ಗಂಟೆಗೆ 140 KM ವೇಗದಲ್ಲಿ KTM ಸವಾರಿ: ಬಿದ್ದ ರಭಸಕ್ಕೆ ವ್ಲಾಗರ್​ನ ದೇಹದಿಂದ ಬೇರ್ಪಟ್ಟ ತಲೆ! Vlogger

ವ್ಲಾಗರ್ ಪ್ರಿನ್ಸ್​ ಪಟೇಲ್​
ವ್ಲಾಗರ್ ಪ್ರಿನ್ಸ್​ ಪಟೇಲ್​
Published on

ಪ್ರಮುಖ ಮುಖ್ಯಾಂಶಗಳು

  • ಅತೀ ವೇಗದಲ್ಲಿ ಕೆಟಿಎಂ ಬೈಕ್​ ಚಲಾಯಿಸುತ್ತಿದ್ದ 18 ವರ್ಷದ ವ್ಲಾಗರ್ ದುರಂತ ಸಾವು
  • ಪಿಕೆಆರ್​ ಬ್ಲಾಗರ್​ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ ಪ್ರಿನ್ಸ್​ ಪಟೇಲ್​
  • ಬಿದ್ದ ರಭಸಕ್ಕೆ ಪ್ರಿನ್ಸ್​ನ ತಲೆ, ದೇಹದಿಂದ ಬೇರ್ಪಟ್ಟು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ
ಸೂರತ್​: ಅತೀ ವೇಗದಲ್ಲಿ ಕೆಟಿಎಂ ಬೈಕ್​ ಚಲಾಯಿಸುತ್ತಿದ್ದ 18 ವರ್ಷದ ವ್ಲಾಗರ್ ( Vlogger ) ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.
ಮೃತ ಯುವಕನನ್ನು ಪ್ರಿನ್ಸ್​ ಪಟೇಲ್​ (18) ಎಂದು ಗುರುತಿಸಲಾಗಿದೆ. ಈತ "ಪಿಕೆಆರ್​ ಬ್ಲಾಗರ್​" ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ.
ಅಪಘಾತದ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಪ್ರಿನ್ಸ್​ ಪಟೇಲ್​, ಸುಮಾರು 140 ಕಿ.ಮೀ ವೇಗದಲ್ಲಿ ಬೈಕ್​ ಚಲಾಯಿಸುತ್ತಿದ್ದ. ಮಲ್ಟಿ ಲೆವೆಲ್​ ಫ್ಲೈಓವರ್​, ಗ್ರೇಟ್ ಲೈನರ್ ಸೇತುವೆ ಬಳಿ ಬೈಕ್​ನ ವೇಗವನ್ನು ಕಡಿಮೆ ಮಾಡಲು ಹೋಗಿ ಬೈಕ್​ ಯುವಕನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆ ಮೇಲೆ ಬಿದ್ದಿದೆ. ಬಳಿಕ ರಸ್ತೆಯುದ್ದಕ್ಕೂ ಉಜ್ಜಿಕೊಂಡು ಹೋಗಿ ಪ್ರಿನ್ಸ್​ನಿಂದ ಸುಮಾರು ನೂರು ಮೀಟರ್​ ಅಂತರದಲ್ಲಿ ಬೈಕ್​ ಬಿದ್ದಿತು.
ಬೈಕ್​​​ ಒಂದು ಕಡೆ ನಿಲ್ಲುವವರೆಗೆ ಪ್ರಿನ್ಸ್​ ಅನೇಕ ಸುತ್ತು ರಸ್ತೆ ಮೇಲೆಯೇ ಉರುಳಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ಪರಿಣಾಮ ಪ್ರಿನ್ಸ್​ನ ತಲೆ, ದೇಹದಿಂದ ಬೇರ್ಪಟ್ಟು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಪ್ರಾಥಮಿಕ ತನಿಖೆಗಳ ಪ್ರಕಾರ ಪ್ರಿನ್ಸ್​, ಹೆಲ್ಮೆಟ್​ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಅಂದಹಾಗೆ, ಪ್ರಿನ್ಸ್‌ನ ತಾಯಿ ಹಾಲು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾರು ಈ ಪ್ರಿನ್ಸ್​ ಪಟೇಲ್​?

ಮೃತ ಪ್ರಿನ್ಸ್ ತನ್ನ ಬೈಕಿಂಗ್ ರೀಲ್‌ಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ. ವೇಗದ ಬೈಕ್​ ಸವಾರಿ ವಿಚಾರವಾಗಿ ಹದಿಹರೆಯದವರಲ್ಲಿ ಆತ ಜನಪ್ರಿಯನಾಗಿದ್ದ. ಆತನ ಇನ್‌ಸ್ಟಾಗ್ರಾಂ ಖಾತೆ ನೋಡಿದರೆ, ಕೆಟಿಎಂ ಡ್ಯೂಕ್ 390 ಬೈಕ್‌ ಮೇಲಿನ ಆತನ ಕ್ರೇಜ್​ ಎಷ್ಟಿತ್ತು ಎಂಬುದು ತಿಳಿಯುತ್ತದೆ. ಆತನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ದೊರೆತ ಮಾಹಿತಿ ಪ್ರಕಾರ ಪ್ರಿನ್ಸ್​ ಕಳೆದ ಸೆಪ್ಟೆಂಬರ್‌ನಲ್ಲಿ ಕೆಟಿಎಂ ಬೈಕ್​ ಖರೀದಿಸಿದ್ದ. ಬೈಕ್​ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net