ಐರ್ಲೆಂಡ್ - ಇಂಗ್ಲೆಂಡ್ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಮುಳುಗಿದ ಸೂರ್ಯ: ಶ್ರೇಯಸ್ ನೂತನ ನಾಯಕ! 15ರ ವೈಭವ್​​ಗೆ ಮಣೆ! India T20I Squad

ಐರ್ಲೆಂಡ್ - ಇಂಗ್ಲೆಂಡ್ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಮುಳುಗಿದ ಸೂರ್ಯ: ಶ್ರೇಯಸ್ ನೂತನ ನಾಯಕ! 15ರ ವೈಭವ್​​ಗೆ ಮಣೆ!
ಐರ್ಲೆಂಡ್ - ಇಂಗ್ಲೆಂಡ್ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಮುಳುಗಿದ ಸೂರ್ಯ: ಶ್ರೇಯಸ್ ನೂತನ ನಾಯಕ! 15ರ ವೈಭವ್​​ಗೆ ಮಣೆ!
Published on
ಮುಂಬೈ: ಭಾರತ ಟಿ೨೦ ಕ್ರಿಕೆಟ್ ತಂಡದಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆಯಾಗಿದೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಟಿ20 ಸರಣಿ ಹಾಗೂ ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ಗೆ(India T20I Squad) ಟೀಮ್ ಇಂಡಿಯಾದ ಹೊಸ ನಾಯಕನಾಗಿ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಯುವ ಆಟಗಾರ ತಿಲಕ್ ವರ್ಮಾ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಶನಿವಾರ ನಡೆಸಿದ ಸುದೀರ್ಘ ಸಭೆಯ ಬಳಿಕ ಒಟ್ಟು 4 ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ. ಆದರೆ, ಇವೆಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚೆಗಷ್ಟೇ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ 35 ವರ್ಷದ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಮಾತ್ರವಲ್ಲದೆ, ಇಡೀ ಟಿ20 ತಂಡದಿಂದಲೇ ಕೈಬಿಟ್ಟಿರುವುದು ಕ್ರೀಡಾಲೋಕದಲ್ಲಿ ತಲ್ಲಣ ಸೃಷ್ಟಿಸಿದೆ. ಇದೇ ವೇಳೆ, ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದ ಬಿಹಾರದ ೧೫ ವರ್ಷದ ಅದ್ಭುತ ಬಾಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಸೂರ್ಯನಿಗೆ ಕತ್ತಲು, ಶ್ರೇಯಸ್‌ಗೆ ಪಟ್ಟ: ಅಗರ್ಕರ್ ಕೊಟ್ಟ ಕಾರಣವೇನು?

ವಿಶ್ವಕಪ್ ಗೆದ್ದ ಕೆಲವೇ ತಿಂಗಳುಗಳಲ್ಲಿ ಸೂರ್ಯಕುಮಾರ್ ಅವರನ್ನು ತಂಡದಿಂದಲೇ ಕೈಬಿಟ್ಟ ಬಿಸಿಸಿಐ ನಿರ್ಧಾರ ಹಲವರ ಹುಬ್ಬೇರಿಸುವಂತೆ ಮಾಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಮುಂದಿನ ಎರಡು ವರ್ಷಗಳ ಟಿ೨೦ ಸರಣಿ ಮತ್ತು ಭವಿಷ್ಯದ ಒಲಿಂಪಿಕ್ಸ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಸೂರ್ಯಕುಮಾರ್ ಅವರ ಇತ್ತೀಚಿನ ಫಾರ್ಮ್ ಮತ್ತು ವಯಸ್ಸು ನಮಗೆ ಮುಂದಿನ ಹಾದಿಗೆ ಪೂರಕವಾಗಿ ಕಾಣಲಿಲ್ಲ. ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿಗಳನ್ನು ಮುನ್ನಡೆಸಿ ಚಾಂಪಿಯನ್ ಪಟ್ಟ ಗೆಲ್ಲಿಸಿದ್ದಾರೆ. ಅವರ ನಾಯಕತ್ವದ ಗುಣ ಹಾಗೂ ಸದ್ಯದ ಫಾರ್ಮ್ ಅದ್ಭುತವಾಗಿದೆ. ಹೀಗಾಗಿ ಅವರೇ ಸೂಕ್ತ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ.
ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ಮಾಡಿರುವುದರ ಹಿಂದೆ ಯುವ ನಾಯಕತ್ವವನ್ನು ಬೆಳೆಸುವ ದೂರದೃಷ್ಟಿ ಇದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

15ರ ಹರೆಯದ ವೈಭವ್ ಸೂರ್ಯವಂಶಿ ಸೃಷ್ಟಿಸಿದ ಇತಿಹಾಸ!

ಈ ಆಯ್ಕೆಯ ಅತ್ಯಂತ ಆಕರ್ಷಕ ಕೇಂದ್ರಬಿಂದು ಎಂದರೆ ಅದು ಬಿಹಾರದ 15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ. ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿ 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಚಚ್ಚಿದ್ದ ವೈಭವ್, ಬಿಸಿಸಿಐ ಆಯ್ಕೆಗಾರರ ಗಮನ ಸೆಳೆದಿದ್ದರು. ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಮತ್ತು ಏಷ್ಯನ್ ಗೇಮ್ಸ್‌ನ ಮೂರೂ ತಂಡಗಳಲ್ಲಿ ಇವರಿಗೆ ಸ್ಥಾನ ಸಿಕ್ಕಿದೆ. ಈ ಮೂಲಕ ಭಾರತದ ಸೀನಿಯರ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ವೈಭವ್ ಪಾತ್ರರಾಗಿದ್ದಾರೆ.
ಅಲ್ಲದೆ, ಏಷ್ಯನ್ ಗೇಮ್ಸ್‌ನ ಬಲಿಷ್ಠ ತಂಡದಲ್ಲಿ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅವರನ್ನೂ ಸೇರಿಸಲಾಗಿದ್ದು, ಭಾರತ ಚಿನ್ನದ ಪದಕ ಉಳಿಸಿಕೊಳ್ಳಲು ಪೂರ್ಣ ಶಕ್ತಿಯೊಂದಿಗೆ ಕಣಕ್ಕಿಳಿಯುತ್ತಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟಿ೨೦ ತಂಡ:

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ನಿತಿಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

3 ತಂಡಗಳ ಘೋಷಣೆ:

ಬಿಸಿಸಿಐ ಒಟ್ಟು ನಾಲ್ಕು ತಂಡಗಳನ್ನು ಪ್ರಕಟಿಸಿದೆ. ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ೨೦ ಸರಣಿ, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ೨೦ ಸರಣಿ, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಬಿಸಿಸಿಐ ಮಾಸ್ಟರ್ ಪ್ಲಾನ್
ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ಶುಭಮನ್ ಗಿಲ್‌ಗೆ ಪಟ್ಟ ಕಟ್ಟಲಾಗಿತ್ತು. ಈಗ ಟಿ೨೦ಯಲ್ಲೂ ಸೂರ್ಯಕುಮಾರ್ ಅವರನ್ನು ಕೈಬಿಟ್ಟು ಶ್ರೇಯಸ್ ಅಯ್ಯರ್ ಯುಗಕ್ಕೆ ಮುನ್ನುಡಿ ಬರೆಯಲಾಗಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಈ ಮಹತ್ತರ ಆಪರೇಷನ್ ನಡೆಸಿದೆ. ಜೂನ್ 26 ರಿಂದ ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಶ್ರೇಯಸ್ ಅಯ್ಯರ್ ಅವರ ಹೊಸ ಪರ್ವ ಆರಂಭವಾಗಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net