ಟಿಸಿಎಸ್​ ನಾಸಿಕ್ ಪ್ರಕರಣ: ನಿದಾ ಖಾನ್‌ಗೆ ಆಶ್ರಯ ನೀಡಿದ ಮನೆ ಮೇಲೆ ಬುಲ್ಡೋಜರ್ ಘರ್ಜನೆ? TCS Nashik Case

ಟಿಸಿಎಸ್​ ನಾಸಿಕ್ ಪ್ರಕರಣ: ನಿದಾ ಖಾನ್‌ಗೆ ಆಶ್ರಯ ನೀಡಿದ ಮನೆ ಮೇಲೆ ಬುಲ್ಡೋಜರ್ ಘರ್ಜನೆ? TCS Nashik Case
ಟಿಸಿಎಸ್​ ನಾಸಿಕ್ ಪ್ರಕರಣ: ನಿದಾ ಖಾನ್‌ಗೆ ಆಶ್ರಯ ನೀಡಿದ ಮನೆ ಮೇಲೆ ಬುಲ್ಡೋಜರ್ ಘರ್ಜನೆ? TCS Nashik Case
Published on

ಪ್ರಮುಖ ಮುಖ್ಯಾಂಶಗಳು

  • ನಾಸಿಕ್‌ನ ಟಿಸಿಎಸ್ (TCS) ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿವರಗಳು ಬಯಲಿಗೆ ಬರುತ್ತಿದೆ
  • ತಲೆಮರೆಸಿಕೊಂಡಿದ್ದ ಆರೋಪಿ ನಿದಾ ಖಾನ್ ಎಂಬಾಕೆಯನ್ನು ಇತ್ತೀಚೆಗೆ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ
  • ಎಂಐಎಂ ಕಾರ್ಪೊರೇಟರ್ ಮತೀನ್ ಪಟೇಲ್ ಆಕೆಗೆ ಆಶ್ರಯ ನೀಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದರು
  • ಮುಂದಿನ ಮೂರು ದಿನಗಳ ಒಳಗಾಗಿ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ
TCS Nashik Case : ನಾಸಿಕ್‌ನ ಟಿಸಿಎಸ್ (TCS) ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿವರಗಳು ಬಯಲಿಗೆ ಬರುತ್ತಿದ್ದು, ತಲೆಮರೆಸಿಕೊಂಡಿದ್ದ ಆರೋಪಿ ನಿದಾ ಖಾನ್ ಎಂಬಾಕೆಯನ್ನು ಇತ್ತೀಚೆಗೆ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಸ್ಥಳೀಯ ಎಂಐಎಂ (MIM) ಕಾರ್ಪೊರೇಟರ್ ಮತೀನ್ ಪಟೇಲ್ ಆಕೆಗೆ ಆಶ್ರಯ ನೀಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ನಿದಾ ಖಾನ್​ ಉಳಿದುಕೊಂಡಿದ್ದ ಮನೆ ಮತೀನ್ ಪಟೇಲ್ ಅವರದ್ದೇ ಎಂದು ವರದಿಯಾಗಿತ್ತಾದರೂ, ತನಿಖೆಯ ನಂತರ ಆ ಮನೆಯು ಹನೀಫ್ ಖಾನ್ ಮತ್ತು ಸೈಯದ್ ಸರ್ವರ್ ಅವರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ಇವರಿಬ್ಬರೂ ಆ ಮನೆಯನ್ನು 23 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು ಎಂದು ತನಿಖೆಯಿಂದ ದೃಢಪಟ್ಟಿದೆ.
ನಿದಾ ಖಾನ್ ತಂಗಿದ್ದ ಮನೆಯ ಮಾಲೀಕರು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಮತೀನ್ ಪಟೇಲ್ ಅವರು ತಮ್ಮ ಅತಿಥಿಗಳು ಕೆಲವು ದಿನ ಉಳಿದುಕೊಳ್ಳುತ್ತಾರೆ ಎಂದು ಹೇಳಿ ಮನೆ ಬಾಡಿಗೆಗೆ ಪಡೆದಿದ್ದರು ಎಂದು ತಿಳಿಸಿದ್ದಾರೆ. ಆದರೆ, ನಿದಾ ಖಾನ್‌ಗೆ ಆಶ್ರಯ ನೀಡಿದ ಬೆನ್ನಲ್ಲೇ ಈ ಮನೆಯ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಛತ್ರಪತಿ ಸಂಭಾಜಿನಗರ ಮಹಾನಗರ ಪಾಲಿಕೆಯು ಈ ಕಟ್ಟಡವನ್ನು ಅಕ್ರಮ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಮನೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಮೂರು ದಿನಗಳ ಒಳಗಾಗಿ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶಿಸಿದೆ.
ನಾಸಿಕ್ ಮತಾಂತರ ಪ್ರಕರಣದಲ್ಲಿ ನಿದಾ ಖಾನ್ ಪ್ರಮುಖ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಡ್ಯಾನಿಶ್ ಎಂಬ ಉದ್ಯೋಗಿಯು ತನಗೆ ಮದುವೆಯಾಗಿರುವ ವಿಷಯವನ್ನು ಮರೆಮಾಚಿ ಯುವತಿಯೊಬ್ಬಳ ಸ್ನೇಹ ಬೆಳೆಸಿದ್ದನು. ಬಳಿಕ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಲಾಗಿತ್ತು. ನಿದಾ ಖಾನ್ ಸಂತ್ರಸ್ತೆಗೆ ಸುಳ್ಳು ಹೇಳಿ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವಂತೆ ಒತ್ತಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತೆಯ ಮೊಬೈಲ್‌ನಲ್ಲಿ ಧಾರ್ಮಿಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಟ್ಟು, ಹಿಜಾಬ್ ಧರಿಸುವುದು ಮತ್ತು ಕಲ್ಮಾ ಪಠಿಸುವುದನ್ನು ಕಲಿಸಿಕೊಟ್ಟಿದ್ದಳು. ಅಲ್ಲದೆ, ಸಂತ್ರಸ್ತೆಯ ಹೆಸರನ್ನು 'ಹನಿಯಾ' ಎಂದು ಬದಲಾಯಿಸಲಾಗಿತ್ತು.
ಈ ಇಡೀ ಜಾಲವು ಅಂತಾರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿದೆ ಎಂದು ಸರ್ಕಾರಿ ಅಭಿಯೋಜಕ ಅಜಯ್ ಮಿಸಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಿದಾ ಖಾನ್‌ಗೆ ಸಹಾಯ ಮಾಡಿದ ಮತೀನ್ ಪಟೇಲ್ ಅವರನ್ನು ಸಹ-ಆರೋಪಿ ಎಂದು ಹೆಸರಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯವು ನಿದಾ ಖಾನ್‌ಳನ್ನು ಮೇ 11 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಏನಿದು ಪ್ರಕರಣ?

