ನನ್ನನ್ನು ಯಾರೋ ಬೇಕಂತಲೇ... ಶಾಲೆಯಲ್ಲಿ ನೈತಿಕತೆ ಪಾಠ ಮಾಡಿ ತೆರೆಮರೆಯಲ್ಲಿ ಮನೆ ಹಾಳು ಮಾಡ್ತಿದ್ದ ಶಿಕ್ಷಕಿಯ ಹೊಸ ವರಸೆ! Teacher

ನನ್ನನ್ನು ಯಾರೋ ಬೇಕಂತಲೇ... ಶಾಲೆಯಲ್ಲಿ ನೈತಿಕತೆ ಪಾಠ ಮಾಡಿ ತೆರೆಮರೆಯಲ್ಲಿ ಮನೆ ಹಾಳು ಮಾಡ್ತಿದ್ದ ಶಿಕ್ಷಕಿಯ ಹೊಸ ವರಸೆ! Teacher
ನನ್ನನ್ನು ಯಾರೋ ಬೇಕಂತಲೇ... ಶಾಲೆಯಲ್ಲಿ ನೈತಿಕತೆ ಪಾಠ ಮಾಡಿ ತೆರೆಮರೆಯಲ್ಲಿ ಮನೆ ಹಾಳು ಮಾಡ್ತಿದ್ದ ಶಿಕ್ಷಕಿಯ ಹೊಸ ವರಸೆ! Teacher
Published on

ಪ್ರಮುಖ ಮುಖ್ಯಾಂಶಗಳು

  • ವಡಕರ ಎಂಡಿಎಂಎ ಡ್ರಗ್ಸ್ ಪ್ರಕರಣದ ಆರೋಪಿಗಳಾದ ಕಾವ್ಯಾ ಮತ್ತು ನೀಷ್ಮಾ ಪೊಲೀಸ್ ಕಸ್ಟಡಿಗೆ
  • ತಾನು ನಿರ್ದೋಷಿ ಎಂದೂ ತನ್ನನ್ನು ಯಾರೋ ಬಲೆಗೆ ಸಿಲುಕಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಾವ್ಯಾ ಹೇಳಿಕೆ
  • ಡ್ರಗ್ಸ್ ಮಾರಾಟದ ಹಣವನ್ನು ಆನ್‌ಲೈನ್ ಡೆಲಿವರಿ ಏಜೆಂಟ್‌ಗೆ ತಲುಪಿಸುತ್ತಿದ್ದ ಶಿಕ್ಷಕಿಯರು
  • ಬೆಂಗಳೂರು ಮತ್ತು ಹೈದರಾಬಾದ್ ಜಾಲದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪಿಗಳ ಕೋಟಿ ಹಣದ ವಹಿವಾಟು
  • ತಲೆಮರೆಸಿಕೊಂಡಿರುವ ಪ್ರಮುಖ ಕೊಂಡಿ ಶಿಂಟೋ ಶಿಬುಗಾಗಿ ಪೊಲೀಸರಿಂದ ತೀವ್ರ ಶೋಧ ಕಾರ್ಯ ಮುಂದುವರಿಕೆ
ತಿರುವನಂತಪುರಂ: ಕೇರಳದ ಕೋಳಿಕ್ಕೋಡ್‌ನಲ್ಲಿ ನಡೆದ ವಡಕರ ಎಂಡಿಎಂಎ (MDMA) ಡ್ರಗ್ಸ್‌ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾವ್ಯಾ ಮತ್ತು ನೀಷ್ಮಾ ಎಂಬ ಇಬ್ಬರು ಶಿಕ್ಷಕಿಯರನ್ನು ( Teacher ) ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಬ್ಬರನ್ನು ಒಟ್ಟಿಗೆ ಕೂರಿಸಿ ವಿವರವಾಗಿ ವಿಚಾರಣೆ ನಡೆಸಲು ಪೊಲೀಸರು ಮೂರು ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ, ವಡಕರ ಎನ್‌.ಡಿ.ಪಿ.