TCS ಮತಾಂತರ ವಿವಾದ: ಬಂಧನ ಭೀತಿಯಲ್ಲಿರುವ ನಿದಾ ಖಾನ್‌ರಿಂದ 'ಗರ್ಭಿಣಿ' ಅಸ್ತ್ರ, ನ್ಯಾಯಾಲಯದ ಮೊರೆ! TCS Nashik Harassment Case

TCS ಮತಾಂತರ ವಿವಾದ: ಬಂಧನ ಭೀತಿಯಲ್ಲಿರುವ ನಿದಾ ಖಾನ್‌ರಿಂದ 'ಗರ್ಭಿಣಿ' ಅಸ್ತ್ರ, ನ್ಯಾಯಾಲಯದ ಮೊರೆ! TCS Nashik Harassment Case
TCS ಮತಾಂತರ ವಿವಾದ: ಬಂಧನ ಭೀತಿಯಲ್ಲಿರುವ ನಿದಾ ಖಾನ್‌ರಿಂದ 'ಗರ್ಭಿಣಿ' ಅಸ್ತ್ರ, ನ್ಯಾಯಾಲಯದ ಮೊರೆ! TCS Nashik Harassment Case
Published on

ಪ್ರಮುಖ ಮುಖ್ಯಾಂಶಗಳು

  • ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಪ್ರಕರಣ
  • ಬಂಧನ ಭೀತಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಎಚ್​ಆರ್​ ಹೆಡ್​ ನಿದಾ ಖಾನ್
  • ಅರ್ಜಿಯಲ್ಲಿ ತಾನೊಬ್ಬ ಗರ್ಭಿಣಿ ಎಂದು ಉಲ್ಲೇಖಿಸಿ ಜಾಮೀನು ಕೋರಿದ ಆರೋಪಿ
TCS Nashik Harassment Case : ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಂಪನಿಯ ಎಚ್​ಆರ್​ ಹೆಡ್​ ನಿದಾ ಖಾನ್, ಬಂಧನ ಭೀತಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ. 
ನಾಸಿಕ್‌ನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ತಾನೊಬ್ಬ ಗರ್ಭಿಣಿ ಎಂದು ಜಾಮೀನು ಕೋರಲಾಗಿದೆ. ಅರ್ಜಿಯಲ್ಲಿ ತನ್ನ ಆರೋಗ್ಯ ಸ್ಥಿತಿಯನ್ನು ನಿದಾ ಖಾನ್​ ಉಲ್ಲೇಖಿಸಿದ್ದಾರೆ. ಅಂದಹಾಗೆ, ಒಂಬತ್ತು ಉದ್ಯೋಗಿಗಳು (ಎಂಟು ಮಹಿಳೆಯರು ಮತ್ತು ಒಬ್ಬ ಪುರುಷ) ಸಲ್ಲಿಸಿರುವ ದೂರಿನ ಆಧಾರದ ಮೇಲೆ ಈಗಾಗಲೇ ಏಳು ಉದ್ಯೋಗಿಗಳನ್ನು ಬಂಧಿಸಲಾಗಿದೆ. 
ಟಿಸಿಎಸ್​ ಕಿರುಕುಳ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಕೂಡ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಸದಸ್ಯರು ಇಂದು ನಾಸಿಕ್ ಕಚೇರಿಗೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ. ಇದರ ನಡುವೆ ಪೊಲೀಸ್​ ತನಿಖೆಯ ಹಿನ್ನೆಲೆಯಲ್ಲಿ ಟಿಸಿಎಸ್ ತನ್ನ ಹೊರಗುತ್ತಿಗೆ ಕೇಂದ್ರದಲ್ಲಿ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಉದ್ಯೋಗಿಗಳಿಗೆ ವರ್ಕ್​ ಫ್ರಮ್​ ಹೋಮ್​ ಸೌಲಭ್ಯವನ್ನು ನೀಡಿದೆ. 

ಏನಿದು ಪ್ರಕರಣ?

ಮಹಾರಾಷ್ಟ್ರದ ನಾಸಿಕ್​ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಚೇರಿಯಲ್ಲಿ 2022ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ನಡೆದ ಕಿರುಕುಳ ಬಗ್ಗೆ ಅಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ. ತಮ್ಮ ಸೀನಿಯರ್ ಸಹೋದ್ಯೋಗಿಗಳು ಮತ್ತು ಎಚ್‌ಆರ್ ಮ್ಯಾನೇಜರ್‌ಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬ್ಲ್ಯಾಕ್‌ಮೇಲ್, ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಟು ಮಹಿಳಾ ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. 
ವರದಿಗಳ ಪ್ರಕಾರ, ಕೆಲಸದ ಕಾರ್ಯಕ್ಷಮತೆಯ ನೆಪದಲ್ಲಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿರುವುದು ಮತ್ತು ಅವಮಾನಿಸಿರುವುದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಐಟಿ ಉದ್ಯೋಗಿಗಳ ಹಿತರಕ್ಷಣಾ ಸಂಘಗಳು (NITES ನಂತಹವು) ಇದನ್ನು ತೀವ್ರವಾಗಿ ಖಂಡಿಸಿ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದವು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಸಿಎಸ್ ಸಂಸ್ಥೆಯು, ತನ್ನ ನೀತಿ ಸಂಹಿತೆಯ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಘಟನೆಯಲ್ಲಿ ಭಾಗಿಯಾದ ಸಂಬಂಧಿತ ಉದ್ಯೋಗಿಗಳನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿ, ಆಂತರಿಕ ತನಿಖೆಗೆ ಆದೇಶಿಸಿದೆ.

ಟಾಟಾ ಸನ್ಸ್​ ಅಧ್ಯಕ್ಷರು ಹೇಳಿದ್ದೇನು?

ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಟಾಟಾ ಸನ್ಸ್‌ ಅಧ್ಯಕ್ಷ ಎನ್. ಚಂದ್ರಶೇಖರನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು "ಅತ್ಯಂತ ಗಂಭೀರ ಮತ್ತು ಆತಂಕಕಾರಿ" ಎಂದು ಕರೆದಿರುವ ಚಂದ್ರಶೇಖರನ್​, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮಹಿಳಾ ಉದ್ಯೋಗಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಇಡೀ ಪ್ರಕರಣವನ್ನು ಸಂಸ್ಥೆಯು ತುರ್ತು ಆದ್ಯತೆಯ ಮೇಲೆ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಆರೋಪಿ ಉದ್ಯೋಗಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ತನಿಖೆಗೆ ಕಂಪನಿಯು ಸಂಪೂರ್ಣ ಸಹಕಾರ ನೀಡುತ್ತಿದೆ. ಯಾವುದೇ ರೀತಿಯ ಕಿರುಕುಳ ಅಥವಾ ಅಸಭ್ಯ ವರ್ತನೆಯನ್ನು ಟಾಟಾ ಸಮೂಹವು ಸಹಿಸುವುದಿಲ್ಲ ಎಂದು ಪುನರುಚ್ಚರಿಸಿರುವ ಅವರು, ನೈತಿಕ ಶಿಸ್ತಿನ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ದೃಢವಾಗಿ ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net