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಘಟಕದಲ್ಲಿ ನಡೆದ ಕಿರುಕುಳದ ಪ್ರಕರಣವು 2026ರ ಏಪ್ರಿಲ್‌ನಲ್ಲಿ ಬೆಳಕಿಗೆ ಬಂದಿತು. ಅಲ್ಲಿನ ಹಲವಾರು ಮಹಿಳಾ ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಪ್ರಯತ್ನಗಳು ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಒಟ್ಟು 9 ಎಫ್‌ಐಆರ್‌ಗಳು (FIR) ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಸೇರಿದಂತೆ ಸುಮಾರು 7 ಜನರನ್ನು ಬಂಧಿಸಿದ್ದಾರೆ. ಈ ಘಟನೆಯ ನಂತರ ಟಿಸಿಎಸ್ ಸಂಸ್ಥೆಯು ಆರೋಪಿಗಳನ್ನು ಕೆಲಸದಿಂದ ಅಮಾನತುಗೊಳಿಸಿದ್ದು, ಆಂತರಿಕ ತನಿಖೆಗೆ ಆದೇಶಿಸಿದೆ. ಈ ಪ್ರಕರಣವು ಕಾರ್ಪೊರೇಟ್ ವಲಯದಲ್ಲಿ ಮಹಿಳಾ ಸುರಕ್ಷತೆ ಮತ್ತು ಉದ್ಯೋಗಿಗಳ ಹಕ್ಕುಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net