ಎಸ್. (NDPS) ಕೋರ್ಟ್ ಎರಡು ದಿನಗಳ ಕಾಲ ಅಂದರೆ ಶುಕ್ರವಾರ ಮಧ್ಯಾಹ್ನ 4 ಗಂಟೆಯವರೆಗೆ ಮಾತ್ರ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮುಖ ಆರೋಪಿ ಕಾವ್ಯಾ, ತಾನು ಸಂಪೂರ್ಣ ನಿರ್ದೋಷಿ ಎಂದು ಹೇಳಿಕೊಂಡಿದ್ದಾಳೆ. ನಾನೇನು ತಪ್ಪು ಮಾಡಿಲ್ಲ ಮತ್ತು ನನ್ನನ್ನು ಯಾರೋ ಬೇಕಂತಲೇ ಈ ಡ್ರಗ್ಸ್​ ಬಲೆಗೆ ಸಿಲುಕಿಸಿದ್ದಾರೆ ಅಂತ ಕಾವ್ಯಾ ಹೇಳಿದ್ದಾಳೆ. ಅಲ್ಲದೆ, ಈ ಪ್ರಕರಣದ ಮತ್ತೊಬ್ಬ ಆರೋಪಿ ಕೀರ್ತನಾ ಹೇಳಿರುವ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ, ಅವುಗಳನ್ನು ನಂಬಬೇಡಿ ಎಂದು ಕಾವ್ಯಾ ಮಾಧ್ಯಮದವರಿಗೆ ತಿಳಿಸಿದ್ದಾಳೆ. ಆದರೂ, ಹೆಚ್ಚಿನ ಪ್ರತಿಕ್ರಿಯೆ ನೀಡದಂತೆ ತಡೆದು ಪೊಲೀಸರು ಕಾವ್ಯಾರನ್ನು ಕರೆದೊಯ್ದಿದ್ದಾರೆ.
ಈ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಕಾವ್ಯಾ ಸೇರಿದಂತೆ ಮೂವರು ಶಿಕ್ಷಕಿಯರು ಹಾಗೂ ಇಬ್ಬರು ಪುರುಷರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿ ಶಿಕ್ಷಕಿಯರು ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಬಂಧಿತ ಆನ್‌ಲೈನ್ ಡೆಲಿವರಿ ಏಜೆಂಟ್ ಜಿಜಿಲ್ ಕುರಿಯಕೋಸ್ ಎಂಬಾತನಿಗೆ ತಲುಪಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಖರೀದಿದಾರರು ಮತ್ತು ಸರಬರಾಜುದಾರರ ನಡುವೆ ಮಧ್ಯವರ್ತಿಗಳಾಗಿ ಕಾರ್ಯಾಚರಿಸುತ್ತಿದ್ದ ಈ ಶಿಕ್ಷಕಿಯರ ಕೆಲಸದ ಶೈಲಿ ಪೊಲೀಸರನ್ನೇ ಬೆರಗುಗೊಳಿಸಿದೆ. ಗ್ರಾಹಕರಿಂದ ಬಂದ ಹಣವು 10,000 ರಿಂದ 20,000 ರೂಪಾಯಿ ತಲುಪುತ್ತಿದ್ದಂತೆ, ಅದನ್ನು ಮುಖ್ಯ ಡ್ರಗ್ಸ್ ಪೂರೈಕೆದಾರರಿಗೆ ವರ್ಗಾಯಿಸುತ್ತಿದ್ದರು. ಹಣ ತಲುಪಿದ ಬಳಿಕ ಡ್ರಗ್ಸ್ ಅಡಗಿಸಿಟ್ಟ ರಹಸ್ಯ ಸ್ಥಳದ ಲೊಕೇಶನ್ ಅನ್ನು ಗೂಗಲ್ ಮ್ಯಾಪ್ ಮೂಲಕ ಗ್ರಾಹಕರಿಗೆ ಕಳುಹಿಸಿಕೊಡುತ್ತಿದ್ದರು. ಇನ್​ಸ್ಟಾಗ್ರಾಮ್​ ಮೂಲಕ ಗ್ಯಾಂಗ್‌ಗಳ ಸಂಪರ್ಕ ಬೆಳೆಸಿಕೊಂಡಿದ್ದ ಈ ಶಿಕ್ಷಕಿಯರು ಬಂದ ಲಾಭವನ್ನು ಹಂಚಿಕೊಳ್ಳುತ್ತಿದ್ದರು. ಇವರ ಜಾಲವು ಬೆಂಗಳೂರು ಮತ್ತು ಹೈದರಾಬಾದ್‌ನ ಡ್ರಗ್ಸ್ ಜಾಲದೊಂದಿಗೆ ನಿಕಟ ಸಂಪರ್ಕ ಹೊಂದಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ಶಿಕ್ಷಕಿಯರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಕೋಟಿಗಟ್ಟಲೆ ರೂಪಾಯಿಗಳ ಅಕ್ರಮ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಶಿಕ್ಷಕಿ ಕೀರ್ತನಾ ಬ್ಯಾಂಕ್ ಖಾತೆಗೆ ಒಂದೇ ವರ್ಷದಲ್ಲಿ 14 ಲಕ್ಷ ರೂಪಾಯಿ ಹಾಗೂ ಕಾವ್ಯಾ ಖಾತೆಗೆ ಕೇವಲ ಐದು ತಿಂಗಳಲ್ಲಿ 9 ಲಕ್ಷ ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ. ಈ ಖಾತೆಗಳಿಗೆ ಹಣ ರವಾನಿಸಿದ ಪ್ರತಿಯೊಬ್ಬರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದು, ಸ್ಥಳೀಯವಾಗಿ ಈ ಡ್ರಗ್ಸ್ ಅನ್ನು ನೇರವಾಗಿ ಯಾರಿಗೆಲ್ಲಾ ವಿತರಿಸಲಾಗುತ್ತಿತ್ತು ಎಂಬ ಮೂಲವನ್ನು ಹುಡುಕಲು ತನಿಖಾ ತಂಡ ಮುಂದಾಗಿದೆ.
ಪೇರಂಬ್ರ ಬಿಆರ್‌ಎಸ್ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದ ಕಾವ್ಯಾ, ಕೀರ್ತನಾ ಮತ್ತು ನಿಷ್ಮಾ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ನಿಷ್ಮಾ ಅವರು ಆಟಿಸಂ ಪೀಡಿತ ಮಕ್ಕಳಿಗೆ ಬೋಧಿಸುವ ವಿಶೇಷ ಶಿಕ್ಷಕಿ ಹಾಗೂ ಇತರ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ತರಬೇತುದಾರರಾಗಿದ್ದರು. ಕೀರ್ತನಾ ಎಂಬಾಕೆ ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಳು ಎಂಬುದು ಕಟು ಸತ್ಯ. ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಶಿಕ್ಷಣ ಇಲಾಖೆಯು ಈ ಮೂವರನ್ನೂ ತಕ್ಷಣವೇ ಸೇವೆಯಿಂದ ವಜಾಗೊಳಿಸಿದೆ.
ಡ್ರಗ್ಸ್ ಪ್ರಕರಣದ ಪ್ರಮುಖ ಕೊಂಡಿ ಎಂದು ಶಂಕಿಸಲಾಗಿರುವ ಶಿಂಟೋ ಶಿಬು (22) ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರ ಕೈಗೆ ಸಿಕ್ಕಿಲ್ಲ. ಈತ ವಾಟ್ಸ್​ಆ್ಯಪ್​ ಸಂದೇಶಗಳ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ತನಿಖೆಯಿಂದ ಹೊರಬಂದಿದೆ. ಪ್ರಕರಣದ ಕುರಿತು ಪೊಲೀಸರು ಮತ್ತಷ್ಟು ಆಳವಾದ ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net