಡುತ್ತಾ, ನಗುತ್ತಾ, ಹಾಡುತ್ತಾ ಶಾಂತಿಯುತ ಪ್ರಯಾಣವನ್ನು ಹದಗೆಡಿಸಿದ್ದರು. ಇಂತಹ ಗುಂಪು ಸೇರಿಕೊಂಡ ನಂತರ ಅಲ್ಲಿ ಶಾಂತಿ ಬೇಡಲು ಸಾಧ್ಯವೇ?. 16 ಜನ ಪ್ರಯಾಣಿಕರು ಈ ಕಿರಿಕಿರಿಯನ್ನು ಸಹಿಸುತ್ತಾ ಪ್ರಯಾಣಿಸುವಂತಾಯ್ತು. ಭಾರತೀಯರು ಇಂತಹ ದೊಡ್ಡ ಗುಂಪಿನ್ನು ಪ್ರಶ್ನಿಸದೇ ಸಹಿಸಿಕೊಳ್ಳುವುದೇ ತಪ್ಪು ಎಂದು ಬರೆದುಕೊಂಡಿದ್ದಾರೆ ಶಿವಶ್ರೀ.
ಈ ಕಿರಿಕಿರಿ ತಾಳಲಾರದೆ ಟಿಟಿಇ ಬಳಿ ಬೇರೆ ಬೊಗಿಯಲ್ಲಿ ಪ್ರಯಾಣಿಸಲು ವಿನಂತಿಸಿದೆ. ಆದರೆ ಎಲ್ಲಿಯೂ ಖಾಲಿ ಇರದ ಕಾರಣ ಇದೇ ಬೋಗಿಯಲ್ಲಿ ಪ್ರಯಾಣಿಸುವುದು ಖಾಯಂ ಆಯ್ತು. ಕೆಲವು ಗಂಟೆ ನಂತರ ಆ ಗುಂಪು ಉನೋ ಆಡಲು ಶುರು ಮಾಡಿಕೊಂಡಿತು. ಟಿಟಿಇಗೆ ದೂರು ಕೊಟ್ಟೆ ಅವರು ಮಧ್ಯಪ್ರವೇಶಿಸಿ..ಸೈಲಂಟಾಗಿ ಇರುವಂತೆ ಕೇಳಿಕೊಂಡರು. ಅವರು ಬಂದು ಹೋದ ನಂತರ ಶಾಂತಿಯಾಗಿದ್ದ ಗುಂಪು ನಂತರ, ಅವರನ್ನೇ ಅಣಕಿಸಿ ನಗಾಡಲು ಶುರು ಮಾಡಿಕೊಂಡರು. ಅಲ್ಲದೇ ಶಿವಶ್ರೀ ಅವರು ದೂರು ಕೊಟ್ಟಿದ್ದಕ್ಕೆ ಪ್ರತಿಯಾಗಿ ಬಾಲಿವುಡ್ ಹಾಡನ್ನು ಜೋರಾಗಿ ಹಾಡುತ್ತಾ ಗಲಾಟೆ ಮಾಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಇತರರ ನೆಮ್ಮದಿಯನ್ನು ಪರಿಗಣಿಸೋದಿಲ್ಲ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಯಾರು ಗೆದ್ದರು ಎನ್ನುವುದಲ್ಲ. ಭಾರತೀಯರಾದ ನಾನು, ಮತ್ತು ಅವರು ಎಲ್ಲರು ನಾಗರಿಕ ಪ್ರಜ್ಞೆಯ ಆಟದಲ್ಲಿ ಸೋತಿದ್ದೇವೆ. ನಾವು ಸಾರ್ವಜನಿಕ ಸ್ಥಳದಲ್ಲಿ ಇತರರಿಗೆ ಸಮಸ್ಯೆಯಾಗದಂತೆ ನಡೆದುಕೊಳ್ಳಲು ಎಂದು ಕಲಿತುಕೊಳ್ಳುತ್ತೇವೆ. ನಮ್ಮದೇಶವನ್ನು ಆ ದೇವರೇ ಕಾಪಾಡಲಿ ಎಂದು ಶಿವಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).